ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ(Mysuru Dasara 2022) ರಾಷ್ಟ್ರಪತಿ ದ್ರೌಪದಿ ಮುರ್ಮು(Draupadi Murmu) ಸೋಮವಾರ (ಸೆ 26) ವಿಧ್ಯುಕ್ತ ಚಾಲನೆ ನೀಡಿದರು. ದೀಪ ಬೆಳಗಿ ಬೆಳ್ಳಿರಥದಲ್ಲಿ ಮಹಿಳಾಸುರ ಮರ್ದಿನಿ ಅವತಾರದ ಪಂಚಲೋಹದ ವಿಗ್ರಹಕ್ಕೆ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿಗಳು ಪುಷ್ಪಾರ್ಚನೆ ಮಾಡುವುದರೊಂದಿಗೆ 412ನೇ ದಸರಾದ ವಿಧಿವಿಧಾನಗಳು ಆರಂಭವಾದವು. ಕಾರ್ಯಕ್ರಮದಲ್ಲಿ ರಾಜ್ಯಪಾಲರು ಸೇರಿ ಗಣ್ಯರು ಭಾಗವಹಿಸಿದ್ದಾರೆ.
ಇದಕ್ಕೂ ಮೊದಲು ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ ನೀಡಲೆಂದು ಬಂದಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಟ್ಟದ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಕುಂಕುಮಾರ್ಚನೆಯ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರು ಉಪಸ್ಥಿತರಿದ್ದರು. ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿ ಆಯ್ದ ಕೆಲ ಗಣ್ಯರಿಗೆ ಮಾತ್ರ ರಾಷ್ಟ್ರಪತಿ ಜೊತೆ ವೇದಿಕೆ ಮೇಲೆ ಅವಕಾಶ ನೀಡಲಾಗಿದೆ.
ಕರ್ನಾಟಕದ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗಾಗಿ ಇಂದು ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ನಾಡಹಬ್ಬ ದಸರಾಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದ್ದಾರೆ. ಈ ಮುನ್ನ ಭದ್ರತಾ ಸಿಬ್ಬಂದಿ ವೇದಿಕೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ರು. ದಸರಾ ಸಂಭ್ರಮದ ತಾಜಾ ಮಾಹಿತಿ ಟಿವಿ9 ಯುಟ್ಯೂಬ್ ಚಾನೆಲ್ನ ಲೈವ್ ವಿಡಿಯೊದಲ್ಲಿ ಲಭ್ಯ.
Published On - 10:11 am, Mon, 26 September 22