The Impact of Anger: ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ನಿಜವಾದ ಕಾರಣವೇ?

ಮಾನವನ ದಾರಿದ್ರ್ಯಕ್ಕೆ ಗ್ರಹದೋಷ, ಪೂರ್ವ ಜನ್ಮದ ದೋಷಗಳ ಜೊತೆಗೆ ಕೋಪ ಕೂಡ ಒಂದು ಪ್ರಮುಖ ಕಾರಣ. ಕೋಪವು ಆರ್ಥಿಕ ನಷ್ಟ, ಮಾನಹಾನಿ, ಪ್ರಾಣಹಾನಿ ಮತ್ತು ವೈಫಲ್ಯಕ್ಕೆ ಕಾರಣವಾಗುತ್ತದೆ. ಶಾಂತಿಯಿಂದ ಜೀವನ ನಡೆಸುವುದು ಕುಬೇರನ ಕೃಪೆಗೆ ಪಾತ್ರರಾಗಲು ಸಹಾಯಕ. ಕೋಪ ನಿಯಂತ್ರಣದಿಂದ ಸುಖೀ ಜೀವನ ಸಾಧ್ಯ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

The Impact of Anger: ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ನಿಜವಾದ ಕಾರಣವೇ?
ಕೋಪ
Image Credit source: Pinterest

Updated on: Apr 18, 2026 | 10:09 AM

ಮಾನವನ ಜೀವನದಲ್ಲಿ ಎಲ್ಲವೂ ಅನುಕೂಲಕರವಾಗಿರುವಾಗ ಅದರ ಮಹತ್ವದ ಅರಿವು ಇರುವುದಿಲ್ಲ. ಆದರೆ, ಜೀವನದಲ್ಲಿ ಎದುರಾಗುವ ಕಷ್ಟಗಳು, ಯಶಸ್ಸು ಸಿಗದಿರುವುದು, ನಿರಂತರ ಸಂಕಷ್ಟಗಳು ದಾರಿದ್ರ್ಯ ಎಂದು ಕರೆಯಲ್ಪಡುತ್ತದೆ. ಊಟಕ್ಕೆ ಕಷ್ಟಪಡುವುದು, ಉದ್ಯೋಗ ಸಿಗದಿರುವುದು, ಸರಿಯಾಗಿ ಬೆಳೆಗಳು ಬಾರದಿರುವುದು, ವಿದ್ಯಾಭ್ಯಾಸದಲ್ಲಿ ಎಷ್ಟೇ ಓದಿದರೂ ಪ್ರಯೋಜನವಾಗದಿರುವುದು – ಇವೆಲ್ಲವೂ ದಾರಿದ್ರ್ಯದ ಲಕ್ಷಣಗಳು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳಯವಂತೆ, ಈ ದಾರಿದ್ರ್ಯಕ್ಕೆ ಅನೇಕ ಕಾರಣಗಳಿದ್ದರೂ, ಕೋಪವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಗ್ರಹದೋಷಗಳು, ಪೂರ್ವ ಜನ್ಮದ ದೋಷಗಳು, ಪಿತೃ ದೋಷಗಳು, ಮತ್ತು ಕರ್ಮಫಲಗಳ ಜೊತೆಗೆ, ಕೋಪವು ವ್ಯಕ್ತಿಯ ಜೀವನದಲ್ಲಿ ಮಹಾ ನಷ್ಟವನ್ನುಂಟುಮಾಡುತ್ತದೆ. ಉದಾಹರಣೆಗೆ, ಒಬ್ಬ ಕಂಪನಿಯ ಮಾಲೀಕನು ತನ್ನ ಅಧೀನ ನೌಕರರ ಮೇಲೆ ನಿರಂತರವಾಗಿ ಕೋಪ ಮಾಡಿಕೊಂಡರೆ, ಒಬ್ಬೊಬ್ಬರಾಗಿ ಕೆಲಸ ಬಿಟ್ಟು ಹೋಗುತ್ತಾರೆ. ಹೊಸಬರನ್ನು ನೇಮಿಸಿಕೊಳ್ಳುವುದು ಕಷ್ಟವಾಗುತ್ತದೆ. ಕಂಪನಿಯ ಮಾಲೀಕನ ಕೋಪದ ಬಗ್ಗೆ ಸಂದೇಶ ಹರಡಿ, ಹೊಸಬರೂ ಅಲ್ಲಿ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಇದರಿಂದ ಸಂಸ್ಥೆಯು ದಿನೇ ದಿನೇ ಅದೋಗತಿಗೆ ಇಳಿದು, ಮಾಲೀಕನು ದಾರಿದ್ರ್ಯಕ್ಕೆ ತುತ್ತಾಗುತ್ತಾನೆ.

ಕೋಪದಲ್ಲಿ ಆವೇಶಭರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ. ನಮ್ಮ ಪುರಾಣಗಳಲ್ಲೂ ಇದಕ್ಕೆ ಅನೇಕ ಉದಾಹರಣೆಗಳಿವೆ. ಅತಿಯಾದ ಅಹಂಕಾರವನ್ನು ಮೆರೆದ ಕಂಸನ ಗತಿಯು ದುರಂತವಾಗಿತ್ತು. ಅಹಂಕಾರವು ಕೋಪದ ಸಹೋದರನಂತೆಯೇ ಇರುತ್ತದೆ. ಚಿನ್ನದ ನಗರದಲ್ಲಿದ್ದರೂ, ತನ್ನ ಕೋಪ ಮತ್ತು ಅಹಂಕಾರದಿಂದಾಗಿ ರಾವಣನು ತನ್ನ ಇಡೀ ಕುಟುಂಬವನ್ನು ಕಳೆದುಕೊಂಡನು. ರಾವಣನ ಪತ್ನಿ ಮಂಡೋದರಿಯು ಪಂಚ ಪತಿವ್ರತೆಯರಲ್ಲಿ ಒಬ್ಬಳಾದರೂ, ರಾವಣನ ಕೋಪವು ಅವನನ್ನು ಪಾತಾಳಕ್ಕೆ ತಳ್ಳಿತು.

ಇನ್ನು, ಅತಿ ವಿಪರೀತ ಕೋಪಿಷ್ಠನಾಗಿದ್ದ ವಿಶ್ವಾಮಿತ್ರ ಮಹರ್ಷಿಗಳು ಎಷ್ಟೋ ವರ್ಷಗಳ ತಪಸ್ಸಿನ ನಂತರ ತಮ್ಮ ಕೋಪವನ್ನು ಹೋಗಲಾಡಿಸಿಕೊಂಡು ಬ್ರಹ್ಮಋಷಿ ಸ್ಥಾನವನ್ನು ಪಡೆದರು. ಕೋಪವಿಲ್ಲದಿದ್ದರೆ ವಿಶ್ವಾಮಿತ್ರರು ವಸಿಷ್ಠ ಮಹರ್ಷಿಗಳಿಗೆ ಸಮಾನರಾಗುತ್ತಿದ್ದರು ಎಂದು ಶಾಸ್ತ್ರಗಳು ಹೇಳುತ್ತವೆ. ಕೋಪವು ಧನಹಾನಿ, ಮಾನಹಾನಿ, ಪ್ರಾಣಹಾನಿಗಳಿಗೆ ಕಾರಣವಾಗುತ್ತದೆ. ಕೋಪವು ನಮ್ಮ ಜಯವನ್ನು ಕಸಿದುಕೊಳ್ಳುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಶ್ರೀ ಮಹಾವಿಷ್ಣು ಭಗವಾನ್ ದಶಾವತಾರಗಳಲ್ಲಿ ರಾಕ್ಷಸರನ್ನು ಸಂಹಾರ ಮಾಡಿದ್ದು ಶಾಂತಿಯ ಮೂಲಕ. ಅವರು ಪ್ರಶಾಂತವಾಗಿ, ಹಸನ್ಮುಖಿಯಾಗಿ, ಮನಸ್ಸಿನಲ್ಲಿ ಚಿಂತನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ನರಸಿಂಹ ಅವತಾರದಲ್ಲಿ ಹಿರಣ್ಯಕಶಿಪುವಿನ ಅತಿರೇಕದ ವರ್ತನೆ ಮಿತಿ ಮೀರಿದಾಗ ಮಾತ್ರ ರೋಷಾವೇಶದಿಂದ ಸಂಹಾರ ಮಾಡಿದರು. ಶ್ರೀರಾಮ, ಶ್ರೀಕೃಷ್ಣರು ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ನಗುನಗುತ್ತಾ ಇರುತ್ತಿದ್ದರು. ಕೋಪವು ಯಾವಾಗಲೂ ಹಾನಿಕಾರಕ. ಕೋಪದಿಂದ ಮಾಡಿದ ಹೋಮ, ಪೂಜೆ, ವ್ರತ, ಉಪವಾಸ ಯಾವುದೂ ಫಲ ನೀಡುವುದಿಲ್ಲ.

ಹಾಗಾಗಿ, “ಕೋಪ ಬಿಟ್ಟರೆ ಕುಬೇರನೇ” ಎಂಬ ಮಾತಿದೆ. ಪ್ರಶಾಂತತೆಯಿಂದ ಇರುವವರಿಗೆ ಕುಬೇರನು ಒಲಿಯುತ್ತಾನೆ. ಹಣ ಬರುವಾಗ ನಾವು ಶಾಂತವಾಗಿರುತ್ತೇವೆ, ಆದರೆ ಹಣ ಬಂದ ನಂತರ ಅಥವಾ ಬರುವ ಮುನ್ನ ಕೋಪವನ್ನು ನಿಯಂತ್ರಿಸುವುದು ಮುಖ್ಯ. ದಾರಿದ್ರ್ಯ, ಕಷ್ಟ, ನಷ್ಟಗಳಿಗೆ ಕೋಪವೇ ಮಹಾ ದೊಡ್ಡ ಭೂತ. ಆವೇಶವಾಗಿ ಮಾತನಾಡುವುದು, ಹೈ ಪಿಚ್‌ನಲ್ಲಿ ಮಾತನಾಡುವುದು ಮುಂತಾದ ಕೋಪದ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಒಂದು ವಾರ ಕಾಲ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ನಿಮ್ಮ ಜೀವನದಲ್ಲಿ ಆಗುವ ಸಕಾರಾತ್ಮಕ ಬದಲಾವಣೆಗಳು ನಿಮಗೇ ತಿಳಿಯುತ್ತವೆ. ಬೀದಿ ವ್ಯಾಪಾರಿಯಿಂದ ಅಂಬಾನಿಯವರೆಗೂ ಎಲ್ಲರೂ ಮಾಡುವ ಕಾಯಕಕ್ಕೆ ಗೌರವವಿರುತ್ತದೆ. ಕೋಪವನ್ನು ನಿಯಂತ್ರಿಸಿದರೆ ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ, ಮತ್ತು ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us