ರಾಜಕೀಯಕ್ಕಿಂತ ರಾಜ್ಯದ ರೈತರು, ಜನರ ಹಿತ ಮುಖ್ಯ: ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅಭಿಮತ
All-Party Meeting: ಕಾವೇರಿ ನೀರು ಹಂಚಿಕೆ ವಿವಾದ ಹಾಗೂ CWMA ಆದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಗೃಹಕಚೇರಿ 'ಕೃಷ್ಣಾ'ದಲ್ಲಿ ಮಹತ್ವದ ಸರ್ವಪಕ್ಷ ಸಭೆ ನಡೆದಿದೆ. ಮಳೆಯಾಗ್ತಿದೆ ನಿಜ, ಆದ್ರೆ ಮುಂದೆ ನೀರಿನ ಕೊರತೆ ಆಗಬಹುದು. ಹೀಗಾಗಿ ಜೂನ್ವರೆಗೆ ನೀರು ಸಂಗ್ರಹಿಸಿ ಕಾಪಾಡಿಕೊಳ್ಳಬೇಕಿದ್ದು, ಮೇಕೆದಾಟು ಯೋಜನೆಯೇ ಇದಕ್ಕೆ ಶಾಶ್ವತ ಪರಿಹಾರ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ.

ಬೆಂಗಳೂರು, ಆಗಸ್ಟ್ 02: ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ವಿವಾದವನ್ನು ಮೈಗೆ ಅಂಟಿಸಿಕೊಂಡೇ ಬೆಳೆದಿದ್ದೇವೆ ರಾಜಕೀಯಕ್ಕಿಂತ ರಾಜ್ಯದ ರೈತರು, ಜನರ ಹಿತ ಮುಖ್ಯ ಎಂದು ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಜಕಾರಣವನ್ನು ಪಕ್ಕಕ್ಕಿಟ್ಟು ರಾಜ್ಯದ ಹಿತಕ್ಕಾಗಿ ಎಲ್ಲಾ ಪಕ್ಷಗಳೂ ಒಟ್ಟಿಗೇ ನಿಂತಿರುವ ಚರಿತ್ರೆ ನಮ್ಮ ರಾಜ್ಯಕ್ಕೆ ಇದೆ. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂಬುದು ನಮ್ಮ ನಿಲುವಾಗಿದ್ದು, ಇದಕ್ಕೆ ತಾವೆಲ್ಲರೂ ಸಹಮತ ಹೊಂದಿದ್ದೀರಿ ಅಂತಾ ಗೊತ್ತಿದೆ. CWRC, CWMA ಸಭೆಗೂ ಮೊದಲೇ ಕೇಂದ್ರ ಸಚಿವರಾದ ಸಿ.ಆರ್.ಪಾಟೀಲ್, ಜೋಶಿ, ವಿ.ಸೋಮಣ್ಣ, ಮಾಜಿ ಸಿಎಂಗಳಾದ ಬೊಮ್ಮಾಯಿ, ಶೆಟ್ಟರ್ ಭೇಟಿಯಾಗಿ ನಾನು ಮನವರಿಕೆ ಮಾಡಿದ್ದೆ. ಕೇಂದ್ರದಲ್ಲಿ ರಾಜ್ಯದ ಪರ ಮಾತನಾಡಿದ್ದಾರೆ, ಅವರಿಗೆ ಧನ್ಯವಾದ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
‘ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮ’
ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೀರು ಸಂಗ್ರಹಿಸಿದ್ದೇವೆ ಎಂದೂ ತಿಳಿಸಿದ ಅವರು, ತಮಿಳುನಾಡು ಸಿಎಂ ವಿಜಯ್ ಮಾತುಕತೆಗೆ ಬರುತ್ತೇನೆ ಅಂದಿದ್ದರು. ಆದರೆ ಕಾವೇರಿ ಪರಿಸ್ಥಿತಿ ತಿಳಿಯಾದ ನಂತರ ಬರುವಂತೆ ಹೇಳಿದ್ದೇನೆ. ಈಗ ಸಮಾಧಾನದ ಸಂಗತಿ ಅಂದರೆ ಮಳೆ ಚೆನ್ನಾಗಿ ಆಗುತ್ತಿದೆ. ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಇದೆ. ಸೌಹಾರ್ದಯುತವಾಗಿ ಸಮಸ್ಯೆ ನಿವಾರಣೆಯೇ ಆದ್ಯತೆಯಾಗಿದೆ. ಮೈಸೂರು ಜಿಲ್ಲೆ H.D.ಕೋಟೆ ತಾಲೂಕಿನ ಕಬಿನಿ ಡ್ಯಾಂ ತುಂಬಿದ್ದು, ಹೆಚ್ಚುವರಿ ಒಳ ಹರಿವು ಸಂಗ್ರಹ ಮಾಡಿಟ್ಟುಕೊಳ್ಳಲು ಸಾಧ್ಯ ಇಲ್ಲ. ಹೀಗಾಗಿ ಸಹಜ ಹರಿವು ಮಾತ್ರ ಆಗುತ್ತಿದೆ. ನಾಲೆಗಳಿಗೂ ನೀರು ಹರಿದಿದು, ರೈತರಿಗೂ ಅನುಕೂಲ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ವಿವಾದ; ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ
ಏನೆಲ್ಲ ವಿಷಯಗಳು ಸಭೆಯಲ್ಲಿ ಚರ್ಚೆ?
ತಮಿಳುನಾಡಿಗೆ ನೀರು ಹರಿಸುವಂತೆ CWMA ಆದೇಶ ಹಿನ್ನೆಲೆ ಮುಂದಿನ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಮುಖ್ಯವಾಗಿ ಚರ್ಚೆಯಾಗಿದೆ. ಮಳೆಯಾಗ್ತಿದೆ ನಿಜ, ಆದ್ರೆ ಮುಂದೆ ನೀರಿನ ಕೊರತೆ ಆಗಬಹುದು. ಹೀಗಾಗಿ ಜೂನ್ವರೆಗೆ ನೀರು ಸಂಗ್ರಹಿಸಿ ಕಾಪಾಡಿಕೊಳ್ಳಬೇಕಿದ್ದು, ಮೇಕೆದಾಟು ಯೋಜನೆಯೇ ಇದಕ್ಕೆ ಶಾಶ್ವತ ಪರಿಹಾರ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ.
ಸಭೆಯಲ್ಲಿ ಯಾರೆಲ್ಲ ಭಾಗಿ?
ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಡಿಸಿಎಂ ಪರಮೇಶ್ವರ್, ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸಚಿವರಾದ ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಚಿವರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, JDLP ನಾಯಕ ಸುರೇಶ್ ಬಾಬು, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಂ.ವೀರಪ್ಪ ಮೊಯ್ಲಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಂಸದರಾದ ಪಿ.ಸಿ.ಮೋಹನ್, ಡಾ.ಸಿ.ಎನ್.ಮಂಜುನಾಥ್, ಮಾಜಿ ಸಚಿವರಾದ ಚಲುವರಾಯಸ್ವಾಮಿ, ಪುಟ್ಟರಾಜು, ಹೆಚ್.ಕೆ.ಪಾಟೀಲ್, ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಭೋಜೇಗೌಡ, ಶರವಣ, ದೆಹಲಿ ವಿಶೇಷ ಪ್ರತಿನಿಧಿ ಜಯಚಂದ್ರ, ರಾಜ್ಯಸಭಾ ಸದಸ್ಯ ಜಗ್ಗೇಶ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಸಿಎಂ ಡಿಕೆಶಿಗೆ ದೇವೇಗೌಡರ ಪತ್ರ
ಇನ್ನು ಸರ್ವಪಕ್ಷ ಸಭೆಗೆ ಗೈರಾಗುತ್ತಿರುವ ಬಗ್ಗೆ ಸಿಎಂ ಡಿಕೆಶಿಗೆ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದಾರೆ. ಸರ್ವಪಕ್ಷ ಸಭೆಗೆ ಆಹ್ವಾನ ಮಾಡಿದ್ದಕ್ಕೆ ಧನ್ಯವಾದ ತಿಳಿಸಿದ ಹೆಚ್ಡಿಡಿ, ರಾಜ್ಯದ ಹಿತಾಸಕ್ತಿ, ರೈತರ ಬದುಕು ರಕ್ಷಿಸುವ ವಿಷಯಕ್ಕೆ ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ನನ್ನ ಬೆಂಬಲ ಇದೆ. ವೈಯಕ್ತಿಕ ಹಾಗೂ ಅನಾರೋಗ್ಯ ಕಾರಣ ಸಭೆಗೆ ಹಾಜರಾಗುತ್ತಿಲ್ಲ ಎಂದವರು ಪತ್ರ ಮುಖೇನ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:14 pm, Sun, 2 August 26




