ದೇವರ ಪೂಜೆಯಲ್ಲಿ ಆರತಿಯ ಮಹತ್ವ, ನಿಯಮ, ಪೂಜಾಫಲ ಏನಿದೆ?

|

Updated on: Aug 31, 2024 | 6:06 AM

Significance Of Aarti : ಅಲ್ಲದೆ ಶ್ರದ್ಧಾ ಭಕ್ತಿಯಿಂದ ಆರತಿಯನ್ನು ತೆಗೆದುಕೊಳ್ಳುವುದರಿಂದ ಭಕ್ತರು ಆಧ್ಯಾತ್ಮಿಕ ಉನ್ನತಿಯನ್ನು ಪಡೆಯುತ್ತಾರೆ. ಈ ಭಕ್ತಿ ಭಾವ ಮನಸ್ಸಿನಲ್ಲೂ ನೆಮ್ಮದಿ ಮೂಡಿಸುತ್ತದೆ. ಬೆಳಗುವ ಆರತಿಯಲ್ಲಿ ಕಾಣುವ ದೇವರ ಸುಂದರ ನೋಟವೂ ಮನಸ್ಸಿಗೆ ಆನಂದ ನೀಡುತ್ತದೆ. ಹೀಗಾಗಿ, ಆರತಿಗೆ ಪೂಜೆಯಲ್ಲಿ ಸಾಕಷ್ಟು ಮಹತ್ವವಿದೆ. ಆಶೀರ್ವಾದ ಮಾಡು ದೇವರೇ ಅಂತ ಬೇಡುತ್ತಾ ಗಂಟೆ ಬಾರಿಸುವುದು ಹಾಗೂ ಆರತಿ ಎತ್ತುವುದು ದೈವಿಕ ವಾತಾವರಣವನ್ನು ಸೃಷ್ಟಿಸುತ್ತದೆ.

ದೇವರ ಪೂಜೆಯಲ್ಲಿ ಆರತಿಯ ಮಹತ್ವ, ನಿಯಮ, ಪೂಜಾಫಲ ಏನಿದೆ?
ದೇವರ ಪೂಜೆಯಲ್ಲಿ ಆರತಿಯ ಮಹತ್ವ
Follow us on

ದೇವರ ಪೂಜೆಯಲ್ಲಿ ಆರತಿಗೆ ಮಹತ್ವದ ಸ್ಥಾನವಿದೆ. ಆರತಿ ಬೆಳಗುವುದಕ್ಕೂ ಧಾರ್ಮಿಕ ಗ್ರಂಥ ಮತ್ತು ಪುರಾಣಗಳಲ್ಲಿ ಕೆಲವೊಂದು ವಿಶೇಷ ನಿಯಮಗಳನ್ನು ಉಲ್ಲೇಖಿಸಲಾಗಿದೆ. ದೀಪವನ್ನು ಯಾವ ದಿಕ್ಕಿನಲ್ಲಿ ಇಡಬೇಕು. ಎಷ್ಟು ಬಾರಿ ದೇವರಿಗೆ ಆರತಿ ಮಾಡಬೇಕು, ಹೇಗೆ ಆರತಿ ಮಾಡಬೇಕು ಎಂಬೆಲ್ಲಾ ನಿಯಮಗಳನ್ನು ಶಾಸ್ತ್ರದಲ್ಲಿ ನೋಡಬಹುದು. ಈ ನಿಯಮಗಳನ್ನು ಪಾಲಿಸುವ ಮೂಲಕ ದೇವರ ಪೂಜೆಯನ್ನು ಸಾಂಗವಾಗಿ ಮಾಡಬಹುದಾಗಿದೆ.

ಆರತಿಯ ಮಹತ್ವ

ಯಾವುದೇ ಪೂಜೆ, ಹೋಮ ಅಥವಾ ಇತರ ದೇವತಾಕಾರ್ಯದ ಬಳಿಕ ದೇವರಿಗೆ ಆರತಿ ಬೆಳಗಿದಾಗ ಮಾತ್ರ ಅದು ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಸನಾತನ ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ಆರತಿಗೂ ಅದರದ್ದೇ ಆದ ಮಹತ್ವ ಮತ್ತು ನಿಯಮಾವಳಿಗಳೂ ಇವೆ

ಸರಿಯಾದ ವಿಧಾನದಲ್ಲಿ ಮತ್ತು ನಿಯಮಗಳೊಂದಿಗೆ ಶ್ರದ್ಧೆಯೊಂದಿಗೆ ಮಾಡುವ ಆರತಿಯನ್ನು ದೇವರು ಸ್ವೀಕರಿಸುತ್ತಾರೆ ಎಂಬುದನ್ನು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಆರತಿ ಪಂಚಭೂತಗಳ ಸಂಕೇತ ಕೂಡಾ ಹೌದು. ಈ ಜಗತ್ತು ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಎಂಬ ಪಂಚಭೂತಗಳಿಂದ ಸೃಷ್ಟಿಯಾಗಿದೆ.

ಅಂತೆಯೇ, ಆರತಿಯಲ್ಲೂ ನಾವು ಇದರ ಸಂಕೇತವನ್ನು ನೋಡಬಹುದು. ಕರ್ಪೂರ ಭೂಮಿಯ ಸುಗಂಧವನ್ನು ಪ್ರತಿನಿಧಿಸಿದರೆ, ತುಪ್ಪ ನೀರಿನ ಹರಿವು, ಪ್ರಜ್ವಲಿಸುವ ಜ್ವಾಲೆ ಅಗ್ನಿಯನ್ನೂ, ಜ್ವಾಲೆಯ ಚಲನೆ ಗಾಳಿಯನ್ನೂ, ಗಂಟೆ, ಶಂಖ ಮಂಗಳವಾದ್ಯಗಳ ನಿನಾದ ಆಕಾಶವನ್ನೂ ಪ್ರತಿನಿಧಿಸುತ್ತವೆ.

ಆರತಿಯ ಅರ್ಥ:

ಸಂಸ್ಕೃತದಲ್ಲಿ ‘ಆರತಿ’ ಎಂಬ ಪದವು ಎರಡು ಭಾಗಗಳನ್ನು ಒಳಗೊಂಡಿದೆ. ಪೂರ್ವಪ್ರತ್ಯಯ ‘ಆ’ ಎಂದರೆ ಸಂಪೂರ್ಣ, ಮತ್ತು ‘ರತಿ’ ಎಂದರೆ ಪ್ರೀತಿ. ಆದ್ದರಿಂದ, ಆರತಿಯು ದೇವರಿಗೆ ಬೇಷರತ್ತಾದ ಮತ್ತು ಅಚಲವಾದ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಇದನ್ನು ಗೌರವ, ಮೆಚ್ಚುಗೆ ಮತ್ತು ಕೇಂದ್ರೀಕೃತ ಮನಸ್ಸಿನಿಂದ ಹಾಡುತ್ತಾ, ಮಾಡಲಾಗುತ್ತದೆ.

ಆರತಿಯ ನಿಯಮ

ಒಂದೇ ಸ್ಥಳದಲ್ಲಿ ನಿಂತು ದೇವರ ಆರತಿ ಮಾಡಬೇಕು. ಅದೂ ಅಲ್ಲದೆ, ಆರತಿ ಮಾಡುವಾಗ ಯಾವಾಗಲೂ ಸ್ವಲ್ಪ ನಮಸ್ಕರಿಸಿ ಆರತಿ ಮಾಡಿ. ಸದಾ ಭಗವಂತನ ಪಾದದಿಂದ ಆರತಿಯನ್ನು ಆರಂಭಿಸಬೇಕು. ಮೊದಲು ದೇವರ ಪಾದಕ್ಕೆ ನಾಲ್ಕು ಬಾರಿ, ಎರಡು ಬಾರಿ ಹೊಕ್ಕುಳ ಕಡೆಗೆ, ಒಂದು ಸಲ ಮುಖದ ಕಡೆಗೆ ಮತ್ತು ಏಳು ಬಾರಿ ದೇವರ ಎಲ್ಲಾ ಭಾಗಗಳಿಗೆ ಆಗುವಂತೆ ಆರತಿ ಬೆಳಗಬೇಕು. ಅಂದರೆ, ಈ ಒಟ್ಟು ಹದಿನಾಲ್ಕು ಸಂಖ್ಯೆ ಹದಿನಾಲ್ಕು ಭುವನಗಳನ್ನು ಪ್ರತಿನಿಧಿಸುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಪೂಜೆ, ಭಕ್ತಿಯು ದೇವರಲ್ಲಿ ಲೀನವಾಗಿರುವ ಹದಿನಾಲ್ಕು ಭುವನಗಳನ್ನು ತಲುಪುತ್ತದೆ ಎಂಬುದು ನಂಬಿಕೆ.

ಆರತಿಯಿಂದ ಪೂಜಾಫಲ

ದೇವರ ಪಾದಕಮಲಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪೂರ್ಣ ಭಕ್ತಿ ಮತ್ತು ನಂಬಿಕೆಯಿಂದ ಆರತಿ ಮಾಡಬೇಕು. ಏಕಭಕ್ತಿಯಿಂದ ನೀವು ಮಾಡುವ ಪೂಜೆ ಭಗವಂತನನ್ನು ತಲುಪುತ್ತದೆ. ಇಂತಹ ಮನೆಯಲ್ಲಿ ದೇವರು ನೆಲೆಯಾಗಿರುತ್ತಾನೆ ಎಂಬುದು ನಂಬಿಕೆ. ಎಲ್ಲರಿಗೂ ಪೂಜಾ ಮಂತ್ರ ತಿಳಿದಿರುವುದಿಲ್ಲ. ಆದರೆ, ದೇವರ ಪೂಜಾ ಕೈಂಕರ್ಯದ ಸಂದರ್ಭದಲ್ಲಿ ಭಕ್ತಿಯಿಂದ ಆರತಿ ಮಾಡಿದರೆ ಆತನ ಪೂಜೆಯನ್ನು ದೇವರು ಸ್ವೀಕರಿಸುತ್ತಾರೆ ಎಂಬ ವಿಶೇಷ ನಿಯಮವನ್ನು ಸ್ಕಂದ ಪುರಾಣದಲ್ಲೂ ಉಲ್ಲೇಖಿಸಲಾಗಿದೆ. ಇದು ಆರತಿಗೆ ಇರುವ ಮಹತ್ವವನ್ನೂ ತಿಳಿಸುತ್ತದೆ.

ಆರತಿಯಿಂದ ಒಳಿತು

ತುಪ್ಪದ ದೀಪದಿಂದ ಆರತಿ ಮಾಡುವವರು ಸ್ವರ್ಗದಲ್ಲಿ ಸ್ಥಾನ ಪಡೆಯುತ್ತಾರೆ ಎನ್ನುತ್ತದೆ ಶಾಸ್ತ್ರ. ಕರ್ಪೂರದಿಂದ ಆರತಿ ಮಾಡುವುದರಿಂದ ಅವರು ಅನಂತತೆಗೆ ಪ್ರವೇಶ ಪಡೆಯುತ್ತಾರೆ. ಪೂಜೆಯ ಸಂದರ್ಭದಲ್ಲಿ ಮಾಡುವ ಆರತಿಯನ್ನು ನೋಡುವವರು ಪರಮ ಸ್ಥಾನವನ್ನು ಪಡೆಯುತ್ತಾರೆ ಎನ್ನುತ್ತದೆ ಶಾಸ್ತ್ರ, ಪುರಾಣ.

ಅಲ್ಲದೆ ಶ್ರದ್ಧಾ ಭಕ್ತಿಯಿಂದ ಆರತಿಯನ್ನು ತೆಗೆದುಕೊಳ್ಳುವುದರಿಂದ ಭಕ್ತರು ಆಧ್ಯಾತ್ಮಿಕ ಉನ್ನತಿಯನ್ನು ಪಡೆಯುತ್ತಾರೆ. ಈ ಭಕ್ತಿ ಭಾವ ಮನಸ್ಸಿನಲ್ಲೂ ನೆಮ್ಮದಿ ಮೂಡಿಸುತ್ತದೆ. ಬೆಳಗುವ ಆರತಿಯಲ್ಲಿ ಕಾಣುವ ದೇವರ ಸುಂದರ ನೋಟವೂ ಮನಸ್ಸಿಗೆ ಆನಂದ ನೀಡುತ್ತದೆ. ಹೀಗಾಗಿ, ಆರತಿಗೆ ಪೂಜೆಯಲ್ಲಿ ಸಾಕಷ್ಟು ಮಹತ್ವವಿದೆ.

ನಕಾರಾತ್ಮಕ ಶಕ್ತಿಗಳು ದೂರ ದೂರ

ನಕಾರಾತ್ಮಕ ಶಕ್ತಿಗಳಿಂದ ದೂರವಿರಲು ಎಡಗೈಯಲ್ಲಿ ಗಂಟೆಯನ್ನು ಬಾರಿಸುತ್ತಾ, ತಟ್ಟೆಯಲ್ಲಿ ಹಚ್ಚಿರುವ ಆರತಿಯನ್ನು ದೇವರ ಮುಂದೆ ವೃತ್ತಾಕಾರವಾಗಿ ತಿರುಗಿಸಬೇಕು. ಆರತಿಯ ನಂತರ ಸ್ವಲ್ಪ ಶುದ್ಧ ನೀರನ್ನು ತಟ್ಟೆಯ ಸುತ್ತಹಾಕಬೇಕು. ಅಂತಿಮವಾಗಿ ದೇವರಿಗೆ ಕೃತಜ್ಞತೆ ಅರ್ಪಿಸಬೇಕು.

ಪಂಚಮುಖಿ, ಸಪ್ತಮುಖಿ

ಪೂಜೆಯ ಸಂದರ್ಭದಲ್ಲಿ ಪಂಚಮುಖಿ ಜ್ಯೋತಿ ಅಥವಾ ಸಪ್ತಮುಖಿ ಜ್ಯೋತಿಯೊಂದಿಗೆ ಆರತಿ ಬೆಳಗುವುದು ಕೂಡಾ ಉತ್ತಮ ಎಂಬುದನ್ನು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅಂದರೆ, ದೀಪದಲ್ಲಿ ಐದು ಅಥವಾ ಏಳು ಬತ್ತಿಗಳನ್ನು ಇಟ್ಟು ದೇವರಿಗೆ ಆರತಿ ಮಾಡಬೇಕು. ಶಂಖ ಮತ್ತು ಜಾಗಟೆ ಅಥವಾ ಗಂಟೆಯನ್ನು ಆರತಿಯ ವೇಳೆ ಬಳಸಬೇಕು. ಆರತಿಯ ಮಧ್ಯದಲ್ಲಿ ಶಂಖವನ್ನು ಊದುವುದು ಒಳ್ಳೆಯದು.

ಆರತಿಯ ನಂತರ ಎರಡೂ ಕೈಗಳಿಂದ ಸ್ವೀಕರಿಸಬೇಕೆಂಬ ನಿಯಮವಿದೆ. ಆರತಿಯ ಬೆಳಕಿನಲ್ಲಿ ದೇವರ ಶಕ್ತಿ ಹೀರಲ್ಪಡುತ್ತದೆ ಎಂಬುದು ನಂಬಿಕೆ. ಇದರಿಂದ ಭಕ್ತರು ತಮ್ಮ ಕೈಗಳನ್ನು ದೀಪದ ಮೇಲ್ಭಾಗದಲ್ಲಿ ತಿರುಗಿಸಿ ತಮ್ಮ ತಲೆಯ ಮೇಲೆ ತೆಗೆದುಕೊಳ್ಳುತ್ತಾರೆ. ಈ ಭಕ್ತಿ ಭಾವ ಆಸ್ತಿಕರಿಗೆ ಮಾನಸಿಕ ನೆಮ್ಮದಿಯನ್ನೂ ತರುತ್ತದೆ.

ಆರತಿ ಹಿಂದಿದೆ ಈ ವೈಜ್ಞಾನಿಕ ಕಾರಣ

ಆರತಿ ಎತ್ತುವುದರ ಹಿಂದೆ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಅಂಶಗಳಿವೆ. ಆರತಿಯನ್ನು ಎತ್ತುವಾಗ ವೃತ್ತಾಕಾರದ ಚಲನೆಯಲ್ಲಿ ಗಂಟೆಯ ಲಯಬದ್ಧವಾದ ಶದ್ಧವು ಧ್ಯಾನಸ್ಥ ಮತ್ತು ಶಾಂತಿಯುತ ವಾತಾವರಣವನ್ನು ನೀಡುತ್ತದೆ. ಈ ಸಂದರ್ಭದಲ್ಲಿ ಮನಸ್ಸು, ದೇಹ ಹಾಗೂ ಆತ್ಮವನ್ನು ಸಂಯೋಜಿಸಲು ಸಹಾಯ ಮಾಡುತ್ತದೆ.

ಧೂಪದ್ರವ್ಯ, ಕರ್ಪೂರ ಔಷದೀಯ ಗುಣಗಳನ್ನು ಹೊಂದಿದೆ. ಈ ವಾಸನೆಯು ಇಂದ್ರಿಯಗಳನ್ನು ಉತ್ತೇಜಿಸುತ್ತದೆ. ಮನಸ್ಸಿನ ಒಂದು ರೀತಿಯಲ್ಲಿ ವಿಶ್ರಾಂತಿಯನ್ನು ನೀಡುತ್ತದೆ. ಇದರ ಸೌಮ್ಯವಾದ ಹೊಗೆ ಪರಿಸರವನ್ನು ಶುದ್ಧೀಕರಿಸುತ್ತದೆ ಎಂದು ನಂಬಲಾಗಿದೆ. ಆರತಿ ಬೆಳಗುವಾಗ ಬೆಂಕಿಯ ಚಿಕ್ಕ ಜ್ವಾಲೆ ದೈವಿಕ ಉಪಸ್ಥಿತಿಯನ್ನು ಪ್ರತಿನಿಧಿಸುತ್ತದೆ.

ಆರತಿ ಎತ್ತುವಾಗ ಕತ್ತಲೆಯನ್ನು ಹೊಗಲಾಡಿಸುತ್ತದೆ. ಜ್ಞಾನೋದಯದ ಸಂಕೇತವೂ ಆಗಿದೆ. ಬೆಳಕು ಮನಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಪ್ರಶಾಂತ ವಾತಾವರಣನ್ನು ಸೃಷ್ಟಿಸುತ್ತದೆ. ಆರತಿಯ ಸಮಯದಲ್ಲಿ ಪ್ರಾರ್ಥನೆಯ ಪಠಣ, ಮಂತ್ರಗಳ ಪಠಣ ಹಾಗೂ ದೇವರ ಹಾಡುಗಳನ್ನು ಹಾಡುವುದರಿಂದ ಧ್ವನಿ ಕಂಪನಗಳನ್ನು ಉಂಟುಮಾಡುತ್ತದೆ. ಆಧ್ಯಾತ್ಮಿಕ ಸಂಪರ್ಕವನ್ನು ಹೆಚ್ಚಿಸುತ್ತದೆ.