Mantralaya: ಮಂತ್ರಾಲಯದಲ್ಲಿ ಇಂದು ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ, ಹರಿದು ಬಂದ ಜನಸಾಗರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 12, 2022 | 11:18 AM

ದೇಶದ ವಿವಿಧೆಡೆಗಳಿಂದ ಅಪಾರ ಭಕ್ತರು ಶ್ರೀಮಠಕ್ಕೆ ಅಗಮಿಸಿದ್ದು, ನವೀಕೃತ ಮೊಗಸಾಲೆ ಮತ್ತು ಸಾಲಂಕೃತ ಬೃಂದಾವನವನ್ನು ಅಚ್ಚರಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ.

Mantralaya: ಮಂತ್ರಾಲಯದಲ್ಲಿ ಇಂದು ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ, ಹರಿದು ಬಂದ ಜನಸಾಗರ
ಮಂತ್ರಾಲಯದಲ್ಲಿ ರಾಯರ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ (ಎಡ ಚಿತ್ರ), ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ (ಬಲ ಚಿತ್ರ)
Follow us on

ರಾಯಚೂರು: ಕರ್ನಾಟಕದ ಗಡಿಯಲ್ಲಿರುವ ಆಂಧ್ರ ಪ್ರದೇಶದ ಪ್ರಸಿದ್ಧ ಯಾತ್ರಾಸ್ಥಳ ಮಂತ್ರಾಲಯದಲ್ಲಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ (Mantralyam Raghvendra Swamy Aradhane) ಶುಕ್ರವಾರ (ಆಗಸ್ಟ್ 12) ಸಡಗರ ಸಂಭ್ರಮದಿಂದ ನಡೆಯುತ್ತಿದೆ. ದೇಶದ ವಿವಿಧೆಡೆಗಳಿಂದ ಅಪಾರ ಭಕ್ತರು ಶ್ರೀಮಠಕ್ಕೆ ಅಗಮಿಸಿದ್ದು, ನವೀಕೃತ ಮೊಗಸಾಲೆ ಮತ್ತು ಸಾಲಂಕೃತ ಬೃಂದಾವನವನ್ನು ಅಚ್ಚರಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ರಾಯರ 351ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ರಾಯರ ಉತ್ಸವ ಮೂರ್ತಿಯಾಗಿ ಭಕ್ತರು ಶ್ರದ್ಧೆಯಿಂದ ಕಾಣುವ ಪ್ರಹ್ಲಾದ ರಾಜರ ರಜತ ಸಿಂಹ ವಾಹನೋತ್ಸವ ನಡೆಯಲಿದೆ.

ಪೂರ್ವಾರಾಧನೆಯ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದು, ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪಾದುಕೆಗಳ ಪೂಜೆ, ಉತ್ಸವ ಮೂರ್ತಿಯ ಪಾದಪೂಜೆ, ಪಂಚಾಮೃತ ಅಭಿಷೇಕ, ರಾಯರಮಠದ ಪಟ್ಟದ ದೇವರಾದ ಮೂಲ ರಾಮದೇವರ ಪೂಜೆ, ರಾಯರ ಬೃಂದಾವನಕ್ಕೆ ಹೂ ಅಲಂಕಾರ, ಮಹಾಮಂಗಳಾತಿ, ರಜತ ಸಿಂಹವಾಹನೋತ್ಸವ ನಡೆಯಲಿವೆ. ಸಂಜೆಯ ನಂತರ ಯೋಗಿಂದ್ರ ಮಂಟಪದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಶ್ರೀಮಠದಿಂದ ಸನ್ಮಾನಿಸಿ ಪ್ರಶಸ್ತಿ ವಿತರಿಸಲಾಗುವುದು. ರಾಯರ ಮಠಕ್ಕೆ ಹರಿದು ಭಕ್ತರ ದಂಡು ಹರಿದು ಬರುತ್ತಿದೆ.

ಆರಾಧನೆ ಹಿನ್ನೆಲೆಯಲ್ಲಿ ಶ್ರೀಮಠದಿಂದ ಎರಡು ಹೊತ್ತು ದಾಸೋಹಕ್ಕೆ (ಊಟ) ವ್ಯವಸ್ಥೆ ಮಾಡಲಾಗಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ನಿತ್ಯ ಸುಮಾರು 60 ಕ್ವಿಂಟಲ್ ಅಕ್ಕಿಯನ್ನು ಬೇಯಿಸಿ, ಅನ್ನ ಸಿದ್ಧಪಡಿಸಲಾಗುತ್ತಿದೆ. ಅಡುಗೆ ವಿಭಾಗದ ಉಗ್ರಾಣದಲ್ಲಿ ಈಗಾಗಲೇ 800 ಕ್ವಿಂಟಲ್ ಅಕ್ಕಿ, 900 ಕ್ವಿಂಟಲ್ ಸಕ್ಕರೆ-ಬೆಲ್ಲ ದಾಸ್ತಾನು ಮಾಡಲಾಗಿದೆ. 2 ಟನ್ ತುಪ್ಪ ದಾಸ್ತಾನು ಮಾಡಲಾಗಿದ್ದು, ನಿತ್ಯ 350 ಕೆಜಿ ತುಪ್ಪ ಬಳಕೆಯಾಗುತ್ತಿದೆ.

ಮೈಸೂರು ಪಾಕ್, ಶ್ರೀಮಠದ ‘ಪರಿಮಳ’ ಪ್ರಸಾದ, ಚಾಕೊಲೇಟ್ ಬರ್ಫಿ, ಮ್ಯಾಂಗೊ ಬರ್ಫಿ, ಲಾಡು, ಬಾಲುಷಾ ಸೇರಿ ಸೇರಿದಂತೆ ಹಲವು ರೀತಿಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗಿದೆ. ರಾಯಚೂರು, ಬೆಂಗಳೂರು ಮತ್ತು ಸ್ಥಳೀಯರು ಸೇರಿದಂತೆ ಸುಮಾರು 80 ಬಾಣಸಿಗರು ಅಡುಗೆ ಸಿದ್ಧಪಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತುಂಗಭದ್ರೆಯಲ್ಲಿ ಪ್ರವಾಹ

ಕರ್ನಾಟಕದ ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿ ನೀರಿನಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ನದಿತೀರದಲ್ಲಿದ್ದ ಗಂಗಮ್ಮ ದೇವಸ್ಥಾನ ಜಲಾವೃತಗೊಂಡಿದ್ದು, ಮಠದ ಸುತ್ತಲ ನದಿ ತೀರದಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿಯಬಾರದು ಎಂದು ಎಚ್ಚರಿಸಲಾಗಿದೆ. ಅವಘಡ ಸಂಭವಿಸಿದ ಸಂದರ್ಭದಲ್ಲಿ ರಕ್ಷಣೆಗಾಗಿ ತೆಪ್ಪಗಳ ಜೊತೆಗೆ ಅಂಬಿಗರನ್ನು ನಿಯೋಜಿಸಲಾಗಿದೆ. ಮಂತ್ರಾಲಯ ಪೊಲೀಸರು, ಸ್ವಯಂಸೇವಕರು, ಮಂತ್ರಾಲಯ ಆಡಳಿತದ ಮಂಡಳಿಯ ಸೆಕ್ಯುರಿಟಿ ಗಾರ್ಡ್​ಗಳನ್ನು ದಡದಲ್ಲಿ ನಿಯೋಜನೆ ಮಾಡಲಾಗಿದೆ. ಭಕ್ತರ ಸ್ನಾನಕ್ಕೆ ತಾತ್ಕಾಲಿಕವಾಗಿ ಸ್ನಾನಘಟ್ಟಗಳನ್ನು ನಿರ್ಮಿಸಲಾಗಿದೆ.

Published On - 11:18 am, Fri, 12 August 22