Year Ender 2025: ಈ ವರ್ಷ ಭಾರೀ ಗಮನ ಸೆಳೆದ ಭಾರತದ ಪ್ರಮುಖ ದೇವಾಲಯಗಳಿವು
2025ರಲ್ಲಿ ಭಾರತದ ಹಲವು ಪ್ರಮುಖ ದೇವಾಲಯಗಳು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದವು. ಪ್ರಯಾಗ್‌ರಾಜ್ ಮಹಾಕುಂಭ ಮೇಳ, ಅಯೋಧ್ಯೆ ರಾಮಮಂದಿರದ ಧ್ವಜಾರೋಹಣ, ಪುರಿ ಜಗನ್ನಾಥ ದೇವಾಲಯದಲ್ಲಿ ಗರುಡ ಪಕ್ಷಿಯ ಘಟನೆ, ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದಲ್ಲಿ ಬಿಳಿ ಗೂಬೆಯ ದರ್ಶನ ಹಾಗೂ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದ ಅಗ್ನಿ ಅವಘಡದಂತಹ ಪ್ರಮುಖ ಘಟನೆಗಳು ವರ್ಷವಿಡೀ ಸುದ್ದಿಯಲ್ಲಿದ್ದವು. ಈ ದೇಗುಲಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಡಿಸೆಂಬರ್ ತಿಂಗಳು ಬಂದಿದೆ. ಈ ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಂಡು 2026 ರ ಹೊಸ ವರ್ಷವು ಆರಂಭವಾಗಲಿದೆ. 2025ರಲ್ಲಿ ಭಾರತದ ಕೆಲವು ದೇವಾಲಯಗಳು ಭಾರೀ ಚರ್ಚೆಗೆ ಒಳಗಾಗಿತ್ತು. ಅಂತಹ ಕೆಲವು ಪ್ರಸಿದ್ದ ದೇವಾಲಯಗಳ ಮಾಹಿತಿಯನ್ನು ವರ್ಷ ಮುಗಿಯುವಷ್ಟರಲ್ಲಿ ಮತ್ತೆ ಮೆಲುಕು ಹಾಕೋಣ.
ಪ್ರಯಾಗ್‌ರಾಜ್‌ನ ಮಹಾಕುಂಭ:
ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳವು 144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದ ದೊಡ್ಡ ಆಧ್ಯಾತ್ಮಿಕ ಸಂಗಮವಾಗಿದೆ. ಇದು 2025ರ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಜರುಗಿತು, ತ್ರಿವೇಣಿ ಸಂಗಮದಲ್ಲಿ ಕೋಟಿಗಟ್ಟಲೆ ಭಕ್ತರು ಪುಣ್ಯಸ್ನಾನ ಮಾಡಿದರು. ಈ ಕುಂಭಮೇಳ ದೇಶದಲ್ಲಿ ಮಾತ್ರವಲ್ಲದೆ ಇದು ವಿಶ್ವದಾದ್ಯಂತ ಗಮನ ಸೆಳೆದಿತ್ತು.
ಪುರಿ ಜಗನ್ನಾಥ ದೇವಾಲಯ:
ಪುರಿಯ ಶ್ರೀ ಜಗನ್ನಾಥ ದೇವಾಲಯವು ಭಾರತದ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿಯಲ್ಲಿ ವಿಷ್ಣುವಿನ ಒಂದು ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಪ್ರಮುಖ ಹಿಂದೂ ದೇವಾಲಯವಾಗಿದೆ. ಈ ವರ್ಷ, ಈ ದೇವಾಲಯದಲ್ಲಿ ಒಂದು ಅದ್ಭುತ ಘಟನೆ ಸಂಭವಿಸಿದ್ದು, ಬಹಳ ಚರ್ಚೆಗೆ ಗ್ರಾಸವಾಗಿತ್ತು. ಗರುಡ ಪಕ್ಷಿಯೊಂದು ದೇವಸ್ಥಾನದ ಮೇಲಿನ ಪವಿತ್ರ ಧ್ವಜವನ್ನು ತೆಗದುಕೊಂಡು ಹೋಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈಘಟನೆಯನ್ನು ಕೆಲವರು ಶುಭ ಶಕುನ ವೆಂದರೆ ಇನ್ನೂ ಕೆಲವರು ಅಪಾಯದ ಮುನ್ಸೂಚನೆಯೆಂದು ಎಚ್ಚರಿಸಿದ್ದರು.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ವಾರಂಗಲ್‌ನ ಕಾಶಿ ವಿಶ್ವನಾಥ ದೇವಾಲಯ:
ಶ್ರೀ ಕಾಶಿ ವಿಶ್ವನಾಥ ದೇವಾಲಯವು ಭಾರತದ ಉತ್ತರ ಪ್ರದೇಶ ರಾಜ್ಯದ ಪವಿತ್ರ ನಗರವಾದ ವಾರಣಾಸಿ (ಕಾಶಿ) ಯಲ್ಲಿರುವ ಹಿಂದೂ ದೇವಾಲಯವಾಗಿದೆ. ಶಿವನಿಗೆ ಸಮರ್ಪಿತವಾದ ಈ ದೇವಾಲಯದಲ್ಲಿ ಈ ವರ್ಷ ಅಪರೂಪದ ಘಟನೆಯೊಂದು ಎಲ್ಲರ ಗಮನ ಸೆಳೆದಿತ್ತು. ಆಗಸ್ಟ್ 20 ರ ಸಂಜೆ ಶಯನ ಆರತಿಯ ನಂತರ ದೇವಾಲಯದ ಶಿಖರದ ಮೇಲೆ ಬಿಳಿ ಗೂಬೆಯೊಂದು ಕಾಣಿಸಿಕೊಂಡಿದ್ದು, ದೇವಾಲಯ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವ ಭೂಷಣ್ ಮಿಶ್ರಾ ಈ ಚಿತ್ರವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ದೇವಾಲಯದ ಶಿಖರದ ಮೇಲೆ ಮೂರು ದಿನಗಳ ಕಾಲ ಕುಳಿತಿದ್ದ ಬಿಳಿ ಗೂಬೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಅಯೋಧ್ಯೆ ರಾಮ ಮಂದಿರ:
ಅಯೋಧ್ಯೆಯ ರಾಮ ಮಂದಿರದಲ್ಲಿ ನವೆಂಬರ್ 25 ರಂದು ಮಹತ್ವದ ಧ್ವಜಾರೋಹಣ ಸಮಾರಂಭ ನಡೆಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಸರಿ ಧ್ವಜ ಹಾರಿಸಿದರು. ರಾಮ ಮಂದಿರ ನಿರ್ಮಾಣದ ಔಪಚಾರಿಕವಾಗಿ ಪೂರ್ಣಗೊಂಡಿದ್ದರ ಸಂಕೇತವಾಗಿ ಈ ಧ್ವಜಾರೋಹಣ ಮಾಡಲಾಯಿತು. ಆದ್ದರಿಂದಲೇ ಅಯೋಧ್ಯೆ ರಾಮ ಮಂದಿರವು ಕೂಡ 2025ರಲ್ಲಿ ಭಾರೀ ಚರ್ಚೆಯಲ್ಲಿದ್ದ ದೇವಾಲಯವೆಂದರೆ ತಪ್ಪಾಗಲಾರದು.
ಉಜ್ಜಯಿನಿಯ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಾಲಯ:
ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯವು ಮಧ್ಯಪ್ರದೇಶದ ಪ್ರಾಚೀನ ನಗರ ಉಜ್ಜಯಿನಿಯಲ್ಲಿದೆ, ಇದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು, ಶಿವನ ಪವಿತ್ರ ನಿವಾಸವೆಂದು ಪರಿಗಣಿಸಲಾಗಿದೆ. ಈ ವರ್ಷ ಈ ದೇವಾಲಯದಲ್ಲಿ ಮೇ 05ರಂದು ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಆತಂಕ ಮನೆ ಮಾಡಿತ್ತು. ಈ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




