ನಾರಾಯಣ ಪ್ರಿಯ ನಾರದನಿಂದ ವಿಷ್ಣುವಿಗೆ ಶಾಪ, ರಾಮನ ಅವತಾರದಲ್ಲಿ ಹನುಮಂತನ ಸಹಾಯ ಪಡೆಯಲು ಕಾರಣವಾಗಿದ್ದು ಇದೇ ಕೋಪ

ವಿಶ್ವದ ಮೊದಲ ಪತ್ರಕರ್ತ ಎಂದೂ ಸಹ ಕರೆಯಲ್ಪಡುವ, ಮನುಷ್ಯರಿಗೆ ಜ್ಞಾನವನ್ನು ಕೊಡುವ, ಹರಿ ಪ್ರಿಯ ನಾರದ ಮುನಿಗಳು ಓರ್ವ ಬಾಲ ಬ್ರಹ್ಮಚಾರಿ. ಆದರೆ ಇಂತಹ ನಾರದಮುನಿಗೂ ಕೂಡ ಪ್ರೇಮಾಂಕುರವಾಗುವ ಕಥೆಯೊಂದಿದೆ.

ನಾರಾಯಣ ಪ್ರಿಯ ನಾರದನಿಂದ ವಿಷ್ಣುವಿಗೆ ಶಾಪ, ರಾಮನ ಅವತಾರದಲ್ಲಿ ಹನುಮಂತನ ಸಹಾಯ ಪಡೆಯಲು ಕಾರಣವಾಗಿದ್ದು ಇದೇ ಕೋಪ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Dec 27, 2021 | 7:15 AM

ಕೇವಲ ಮನುಷ್ಯನಲ್ಲದೆ ದೇವರು ಕೂಡ ಶಾಪಗ್ರಸ್ಥರಾಗುತ್ತಾರೆ. ಇದಕ್ಕೆ ನಮ್ಮ ಪುರಾಣಗಳಲ್ಲಿರುವ ಕಥೆಗಳೇ ಸಾಕ್ಷಿ. ಒಂದು ಕೈಯಲ್ಲಿ ವೀಣೆ ಇನ್ನೊಂದು ಕೈಯಲ್ಲಿ ಕರ್ತಾಲ್ ಹಿಡಿದು ಶ್ರೀಮನ್ನಾರಾಯಣನ ನಾಮ ಸ್ಮರಣೆ ಮಾಡುತ್ತ ತ್ರಿಲೋಕ ಸಂಚಾರ ಮಾಡುವ ಶ್ರೀ ನಾರದ ಮುನಿಗಳೇ ಒಮ್ಮೆ ವಿಷ್ಣುವಿಗೆ ಶಾಪ ನೀಡಿದ್ದರು. ಈ ಶಾಪದಿಂದ ವಿಷ್ಣು ತನ್ನ ಪ್ರೀತಿಯ ಪತ್ನಿ ಲಕ್ಷ್ಮಿಯಿಂದಲೇ ದೂರಾಗಿದ್ದರು.

ವಿಶ್ವದ ಮೊದಲ ಪತ್ರಕರ್ತ ಎಂದೂ ಸಹ ಕರೆಯಲ್ಪಡುವ, ಮನುಷ್ಯರಿಗೆ ಜ್ಞಾನವನ್ನು ಕೊಡುವ, ಹರಿ ಪ್ರಿಯ ನಾರದ ಮುನಿಗಳು ಓರ್ವ ಬಾಲ ಬ್ರಹ್ಮಚಾರಿ. ಆದರೆ ಇಂತಹ ನಾರದಮುನಿಗೂ ಕೂಡ ಪ್ರೇಮಾಂಕುರವಾಗುವ ಕಥೆಯೊಂದಿದೆ. ಒಮ್ಮೆ ನಾರದ ಮಹರ್ಷಿಗಳು ಒಂದು ವಿಶೇಷವಾದ ತಪೋವನದಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾರೆ. ನಾರದ ಮುನಿ ತಪಸ್ಸಿಗೆ ಕುಳಿತಾಗ ಯಾವ ಶಕ್ತಿಯೂ ವಿಚಲಿತಗೊಳಿಸಲಾಗಬಾರದು ಎಂಬ ವರವನ್ನು ಶಿವ ನೀಡಿರುತ್ತಾನೆ. ನಾರದರ ಅತ್ಯುಗ್ರವಾಗಿ ತಪಸ್ಸು ಮಾಡುತ್ತಿರುವುದನ್ನು ಕಂಡ ಇಂದ್ರ ದೇವನು ನಾರದದ ತಪಸ್ಸು ಭಂಗ ಮಾಡಬೇಕೆಂದು ಉಪಾಯ ಮಾಡುತ್ತಾನೆ. ಅಗ್ನಿ, ವರುಣ ಮತ್ತು ವಾಯುರನ್ನು ಕಳಿಸಿ ತಪಸ್ಸು ಭಂಗಕ್ಕೆ ಯತ್ನಿಸುತ್ತಾನೆ. ಆದ್ರೆ ಅಗ್ನಿ, ವರುಣ ಮತ್ತು ವಾಯುರ ಪ್ರಯತ್ನಗಳು ವಿಫಲವಾಗುತ್ತೆ.

ಆಗ ಇಂದ್ರದೇವ ಪ್ರಣಯದೇವನಾದ ಕಾಮದೇವನನ್ನು ಕರೆದು, ನಾರದ ಮುನಿಯ ತಪಸ್ಸನ್ನು ಭಂಗ ಮಾಡುವಂತೆ ಆದೇಶಿಸುತ್ತಾನೆ. ನಾರದರ ತಪೋಭಂಗವನ್ನುಂಟು ಮಾಡಲು ಯಾವ ಮಾರ್ಗವನ್ನು ಬೇಕಾದರೂ ಅನುಸರಿಸುವಂತೆ ಆತನು ಕಾಮದೇವನಿಗೆ ಅಪ್ಪಣೆ ಮಾಡುತ್ತಾನೆ. ರತಿ, ಅಪ್ಸರೆ, ಸ್ವರ್ಗಲೋಕದ ದೇವಕನ್ಯೆಯೂ ಅಥವಾ ದೇವಲೋಕದ ನರ್ತಕಿಯರೋ ಯಾರೇ ಆಗಿರಲಿ ಅವರನ್ನು ಬಳಸಿಕೊಂಡು ನಾರದಮಹರ್ಷಿಯ ತಪಸ್ಸು ಭಂಗ ಮಾಡಲು ಕಾಮದೇವನಿಗೆ ಇಂದ್ರ ಆಜ್ಞೆ ಮಾಡುತ್ತಾನೆ. ಅದರಂತೆಯೇ ಕಾಮದೇವನು ತನ್ನಿಂದಾಗುವ ಎಲ್ಲಾ ಮಾರ್ಗಗಳನ್ನು ಪ್ರಯೋಗಿಸುತ್ತಾನೆ. ಸಂಪೂರ್ಣ ಪ್ರಯತ್ನಗಳ ನಡುವೆಯೂ ನಾರದ ಮುನಿಗಳು ಮಾತ್ರ ಕುಳಿತಲ್ಲಿಯೇ ಕೂತು ತಪಸ್ಸು ಮಾಡುತ್ತಿರುತ್ತಾರೆ. ಕೊನೆಗೆ ಕಾಮದೇವ ಸೋಲನ್ನೊಪ್ಪುತ್ತಾನೆ.

ಎಷ್ಟೆಲ್ಲಾ ಆದ ಮೇಲೆ ನಾರದ ಮುನಿಗಳು ತಪಸ್ಸಿನಿಂದ ಎಚ್ಚರಗೊಂಡು, ನಾನು ಎಲ್ಲಾ ದೇವತೆಗಳನ್ನೂ ಸೋಲಿಸಿದ್ದೇನೆ. ಪ್ರಣಯದೇವನಾದ ಕಾಮದೇವನನ್ನೂ ಜಯಿಸಿದ್ದೇನೆ ಎಂದು ಹೆಮ್ಮೆಯಿಂದ ಬೀಗುತ್ತಾ ಕೈಲಾಸಕ್ಕೆ ಹೋಗಿ ಶಿವನ ಬಳಿ ತನ್ನ ಸಾಮಾರ್ಥ್ಯವನ್ನು ವರ್ಣಿಸುತ್ತಾನೆ. ಅಹಂಕಾರದಿಂದ ಬೀಗುತ್ತಾನೆ. ಆಗ ಭಗವಾನ್ ಶಿವ ಈ ವಿಚಾರವನ್ನು ಭಗವಾನ್ ವಿಷ್ಣುವಿಗೆ ತಿಳಿಸದಂತೆ ಸಲಹೆ ನೀಡುತ್ತಾನೆ. ಆದ್ರೆ ನಾರದ ಮುನಿ ಶಿವನ ಸಲಹೆಯನ್ನು ತಿರಸ್ಕರಿಸಿ ಈ ವಿಷವನ್ನು ವಿಷ್ಣುವಿಗೆ ತಿಳಿಸುತ್ತಾನೆ. ಆಗ ವಿಷ್ಣು ನಾರದನಿಗೆ “ನಾರದಾ ಎಚ್ಚರವಿರಲಿ” ಎಂದು ಹೇಳುತ್ತಾನೆ.

ನಾರದನ ಅಹಂಕಾರ ಕುಗ್ಗಿಸಲು ನಿರ್ಮಾಣವಾಯ್ತು ಭಗವಾನ್‌ ವಿಷ್ಣು ಮಾಯಾ ನಗರಿ ನಾರದರ ಹಿರಿಮೆಯನ್ನು ಕುಗ್ಗಿಸಲು ಭಗವಾನ್‌ ವಿಷ್ಣು ಮಾಯಾ ನಗರವನ್ನು ನಿರ್ಮಿಸಿದನು. ವಿಷ್ಣುವಿನ ಈ ಮಾಯಾ ನಗರದಲ್ಲಿ ಲಕ್ಷ್ಮಿ ದೇವಿಯು ರಾಜಕುಮಾರಿಯ ರೂಪದಲ್ಲಿ ಜನಿಸಿದಳು. ಆಕೆಯನ್ನು ನೋಡಿದಾಕ್ಷಣ ನಾರದ ಮುನಿಯ ಮನಸ್ಸಿನಲ್ಲಿ ಮದುವೆ ಆಸೆ ಹುಟ್ಟಲು ಕಾರಣವಾಯಿತು. ಆಗ ನಾರದ ಮುನಿಗಳು ಭಗವಾನ್‌ ವಿಷ್ಣುವಿನ ಬಳಿ ಹೋಗಿ ತನ್ನನ್ನು ಹರಿಯಂತೆ ಸುಂದರಗೊಳಿಸಿ ಎಂದು ಕೇಳಿಕೊಳ್ಳುತ್ತಾನೆ. ಆಗ ವಿಷ್ಣು ನಾರದರನ್ನು ಹರಿಯಂತೆ ಸುಂದರಗೊಳಿಸುತ್ತಾನೆ. ಆದ್ರೆ ಮಾತೆ ಲಕ್ಷ್ಮಿ ನಾರದರನ್ನು ನಿರಾಕರಿಸಲೆಂದು ನಾರದರ ಬಾಯಿಯನ್ನು ಕೋತಿಯ ಬಾಯಿಯಂತೆ ಮಾಡಿದನು. ಲಕ್ಷ್ಮಿ ದೇವಿಗೆ ವಿವಾಹ ಮಾಡಲು ಸ್ವಯಂವರವನ್ನು ಏರ್ಪಡಿಸಲಾಯಿತು. ಸ್ವಯಂವರದಲ್ಲಿ ನಾರದರು ತನ್ನ ಹೊಸ ರೂಪದಲ್ಲಿ ಭಾಗಿಯಾದರು. ಆದ್ರೆ ನಾರದರಿಗೆ ತನ್ನ ಮುಖ ಕೋತಿಯಂತಾಗಿಸುವುದು ತಿಳಿದಿರುವುದಿಲ್ಲ. ಆತನು ತನ್ನನ್ನು ವಿಷ್ಣು ಹರಿಯಂತೆ ಸುಂದರಗೊಳಿಸಿದ್ದಾನೆಂದು ತಿಳಿದು ಭಾವಿಸಿದ್ದನು. ಸ್ವಯಂವರದಲ್ಲಿ ಲಕ್ಷ್ಮಿ ಮಾತೆಯು ನಾರದರ ಮುಖವನ್ನು ನೋಡುತ್ತಿದ್ದಂತೆ ನಗುತ್ತಾ ವಿಷ್ಣುವಿಗೆ ಹಾರವನ್ನು ಹಾಕುತ್ತಾಳೆ. ಇದು ನಾರದರಿಗೆ ಅವಮಾನ ಮಾಡಿದಂತಾಗುತ್ತೆ. ನಾರದರು ಸ್ವಯಂವರದಿಂದ ಹಿಂದಿರುಗುವಾಗ ಕೊಳದಲ್ಲಿ ತನ್ನ ಮುಖವನ್ನು ನೋಡಿ ಆಶ್ಚರ್ಯಗೊಳ್ಳುತ್ತಾರೆ. ಭಗವಾನ್‌ ವಿಷ್ಣು ನನಗೆ ಮೋಸ ಮಾಡಿದ್ದಾರೆ ಎಂದು ನಾರದರು ಭಾವಿಸಿದರು. ಆದರೆ ನಾರದರಿಗೆ ಹರಿ ಎಂದರೆ ಮಂಗವೆಂಬುದು ತಿಳಿದಿರಲಿಲ್ಲ.

ಕೋಪದಿಂದ ವಿಷ್ಣುವನ್ನು ಶಪಿಸಿದ ನಾರದ ಮುನಿ ನಾರದನು ವಿಷ್ಣು ಬಳಿ ಬಂದು, ನಾನು ನಿಮ್ಮಲ್ಲಿ ನನ್ನನ್ನು ಸುಂದರ ರಾಜಕುಮಾರನಂತೆ ಮಾಡಲು ಹೇಳಿದರೆ ನೀವು ನನ್ನನ್ನು ಮಂಗನಂತೆ ಮಾಡಿದ್ದೀರಿ. ಇದರಿಂದ ನಾನು ನನ್ನ ಪ್ರೀತಿಯನ್ನು ಕಳೆದುಕೊಂಡಿದ್ದೇನೆ. ನನ್ನಂತೆಯೇ ನೀವು ಕೂಡ ನಿಮ್ಮ ಪ್ರೀತಿಯನ್ನು ಕಳೆದುಕೊಳ್ಳುವಂತಾಗಲಿ. ನಿಮ್ಮ ಪ್ರಿಯತಮೆ ಕೂಡ ನಿಮ್ಮಿಂದ ದೂರಾಗಲಿ ಎಂದು ಶಾಪವನ್ನು ನೀಡುತ್ತಾನೆ. ಹಾಗೂ ನನ್ನ ಮುಖವನ್ನು ಕೋತಿಯ ಮುಖದಂತೆ ಮಾಡಿರುವುದರಿಂದ ನಿಮ್ಮ ಪ್ರೀತಿಯನ್ನು ಅಥವಾ ಪ್ರಿಯತಮೆಯನ್ನು ಪುನಃ ಪಡೆಯಲು ಕೋತಿಯ ಸಹಾಯವನ್ನೇ ತೆಗೆದುಕೊಳ್ಳುವಿರಿ ಎಂದು ಶಾಪವನ್ನು ನೀಡುತ್ತಾರೆ. ಆಗ ವಿಷ್ಣು ನಾರದರ ಶಾಪಕ್ಕೆ ಮುಗುಳ್ನಕ್ಕು ಅದನ್ನು ಅಲ್ಲಗಳೆಯುತ್ತಾರೆ.

ನಂತರ ವಿಷ್ಣು ಮಾನವನಾಗಿ ಭೂಮಿಯಲ್ಲಿ ಅವತಾರವೆತ್ತಿದಾಗ ತನ್ನ ಪ್ರಿತಿಯಿಂದ ದೂರವಿರಬೆಕಾಗುತ್ತದೆ. ತನ್ನ ಪತ್ನಿಯಿಂದ ದೂರವಿರಬೇಕಾಗುತ್ತದೆ. ಅಂದರೆ ಭಗವಾನ್‌ ವಿಷ್ಣು ಭೂಮಿಯಲ್ಲಿ ರಾಮನಾಗಿ ಅವತರಿಸಿದಾಗ ತಾಯಿ ಲಕ್ಷ್ಮಿಯು ಸೀತೆಯಾಗಿ ಅವತರಿಸುತ್ತಾಳೆ. ಹಾಗೂ ಇಬ್ಬರು ಕೂಡ ವನವಾಸದಲ್ಲಿ ಬೇರೆ ಬೇರೆಯಾಗುತ್ತಾರೆ. ಸೀತೆಯನ್ನು ಹುಡುಕಲು ರಾಮನು ಹನುಮನ ಆಶ್ರಯವನ್ನು, ಸಹಾಯವನ್ನು ತೆಗೆದುಕೊಳ್ಳುತ್ತಾನೆ.

ಇದನ್ನೂ ಓದಿ: Narada Muni: ತ್ರಿಲೋಕ ಸಂಚಾರಕ ನಾರದ ಮುನಿಯಾಗಿದ್ದು ಹೇಗೆ? ನಾರದ ಮುನಿ ಜನ್ಮ ರಹಸ್ಯ