Pilgrimage Destinations: ಉತ್ತರ ಭಾರತದ ಅತ್ಯುತ್ತಮ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಯೋಚಿಸುತ್ತಿದ್ದೀರಾ? ಉಪಯುಕ್ತ ಮಾಹಿತಿ ಇಲ್ಲಿದೆ

ಉತ್ತರ ಭಾರತದ ಆಧ್ಯಾತ್ಮಿಕ ಮತ್ತು ಧಾರ್ಮಿಕ ತಾಣಗಳು ಇತ್ತೀಚಿನ ದಿನಗಳಲ್ಲಿ ಯುವಜನರನ್ನು ಆಕರ್ಷಿಸುತ್ತಿವೆ. ಕಾಶಿ, ಅಯೋಧ್ಯೆ, ಮಥುರಾ-ವೃಂದಾವನ, ಹರಿದ್ವಾರ-ಋಷಿಕೇಶ, ವೈಷ್ಣೋ ದೇವಿ ಮತ್ತು ಅಮರನಾಥದಂತಹ ಸ್ಥಳಗಳು ಭಕ್ತಿ, ನಂಬಿಕೆ, ಶಾಂತಿ ಮತ್ತು ಅಧ್ಯಾತ್ಮಿಕ ಅನುಭವಗಳನ್ನು ನೀಡುತ್ತವೆ. ಈ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲು ನೀವೂ ಯೋಚಿಸುತ್ತಿದ್ದರೆ, ನಿಮಗಾಗಿ ಉಪಯುಕ್ತ ಮಾಹಿತಿ ಇಲ್ಲಿದೆ.

Pilgrimage Destinations: ಉತ್ತರ ಭಾರತದ ಅತ್ಯುತ್ತಮ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಯೋಚಿಸುತ್ತಿದ್ದೀರಾ? ಉಪಯುಕ್ತ ಮಾಹಿತಿ ಇಲ್ಲಿದೆ
ಉತ್ತರ ಭಾರತದ ಆಧ್ಯಾತ್ಮಿಕ ಸ್ಥಳ

Updated on: Dec 09, 2025 | 1:44 PM

ಭಕ್ತಿ, ನಂಬಿಕೆ, ಶಾಂತಿ ಮತ್ತು ಆಧ್ಯಾತ್ಮಿಕ ಅನುಭವಗಳನ್ನು ನೀಡುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ತಾಣಗಳು ಇತ್ತೀಚಿನ ದಿನಗಳಲ್ಲಿ ಯುವಜನರನ್ನು ಕೂಡ ತನ್ನತ್ತ ಸೆಳೆಯುತ್ತಿದೆ. ಅದರಲ್ಲೂ ಉತ್ತರ ಭಾರತದ ಆಧ್ಯಾತ್ಮಿಕ ತಾಣಗಳು ಇತ್ತೀಚಿನ ದಿನಗಳಲ್ಲಿ ದೇಶ ವಿದೇಶಗಳಲ್ಲಿಯೂ ಹೆಚ್ಚಿನ ಖ್ಯಾತಿ ಗಳಿಸಿದೆ. ಗಂಗಾ ಆರತಿ, ಕಾಶಿ ವಿಶ್ವನಾಥ ದೇವಾಲಯ, ಪ್ರಯಾಗ್ರಾಜ್​ನ ತ್ರಿವೇಣಿ ಸಂಗಮ ಇಂತಹ ಹತ್ತು ಹಲವು ಆಧ್ಯಾತ್ಮಿಕ ಅನುಭವವನ್ನು ಪಡೆಯುವುದೇ ಕಣ್ಣಿಗೊಂದು ಹಬ್ಬ. ನೀವೂ ಕೂಡ ಉತ್ತರ ಭಾರತದ ಅತ್ಯುತ್ತಮ ತೀರ್ಥಯಾತ್ರಾ ಸ್ಥಳಗಳನ್ನು ಭೇಟಿ ಮಾಡಲು ಯೋಚಿಸುತ್ತಿದ್ದರೆ, ನಿಮಗಾಗಿ ಉಪಯುಕ್ತ ಮಾಹಿತಿ ಇಲ್ಲಿದೆ.

ಕಾಶಿ (ವಾರಾಣಸಿ), ಉತ್ತರ ಪ್ರದೇಶ:

ಕಾಶಿಯ ಮಣಿಕರ್ಣಿಕಾ ಘಾಟ್. ವಾರಣಾಸಿ, ಕಾಶಿ, ಬನಾರಸ್ ಎಂಬ ಹೆಸರಿನಿಂದ ಖ್ಯಾತವಾದ ಈ ನಗರವನ್ನು ಅತ್ಯಂತ ಪವಿತ್ರಸ್ಥಾನವನ್ನಾಗಿ ಪರಿಗಣಿಸಲಾಗುತ್ತದೆ. ಈ ನಗರವು ಶಿವನಿಗೆ ಅರ್ಪಿತವಾದ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ಪ್ರಾಚೀನ ದೇವಾಲಯಗಳ ಕೇಂದ್ರವಾಗಿದೆ. ವಾರಣಾಸಿಯ ಘಾಟ್‌ಗಳು, ವಿಶೇಷವಾಗಿ ದಶಾಶ್ವಮೇಧ ಘಾಟ್ ಮತ್ತು ಮಣಿಕರ್ಣಿಕಾ ಘಾಟ್, ಹಿಂದೂ ಆಚರಣೆಗಳು, ಸಮಾರಂಭಗಳು ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಆಧ್ಯಾತ್ಮಿಕ ಸಂಜೆ ಆಚರಣೆಯಾದ ಮೋಡಿಮಾಡುವ ಗಂಗಾ ಆರತಿಗೆ ಪ್ರಸಿದ್ಧವಾಗಿವೆ. ವಾರಣಾಸಿಗೆ ಭೇಟಿ ನೀಡಿ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಆತ್ಮ ಶುದ್ಧವಾಗುತ್ತದೆ ಮತ್ತು ಮೋಕ್ಷ ಅಥವಾ ಮುಕ್ತಿ ಸಿಗುತ್ತದೆ ಎಂದು ಯಾತ್ರಿಕರು ನಂಬುತ್ತಾರೆ.

ಕಾಶಿ

ಅಯೋಧ್ಯೆ, ಉತ್ತರ ಪ್ರದೇಶ:

ಪ್ರಶಾಂತವಾದ ಸರಯೂ ನದಿಯ ದಡದಲ್ಲಿ ನೆಲೆಸಿರುವ ಅಯೋಧ್ಯೆಯು ಕೇವಲ ಒಂದು ನಗರವಲ್ಲ; ಇದು ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಆಧ್ಯಾತ್ಮಿಕ ಪರಂಪರೆಯ ತಾಣವಾಗಿದೆ. ಅಯೋಧ್ಯೆ ರಾಮಜನ್ಮ ಭೂಮಿ ಎಂದೇ ವಿಶ್ವವಿಖ್ಯಾತಿಯಾಗಿದೆ. ಅಯೋಧ್ಯೆ ಪ್ರಮುಖವಾಗಿ ರಾಮ ಮಂದಿರ, ಹನುಮಾನ್ ಗರ್ಹಿ, ಮತ್ತು ಸೂರ್ಯ ದೇವಾಲಯದಂತಹ ಆಧ್ಯಾತ್ಮಿಕ ಸ್ಥಳಗಳಿಂದ ಪ್ರಸಿದ್ಧವಾಗಿದೆ. ಇದು ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದರೂ ಕೂಡ ವಿಶೇಷವಾಗಿ ರಾಮ ಮಂದಿರದ ಉದ್ಘಾಟನೆಯ ನಂತರ ಇದರ ಖ್ಯಾತಿ ಹೆಚ್ಚಾಗಿದೆ.

ಮಥುರಾ – ವೃಂದಾವನ, ಉತ್ತರ ಪ್ರದೇಶ:

ಮಥುರಾ ಮತ್ತು ವೃಂದಾವನ, ಉತ್ತರ ಪ್ರದೇಶದಲ್ಲಿರುವ ಶ್ರೀ ಕೃಷ್ಣನ ಜನ್ಮಸ್ಥಳ ಹಾಗೂ ಆತನ ಬಾಲ್ಯದ ಕಥೆಗಳ ಕೇಂದ್ರಬಿಂದುವಾಗಿರುವ ಪವಿತ್ರ ಅವಳಿ ನಗರಗಳಾಗಿವೆ. ಮಥುರಾದಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿ ಕೃಷ್ಣನ ಆಧ್ಯಾತ್ಮಿಕ ನೆಲೆಯಾದ ವೃಂದಾವನವಿದೆ. ಶ್ರೀಕೃಷ್ಣನನ್ನು ‘ಬಾಂಕೆ ಬಿಹಾರಿ’ ರೂಪದಲ್ಲಿ ಪೂಜಿಸಲಾಗುವ ಬಾಂಕೆ ಬಿಹಾರಿ ದೇವಾಲಯ, ರಂಗಜಿ ದೇವಾಲಯ, ಇಸ್ಕಾನ್ ದೇವಾಲಯ, ನಿಧಿ ವನ, ಪ್ರೇಮ ಮಂದಿರ, ಗೋವಿಂದ ದೇವ್ ದೇವಾಲಯ ಸೇರಿದಂತೆ ಸಾಕಷ್ಟು ಧಾರ್ಮಿಕ ಸ್ಥಳಗಳು ಇಲ್ಲಿವೆ. ಈ ಸ್ಥಳಗಳು ಭಕ್ತಿ, ಸಂಸ್ಕೃತಿ ಮತ್ತು ರೋಮಾಂಚಕ ಹೋಳಿ ಹಬ್ಬಕ್ಕೆ ಹೆಸರುವಾಸಿಯಾಗಿದ್ದು, ದೇಶದಾದ್ಯಂತ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಇದನ್ನೂ ಓದಿ: Year Ender 2025: ಈ ವರ್ಷ ಭಾರೀ ಗಮನ ಸೆಳೆದ ಭಾರತದ ಪ್ರಮುಖ ದೇವಾಲಯಗಳಿವು

ಹರಿದ್ವಾರ ಮತ್ತು ಋಷಿಕೇಶ, ಉತ್ತರಾಖಂಡ:

ಉತ್ತರಾಖಂಡವು ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ಉತ್ತರಾಖಂಡವು ಕೇದಾರನಾಥ, ಬದರಿನಾಥ, ಯಮುನೋತ್ರಿ ಮತ್ತು ಗಂಗೋತ್ರಿಯಂತಹ ಚಾರ್ ಧಾಮ್ ದೇವಾಲಯಗಳು ಸೇರಿದಂತೆ ಭಾರತದ ಕೆಲವು ಪ್ರಸಿದ್ಧ ಧಾರ್ಮಿಕ ತಾಣಗಳಿಗೆ ನೆಲೆಯಾಗಿದೆ. ಋಷಿಕೇಶ ಮತ್ತು ಹರಿದ್ವಾರ ಯೋಗ ನಗರಗಳಾಗಿವೆ. ಜನಪ್ರಿಯ ಆಧ್ಯಾತ್ಮಿಕ ಕೇಂದ್ರವಾಗಿದ್ದು, ಯೋಗ ಮತ್ತು ಧ್ಯಾನ ಕಲಿಯಲು ವಿಶೇಷವಾಗಿ ವಿಶ್ವದ ಮೂಲೆ ಮೂಲೆಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಉತ್ತರಾಖಂಡವು ಅತಿದೊಡ್ಡ ಮತ್ತು ಅತ್ಯಂತ ಸುಂದರವಾದ ಗಿರಿಧಾಮಗಳನ್ನು ಹೊಂದಿದೆ.‘

ಹರಿದ್ವಾರ

ವೈಷ್ಣೋ ದೇವಿ, ಜಮ್ಮು- ಕಾಶ್ಮೀರ:

ಭಾರತದಲ್ಲಿ ಎರಡನೇ ಅತಿ ಹೆಚ್ಚು ಭೇಟಿ ನೀಡುವ ಹಿಂದೂ ತೀರ್ಥಯಾತ್ರಾ ಸ್ಥಳವಾಗಿದೆ. ಮಾತಾ ವೈಷ್ಣೋ ದೇವಿ ಗುಹೆ ದೇವಾಲಯವು ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ತ್ರಿಕೂಟ ಬೆಟ್ಟಗಳಲ್ಲಿ ನೆಲೆಗೊಂಡಿದೆ. ಇಲ್ಲಿ ಮೂರು ಬಂಡೆಗಳ ರೂಪದಲ್ಲಿರುವ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯನ್ನು ಪೂಜಿಸಲಾಗುತ್ತದೆ, ಮತ್ತು ಭೈರವನಾಥ ದೇವಾಲಯಕ್ಕೆ ಭೇಟಿ ನೀಡಿದರೆ ಯಾತ್ರೆ ಪೂರ್ಣಗೊಳ್ಳುತ್ತದೆ ಎಂದು ನಂಬಲಾಗಿದೆ. ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದೇ ಕಣ್ಣಿಗೊಂದು ಹಬ್ಬ.

ಅಮರನಾಥ, ಜಮ್ಮು ಮತ್ತು ಕಾಶ್ಮೀರ:

ಅಮರನಾಥ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಹಿಮಾಲಯದ ಗುಹಾ ದೇವಾಲಯವಾಗಿದ್ದು, ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿ ನೈಸರ್ಗಿಕವಾಗಿ ರೂಪುಗೊಳ್ಳುವ ಮಂಜಿನ ಶಿವಲಿಂಗವನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಜುಲೈ-ಆಗಸ್ಟ್ ಸಮಯದಲ್ಲಿ ವಾರ್ಷಿಕ ಯಾತ್ರೆ ನಡೆಯುತ್ತದೆ, ಇದನ್ನು ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳ ಮೂಲಕ ತಲುಪಬಹುದು. ಈ ಯಾತ್ರೆ ಕೈಗೊಳ್ಳಲು ದೇಶದ ನಾನಾ ಭಾಗಗಳಿಂದಲೇ ಅಲ್ಲದೆ, ವಿದೇಶಗಳಿಂದ ಕೂಡ ಶೈವ ಭಕ್ತರು ಭೇಟಿ ನೀಡುತ್ತಾರೆ. ಜುಲೈ ತಿಂಗಳಲ್ಲಿ ಪ್ರಾರಂಭವಾಗುವ ಈ ಯಾತ್ರೆ ಆಗಸ್ಟ್ ತಿಂಗಳಿನಲ್ಲಿ ಮುಕ್ತಾಯವಾಗುತ್ತದೆ. ಈ ಯಾತ್ರೆಗಾಗಿ ನೀವು ಮೊದಲೇ ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:50 pm, Tue, 9 December 25