Mysore Dasara 2022: ಇಂದಿನಿಂದ ಮೈಸೂರಿನಲ್ಲಿ ಯುವ ದಸರಾ ಪ್ರಾರಂಭ: ಮೊದಲ ದಿನವೇ ಅಪ್ಪುಗೆ ನಮನ, ತಲೆ ಎತ್ತಿ ನಿಂತ 50 ಅಡಿ ಉದ್ದದ ಕಟೌಟ್
ಯುವ ದಸರಾ ವೇದಿಕೆಯ ಮುಂಭಾಗ ಅಪ್ಪು ಡ್ಯಾನ್ಸ್ ಮಾಡುತ್ತಿರುವ 50 ಅಡಿ ಉದ್ದದ ಬೃಹತ್ ಕಟೌಟ್ ನಿರ್ಮಾಣ ಮಾಡಲಾಗಿದೆ. ಅಪ್ಪು ಅಭಿಮಾನಿ ಕಲಾವಿದ ಶ್ರೀರಂಗ ಬೃಹತ್ ಕಟೌಟ್ ನಿರ್ಮಿಸಿದ್ದಾರೆ.
ಮೈಸೂರು: ಮೈಸೂರು ದಸರಾ ಉತ್ಸವ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸಂಜೆ 6.30ಕ್ಕೆ ಯುವ ದಸರಾ (Yuva Dasara) ಕಾರ್ಯಕ್ರಮ ನಡೆಯಲಿದ್ದು, ಡಾ. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಉದ್ಘಾಟನೆ ಮಾಡಲಿದ್ದಾರೆ. ಈ ಹಿನ್ನೆಲೆ ಮಹಾರಾಜ ಕಾಲೇಜು ಮೈದಾನ ಯುವ ದಸರಾ ವೇದಿಕೆಯ ಮುಂಭಾಗ ಅಪ್ಪು ಡ್ಯಾನ್ಸ್ ಮಾಡುತ್ತಿರುವ 50 ಅಡಿ ಉದ್ದದ ಬೃಹತ್ ಕಟೌಟ್ ನಿರ್ಮಾಣ ಮಾಡಲಾಗಿದೆ. ಅಪ್ಪು ಅಭಿಮಾನಿ ಕಲಾವಿದ ಶ್ರೀರಂಗ ಬೃಹತ್ ಕಟೌಟ್ ನಿರ್ಮಿಸಿದ್ದಾರೆ. ಇಂದಿನಿಂದ ಯುವ ದಸರಾ ಕಾರ್ಯಕ್ರಮ ಪ್ರಾರಂಭ ಹಿನ್ನೆಲೆ ಮೊದಲ ದಿನವೇ ಅಪ್ಪು ನಮನ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕರಾದ ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್ ಗಾಯನವಿರಲಿದೆ. ಅಪ್ಪು ಸಿನಿಮಾದ ಹಾಡುಗಳಿಗೆ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮಾಡಲಿದ್ದಾರೆ. ನೆಚ್ಚಿನ ನಟನ ಕಟೌಟ್ ಬಳಿ ಅಭಿಮಾನಿಗಳು ಬಂದು ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ. ಇಂದು ಅಪ್ಪು ನಮನ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಬರಲು ಅಪ್ಪು ಅಭಿಮಾನಿಗಳು ಸಜ್ಜಾಗಿದ್ದಾರೆ.
ಹಾಡಿ ಜನರಿಗಾಗಿಯೇ ವಿಶೇಷವಾಗಿ ಸಿದ್ದವಾದ KSRTC ಬಸ್
ದಸರಾ ಉತ್ಸವ ನೋಡಲು ಕಾಡಿನಿಂದ ನಾಡಿಗೆ ಮಹಿಳೆಯರು ಆಗಮಿಸುತ್ತಿದ್ದು, ಹಾಡಿ ಜನರಿಗಾಗಿಯೇ ವಿಶೇಷವಾಗಿ KSRTC ಬಸ್ ಸಿದ್ದವಾಗಿದೆ. ಮೈಸೂರು ದಸರಾ ಕಣ್ತುಂಬಿ ಕೊಳ್ಳಲು ಅವಕಾಶ ಮಾಡಿ ಕೊಟ್ಟ ಜಿಲ್ಲಾಡಳಿತಕ್ಕೆ ನಾರಿ ಮಣಿಯರು ನಮಸ್ಕರಿಸಿದ್ದಾರೆ. ಕೋವಿಡ್ ಬಳಿಕ ಗ್ರಾಮಕ್ಕೆ ಬಸ್ ಬರುತ್ತಲೇ ಇರ್ಲಿಲ್ಲ. ಆದರೆ ಈ ಬಾರಿಯ ದಸರಾಗೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದ್ದಾರೆ. ಮೊದಲ ಬಾರಿಗೆ ಅರಮನೆ, ಚಾಮುಂಡಿ ಬೆಟ್ಟ, ನೋಡಿ ಹಾಡಿ ಮಹಿಳೆಯರು ಕಣ್ತುಂಬಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ದಸರಾ ವೀಕ್ಷಣೆ ಮಾಡುತ್ತಿರುವ ಮಹಿಳೆಯರ ಮನದಾಳದ ಮಾತುಗಳು.
‘ದಸರಾ ದರ್ಶನ’ KSRTC ಬಸ್ಗಳಿಗೆ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಚಾಲನೆ
ಮೈಸೂರಿನಲ್ಲಿ ‘ದಸರಾ ದರ್ಶನ’ KSRTC ಬಸ್ಗಳಿಗೆ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು. 3 ದಿನ ದಸರಾ ದರ್ಶನಕ್ಕೆ ಒಟ್ಟು 81 ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಮೈಸೂರಿನ 1 ತಾಲೂಕಿಗೆ ಮೂರು ಬಸ್ಗಳ ನಿಯೋಜನೆ ಮಾಡಿದ್ದು, 3 ದಿನಗಳಲ್ಲಿ 4,455 ಜನರಿಗೆ ದಸರಾ ತೋರಿಸುವ ನಿರ್ಧರಿಸಲಾಗಿದೆ. 9.30ಕ್ಕೆ ಕೆ.ಎಸ್.ಆರ್.ಟಿ.ಸಿ ಚಾಲನೆ ಕಾರ್ಯಕ್ರಮಕ್ಕೆ ಸಮಯ ನಿಗದಿಯಾಗಿತ್ತು. ಆದರೆ ಉಸ್ತುವಾರಿ ಸಚಿವರಿಗಾಗಿ ಕಾದು ಕಾದು ಶಾಸಕ ಹಾಗೂ ಅಧಿಕಾರಿಗಳು ಸುಸ್ತಾದರು. ವಿಶ್ವ ವಿಖ್ಯಾತ ದಸರಾ ನೋಡಲು ಜಿಲ್ಲಾಡಳಿತ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ. ಸ್ಥಳೀಯ ಶಾಸಕ ರಾಮದಾಸ್ ಬಂದು ಒಂದು ಗಂಟೆಯಾದರು ಸಚಿವ ಸ್ಥಳಕ್ಕೆ ಬಂದಿರಲಿಲ್ಲ.
ದೀಪಾಲಂಕಾರ ನೋಡಲು ಜನಸಾಗರ
ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಕಂಗೊಳಿಸುತ್ತಿದ್ದು, ದೀಪಾಲಂಕಾರ ನೋಡಲು ಜನಸಾಗರ ಹುರಿದು ಬರುತ್ತಿದೆ. ಮೈಸೂರು ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿದ್ದು, ದೀಪಾಲಂಕಾರ ವೀಕ್ಷಣೆಗೆ ಪೊಲೀಸ್ ಜೀಪ್‌ನಲ್ಲಿ ಸಾರ್ವಜನಿಕರು ಬಂದಿರುವ ವಿಡಿಯೋ ವೈರಲ್ ಆಗಿದೆ. ಕೆ ಎ 12 ಜಿ 647 ಸಂಖ್ಯೆಯ ಪೊಲೀಸ್ ಜೀಪ್. ನೆನ್ನೆ ರಾತ್ರಿ ವಿಡಿಯೋ ಮಾಡಿ ಯುವಕರು ವೈರಲ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:30 pm, Wed, 28 September 22