‘ಯುವಕರಿಗಾಗುತ್ತಿರುವ ಅನ್ಯಾಯ ನೋಡುತ್ತ ನಾವು ಸುಮ್ಮನಿರಲ್ಲ’: ಉದ್ಯೋಗಾಕಾಂಕ್ಷಿಗಳ ಸಮಸ್ಯೆ ಕುರಿತು ಪ್ರಧಾನಿಗೆ ಅರವಿಂದ ಬೆಲ್ಲದ್ ಪತ್ರ
ಕರ್ನಾಟಕದಲ್ಲಿ ಉದ್ಯೋಗ ಕೊರತೆ ಮತ್ತು ಆಡಳಿತಾತ್ಮಕ ಅಸಮರ್ಥತೆ ಹೆಚ್ಚಿದೆ. ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದು, ಶಾಸಕ ಅರವಿಂದ ಬೆಲ್ಲದ್ ಅವರು ಪ್ರಧಾನಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ 2.86 ಲಕ್ಷ ಖಾಲಿ ಹುದ್ದೆ ಭರ್ತಿ ಮಾಡುವ ಭರವಸೆ ನೀಡಿದರೂ, ಕೇವಲ 8,157 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿ ವಿಫಲವಾಗಿದೆ ಎಂದು ಬೆಲ್ಲದ್ ಆರೋಪಿಸಿದ್ದಾರೆ.

ಧಾರವಾಡ, ಫೆಬ್ರವರಿ 27: ಕರ್ನಾಟಕದ ಅಸಂಖ್ಯಾತ ಯುವಕರು ನೌಕರಿಯ ಕೊರತೆ ಮತ್ತು ಆಡಳಿತಾತ್ಮಕ ಅಸಮರ್ಥತೆಯನ್ನು ಎದುರಿಸುತ್ತಿದ್ದಾರೆ. ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ನೇಮಕಾತಿಗಾಗಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ, ಉಪನಾಯಕ ಅರವಿಂದ ಬೆಲ್ಲದ್, ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ರಾಜ್ಯಪಾಲರಿಗೆ ಪತ್ರದ ಮೂಲಕ ಉದ್ಯೋಗಾಕಾಂಕ್ಷಿಗಳ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ.
2.86 ಲಕ್ಷ ಹುದ್ದೆಗಳ ಭರವಸೆ ಏನಾಯ್ತು?
ಅರವಿಂದ ಬೆಲ್ಲದ್ ತಮ್ಮ ಪತ್ರದಲ್ಲಿ, ರಾಜ್ಯ ಸರ್ಕಾರ ಆಕಾಂಕ್ಷಿಗಳಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ ಮತ್ತು ಲಕ್ಷಾಂತರ ಯುವಕರು ಹತಾಶೆಯಿಂದ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ. ಧಾರವಾಡದಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಯುವಕರಲ್ಲಿಯ ಕೋಪ ಮತ್ತು ಆತಂಕ ಮನೆಮಾಡಿದೆ. ನಾವು ಉದ್ಯೋಗಾಕಾಂಕ್ಷಿಗಳ ಬೇಡಿಕೆಗೆ ಬೆಂಬಲಿಸುತ್ತೇವೆ. ಆದರೆ ಅವರಿಗಾಗುವ ಅನ್ಯಾಯ ನೋಡುತ್ತ ನಾವು ಸುಮ್ಮನಿರುವುದಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.
ಅರವಿಂದ ಬೆಲ್ಲದ್ ಪತ್ರದಲ್ಲಿ, ಸರ್ಕಾರ ಸಮರ್ಪಕ ಉತ್ತರ ನೀಡದೇ ಲಾಠಿ ಚಾರ್ಜ್ ಮಾಡುತ್ತಿರುವುದು ಸೂಕ್ತವಲ್ಲ ಎಂದು ಆರೋಪಿಸಿರುವ ಅರವಿಂದ್, ರಾಜ್ಯದಲ್ಲಿ ಆಡಳಿತ ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ, ಬೆಂಗಳೂರಿನಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಕರ್ನಾಟಕ ಸರ್ಕಾರ 2.86 ಲಕ್ಷ ಖಾಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿದರೂ, ಕಳೆದ ಮೂರು ವರ್ಷಗಳಲ್ಲಿ 10,000 ಕ್ಕಿಂತ ಕಡಿಮೆ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. 8,157 ನೇಮಕಾತಿಗಳು ಮಾತ್ರ ಪೂರ್ಣಗೊಂಡಿದ್ದು, ನಿರ್ಧಿಷ್ಟ ಸಮಯರೇಖೆ ಮತ್ತು ಪಾರದರ್ಶಕ ಯೋಜನೆಯ ಕೊರತೆ ಯುವಜನರಲ್ಲಿ ನಿರಾಶೆ ಉಂಟುಮಾಡುತ್ತಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ ಮಾನವೀಯತೆ ಎಂದಿಗೂ ಸಂಘರ್ಷಕ್ಕೆ ಬಲಿಯಾಗಬಾರದು; ಇಸ್ರೇಲ್ನಲ್ಲಿ ಪ್ರಧಾನಿ ಮೋದಿ
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೆಲ ಹುದ್ದೆಗಳ ನೇಮಕಾತಿ ಶೀಘ್ರವಾಗಿ ನಡೆದಿತ್ತು ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿತ್ತಾ, 16,000 ಶಿಕ್ಷಕರ ಹುದ್ದೆಗಳ ನೋಟಿಫಿಕೇಶನ್, 6,000 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್, 4,000 CAR ಸಿಬ್ಬಂದಿ, 545 PSI, 402 PSI ನೇಮಕಾತಿ ಮುಂತಾದ ಉದಾಹರಣೆಗಳನ್ನು ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.