50 ಕೋಟಿ ರೂಪಾಯಿಗೆ ‘ಕಿಂಗ್’ ಆಡಿಯೋ ರೈಟ್ಸ್ ಮಾರಾಟ? ಶಾರುಖ್ ಖಾನ್ ಹೊಸ ದಾಖಲೆ
ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದ ಹಾಡುಗಳ ಮೇಲೆ ಸಖತ್ ನಿರೀಕ್ಷೆ ಇದೆ. ಹಾಗಾಗಿ ದಾಖಲೆಯ ಮೊತ್ತಕ್ಕೆ ಡೀಲ್ ಕುದುರುತ್ತಿದೆ. ಆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. 50 ಕೋಟಿ ರೂಪಾಯಿಗೆ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡಲು ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

2023ರಲ್ಲಿ ‘ಪಠಾಣ್’ ಮತ್ತು ‘ಜವಾನ್’ ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ (Shah Rukh Khan), ಇದೀಗ ತಮ್ಮ ಬಹುನಿರೀಕ್ಷಿತ ‘ಕಿಂಗ್’ (King) ಸಿನಿಮಾದ ಮೂಲಕ ಮತ್ತೆ ತೆರೆಗೆ ಬರಲು ಸಜ್ಜಾಗಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದ ಮೇಲೆ ಈಗಾಗಲೇ ಕೋಟ್ಯಾಂತರ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಹೈಪ್ ಸೃಷ್ಟಿಸಿರುವ ಈ ಸಿನಿಮಾದ ಮ್ಯೂಸಿಕ್ ಹಕ್ಕುಗಳಿಗೆ ಸಂಬಂಧಿಸಿದಂತೆ ಭಾರಿ ಮೊತ್ತದ ವ್ಯವಹಾರ ನಡೆದಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ‘ಕಿಂಗ್’ ಚಿತ್ರದ ಆಡಿಯೋ ಹಕ್ಕುಗಳು ಬರೋಬ್ಬರಿ 50 ಕೋಟಿ ರೂಪಾಯಿಗೆ ಬಿಕರಿಯಾಗುವ ಸಾಧ್ಯತೆ ಇದೆ. ಸಚಿನ್-ಜಿಗರ್ ಸಂಗೀತ ನಿರ್ದೇಶನ ಮಾಡುತ್ತಿರುವ ‘ಕಿಂಗ್’ ಸಿನಿಮಾದ ಆಲ್ಬಮ್ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಪ್ರಮುಖ ಆಡಿಯೋ ಸಂಸ್ಥೆಗಳಾದ ಸೋನಿ ಮ್ಯೂಸಿಕ್, ಸರೆಗಮ ಮತ್ತು ಟಿ-ಸಿರೀಸ್ ಸಂಸ್ಥೆಗಳು ಈ ಚಿತ್ರದ ಮ್ಯೂಸಿಕ್ ರೈಟ್ಸ್ ಪಡೆಯಲು ಭಾರಿ ಪೈಪೋಟಿ ನಡೆಸುತ್ತಿವೆ. ಪ್ರಸ್ತುತ ಪ್ರಮುಖ ಸಂಸ್ಥೆಯೊಂದು 50 ಕೋಟಿ ರೂ. ನೀಡಿ ಹಕ್ಕುಗಳನ್ನು ತನ್ನದಾಗಿಸಿಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ.
ಚಿತ್ರರಂಗದಲ್ಲಿ ಅಪರೂಪದ ದಾಖಲೆ:
‘ಕಿಂಗ್’ ಚಿತ್ರದ ಬಗ್ಗೆ ಕೇಳಿಬರುತ್ತಿರುವ ಸುದ್ದಿ ನಿಜವೇ ಹೌದಾಗಿದ್ದಲ್ಲಿ, ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಮ್ಯೂಸಿಕ್ ಡೀಲ್‌ಗಳಲ್ಲಿ ಇದೂ ಒಂದಾಗಲಿದೆ. ‘ರಾಮಾಯಣ’ (ಎರಡೂ ಭಾಗಗಳಿಗೆ ಸೇರಿ 75 ಕೋಟಿ ರೂಪಾಯಿ) ಚಿತ್ರದ ನಂತರ, ಒಂದೇ ಸಿನಿಮಾಗೆ 50 ಕೋಟಿ ರೂ. ಮೌಲ್ಯದ ಆಡಿಯೋ ಹಕ್ಕುಗಳ ಡೀಲ್ ಆಗುತ್ತಿರುವುದು ಭಾರತೀಯ ಚಿತ್ರರಂಗದಲ್ಲೇ ಅಪರೂಪದ ದಾಖಲೆಯಾಗಿದೆ.
‘ಇನ್ನೂ ಯಾವುದೂ ಅಂತಿಮಗೊಂಡಿಲ್ಲ’
ಈ ವರದಿಗಳಿಗೆ ಪ್ರತಿಕ್ರಿಯಿಸಿದಂತೆ ‘ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್’ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಪುನಿತ್ ಗೋಯೆಂಕಾ ಅವರು ‘ವೆರೈಟಿ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ, ಮಾತುಕತೆಗಳು ನಡೆಯುತ್ತಿವೆ ಆದರೆ ಇನ್ನೂ ಯಾವುದೂ ಅಂತಿಮಗೊಂಡಿಲ್ಲ ಎಂದು ಹೇಳಿದ್ದಾರೆ. ‘ನಾನು ಬೆಲೆ ಅಥವಾ ಮೊತ್ತದ ಬಗ್ಗೆ ಕಾಮೆಂಟ್ ಮಾಡುವುದಿಲ್ಲ. ನಮ್ಮ ನಡುವೆ ಮಾತುಕತೆ ನಡೆಯುತ್ತಿದೆ. ಆದರೆ ಇನ್ನೂ ಯಾವುದೇ ಅಧಿಕೃತ ಒಪ್ಪಂದಕ್ಕೆ ಸಹಿ ಬಿದ್ದಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಲಂಡನ್‌ನಲ್ಲಿ ಫ್ಯಾಮಿಲಿ ಜತೆ ಶಾರುಖ್ ಖಾನ್ ಸುತ್ತಾಟ: ವಿದ್ಯಾರ್ಥಿಗಳ ಪ್ರತಿಭಟನೆಗೆ ನಟನ ಮೌನ ಪ್ರಶ್ನಿಸಿದ ನೆಟ್ಟಿಗರು
ಕ್ರಿಸ್ಮಸ್ ಹಬ್ಬಕ್ಕೆ ತೆರೆಗೆ ಬರಲಿದೆ ‘ಕಿಂಗ್’:
‘ಕಿಂಗ್’ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಕೇವಲ 15 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಪೋಸ್ಟ್ ಪ್ರೊಡಕ್ಷನ್ ಮತ್ತು ಎಡಿಟಿಂಗ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಇದೇ ವರ್ಷ ಕ್ರಿಸ್ಮಸ್ ವೇಳೆಗೆ ಚಿತ್ರವನ್ನು ಬೆಳ್ಳಿಪರದೆಯ ಮೇಲೆ ತರಲು ಚಿತ್ರತಂಡ ಯೋಜನೆ ರೂಪಿಸಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಸುಹಾನಾ ಖಾನ್ ಕೂಡ ಅಭಿನಯಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




