Mahakumbh 2025: 144 ವರ್ಷಕ್ಕೆ ಒಮ್ಮೆ ಬರುವ ಮಹಾಕುಂಭಮೇಳದ ಮಹತ್ವ ಮತ್ತು ವಿಧಿವಿಧಾನ
ಮಹಾ ಕುಂಭಮೇಳವು 144 ವರ್ಷಗಳಿಗೊಮ್ಮೆ ನಡೆಯುವ ಪವಿತ್ರ ಧಾರ್ಮಿಕ ಕಾರ್ಯಕ್ರಮ. ಗುರು ಗ್ರಹದ ಚಲನೆಯನ್ನು ಆಧರಿಸಿ ನಡೆಯುವ ಈ ಮೇಳವು ಪುಣ್ಯ ಪ್ರಾಪ್ತಿ ಮತ್ತು ಪಾಪ ಪರಿಹಾರಕ್ಕೆ ಅತ್ಯಂತ ಶುಭ ಸಮಯ. ಪೌಷ ಮಾಸದ ಪುಷ್ಯ ನಕ್ಷತ್ರದಲ್ಲಿ ನಡೆಯುವ ಈ ಮೇಳದಲ್ಲಿ ಸಂಗಮದಲ್ಲಿ ಸ್ನಾನ ಮಾಡುವುದು ವಿಶೇಷ ಫಲವನ್ನು ನೀಡುತ್ತದೆ. ಗುರು ಶಾಪ, ಪಿತೃ ಋಣ ಇತ್ಯಾದಿಗಳಿಂದ ಬಳಲುವವರಿಗೆ ಇದು ಪರಿಹಾರಕಾರಿ. ಶುದ್ಧ ಮನಸ್ಸಿನೊಂದಿಗೆ ಸ್ನಾನ ಮಾಡುವುದು ಮುಖ್ಯ.
ಕಾಲ ಮನುಷ್ಯನ ಉನ್ನತಿಯನ್ನು ಬಯಸಿ ಕೆಲವು ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತವೆ. ಅಂತಹದರಲ್ಲಿ ಮಹಾಕುಂಭಮೇಳವೂ ಒಂದು. ಇದು ಮನುಷ್ಯ ದೋಷದಿಂದ ಮುಕ್ತನಾಗಲು ಪುಣ್ಯವನ್ನು ಪಡೆಯಲು ಇರುವ ಅಪೂರ್ವ ಪರ್ವ. ಇದು ದೇವತೋಪಾಸನೆಗೆ ಇರುವ ಮುಖ್ಯ ಕಾಲವಲ್ಲ. ಈ ಸಂದರ್ಭದಲ್ಲಿ ಮಾಡುವ ಮಜ್ಜನಕ್ಕೆ ವಿಶೇಷ ಫಲವನ್ನು ಪ್ರಾಚೀನರು ಕಂಡುಕೊಂಡಿದ್ದಾರೆ. ದೇಶ ಕಾಲವನ್ನು ಹೇಳಿಕೊಂಡು ಸ್ನಾನದ ಉದ್ದೇಶವನ್ನು ಮನಸ್ಸಿನಲ್ಲಿ ಸ್ಮರಿಸಿ ಸಂಕಲ್ಪ ಮಾಡಿದರೆ ಮಾಡಿದ ಸ್ನಾನ ಫಲಿಸುತ್ತದೆ. ಹಾಗಾಗಿ ಇದು ವಿಶೇಷ ಸಂದರ್ಭ.
ಮಹಾಕುಂಭಮೇಳದ ವಿಶೇಷವೇನು?
ಮಹಾಕುಂಭ ಮೇಳ ೧೪೪ ವರ್ಷಕ್ಕೆ ಒಮ್ಮೆ ಆಗುವುದು. ಆದರೆ ಇದಕ್ಕಿಂತ ಮೊದಲು ಅನೇಕ ಕುಂಭಮೇಳಗಳು ನಡೆಯುತ್ತವೆ. ಅದರ ಬಗ್ಗೆ ಕೆಲವು ಅಂಶವನ್ನು ತಿಳಿಯೋಣ.
ಗುರು ಗ್ರಹ ಮಹಾಕುಂಭಮೇಳದ ಕೇಂದ್ರ:
ಗ್ರಹಗಳಲ್ಲಿ ಅತ್ಯಂತ ಶುಭ ಗುರು. ಗುರುವು ಉಚ್ಚನಾಗಿದ್ದಾಗ ಅನೇಕ ದೋಷಗಳನ್ನು ಪರಿಹರಿಸುತ್ತಾನೆ. ಹಾಗಾಗಿ ಗುರುವು ಅತಿ ವಿಶಿಷ್ಟನಾಗಿ ಕಾಣಿಸುತ್ತಾನೆ. ಈ ಮಹಾಕುಂಭಮೇಳವು ಅಂತಹ ಗುರುವನ್ನೇ ಆದರಿಸಿಕೊಂಡಿದೆ. ಮಹಾಕುಂಭಮೇಳ ೧೪೪ ವರ್ಷಕ್ಕೆ ನಡೆಯುತ್ತವೆ. ಇದು ನಡೆಯುವುದು ಗುರುವಿನ ಚಲನೆಯನ್ನು ಅವಲಂಬಿಸಿದೆ. ಈ ವರ್ಷದಿಂದ ಆರಂಭಿಸಿ ಪ್ರತಿ ನಾಲ್ಕು ವರ್ಷಕ್ಕೆ ಕುಂಭಮೇಳವು ಭಾರತದ ಪವಿತ್ರ ನದಿಗಳಲ್ಲಿ ಆಗಲಿದೆ. ನಾಸಿಕ್, ಹರಿದ್ವಾರ, ಉಜ್ಜೈನಿ, ಪ್ರಯಾಗದಲ್ಲಿ ನಡೆಯಲಿದೆ. ಗುರುವಿಗೆ ಹನ್ನೆರಡು ರಾಶಿಯನ್ನು ಒಂದು ಬರಿ ಸುತ್ತಿಬರಲು ಹನ್ನೆರಡು ವರ್ಷ ಬೇಕು. ಅಂದರೆ ಪ್ರತಿ ರಾಶಿಯಲ್ಲಿ ಒಂದು ವರ್ಷ ಗುರು ಸಂಚರಿಸುವನು.
ಈ ಹನ್ನೆರಡು ವರ್ಷದಲ್ಲಿ ಒಂದು ವೃತ್ತವನ್ನು ಸುತ್ತುವ ಗುರುವು ಹನ್ನೆರಡು ಬಾರಿ ಸುತ್ತಿದಾಗ ಈ ಮಹಾಕುಂಭಮೇಳ ಆಗುತ್ತದೆ. ಇದು ಪ್ರಯಾಗ ಅಂದರೆ ತ್ರಿವೇಣೀ ಸಂಗಮದಲ್ಲಿ ಆಗುತ್ತಿದೆ.
ಪೌಷ ಮಾಸದಲ್ಲಿ ಈ ಪರ್ವ ಯಾಕೆ?
ಪೌಷ ಮಾಸವು ಪುಷ್ಯಾ ನಕ್ಷತ್ರದಲ್ಲಿ ಪೂರ್ಣಚಂದ್ರನಿದ್ದಾಗ ಆಗುತ್ತದೆ. ಈ ಪುಷ್ಯಾ ನಕ್ಷತ್ರದ ದೇವತೆ ಬೃಹಸ್ಪತಿ ಅಂದರೆ ಗುರು. ಈ ಮಾಸವು ಗುರುವಿನ ವಿಶೇಷ ಬಲವಿರುವ ಮಾಸವೂ ಆಗಿದೆ. ಗುರುವು ಇರುವ ನಕ್ಷತ್ರ ರೋಹಿಣೀ. ಇದು ಬ್ರಹ್ಮನ ನಕ್ಷತ್ರ. ಅಷ್ಟೇ ಅಲ್ಲದೇ ಗುರುವು ಷಡ್ವರ್ಗದಲ್ಲಿರುವ ಎಲ್ಲ ಗ್ರಹಗಳೂ ಶುಭವಾಗಿಯೇ ಇರಲಿವೆ. ಇದು ಒಂದು ತಿಂಗಳ ಕಾಲ ಇರಲಿದ್ದು ಹುಣ್ಣಿಮೆಯಿಂದ ಆರಂಭವಾಗಲಿದೆ.
ಏನು ಮಾಡಬೇಕು?
ಮಹಾಕುಂಭಮೇಳ ನಡೆಯುವ ಸ್ಥಳದಲ್ಲಿ ಸಂಚಿತ ಪಾಪ ನಿವಾರಣೆಯಾಗಲಿ, ಪುಣ್ಯ ಪ್ರಾಪ್ತಿಯಾಗಲಿ ಎಂಬ ಸಂಕಲ್ಪದಿಂದ ಸಂಗಮದಲ್ಲಿ ಮುಳುಗಿ ಏಳಬೇಕು. ಇದೊಂದು ಧಾರ್ಮಿಕ ವಿಧಿಯಾಗಿದ್ದು ಅದನ್ನು ಅನುಸರಿಸಿ ಮಾಡುವುದು ಉತ್ತಮ. ಪಿತೃಕರ್ಮವನ್ನು ಮಾಡಲೂ ಇದು ಸುಕಾಲ.
ಇದನ್ನೂ ಓದಿ: ಮಹಾಕುಂಭ ಮೊದಲ ಬಾರಿ ನಡೆದಿದ್ದು ಎಲ್ಲಿ ಮತ್ತು ಯಾವಾಗ?
ಯಾರ ಪಾಪ ಪರಿಹಾರವಾಗುವುದು?
ನೀವೇ ಗುರು ಶಾಪಕ್ಕೆ ತುತ್ತಾಗಿದ್ದರೆ ಅಥವಾ ನಿಮ್ಮ ವಂಶಕ್ಕೆ ಗುರು ಶಾಪ ಬಂದಿದ್ದರೆ ಇದರಿಂದ ಬಿಡುಗಡೆ, ಗುರುನಿಂದನೆಯನ್ನು ಯಾವುದೋ ಕಾರಣಕ್ಕೆ ಮಾಡಿದ್ದರೆ ಪಶ್ಚಾತ್ತಾಪ ಭಾವದಿಂದ ಸ್ನಾನಮಾಡಿದರೆ, ಮನೆಯ ಹಿರಿಯರಿಗೆ ಗುರು ಸಮಾನರಿಗೆ ಮಾನಸಿಕವಾಗಿ ನೋವು ಕೊಟ್ಟಿದ್ದರೆ ಇದೆಲ್ಲ ದೋಷ ನಿವಾರಣೆಯಾಗಿ ಶುಭವಾಗಲಿದೆ. ಜಾತಕದಲ್ಲಿ ಗುರು ನೀಚನಾಗಿದ್ದರೆ, ಗುರುಲವಿಲ್ಲದವರು.ಇದಲ್ಲದೇ ಯಾರೂ ಕೂಡ ಸಂಗಮದಲ್ಲಿ ಪರಮ ಪವಿತ್ರ ನದಿಗಳ ಸುಗಮ ಸ್ನಾನಮಾಡಬಹುದು.
ಸ್ನಾನ ಮಾಡುವ ವಿಧಾನ :
ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೇ ಶರೀರಶುದ್ಧಿಯ ಬಗ್ಗೆ ಆಲೋಚಿಸದೇ ಮನಸ್ಸು ಶುದ್ಧಿಗಾಗಿ ಮಹತ್ತ್ವವನ್ನು ಕೊಟ್ಟು ಈ ಸ್ನಾನವನ್ನು ಮಾಡಬೇಕು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:45 am, Tue, 14 January 25