ನಾಮಸ್ಮರಣೆಯಿಂದ ಮನಸ್ಸು ಬದಲಾಗುತ್ತದೆಯೇ? ಅದು ಆಗುವುದಾದರೂ ಹೇಗೆ?
ಶಾಸ್ತ್ರ ಹೇಳುತ್ತದೆ ಸಂಸ್ಕಾರದಿಂದ ಮಾತ್ರ ಉತ್ತಮವಾದದ್ದು ಮಾಡಲು ಸಾಧ್ಯ ಎಂದು. ಏನು ಈ ಸಂಸ್ಕಾರವೆಂದರೆ ? ಒಂದು ವಿಶಾಲವಾದ ಬಯಲನ್ನು ಮನಸ್ಸಿಗೆ ತಂದುಕೊಳ್ಳಿ ಹಾಗೆಯೇ ಅದು ಮಳೆಗಾಲದಲ್ಲಿ ಹುಲ್ಲಿನಿಂದ ಕೂಡಿ ಹಸಿರಾಗಿ ಕಾಣುತ್ತಿರುತ್ತದೆ ಅಲ್ಲವೇ. ಆ ಬಯಲಿನಲ್ಲಿ ಪ್ರತೀ ದಿನ ನಡೆಯಲು ಆರಂಭಿಸಿ .
ದಾಸರು ಹೇಳುತ್ತಾರೆ “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕು” ಎಂದು. ಇದು ಭಗವಂತನ ಕುರಿತಾದ ಆಪ್ತತೆಯಿಂದ ಹೇಳಿದ ಪದ. ತಾತ್ಪರ್ಯ ಇಷ್ಟೇ ಭಗವನ್ನಾಮ ಸ್ಮರಣೆಯಿಂದ ಮಹತ್ತರವಾದದ್ದು ಸಾಧಿಸಲು ಸಾಧ್ಯ ಎಂದು. ಕೆಲವರಿಗೆ ಅನಿಸಬಹುದು ಹೌದಾ ಇದು ಎಂದು. ಹೌದು ಎನ್ನುವುದೇ ಇದಕ್ಕುತ್ತರ. ಪುರಾಣಗಳ ಕಥೆಯನ್ನು ನೋಡಿದರೆ ಕೇಳಿದರೆ ಸರಿಯಾಗಿ ಅದರ ಮಹತ್ವ ತಿಳಿಯುತ್ತದೆ. ಈಗ ಒಂದು ಲೌಕಿಕ ವೈಜ್ಞಾನಿಕ ಘಟನೆಯನ್ನು ಗಮನಿಸಿ ಪುರಾಣದ ಕಥೆಯನ್ನು ತಿಳಿಯೋಣ.
ಶಾಸ್ತ್ರ ಹೇಳುತ್ತದೆ ಸಂಸ್ಕಾರದಿಂದ ಮಾತ್ರ ಉತ್ತಮವಾದದ್ದು ಮಾಡಲು ಸಾಧ್ಯ ಎಂದು. ಏನು ಈ ಸಂಸ್ಕಾರವೆಂದರೆ ? ಒಂದು ವಿಶಾಲವಾದ ಬಯಲನ್ನು ಮನಸ್ಸಿಗೆ ತಂದುಕೊಳ್ಳಿ ಹಾಗೆಯೇ ಅದು ಮಳೆಗಾಲದಲ್ಲಿ ಹುಲ್ಲಿನಿಂದ ಕೂಡಿ ಹಸಿರಾಗಿ ಕಾಣುತ್ತಿರುತ್ತದೆ ಅಲ್ಲವೇ. ಆ ಬಯಲಿನಲ್ಲಿ ಪ್ರತೀ ದಿನ ನಡೆಯಲು ಆರಂಭಿಸಿ . ಕ್ರಮೇಣ ನೀವು ನಡೆದ ಜಾಗ ದಾರಿಯಾಗಿ ಬದಲಾಗುತ್ತದೆ ಮತ್ತೂ ಕೆಲಕಾಲ ಸಂದ ಮೇಲೆ ಆ ಜಾಗದಲ್ಲಿ ಕಳೆ ಹುಲ್ಲು ಇತ್ಯಾದಿ ಬೆಳೆಯುವುದಿಲ್ಲ ಅಲ್ಲವೇ? ಕಾರಣವೇನು ಎಂದು ಯೋಚಿಸಿದರೆ ನಾವು ನಡೆದಾಡಿದ್ದು ಎಂಬ ಉತ್ತರ ಬರುತ್ತದೆ.
ಅದನ್ನೇ ಶಾಸ್ತ್ರ ಹೇಳುತ್ತದೆ ಪಾದಕ್ಕೂ ಭೂಮಿಗೂ ಉಂಟಾದ ನಿರಂತರ ಸಂಪರ್ಕದಿಂದ ಉಂಟಾದ ಸಂಸ್ಕಾರ ಎಂದು. ಈಗ ಯೋಚಿಸಿ ಅಚೇತನವಾದ ವಸ್ತುಗಳಿಗೇ ಈ ರೀತಿಯ ಸಂಪರ್ಕದಿಂದ ಸಂಸ್ಕಾರವಾಗುತ್ತದೆ ಎಂದಾದರೆ ಚೇತನಗಳಾದ ನಮಗೆ ಏನಾಗಬೇಡ ಎಂದು. ಪುರಾಣ ಒಂದು ಕಥೆಯನ್ನು ನೋಡಿ ಒಂದು ಗಿಳಿ ತನ್ನ ಎರಡು ಮಕ್ಕಳೊಂದಿಗೆ ಒಂದು ಮರದಲ್ಲಿ ವಾಸವಾಗಿತ್ತು. ಒಂದು ದಿನ ಬೇಡನೊಬ್ಬನ ದಾಳಿಗೆ ಆ ತಾಯಿ ಗಿಳಿ ಸಾವನ್ನಪ್ಪಿತು ಆ ಕ್ಷಣದಲ್ಲಿ ಒಂದು ಮರಿಗಿಳಿ ಅಲ್ಲಿಂದ ತಪ್ಪಿಸಿಕೊಳ್ಳೂತ್ತದೆ. ಬೇಡನು ಸತ್ತ ಗಿಳಿಯನ್ನು ಆಹಾರಕ್ಕಾಗಿ ಮತ್ತು ಅದರೊಂದಿಗಿದ್ದ ಅವನಿಗೆ ಸಿಕ್ಕಿದ ಒಂದು ಮರಿಯನ್ನು ತೆಗೆದುಕೊಂಡು ಹೋಗಿ ಸಾಕುತ್ತಾನೆ. ಅದೇ ಸಮಯದಲ್ಲಿ ಅಲ್ಲಿ ಬಂದ ಋಷಿಯೊಬ್ಬನಿಗೆ ಇನ್ನೊಂದು ಗಿಳಿ ಮರಿ ಸಿಗುತ್ತದೆ. ಆ ಎರಡು ಮರಿಗಳು ಒಂದು ಬೇಡನ ಮನೆಯಲ್ಲಿ ಇನ್ನೊಂದು ಋಷಿಯ ಆಶ್ರಮದಲ್ಲಿ ಬೆಳೆಯುತ್ತದೆ.
ಕಾಲ ಕಳೆಯುತ್ತಿರಲು ಆ ಕಾಡಲ್ಲಿ ರಾಜನು ಬಂದಾಗ ಬೇಡನ ಮನೆಯ ಗಿಳಿ ಕಡಿಯಿರಿ ಕೊಲ್ಲಿರಿ ಎಂದು ಹೇಳಿದರೆ ಋಷಿಯ ಆಶ್ರಮದ ಗಿಳಿಯು ಮಹಾರಾಜರೇ ಬನ್ನಿ ವಿಶ್ರಮಿಸಿ ಹಣ್ಣನ್ನು ಸ್ವೀಕರಿಸಿ ಎಂದು ಆತಿಥ್ಯ ಮಾಡುತ್ತದೆ. ಈ ಕುರಿತಾಗಿ ಋಷಿಯನ್ನು ರಾಜನು ಕೇಳಿದಾಗ ಋಷಿಯು ಆ ಗಿಳಿಗಳ ಜೀವನ ಕಥೆಯನ್ನು ತನ್ನ ದಿವ್ಯದ್ರಷ್ಟಿಯಿಂದ ರಾಜನಿಗೆ ತಿಳಿಸುತ್ತಾನೆ. ಆಗ ರಾಜನಿಗೆ ಸಂಸ್ಕಾರದ ಮಹತ್ವ ತಿಳಿಯುತ್ತದೆ.
ಈಗ ನಾವು ಎರಡು ಉದಾಹರಣೆಗಳನ್ನು ನೋಡಿದೆವು. ಒಂದು ಲೌಕಿಕ ಮತ್ತೊಂದು ಪುರಾಣದ ಕಥೆ. ಈಗ ಯೋಚಿಸಿ ನಾವು ಪ್ರತೀ ದಿನ ನಾಮಸ್ಮರಣೆ ಮಾಡುವುದರಿಂದ ಫಲವಿದೆಯೇ ಎಂದು. ಭಗವದ್ಗೀತೆ ಹೇಳುತ್ತದೆ.
ಇದನ್ನೂ ಓದಿ:Spiritual; ಕೃಷ್ಣ ಅಭಿನಂದಿಸಿದ ಕರ್ಣನ ಗುಣ ಪರಾಕ್ರಮ ಯಾವುದು? ಕರ್ಣನ ರಥದ ಮಹತ್ವ ಇಲ್ಲಿದೆ
“ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ” ಎಂದು. ನಮ್ಮ ಜೀವನದ ನೆಮ್ಮದಿಗೂ ದುಃಖಕ್ಕೂ ಕಾರಣ ನಮ್ಮ ಮನಸ್ಸೇ ಎಂಬುದು ಇದರ ಅರ್ಥ. ಅಂತಹ ಮನಸ್ಸು ಸ್ವಚ್ಛವಾಗಿರಬೇಕಾದರೆ ದಾಸರು ಹೇಳಿದಂತೆ ನಾಮದಬಲ ಅರ್ಥಾತ್ ನಾಮಸ್ಮರಣೆಯೆಂಬುದು ಅತ್ಯವಶ್ಯ. ಕೆಟ್ಟ ಯೋಚನೆ ಕೆಟ್ಟ ಮಾತಾಡುವುದರಿಂದ ನಮ್ಮಲ್ಲಿ ಅದೇ ರೀತಿಯ ಮನೋಭೂಮಿಕೆ ಬೆಳೆಯತೊಡಗುತ್ತದೆ ಹಾಗೆಯೇ ಒಳ್ಳೆಯ ಚಿಂತನೆ ನಾಮಸ್ಮರಣೆ ಇತ್ಯಾದಿಗಳು ಅಂತರಂಗವನ್ನು ಪರಿಶುದ್ಧಗೊಳಿಸುತ್ತದೆ.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಸಲಹೆಗಾರರು ಮತ್ತು ಚಿಂತಕರು