ಯಾವುದೇ ಶುಭ ಸಮಾರಂಭಗಳಲ್ಲಿ ವಿಘ್ನ ವಿನಾಯಕನಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಆದ್ದರಿಂದ ವಿಘ್ನ ವಿನಾಯಕನಿಗೆ ವಿಶೇಷವಾಗಿ ಪೂಜಿಸಲಾಗುವ ದಿನವೇ ಸಂಕಷ್ಟ ಚತುರ್ಥಿ. ಈ ಬಾರಿ ಭಾಲಚಂದ್ರ ಸಂಕಷ್ಟ ಚತುರ್ಥಿ ವ್ರತವನ್ನು ಮಾರ್ಚ್ 11 ರಂದು ಶನಿವಾರ ಆಚರಿಸಲಾಗುವುದು.ಸಂಕಷ್ಟಿ ಚತುರ್ಥಿಯನ್ನು ಪ್ರತಿ ಹಿಂದೂ ಕ್ಯಾಲೆಂಡರ್ ತಿಂಗಳ ಕೃಷ್ಣ ಪಕ್ಷದ ಚತುರ್ಥಿಯಂದು ಆಚರಿಸಲಾಗುತ್ತದೆ. ಈ ದಿನ ಜನರು ತಮ್ಮ ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ದೂರಮಾಡಲು ಗಣೇಶನನ್ನು ಪೂಜಿಸುತ್ತಾರೆ. ಈ ವರ್ಷದ ಅಂದರೆ 2023ರ ಮಾರ್ಚ್ನಲ್ಲಿ 10ರಂದು ಬೆಳಗ್ಗೆ 9:42 ಕ್ಕೆ ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 11ರ ಬೆಳಗ್ಗೆ 10:6 ಕ್ಕೆ ಚತುರ್ಥಿ ತಿಥಿ ಕೊನೆಗೊಳ್ಳುತ್ತದೆ. 2023ರ ಮಾರ್ಚ್ ತಿಂಗಳ ಸಂಕಷ್ಟಿಯಂದು ಚಂದ್ರೋದಯ ಸಮಯ: ಮಾರ್ಚ್ 10 ರಾತ್ರಿ 09:44 . ಸಂಕಷ್ಟಿ ಚತುರ್ಥಿಯ ದಿನ ಭಕ್ತರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಗಣೇಶನನ್ನು ಪೂಜಿಸುವುದು, ಉಪವಾಸದಿಂದ ಇರುವುದು ಈ ದಿನದ ವಿಶೇಷ.
ಸಂಕಷ್ಟ ಚತುರ್ಥಿಯ ರಾತ್ರಿ ಚಂದ್ರನನ್ನು ಪೂಜಿಸಬೇಕೆಂಬ ನಿಯಮವಿದೆ. ಇಲ್ಲದೇ ಹೋದರೆ ಈ ಉಪವಾಸ ಪೂರ್ಣವಾಗುವುದಿಲ್ಲ ಎಂದು ಹಿಂದಿನ ಕಾಲದಿಂದಲೂ ನಂಬಿಕೊಂಡು ಬಂದಿದ್ದಾರೆ. ಗಣೇಶ ಪುರಾಣದ ಪ್ರಕಾರ, ಶ್ರಾವನ ಮಾಸದ ಚತುರ್ಥಿಯ ಸಮಯದಲ್ಲಿ ಮೋದಕವನ್ನು ಸೇವಿಸಿದ ನಂತರ ಉಪವಾಸ ಮಾಡಬೇಕು, ಭಾದ್ರಪದ ಚತುರ್ಥಿಯಂದು ಹಾಲು ಸೇವಿಸಬೇಕು ಮತ್ತು ಅಶ್ವಿನಿ ಮಾಸ ಚತುರ್ಥಿಯಲ್ಲಿ ಸಂಪೂರ್ಣ ಉಪವಾಸವನ್ನು ಆಚರಿಸಬೇಕು. ಸಂಜೆಯ ವೇಳೆ ಚಂದ್ರನನ್ನು ವೀಕ್ಷಿಸಿದ ನಂತರ ಗಣೇಶನ ವಿಗ್ರಹವನ್ನು ಹೂವಿನಿಂದ ಅಲಂಕರಿಸಿ, ದೀಪ ಬೆಳಗಲಾಗುತ್ತದೆ. ಈ ಸಂದರ್ಭದಲ್ಲಿ ನೈವೇದ್ಯವಾಗಿ ಗಣೇಶನಿಗೆ ಮೋದಕಗಳು ಮತ್ತು ಇತರ ನೆಚ್ಚಿನ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಗಣೇಶ ಅಷ್ಟೋತ್ತರ, ಸಂಕಷ್ಟನಾಶನ ಸ್ತೋತ್ರ ಪಠಿಸುವುದು ಮಂಗಳಕರವಾಗಿದೆ.
ಇದನ್ನೂ ಓದಿ: ನಾಮಸ್ಮರಣೆಯಿಂದ ಮನಸ್ಸು ಬದಲಾಗುತ್ತದೆಯೇ? ಅದು ಆಗುವುದಾದರೂ ಹೇಗೆ?
ಧರ್ಮಗ್ರಂಥಗಳ ಪ್ರಕಾರ, ಸಂಕಷ್ಟ ಚತುರ್ಥಿಯಂದು ಉಪವಾಸ ಮಾಡಿ ಗಣೇಶನನ್ನು ಪೂಜಿಸಿದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಈ ದಿನ ಮಕ್ಕಳಿಲ್ಲದ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸುತ್ತಾರೆ. ಜೊತೆಗೆ ಈ ದಿನ ಗಣೇಶನೊಂದಿಗೆ ಚಂದ್ರ ದೇವನ ಆರಾಧನೆ ಮಾಡುವುದರಿಂದಲೂ ವ್ಯಕ್ತಿಯ ಸಕಲ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:43 am, Fri, 10 March 23