Pitru Paksha 2025: ಪಿತೃಪಕ್ಷ ಯಾಕೆ ವಿಶೇಷ? ಆ ಹದಿನೈದು ದಿನ ಮಾಡಬೇಕಾದುದೇನು?
ಹಿಂದೂ ಧರ್ಮದಲ್ಲಿ, ಮನುಷ್ಯನು ಜನಿಸಿದ ಕೂಡಲೇ ದೇವ, ಋಷಿ ಮತ್ತು ಪಿತೃ ಎಂಬ ಮೂರು ಋಣಗಳಿಂದ ಬಂಧಿತನಾಗುತ್ತಾನೆ. ಇಲ್ಲಿ ಈ ಮೂರು ಋಣಗಳ ಅರ್ಥ ಮತ್ತು ಅವುಗಳನ್ನು ಹೇಗೆ ತೀರಿಸಬಹುದು ಎಂಬುದನ್ನು ವಿವರಿಸಲಾಗಿದೆ. ದೇವ ಋಣವನ್ನು ದೇವರ ಪೂಜೆ ಮತ್ತು ಸ್ವಾಭಾವಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ತೀರಿಸಬಹುದು. ಋಷಿ ಋಣವನ್ನು ವಿದ್ಯಾಭ್ಯಾಸ ಮತ್ತು ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ತೀರಿಸಬಹುದು. ಪಿತೃ ಋಣವನ್ನು ತಂದೆ-ತಾಯಿಗಳನ್ನು ಆರೈಕೆ ಮಾಡುವುದು ಮತ್ತು ಅವರ ಸ್ಮರಣೆಯನ್ನು ಗೌರವಿಸುವ ಮೂಲಕ ತೀರಿಸಬಹುದು. ಈ ಋಣಗಳನ್ನು ತೀರಿಸುವುದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಮನುಷ್ಯ ಜನಿಸಿದ ಕೂಡಲೇ ದೇವ ಋಣ, ಋಷಿ ಋಣ, ಪಿತೃ ಋಣ ಎಂಬ ಮೂರು ಋಣಗಳಿಂದ ಬಂಧಿತನಾಗಿರುತ್ತಾನೆ. ಈ ಋಣಗಳಿಂದ ಮುಕ್ತನಾಗದೇ ಮನುಷ್ಯನ ಜನ್ಮ ಮುಕ್ತಾಯವಾಗದು ಎನ್ನುತ್ತಾರೆ ಅನುಭವಿಗಳು. ಋಣವನ್ನು ತೀರಿಸುವ ವಿಧಾನವೂ ವಿಶೇಷವಾದುದಾಗಿದೆ. ಸಾಲ ಮಾಡಿದರೆ ತೀರಿಸಲಾಗದೇ ಇದ್ದರೆ ಕಾಣೆಯಾಗುವುದು, ದಾಖಲೆಯನ್ನು ತಿರುಚುವುದು, ಸತ್ತೇ ಹೋಗುವುದನ್ನೂ ಮಾಡುತ್ತಾರೆ. ಅಲ್ಲಿಗೆ ಸಾಲದ ಸ್ವರೂಪ ಭಿನ್ನವಾಗುತ್ತದೆ. ಆದರೆ ಈ ಸಾಲ ಅಥವಾ ಋಣ ಹಾಗಲ್ಲ, ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತೀರಿಸದ ಹೊರತೂ ಅದು ಮನುಷ್ಯನನ್ನು ಬಿಡದು.
ದೇವ ಋಣ ಎಂದರೇನು?
ಮನುಷ್ಯನ ಜೀವನ ಸುಖಮಯವಾಗಿ ಇರಬೇಕಾದರೆ ದೇವರ ಸೃಷ್ಟಿಯ ಅನೇಕ ಅಂಶಗಳು ಬೇಕು. ಭೂಮಿ, ಗಾಳಿ, ನೀರು, ಬೆಂಕಿ, ಆಕಾಶ ಇವುಗಳಿಲ್ಲದೇ ಮನುಷ್ಯನ ಜೀವನವಿಲ್ಲ. ಇವನ್ನು ಮನುಷ್ಯ ನಿರ್ಮಿಸಿದ್ದಲ್ಲ. ಆದರೆ ಇದನ್ನು ಬಳಸುತ್ತಾನೆ. ಈ ಬಳಕೆ ಕೃತಜ್ಞನಾಗಬೇಕು. ಗಾಳಿ ಕೆಲವು ನಿಮಿಷ ಸಿಗದೇ ಇದ್ದರೆ ಮನುಷ್ಯ ಏನಾಗುತ್ತಾನೆ ಎಂಬ ಕಲ್ಪನಯೇ ಇಲ್ಲ. ಹಾಗಿದ್ದಾಗ ಅದಕ್ಕೆ ಕೃತಜ್ಞತೆಯನ್ನು ಅರ್ಪಿಸುವುದು ಮನುಷ್ಯನಿಗೆ ಕರ್ತವ್ಯ. ಪಂಚಭೂತಗಳೇ ಪ್ರತ್ಯಕ್ಷ ದೈವಗಳು. ಅದನ್ನು ಪೂಜಿಸುವುದು ಮಿತವಾಗಿ ಬಳಕೆ ಮಾಡುವುದು, ಅದರ ಶುದ್ಧತೆಯನ್ನು ಕಾಪಾಡುವುದೂ ಆರಾಧನೆಯೇ. ಇದರ ಮೂಲಕ ದೈವ ಋಣ ಎಷ್ಟೋ ಪಾಲನ್ನು ತೀರಿಸಿದಂತೆ. ಇನ್ನೊಂದು ಪ್ರಕಾರವಾಗಿ ದೇವ ಋಣವನ್ನು ದೇವರ ಪೂಜೆ, ವ್ರತ, ಯಜ್ಞ, ಯಾಗಗಳಿಂದ ತೀರಿಸಬೇಕು. ಇದೂ ಪರೋಕ್ಷವಾಗಿ ದೇವರಿಂದ ಪಡೆದ ಋಣಕ್ಕೆ ಮನುಷ್ಯನ ಸಂದಾಯವಾಗಿದೆ.
ಋಷಿ ಋಣ ಎಂದರೇನು?
ಸಂಸ್ಕೃತಿಗಳು, ಸಂಸ್ಕಾರಗಳು, ವಿದ್ಯೆಗಳು ಪೂರ್ವಜರ ತಪಸ್ಸಿನ ಫಲವಾಗಿದೆ. ಅವರ ಕೊಡುಗೆ ಇಲ್ಲದೇ ಇದ್ದರೆ, ವಿದ್ಯೆಯೂ ಇಲ್ಲ. ಅನಾಗರಿಕ ಜೀವನವನ್ನು ನಡೆಸಬೇಕಾಗಿಬರುತ್ತಿತ್ತು. ಹಾಗಾಗಿ ವಿದ್ಯೆಯನ್ನು ಕಲಿಯುವ ಮೂಲಕ, ಉತ್ತಮ ವಿದ್ಯೆಯನ್ನು ಕಲಿಸಿವ ಮೂಲಕ, ಕಲಿಯುವವರಿಗೆ ಸಹಾಯ ಮಾಡುವ ಮೂಲಕ ಋಷಿ ಋಣವನ್ನು ಪೂರೈಸಿದಂತಾಗುತ್ತದೆ.
ಪಿತೃ ಋಣ ಎಂದರೇನು?
ಕೊನೆಯ ಋಣ ಇದು. ಮನುಷ್ಯ ದೇಹ ಬರಲು ತಂದೆ ತಾಯಿಗಳೇ ಮೂಲ ಕಾರಣ. ಅವರ ಆರೈಕೆಯಿಂದಲೇ ಬದುಕಿರುವುದು, ದೊಡ್ಡವರಾಗಿರುವುದು, ಉದ್ಯಮಿಗಳಾಗಿದ್ದು, ಪ್ರಸಿದ್ಧಿಯನ್ನು ಪಡೆದಿದ್ದು. ಅವರೇನಾದರೂ ತಿಳಿವಳಿಕೆ ಇಲ್ಲದ ಸಂದರ್ಭದಲ್ಲಿ ಮಕ್ಕಳನ್ನು ಅಕ್ಷರಸ್ಥರನ್ನಾಗಿ, ಊಟವಿಲ್ಲದೇ ಹಾಗೇ ಬಿಟ್ಟಿದ್ದರೆ ಯಾವ ಮನುಷ್ಯನೂ ಉದ್ಧಾರ ಆಗಲಾರ. ಈ ಋಣ ಬಹಳ ಮುಖ್ಯವಾದುದು. ತಂದೆ ತಾಯಿಗಳನ್ನು ಬದುಕಿರುವಾಗ ಚೆನ್ನಾಗಿ ನೋಡಿಕೊಳ್ಳುವುದು ಪ್ರತ್ಯಕ್ಷವಾಗಿ ಋಷ ತೀರಿಸುವುದು ಒಂದಾದರೆ, ಅವರ ಮರಣದ ಅನಂತರ ಶ್ರಾದ್ಧಾದಿಗಳನ್ನು ಕಾಲಕಾಲಕ್ಕೆ ನೀಡುವುದೂ ಋಣ ಸಂದಾಯದ ಮತ್ತೊಂದು ಮಾರ್ಗ.
ಪಿತೃದೇವತೆಗಳು ಮನುಷ್ಯ ಉದ್ಧಾರಕ್ಕೆ ಮುಖ್ಯ ಕಾರಣರು. ಅವರ ಅನುಗ್ರಹ ಇಲ್ಲದೇ ಸಂತಾನ ಆಗದು, ಆರೋಗ್ಯ ಸುಧಾರಣೆ ಇರದು, ಸಂಪತ್ತು ಪ್ರಾಪ್ತವಾಗದು. ಇವೆಲ್ಲ ನಿತ್ಯ ಬದುಕಿಗೆ ಬೇಕಾದುದು. ಸುಂದರ ಬದುಕನ್ನು ನಿರ್ಮಿಸಿಕೊಟ್ಟ ಮಾತಾಪಿತೃಗಳಿಗೆ ಅಶ್ರದ್ಧೆಯನ್ನು ತೋರಿಸಿದರೆ ಭವಿಷ್ಯ ಅವರಿಗೆ ಕರಾಳವಾಗಲಿದೆ.
ತಂದೆ ಅಥವಾ ತಾಯಿ ಇಲ್ಲದವರು ವರ್ಷಕ್ಕೊಮ್ಮೆ ಶ್ರಾದ್ಧವನ್ನು ಮಾಡುವುದು ಒಂದು ಬಗೆಯಾದರೆ, ವರ್ಷದಲ್ಲಿ ಬರುವ ಪಿತೃಪಕ್ಷವೂ ಶ್ರಾದ್ಧಕ್ಕೆ ಉಪಯುಕ್ತ ಕಾಲವಾಗಿದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಪ್ರತಿಪತ್ ಅಂದರೆ ಸಪ್ಟೆಂಬರ್ 8 ರಿಂದ 22 ನೇ ದಿನಾಂಕದವರೆಗೆ ಪಿತೃಪಕ್ಷ. ಪಿತೃದೇವತೆಗಳನ್ನು ಸಂಪ್ರೀತಿಗೊಳಿಸುವ ಪವಿತ್ರ ದಿನ. ಪಿತೃದೋಷಗಳಿಂದ ಮುಕ್ತಿಯನ್ನು ಪಡೆಯಬಹುದು.
ಯಾರ್ಯಾರಿಗೆ ಶ್ರಾದ್ಧ ಮಾಡುವುದು?
ಮರಣ ಹೊಂದಿದ ಪರಿಚಿರಿಗೆಲ್ಲರಿಗೂ ಶ್ರಾದ್ಧವನ್ನು ಮಾಡುವುದು. ಏಕೆಂದರೆ ಅವೆಲ್ಲರಿಂದ ಒಂದಲ್ಲ ಒಂದು ಸಹಾಯ ಆಗಿಯೇ ಆಗಿರುತ್ತದೆ. ಧನ ಸಹಾಯ ಪಡೆದು, ಅದನ್ನು ಪುನಃ ತೀರಿಸಿದರೂ ಶ್ರಾದ್ಧವನ್ನು ಮಾಡಬೇಕು ಅಥವಾ ಈ ಸಮಯದಲ್ಲಿ ಸ್ಮರಿಸಬೇಕು. ಪಡೆದ ಸಹಾಯದ ಮೊತ್ತಕ್ಕಿಂತ ಪಡೆದ ಸಂದರ್ಭ, ಪಡೆದಾಗಿನ ಹಾಗೂ ಕೊಡುವಾಗಿ ಭಾವ ಮುಖ್ಯ. ಒಳ್ಳೆಯದಾಗಲಿ ಎಂಬ ಮನಸ್ಸಿನಿಂದ ಕೊಟ್ಟಾಗ ಅದು ಚಿರವಾಗಿ ಉಳಿಯುವ ಋಣವೇ ಆಗಿದೆ. ಹಾಗಾಗಿ ಹಣವನ್ನು ಹಿಂದಿರುಗಿಸಿದ್ದೇನೆ ಎಂದು ಮೂಗು ಮುರಿದರೆ ಇನ್ನಷ್ಟು ಋಣವನ್ನು ಹೊರಬೇಕಾಗುತ್ತದೆ. ಹಾಗಾಗಿ ಯಾರಿಂದ ಏನೇ ಸಹಾಯವಾದರೂ ಅವರನ್ನು ಸ್ಮರಿಸುವುದು ಮುಖ್ಯ.
ಇದನ್ನೂ ಓದಿ: ಪಿತೃ ಪಕ್ಷದ ಸಮಯದಲ್ಲಿ ಗರ್ಭಿಣಿಯರು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
ಹೇಗೆ ಮಾಡುವುದು?
ಈ ಋಣವನ್ನು ತೀರಿಸುವುದು ಪುಣ್ಯ ಕ್ಷೇತ್ರಗಳಿಗೆ ಹೋಗಿ ವಿಧ್ಯುಕ್ತಕರ್ಮಗಳ ಮೂಲಕ ಪಿಂಡ, ತರ್ಪಣಗಳನ್ನು ಕೊಡುವುದು. ಇನ್ನೊಂದು ರೀತಿ, ಅಳಿದು ಹೋದವರ ನೆನಪಿನಲ್ಲಿ ಅತಿಥಿ ಭೋಜನ ಮಾಡಿಸುವುದು. ಸಂಸ್ಥೆಗಳಿಗೆ ಋಣ ಮೋಚನೆಯ ಸಂಕಲ್ಪ ಮಾಡಿ ಧನಸಹಾಯ ಮಾಡುವುದು. ಬದುಕುಳಿದವರಿಗೆ ಅನುಕೂಲದವಾದ ಸಹಾಯವನ್ನು ಮಾಡುವುದು ಋಣಸಂದಾಯ ಕ್ರಮ.
ಈ ಮೂರು ಋಣಗಳಿಗಿಂದ ಪಿತೃ ಋಣ ವಿಶೇಷವೂ ವಿಶಾಲವೂ ಆದುದ್ದಾಗಿದೆ. ದೇವ ಹಾಗೂ ಋಷಿ ಋಣಗಳನ್ನು ಒಂದು ಪರಿಮಾಣದಲ್ಲಿ ಮಾಡಿದರೆ ಸಾಕು, ಆದೇ ಬದುಕಿರುವ ತನಕವೂ ಪಿತೃ ಋಣ ಬೆನ್ನ ಹಿಂದೆ ಇದ್ದೇ ಇರುವ ಕಾರಣ ಅದನ್ನು ಕೊನೆಯುಸಿರಿನತನಕವೂ ಇದನ್ನು ಇಟ್ಟುಕೊಳ್ಳಬೇಕಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




