
ಮಂಗಳವಾರ ಹನುಮಂತನಿಗೆ ಮೀಸಲಾದ ದಿನ. ಮಂಗಳವಾರ ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಇದಲ್ಲದೇ ಮಂಗಳವಾರದಂದು ಆಂಜನೇಯನಿಗೆ ಕೆಲವೊಂದು ವಸ್ತುಗಳನ್ನು ಅರ್ಪಿಸುವುದರಿಂದ ಭಕ್ತರು ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯುತ್ತಾರೆ. ಆದ್ದರಿಂದ ಹನುಮನಿಗೆ ಪ್ರಿಯವಾದ ವಸ್ತು ಯಾವುದು? ಅರ್ಪಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹಿಂದೂ ಧರ್ಮದಲ್ಲಿ ವೀಳ್ಯದೆಲೆಯನ್ನು ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಹನುಮಂತನಿಗೆ ಮಂಗಳವಾರ ವೀಳ್ಯದೆಲೆಯನ್ನು ಅರ್ಪಿಸುವುದರಿಂದ ಅವನು ತ್ವರಿತವಾಗಿ ಸಂತುಷ್ಟನಾಗುತ್ತಾನೆ. ಹಾಗೂ ಓರ್ವ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳನ್ನು ಶೀಘ್ರದಲ್ಲೇ ಈಡೇರಿಸುತ್ತಾನೆ. ಆತ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯುತ್ತಾನೆ ಎಂದು ನಂಬಲಾಗಿದೆ.
ಹನುಮಂತನಿಗೆ ಎರಡನೇ ಅತ್ಯಂತ ಪ್ರಿಯವಾದ ವಸ್ತು ಬೆಲ್ಲ ಮತ್ತು ಬೇಳೆ. ಆದ್ದರಿಂದ, ನೀವು ಗ್ರಹಗಳ ದೋಷದಿಂದ ಬಳಲುತ್ತಿದ್ದರೆ, ಕುಟುಂಬದಲ್ಲಿ ಕಲಹ, ಜಗಳ, ಮನೆಯಲ್ಲಿ ಅನಗತ್ಯ ತೊಂದರೆಗಳಿಂದ ಬಳಲುತ್ತಿದ್ದರೆ ಹನುಮಂತನ ದೇವಾಲಯಕ್ಕೆ ಹೋಗಿ ದೇವರಿಗೆ ಭಕ್ತಿಯಿಂದ ಬೆಲ್ಲ ಮತ್ತು ಬೇಳೆಯನ್ನು ಅರ್ಪಿಸಿ. ಇದರಿಂದ ನಿಮ್ಮ ಮನೆಯಿಂದ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.
ನೀವು ಭಯ ಅಥವಾ ಗೊಂದಲದ ಸ್ಥಿತಿಯಲ್ಲಿದ್ದರೆ, ನೀವು ಹನುಮಂತನಿಗೆ ಯಾವುದೇ ಲೋಹದ ಗದೆಯನ್ನು ಅರ್ಪಿಸಬಹುದು. ಈ ಗದೆಯು ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆಯದ್ದಾಗಿರಬಹುದು. ನೀವು ಅದನ್ನು ನಿಮ್ಮ ಕುತ್ತಿಗೆಗೆ ಧರಿಸಲು ಬಯಸಿದರೆ, ಮಂಗಳವಾರ ಭಗವಂತನಿಗೆ ಅರ್ಪಿಸಿ ದೇವಾಲಯದಿಂದ ತೆಗೆದುಕೊಂಡು ಹೋಗಿ ನಂತರ ಅದನ್ನು ಕೆಂಪು ದಾರ ಅಥವಾ ಯಾವುದೇ ಲೋಹ ಅಥವಾ ಬೆಳ್ಳಿಯ ಸರದಲ್ಲಿ ಧರಿಸಬಹುದು. ಹೀಗೆ ಮಾಡುವುದರಿಂದ ನೀವು ಭಯದಿಂದ ಮುಕ್ತರಾಗುತ್ತೀರಿ.
ಮಂಗಳವಾರ ಹನುಮಂತನಲ್ಲಿ ಯಾವುದೇ ಆಸೆಯನ್ನು ಬೇಡುವಾಗ ಕೆಂಪು ದಾರದಲ್ಲಿ ಸುತ್ತಿದ ತೆಂಗಿನಕಾಯಿಯನ್ನು ಅರ್ಪಿಸಿ. ಆದರೆ ಆ ತೆಂಗಿನಕಾಯಿಯನ್ನು ಒಡೆಯಬೇಡಿ, ಬದಲಾಗಿ ಆ ತೆಂಗಿನಕಾಯಿಯನ್ನು ದೇವಾಲಯದಲ್ಲಿರುವ ಹನುಮಾಂತನ ಪಾದಗಳ ಬಳಿ ಇರಿಸಿ ಮತ್ತು ನಿಮ್ಮ ಆಸೆಯನ್ನು ಕೇಳಿ. ನಿಮ್ಮ ಆಸೆಗಳು ಈಡೇರುತ್ತವೆ. ಅಲ್ಲದೆ, ಹೀಗೆ ಮಾಡುವುದರಿಂದ, ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಪ್ರೀತಿಪಾತ್ರರ ಮೇಲಿರುವ ನಕಾರಾತ್ಮಕ ಶಕ್ತಿಯು ಸಹ ದೂರವಾಗುತ್ತದೆ ಎಂದು ನಂಬಲಾಗಿದೆ.
ಹನುಮಂತನಿಗೆ ಅತ್ಯಂತ ಪ್ರಿಯವಾದ ವಿಷಯವೆಂದರೆ ಶ್ರೀರಾಮನ ಹೆಸರು. ಸಂಕಟ ಮೋಚನನು ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತಾನೆ. ನೀವು ರಾಮನ ಹೆಸರನ್ನು ಜಪಿಸಿದರೆ, ಹನುಮಂತನು ಯಾವಾಗಲೂ ನಿಮ್ಮನ್ನು ರಕ್ಷಿಸುತ್ತಾನೆ. ರಾಮನ ಹೆಸರನ್ನು ಅರಳಿ ಎಲೆಯ ಮೇಲೆ ಸಿಂಧೂರದಿಂದ ಬರೆದು, ಕೆಂಪು ದಾರದಲ್ಲಿ ಕಟ್ಟಿ ಹನುಮಂತನಿಗೆ 11 ಎಲೆಗಳ ಹಾರವನ್ನು ಅರ್ಪಿಸಿ. ಇದು ನೀವು ಎದುರಿಸುತ್ತಿರುವ ಯಾವುದೇ ಕಷ್ಟದ ಸಮಯವನ್ನು ಸುಗಮಗೊಳಿಸುತ್ತದೆ. ನೀವು ಎದುರಿಸಬಹುದಾದ ಯಾವುದೇ ಸಮಸ್ಯೆ ಬಗೆಹರಿಯುತ್ತದೆ.
ಇದನ್ನೂ ಓದಿ: ಮನೆಯಲ್ಲಿ ನಟರಾಜನ ಪ್ರತಿಮೆ ಇಡಬಾರದು ಎಂದು ಹೇಳುವುದೇಕೆ?
ಹನುಮಂತನಿಗೆ ತುಳಸಿ ಅರ್ಪಿಸುವುದು ಅತ್ಯಂತ ಶುಭ. ತುಳಸಿ ಎಲೆಗಳನ್ನು ಖಂಡಿತವಾಗಿಯೂ ಹನುಮಂತನಿಗೆ ಅರ್ಪಿಸಲಾಗುತ್ತದೆ. ಹಾಗೆ ಮಾಡುವುದರಿಂದ ನಿಮ್ಮ ತೊಂದರೆಗಳು ದೂರವಾಗುತ್ತವೆ. ಆದ್ದರಿಂದ, ಇಂದು ಯಾವುದೇ ಹನುಮಂತನ ದೇವಸ್ಥಾನಕ್ಕೆ ಹೋಗಿ ದೇವರಿಗೆ ತುಳಸಿ ಎಲೆಗಳನ್ನು ಅರ್ಪಿಸಿ, ಆದರೆ ಸಂಜೆ ತುಳಸಿ ಎಲೆಗಳನ್ನು ಕೀಳಬೇಡಿ. ನೀವು ಇದನ್ನು ಮುಸ್ಸಂಜೆಯ ಮೊದಲು ಮಾಡಬೇಕು.
ಇದರ ಜೊತೆಗೆ, ಈ ದಿನ ನೀವು ದೇವರಿಗೆ ರಾಮ ರಾಮ ಎಂದು ಹೇಳುತ್ತಾ ಲವಂಗದ ಹಾರವನ್ನು ಮಾಡಬೇಕು. ನೀವು 11,21,51,108 ಲವಂಗಗಳ ಹಾರವನ್ನು ಮಾಡಬಹುದು. ಈ ಹಾರವನ್ನು ಭಕ್ತಿಯಿಂದ ಹನುಮಂತನಿಗೆ ಅರ್ಪಿಸುವುದರಿಂದ ಎಲ್ಲಾ ತೊಂದರೆಗಳಿಂದ ನೀವು ಮುಕ್ತಿ ಪಡೆಯುತ್ತೀರಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ