ಜಗತ್ತಿನ ಬೆಳಕಿಗೆ ಮೂಲ ಸೂರ್ಯ. ಸನಾತನ ಧರ್ಮದ ಪ್ರಕಾರ ಚಂದ್ರನೂ ಸೂರ್ಯನ ಬೆಳಕಿನ ಆಶ್ರಿತ. ಅಂಧಕಾರ ನಿವಾರಿಸಿ ಜೀವಿಗಳಿಗೆ ಮುದ ನೀಡುವ ಶಕ್ತಿ ಬೆಳಕಿಗೆ ಹೊರತು ಪಡಿಸಿದರೆ ಬೇರೆ ಯಾವ ವಸ್ತುವಿಗೂ ಅದರಷ್ಟು ಶಕ್ತಿ ಇಲ್ಲ ಎಂದರೆ ತಪ್ಪಾಗಲಾರದು. ಅಂತಹ ಮಹತ್ತರವಾದ ಶಕ್ತಿಯುಳ್ಳ ಬೆಳಕಿನ ಆಧಾರಿತವಾದ ಹಬ್ಬದ ಕಾಲವೇ ದೀಪಾವಳಿ. ಹಲವಾರು ಅಂಧಕಾರಗಳನ್ನು ಭಗವಂತ ತನ್ನ ಪ್ರಭಾವದಿಂದ ದೂರೀಕರಿಸಿದ ಮತ್ತು ಜಗತ್ತಿಗೆ ಅಳಿವಿಲ್ಲದ ಬೆಳಕನ್ನು ನೀಡಿದೆ.
ಕಾರ್ತಿಕ ಮಾಸವೆಂದರೆ ಸ್ವಾಭಾವಿಕವಾಗಿ ಮಳೆ ಮುಗಿದು ಛಳಿ ಆರಂಭವಾಗುವ ಸಮಯ. ಈ ಕಾಲದ ಆರಂಭದಲ್ಲಿ ಅಂದರೆ ಆಶ್ವಯುಜ ಮಾಸ ಮುಗಿದು ಕಾರ್ತಿಕ ಮಾಸದ ಆರಂಭದ ಸಂಧಿಕಾಲದಲ್ಲಿ ದೀಪಾವಳಿಯ ಆಚರಣೆ. ಇಂತಹ ಮಹೋನ್ನತವಾದ ಸುಸಮಯದಲ್ಲಿ ನಾವು ದೀಪವನ್ನು ಮನೆಯ ಒಳಗೆ ಮತ್ತು ಹೊರಗೆ ಬೆಳಗುತ್ತೇವೆ. ಅದರೊಂದಿಗೆ ಆಕಾಶದಲ್ಲಿ (ಮನೆಯ ಈಶಾನ್ಯ ಭಾಗದಲ್ಲಿ ಅಥವಾ ಮನೆಯ ಹೊರಗೆ ಮಧ್ಯಭಾಗದಲ್ಲಿ) ನಕ್ಷತ್ರ ದೀಪವೆಂದು ಸುಂದರವಾದ ಗೂಡಿನ ಒಳಗೆ ದೀಪ ಉರಿಸುತ್ತೇವೆ (ಕೆಲವರು ಎಣ್ಣೆಯ ದೀಪ ಹಚ್ಚುವರು, ಕೆಲವರು ವಿದ್ಯುತ್ ದೀಪ ಉರಿಸುವರು) . ಇದಕ್ಕೆ ಬೊಂಬಳಗೂಡು ಆಕಾಶದೀಪ ಪ್ರದೀಪ ಇದೇ ರೀತಿ ಹಲವಾರು ಹೆಸರುಗಳು ಇವೆ.
ಈ ದೀಪವನ್ನು ಕಾರ್ತಿಕ ಮಾಸದ ಆರಂಭದಿಂದ ಕಾರ್ತಿಕ ಮಾಸದ ಕೊನೆಯ ತನಕ ಹಚ್ಚುವುದು ರೂಢಿ. ( ಈ ವರ್ಷ 26/10/22 ರಿಂದ 23/11/22ರ ವರೆಗೆ ಕಾರ್ತಿಕಮಾಸ) ಕೆಲವು ಪ್ರಾಂತದಲ್ಲಿ ತುಲಸೀ ಹಬ್ಬದಂದು ವಿಸರ್ಜಿಸುವ ರೂಢಿಯೂ ಇದೆ. ಇನ್ನು ಕೆಲವು ಕಡೆ ತುಲಾ ಸಂಕ್ರಮಣದಿಂದ ಆರಂಭಿಸಿ ವೃಶ್ಚಿಕ ಸಂಕ್ರಮಣದ ಆರಂಭದ ತನಕ ಆಕಾಶದೀಪ ಬೆಳಗುವ ಪದ್ಧತಿಯಿದೆ. ಈ ಮೂರು ಕಾಲದಲ್ಲಿ ಕಾರ್ತಿಕ ಮಾಸದಲ್ಲಿ ದೀಪ ಬೆಳಗುವುದು ಹೆಚ್ಚು . ಹಾಗೆಯೇ ಕಾರ್ತಿಕದಲ್ಲಿ ಆಕಾಶ ದೀಪ ಎನ್ನುವುದು ಅತ್ಯಂತ ರೂಢಿ.
ಈಗ ಪ್ರಸ್ತುತ ಇದರ ವಿಧಾನ ತಿಳಿಯೋಣ: ಹಿಂದಿನ ಕಾಲದಲ್ಲಿ ಮನೆಯ ಮುಂಬಾಗದಲ್ಲಿ ಮನೆಯ ಯಜಮಾನನ (ಮನೆಯ ಹಿರಿಯ ವ್ಯಕ್ತಿಯ) ಗಾತ್ರದ ಒಂದು ಮರದ ದಂಡನ್ನು ಸ್ಥಾಪಿಸುತ್ತಿದ್ದರು ಅದರ ಮೇಲೆ ಅಷ್ಟದಳಕೃತಿಯಲ್ಲಿ ದೀಪವನ್ನು ಇಟ್ಟು ಸೂರ್ಯಾಸ್ತವಾದ ಮೇಲೆ ಮನೆಯ ಹಿರಿಯ ಮುತ್ತೈದೆ ದೀಪ ಹಚ್ಚುತ್ತಿದ್ದರು. ವರ್ತಮಾನದಲ್ಲಿ ಮರದ ದಂಡು ಸಿಗುವುದು ಕಷ್ಟ ಮತ್ತು ಪಟ್ಟದಲ್ಲಿ ಸ್ಥಾಪಿಸುವುದು ಅಸಾಧ್ಯವಾಗಿರುದರಿಂದ ಮನೆಯ ಎತ್ತರದಲ್ಲಿ ಎಣ್ಣೆಯ ಅಥವಾ ವಿದ್ಯುತ್ ದೀಪವನ್ನು ಹಚ್ಚುತ್ತಿದ್ದಾರೆ.
ಇದರ ಮಹತ್ವ ಮತ್ತು ಫಲ ತಿಳಿಯೋಣ: ಮನೆಯ ಹಿರಿಯರಿಂದ ನಿರ್ಮಿಸಿದ ದೀಪಸ್ಥಾಪನಾ ಸ್ಥಾನವೇನಿದೆ ಅಲ್ಲಿ ಗೋಧೂಳಿ ಲಗ್ನ ಅಥವಾ ಸೂರ್ಯಾಸ್ತದ ವೇಳೆಯಲ್ಲಿ ಮನೆಯ ಹೆಂಗಳೆಯರು (ಸಾಧ್ಯವಿದ್ದಲ್ಲಿ ಅಷ್ಟದಳಲ್ಲಿ ಎಂಟು ದೀಪವನ್ನು ಹಚ್ಚಿರಿ) ಆಕಾಶದೀಪವನ್ನು ಉರಿಸಬೇಕು. ಇದರಿಂದ ಮನೆಯಲ್ಲಿ ಇರುವ ಆಂತರಿಕ ಕೊಳೆಗಳಾದ ಮನಸ್ತಾಪಗಳು, ಮನೋವ್ಯಾಧಿಗಳು, ಅರಿಷ್ಟಗಳು ದೂರವಾಗುತ್ತವೆ ಎಂದು ಧರ್ಮಶಾಸ್ತ್ರ ಹೇಳುತ್ತದೆ. ದ್ವಾಪರದಲ್ಲಿ ಭಗವಾನ್ ಶ್ರೀಕೃಷ್ಣನು ದ್ರೌಪತಿಗೆ ಮನೋದುಗುಡ ಉಂಟಾದಾಗ “ಕಾರ್ತಿಕ ಮಾಸದಲ್ಲಿ ಆಕಾಶ ದೀಪ ವ್ರತವನ್ನು ಮಾಡಲು ಹೇಳುತ್ತಾನೆ. ಅದರಿಂದ ಅವಳಿಗೆ (ದ್ರೌಪದಿಗೆ) ಯುದ್ಧದಲ್ಲಿ ತಮ್ಮವರನ್ನು, ಬಾಂಧವರನ್ನು ಕಳೆದುಕೊಂಡ ದುಃಖವೇನಿದೆ ಅದು ಕ್ರಮೇಣ ದೂರವಾಯಿತು ಎಂಬ ಉಲ್ಲೇಖ್ಹವಿದೆ. ಅದೇ ರೀತಿ ಕೃಷ್ಣನ ತಂಗಿಯಾದ ಸುಭದ್ರೆಯೂ ಕಾರ್ತಿಕ ಆಕಾಶ ದೀಪವನ್ನಿಟ್ಟು ತನ್ನ ಇಷ್ಟದಲ್ಲೊಂದಾದ ಅರ್ಜುನನ್ನು ಪತಿಯಾಗಿ ಪಡೆದಳು ಎಂಬ ಕಥೆಯೂ ಇದೆ.
ಅಲ್ಲದೇ ಶಾಸ್ತ್ರದಲ್ಲಿ ಹೇಳಿದಂತೆ ಈ ಶ್ಲೋಕವನ್ನು ಹೇಳಿ ಆಕಾಶದೀಪವನ್ನು ಒಂದು ತಿಂಗಳ / ಮಾಸಗಳ ಕಾಲ ಬೆಳಗಿದರೆ ದಾರಿದ್ರ್ಯ ದೂರವಾಗಿ ಮಹಾಸಂಪತ್ತು ಪ್ರಾಪ್ತವಾಗುವುದು. ಜೀವನನದಲ್ಲಿ ಜೀವಗಳ ಅಂಧಕಾರ ನಿವಾರಣೆಗಾಗಿ ಸನ್ಮಂಗಲಕ್ಕಾಗಿ ಪ್ರಾರ್ಥಿಸುತ್ತಾ ಈ ಕೆಳಗಿನ ಶ್ಲೋಕಮಂತ್ರವನ್ನು ಹೇಳುತ್ತಾ ಆಕಾಶದೀಪ ಬೆಳಗೋಣ ಅಲ್ಲವೇ……
ದಾಮೋದರಾಯನಭಸಿ ತುಲಾಯಾಂ ದೋಲಾಯಾ ಸಹ |
ಪ್ರದೀಪಂತೇ ಪ್ರಯಚ್ಛಾಮಿ ನಮೋ ಅನಂತಾಯ ವೇಧಸೇ ||
ಡಾ.ಕೇಶವಕಿರಣ ಬಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
kkmanasvi@gamail.com