ಋತುಸ್ರಾವ, ಮುಟ್ಟು, ಋತುಕಾಲ, ರಜಸ್ಸು, ಋತುಚಕ್ರ, ಮೆನ್ಸಸ್ ಹೀಗೆ ನಾನಾ ಹೆಸರುಗಳಿಂದ ಚಾಲ್ತಿಯಲ್ಲಿರುವ, ಹೆಸರಿಗೆ ತಕ್ಕಂತೆ ನಾನಾ ರೀತಿಯಾಗಿ ಹೆಣ್ಣನ್ನು ಹಿಪ್ಪಿ ಹೀರಿಬಿಡುವ ಸ್ಥಿತಿ ಅದು. ಮಹಿಳೆಯರನ್ನು ದೈಹಿಕವಾಗಿ, ಅದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ, ಮಾಸಿಕವಾಗಿ ದಣಿಸುವ ಸ್ಥಿತಿ ಅದು. ಹೇಳಿಕೊಳ್ಳಲಾಗದ, ಅನುಭವಿಸಲು ಚಿತ್ರಹಿಂಸೆ ಪಡುವಂತಹ ಅನಿವಾರ್ಯ ಸ್ಥಿತಿ ಅದು. ಆದರೆ ಮೂರ್ನಾಲ್ಕು ದಿನಗಳ ಆ ತೊಳಲಾಟದ ನಂತರ, ನಿರಾಳಗೊಂಡು ತನ್ನ ನಿಜವಾದ ಹೆಣ್ತದ ಬಗ್ಗೆ ಹೆಮ್ಮೆ ಪಡುವ ಅನುಭವವೂ ಅವಳದಾಗುತ್ತದೆ. ಇದು ಪ್ರತಿ ಮಹಿಳೆಯೂ ಹೊಂದಿರುವ ಶಕ್ತಿಯ ಸಂಕೇತವೂ ಹೌದು. ಎಲ್ಲರೂ ಗೌರವಿಸಬೇಕಾದ ಈ ಸ್ಥಿತಿಯು ಅದೇಕೋ ಸಮಾಜದಲ್ಲಿ ಆಗಾಗ್ಗೆ ಅವಹೇಳನಕ್ಕೆ ತುತ್ತಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಮಹಿಳೆಯಲ್ಲಿನ ಈ ಅಂತಃಶಕ್ತಿಯನ್ನು ಪ್ರತಿನಿಧಿಸುವಂತೆ, ಅದಕ್ಕೊಂದು ಪೌರಾಣಿಕ ಚೌಕಟ್ಟನ್ನು ಒದಗಿಸುವ, ಋತುಸ್ರಾವದ ಮಹಿಳೆಯನ್ನು ಪ್ರತಿನಿಧಿಸುವ ದೇವತೆ ಇದ್ದಾಳೆ! ಆಕೆಗೊಂದು ಸ್ಥಳವೂ ಇದೆ! ಪೂಜನೀಯ ಸ್ಥಾನವನ್ನೂ ನೀಡಲಾಗಿದೆ! ಇದು ನಿಜಕ್ಕೂ ಭಾರತದ ಹೆಮ್ಮೆಯೇ ಸರಿ. ಏಕೆಂದ್ರೆ ಋತುಚಕ್ರದಂತಹ ತೊಳಲಾಟದ ಸ್ಥಿತಿಯನ್ನು ಅನುಭವಿಸುವ ಮಹಿಳೆಗೆ ಒಂದು ಸಾರ್ವಜನಿಕ ಚೌಕಟ್ಟು, ಗೌರವವನ್ನು ಈ ದೇವತೆಯ ಮೂಲಕ ಕಲ್ಪಿಸಲಾಗಿದೆ. ಅಂದಹಾಗೆ ಪ್ರತಿಯೊಬ್ಬ ಮಹಿಳೆಯೂ ಈ ದೇವತೆ/ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳುವುದು ಉಚಿತ. ಇನ್ನು ಆ ಸಾರ್ವಜನಿಕ ಸ್ಥಳಕ್ಕೆ ಒಮ್ಮೆಯಾದರೂ ಭೇಟಿ ನೀಡಿ, ತನ್ನ ಸ್ತ್ರೀತನದ ಬಗ್ಗೆ ಹೆಮ್ಮೆ ಪಡಬೇಕಾದ ಸ್ಥಳವದು. ಹೌದು ಹಿಂದೂ ದೇವ-ದೇವತೆಗಳ ನೆಲೆಬೀಡಾದ ದೂರದ ಅಸ್ಸಾಂನಲ್ಲಿ ಇಂತಹ ಒಂದು ಪುರಾತನ ಪೌರಾಣಿಕ ದೇವಾಲಯವಿದೆ. ಅದರ ಬಗ್ಗೆ ಸವಿಸ್ತಾರ ಮಾಹಿತಿ ಇಲ್ಲಿದೆ.
ಅದು ಕಾಮಾಕ್ಯ ದೇವತೆಯ ದಂತಕಥೆ. ಪ್ರತಿ ಮಹಿಳೆಯೂ ಹೊಂದಿರುವ ‘ಶಕ್ತಿ’ಯನ್ನು ಪ್ರತಿನಿಧಿಸುವ ರಕ್ತಸ್ರಾವದ ದೇವತೆ, ದೇವಸ್ಥಾನ ಅಲ್ಲಿದೆ. ಭಾರತದ ಬೇರೆಡೆಗಳಲ್ಲಿ ಮುಟ್ಟಿನ ಬಗ್ಗೆ ಅವಮಾನಕರ ಭಾವ ಇರುವಾಗ ಅದಕ್ಕೆ ವ್ಯತಿರಿಕ್ತವಾಗಿ ಈ ಕಾಮಾಕ್ಯ ದೇವಾಲಯದಲ್ಲಿ ಮಹಿಳೆ ಗರ್ಭ ಧರಿಸುವ ಸಾಮರ್ಥ್ಯವನ್ನು ಸಾಬೀತುಪಡಿಸುವ, ಪೂಜನೀಯ ಸ್ಥಳ ಮಹಾತ್ಮೆ ಇಲ್ಲಿಯದು. ಮಹಿಳೆ ಅತ್ಯಂತ ನೈಸರ್ಗಿಕವಾಗಿ ಆಚರಿಸುವ ಜೈವಿಕ ಪ್ರಕ್ರಿಯೆಯನ್ನು ಬಿಂಬಿಸುವ ದೇವಾಲಯ ಇದಾಗಿದೆ. ಕಾಮಾಕ್ಯ ದೇವಾಲಯವು ಅಸ್ಸಾಂನಲ್ಲಿರುವ ಕೇವಲ ಪ್ರಸಿದ್ಧ ಯಾತ್ರಾ ಸ್ಥಳವಲ್ಲ, ಅದು ಇಡೀ ದೇಶದಲ್ಲೇ ಒಂದು ವಿಶಿಷ್ಟವಾದ ದೇವಾಲಯವಾಗಿದ್ದು ಸಮರ್ಥ ಮಹಿಳೆಯನ್ನು ಬಿಂಬಿಸುತ್ತದೆ.
ಗುವಾಹಟಿ ಸಮೀಪವಿರುವ ನೀಲಾಚಲ ಬೆಟ್ಟದ ಮೇಲೆ ನಿಸರ್ಗದ ಮಡಿಲಲ್ಲಿ ನೆಲೆಸಿರುವ ಕಾಮಾಕ್ಯ ದೇವಿಯೇ ಈ ರಕ್ತಸ್ರಾವ ದೇವತೆ (Bleeding Goddess). ದೇವಾಲಯದ ಗರ್ಭಗುಡಿಯಲ್ಲಿ ಹಿಂದೂ ಶಕ್ತಿ ದೇವತೆಯ ಗರ್ಭ ಮತ್ತು ಯೋನಿ ವಿಗ್ರಹ ಇದೆ. ಸತಿ ಅಥವಾ ದುರ್ಗಾ ದೇವಿಯ 108 ಶಕ್ತಿ ಪೀಠಗಳಲ್ಲಿ ಇದೂ ಒಂದಾಗಿದೆ. ಸ್ಥಳ ಪುರಾಣದ ಪ್ರಕಾರ ಪ್ರತಿ ವರ್ಷ ಆಷಾಢ ಮಾಸದಲ್ಲಿ (ಜೂನ್-ಜುಲೈ) ಕಾಮಾಕ್ಯ ಬಳಿ ಹರಿಯುವ ಬ್ರಹ್ಮಪುತ್ರ ನದಿಯು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಅವಧಿಯಲ್ಲಿ ದೇವಿಯು ‘ಋತುಸ್ರಾವ’ ಆಗುತ್ತಾಳೆ ಎಂದು ನಂಬಲಾಗಿದೆ. ಈ ದೇವಾಲಯದ ಮೂಲದ ಕಥೆಯೂ ಸಾಕಷ್ಟು ಆಸಕ್ತಿದಾಯಕವಾಗಿದೆ. ಇದು ಹಿಂದೂ ದೇವತೆಗಳಾದ ಶಿವ ಮತ್ತು ಸತಿಯ ಸುತ್ತ ಸುತ್ತುತ್ತದೆ. ಕಾಮಾಕ್ಯ ಎಂಬುದು ಹಿಂದೂಗಳ ಕಾಮ ದೇವನ ಹೆಸರು.
ಪುರಾಣ ಕಥೆಯು ಶಿವ ಮತ್ತು ಸತಿಯ ಸುತ್ತ ಸುತ್ತುತ್ತದೆ. ಸತಿಯ ತಂದೆಯು ದೇವರನ್ನು ಸಮಾಧಾನಪಡಿಸಲು ಮಾಡುತ್ತಿದ್ದ ಮಹಾಯಜ್ಞದಲ್ಲಿ ಪಾಲ್ಗೊಳ್ಳಲು ತನ್ನ ಪುತ್ರಿ ಮತ್ತು ಅಳಿಯ ಇಬ್ಬರನ್ನೂ ಉದ್ದೇಶಪೂರ್ವಕವಾಗಿ ಆಹ್ವಾನಿಸಲಿಲ್ಲ. ಆದರೆ ಸತಿಯು ಯಜ್ಞ ಸ್ಥಳಕ್ಕೆ ತೆರಳಲು ಮುಂದಾದಳು. ಆಹ್ವಾನ ಇಲ್ಲದಿದ್ದರೂ ಯಜ್ಞಕ್ಕೆ ಬಂದ ಪುತ್ರಿಯು ತಂದೆಯಿಂದ ಅವಮಾನಿಸಲ್ಪಟ್ಟಳು. ಅಷ್ಟೇ ಅಲ್ಲ; ಅಳಿಯ ಶಿವನ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದನು. ಈ ಅವಮಾನವನ್ನು ಸಹಿಸಲಾಗದೆ, ಸತಿಯು ಯಜ್ಞ ಕುಂಡಕ್ಕೆ ಹಾರಿ ಬೆಂಕಿಗೆ ಆಹುತಿಯಾದಳು.
ವಿಷಯ ಶಿವನಿಗೆ ತಿಳಿದಾಗ, ಅವನ ಕೋಪಕ್ಕೆ ಮಿತಿಯಿಲ್ಲದೇ ಹೋಯಿತು. ತನ್ನ ಹೆಂಡತಿಯ ಸುಟ್ಟ ಶವವನ್ನು ಹೊತ್ತುಕೊಂಡು ‘ತಾಂಡವ ನೃತ್ಯದೊಂದಿಗೆ (ವಿನಾಶದ ನೃತ್ಯ) ವಿಜೃಂಭಿಸಿದನು. ಉಳಿದ ಎಲ್ಲಾ ದೇವರುಗಳು ಶಿವನ ಕೋಪ ಕಂಡು ಭಯಭೀತರಾಗಿದ್ದರು. ಆಗ ವಿಷ್ಣುವು ತನ್ನ ಚಕ್ರವನ್ನು ಬಿಟ್ಟು ನೊಂದ ದೇವನನ್ನು ಶಾಂತಗೊಳಿಸುವ ಸಲುವಾಗಿ ಸತಿಯ ದೇಹವನ್ನು ತುಂಡುತುಂಡಾಗಿಸಿದನು. ಇಂದು ಶಕ್ತಿ ಪೀಠಗಳು ಎಂದು ಕರೆಯಲ್ಪಡುವ ದೇಶಾದ್ಯಂತ 108 ಸ್ಥಳಗಳಲ್ಲಿ ಸತಿಯ ದೇಹದ ನೂರೆಂಟು ಭಾಗಗಳು ಬಿದ್ದಿವೆ ಎಂದು ನಂಬಲಾಗಿದೆ. ಅವುಗಳಲ್ಲಿ ಆಕೆಯ ಗರ್ಭ ಮತ್ತು ಯೋನಿ ಬಿದ್ದ ಸ್ಥಳವೇ ಕಾಮಾಕ್ಯ ದೇವಾಲಯವಾಗಿದೆ. ಹಾಗಾಗಿಯೇ ಋತುಸ್ರಾವದ ಸತಿ ಅಥವಾ ಶಕ್ತಿಯನ್ನು ಇಲ್ಲಿ ವಿಶೇಷವಾಗಿ ಋತುಮತಿ ಮಹಿಳೆಯ ಧ್ಯೋತಕವಾಗಿ ಪೂಜಿಸಲ್ಪಟ್ಟು, ಗೌರವಿಸಲಾಗುತ್ತದೆ.
ಮತ್ತಷ್ಟು ಅಧ್ಯಾತ್ಮಿಕ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ