Narada Muni: ತ್ರಿಲೋಕ ಸಂಚಾರಕ ನಾರದ ಮುನಿಯಾಗಿದ್ದು ಹೇಗೆ? ನಾರದ ಮುನಿ ಜನ್ಮ ರಹಸ್ಯ
ನಾರದ ಎಂದರೆ ‘ನಾರಂ ಜ್ಞಾನಂ ದದಾತಿ’ ಅರ್ಥಾತ್ ಮನುಷ್ಯರಿಗೆ ಜ್ಞಾನವನ್ನು ಕೊಡುವವ ಎಂದರ್ಥ. ಅಲ್ಲದೆ 64 ವಿದ್ಯೆಯಲ್ಲಿ ಮಹಾನ್ ಜ್ಞಾನಿಯಾಗಿದ್ದ ನಾರದ ಮುನಿ ಪೌರಾಣಿಕ ಕಥೆಗಳಲ್ಲಿ ಮಧ್ಯಸ್ಥಿಕೆಯ ಪಾತ್ರ, ಸುದ್ದಿಯನ್ನು ರವಾನಿಸುವ ಕೆಲಸ ಮಾಡುತ್ತಾರೆ.
ಒಂದು ಕೈಯಲ್ಲಿ ವೀಣೆ ಇನ್ನೊಂದು ಕೈಯಲ್ಲಿ ಕರ್ತಾಲ್ ಹಿಡಿದು ಶ್ರೀಮನ್ನಾರಾಯಣನ ನಾಮ ಸ್ಮರಣೆ ಮಾಡುತ್ತ ತ್ರಿಲೋಕ ಸಂಚಾರ ಮಾಡುವ ಶ್ರೀ ನಾರದ ಮುನಿಗಳು ಅನೇಕ ಪೌರಾಣಿಕ ಕಥೆಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದನ್ನು ನಾವು ಪೌರಾಣಿಕ ಸಿನಿಮಾ, ಧಾರವಾಹಿಗಳಲ್ಲಿ ನೋಡಿದ್ದೇವೆ. ನಾರದ ಮುನಿಯವರನ್ನು ವ್ಯಂಗ್ಯವಾಗಿ, ವಿದೂಷಕನಾಗಿ, ಬೇರೆ ಬೇರೆ ರೀತಿಯಲ್ಲಿ ತಪ್ಪಾಗಿ ತೋರಿಸಲಾಗುತ್ತಿದೆ. ನಾರದರ ಮೇಲಿನ ಅಭಿಪ್ರಾಯಗಳೇ ಬದಲಾಗುತ್ತಿವೆ. ಹೀಗಾಗಿ ನಾವಿಂದು ನಾರದ ಮುನಿಗಳ ಜೀವನ ಚರಿತ್ರೆಯ ಕೆಲವು ಸಂಗತಿಗಳನ್ನು ತೆರೆದಿಡುತ್ತಿದ್ದೇವೆ.
ನಾರದ ಎಂದರೆ ‘ನಾರಂ ಜ್ಞಾನಂ ದದಾತಿ’ ಅರ್ಥಾತ್ ಮನುಷ್ಯರಿಗೆ ಜ್ಞಾನವನ್ನು ಕೊಡುವವ ಎಂದರ್ಥ. ಅಲ್ಲದೆ 64 ವಿದ್ಯೆಯಲ್ಲಿ ಮಹಾನ್ ಜ್ಞಾನಿಯಾಗಿದ್ದ ನಾರದ ಮುನಿ ಪೌರಾಣಿಕ ಕಥೆಗಳಲ್ಲಿ ಮಧ್ಯಸ್ಥಿಕೆಯ ಪಾತ್ರ, ಸುದ್ದಿಯನ್ನು ರವಾನಿಸುವ ಕೆಲಸ ಮಾಡುತ್ತಾರೆ. ಹೀಗಾಗಿ ಇವರನ್ನ ವಿಶ್ವದ ಮೊದಲ ಪತ್ರಕರ್ತ ಎಂದೂ ಸಹ ಕರೆಯಲಾಗುತ್ತೆ. ಕೆಲವೊಮ್ಮೆ ತಮಾಷೆ ಸನ್ನಿವೇಶವನ್ನು ಸೃಷ್ಟಿಸುತ್ತ, ಸಹಾಯ ಮಾಡಲು ಮತ್ತಷ್ಟು ಸನ್ನಿವೇಶಗಳನ್ನು ಹುಟ್ಟುಹಾಕುತ್ತ ಲೋಕದ ಉದ್ದಾರಕ್ಕಾಗಿ ಶ್ರಮಿಸಿದ ನಾರದ ಮುನಿಗಳು ತ್ರಿಲೋಕ ಸಂಚಾರಕ. ಎಲ್ಲೆಡೆಯ ಸುದ್ದಿಗಳನ್ನು ಸಂಗ್ರಹಿಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುದ್ದಿಯನ್ನು ಹರಡುತ್ತಾರೆ. ಸೃಷ್ಟಿ ಕರ್ತ ಬ್ರಹ್ಮನ ಮಗನಾಗಿ ಜನಿಸಿದ ನಾರದಮುನಿಗಳು ವಿಷ್ಣುವಿನ ಪರಮ ಭಕ್ತರು. ನಾರದ ಮುನಿಗಳು ಕೂಡ ದೇವರ ಸಾಲಿನಲ್ಲೇ ನಿಲ್ಲುತ್ತಾರೆ.
ನಾರದ ಮುನಿಗಳ ಜನ್ಮ ರಹಸ್ಯ ಒಂದು ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಸೇವಕಿಯ ಮಗನಾಗಿ ನಾರದ ಮುನಿಗಳ ಜನನವಾಗುತ್ತೆ. ಹೀಗೊಮ್ಮೆ ಮಳೆಗಾಲದ ದಿನ ಕೆಲವು ಸಾಧುಗಳು ಆಕ್ರಮಕ್ಕೆ ಬರುತ್ತಾರೆ. ಕಾಲ್ನಡಿಗೆ ಮೂಲಕ ದೇಶ ಪರ್ಯಟನೆ ಮಾಡುತ್ತಿದ್ದ ಸಾಧು-ಸಂತರು ಮಳೆಗಾಲದಲ್ಲಿ ಪ್ರವಾಸ ಕಷ್ಟವಾಗುತ್ತೆ ಎಂದು ಆಶ್ರಮದಲ್ಲಿ ಅಶ್ರಯ ಪಡೆಯುತ್ತಾರೆ. ಆಗ ತಾಯಿ-ಮಗ ಇಬ್ಬರೂ ಸಾಧುಗಳ ಸೇವೆ ಮಾಡ್ತಾರೆ. ಅಲ್ಲಿಗೆ ಬಂದ ಸಂತರು ಕೃಷ್ಣ ನಾಮ ಜಪ, ಕೃಷ್ಣ ಕಥೆಗಳು, ಭಜನೆ-ಕೀರ್ತನೆಗಳನ್ನು ಮಾಡುತ್ತಿರುತ್ತಾರೆ. ಬಾಲಕ ಕೂಡ ಅವರೊಂದಿಗೆ ಎಲ್ಲವನ್ನೂ ಕಲಿಯುತ್ತಾನೆ. ಇದರಿಂದ ಆ ಪುಟ್ಟ ಬಾಲಕನಿಗೆ ಕೃಷ್ಣನ ಮೇಲೆ ಭಕ್ತಿ ಉಕ್ಕಿ ಕೃಷ್ಣನ ಭಕ್ತನಾಗುತ್ತಾನೆ. ಹೀಗೆ ಮಳೆಗಾಲ ಮುಗಿದ ಬಳಿಕ ಸಾಧು-ಸಂತರು ಅಲ್ಲಿಂದ ತಮ್ಮ ಪ್ರಯಾಣ ಶುರು ಮಾಡುತ್ತಾರೆ. ಸಾಧುಗಳು ಹೋದ ಬಳಿಕ ಬಾಲಕ ಸದಾ ಕೃಷ್ಣ ನಾಮ ಜಪ, ಪೂಜೆಯಲ್ಲಿ ಮುಳುಗುತ್ತಾನೆ. ಒಂದು ದಿನ ಬಾಲಕನ ತಾಯಿಗೆ ಹಾವು ಕಚ್ಚಿ ಆಕೆ ಮೃತಪಡುತ್ತಾಳೆ. ತಾಯಿಯ ಸಾವಿನ ಬಳಿಕ ನೊಂದಿದ್ದ ಬಾಲಕ ಮನೆ ಬಿಟ್ಟು ಉತ್ತರ ದಿಕ್ಕಿನಂತೆ ಹೊರಟು ಹೋಗುತ್ತಾನೆ.
ಹಸಿವು, ದಣಿವು, ಬಾಯಾರಿಕೆ ಯಾವುದನ್ನೂ ಲೆಕ್ಕಿಸದೆ ಬೆಟ್ಟ-ಗುಡ್ಡಗಳನ್ನು, ದಟ್ಟ ಅರಣ್ಯವನ್ನು ದಾಟಿ ಮುಂದೆ ಹೋಗುವಾಗ ಒಂದು ಕಡೆ ಸರೋವರ ಕಾಣಿಸುತ್ತದೆ ಅಲ್ಲಿ ಸ್ನಾನ ಮಾಡಿ ನೀರು ಕುಡಿದು ಮರವೊಂದರ ಕೆಳಗೆ ಕುಳಿತು ದೇವರ ಧ್ಯಾನ ಮಾಡುತ್ತಾನೆ. ಆಗ ದೇವರು ಪ್ರತ್ಯೆಕ್ಷರಾಗುತ್ತಾರೆ. ಆಗ ಜೀವಮಾನದಲ್ಲಿ ಮತ್ತೆ ನೀನು ನನ್ನ ದರ್ಶನ ಪಡೆಯಲಾರೆ ಎಂದು ಹೇಳಲು ನನಗೆ ಖೇದವಾಗುತ್ತದೆ. ಭಕ್ತಿಸೇವೆಯಲ್ಲಿ ಅಪರಿಪೂರ್ಣರೂ, ಭೌತಿಕ ಕಲ್ಮಷಗಳಿಂದ ಸಂಪೂರ್ಣ ಮುಕ್ತಿ ಹೊಂದದವರೂ ನನ್ನನ್ನು ಕಾಣಲಾರರು. ನನ್ನ ಕೃಪೆಯಿಂದ ಅನಂತ ಕಾಲದವರೆಗೂ ನನ್ನ ಸ್ಮರಣೆಯು ನಿನ್ನಲ್ಲಿ ಮುಂದುವರಿಯಲಿ ಎಂದು ಹೇಳುತ್ತಾರೆ. ಇದಾದ ಬಳಿಕ ಬಾಲಕ ಲೋಕ ಸಂಚಾರ ಮಾಡಿ ಹರಿ ನಾಮ ಮಾಡುತ್ತ, ಕೃಷ್ಣನ ಧ್ಯಾನದಲ್ಲಿ ಮಗ್ನನಾದ. ಕಾಲಕ್ರಮೇಣ ದೇಹತ್ಯಾಗ ಮಾಡಿದ ಬಳಿಕ ಬ್ರಹ್ಮಪುತ್ರ ನಾರದ ಮುನಿಯಾದರು.
ಇದನ್ನೂ ಓದಿ: ದಶಾವತಾರದ ಮಹಿಮೆ: ಸುರರ ಒಳಿತಿಗಾಗಿ ಪರ್ವತವನ್ನೇ ಬೆನ್ನ ಮೇಲೆ ಹೊತ್ತ ಭಗವಾನ್ ವಿಷ್ಣು!