Tulsi Vivah 2021: ತುಳಸಿ ವಿವಾಹ ಆಚರಣೆ ಹೇಗೆ? ಶುಭ ಮುಹೂರ್ತದ ಜೊತೆಗೆ ತಿಳಿಯಬೇಕಾದ ಮಾಹಿತಿ ಇಲ್ಲಿದೆ

ತುಳಸಿ ವಿವಾಹ 2021: ವೈವಾಹಿಕ ಜೀವನದಲ್ಲಿ ತೊಡಕುಗಳು, ಸಮಸ್ಯೆಗಳಿದ್ದವರು ಭಕ್ತಿಯಿಂದ ತುಳಸಿ ವಿವಾಹ ಆಚರಣೆಯನ್ನು ಮಾಡಿ. ಇದರಿಂದ ನಿಮ್ಮ ಕುಟುಂಬ ಮತ್ತು ದಾಂಪತ್ಯ ಜೀವನ ಸುಖವಾಗಿರುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ.

Tulsi Vivah 2021: ತುಳಸಿ ವಿವಾಹ ಆಚರಣೆ ಹೇಗೆ? ಶುಭ ಮುಹೂರ್ತದ ಜೊತೆಗೆ ತಿಳಿಯಬೇಕಾದ ಮಾಹಿತಿ ಇಲ್ಲಿದೆ
ತುಳಸಿ ವಿವಾಹ 2021
Updated By: shruti hegde

Updated on: Nov 15, 2021 | 11:17 AM

ತುಳಸಿಯನ್ನು ಮಹಿಳೆಯರು ಪ್ರತಿದಿನ ಬೆಳಿಗ್ಗೆ ಪೂಜಿಸುತ್ತಾರೆ. ಆದರೆ ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ದೇವ್ ಉಥನಿ ಏಕಾದಶಿಯ ದಿನದಂದು ತುಳಸಿ ವಿವಾಹವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತುಳಸಿ ಮತ್ತು ಶಾಲಿಗ್ರಾಮ ದೇವರ ವಿವಾಹವನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಗುತ್ತದೆ. ದೇವುತ್ಥಾನ ಏಕಾದಶಿಯು ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ ಬರುತ್ತದೆ. ಈ ಬಾರಿ 2021 ನವೆಂಬರ್ 14ರಿಂದ ಬೆಳಿಗ್ಗೆ 05:48 ಕ್ಕೆ ಪ್ರಾರಂಭಗೊಂಡಿದ್ದು, ನವೆಂಬರ್ 15 ಸಾಯಂಕಾಲ 6:39 ಕ್ಕೆ ಕೊನೆಗೊಳ್ಳುತ್ತದೆ. ತುಳಸಿ ವಿವಾಹವು ನವೆಂಬರ್ 15ನೇ ತಾರೀಕು ಅಂದರೆ ಇಂದು ಮುಕ್ತಾಯಗೊಳ್ಳಲಿದೆ.

ವಿವಾಹ ಆಚರಣೆ
ಮನೆಯನ್ನು ಗುಡಿಸಿ ಸ್ವಚ್ಛಗೊಳಿಸಿ ಅಲಂಕಾರ ಮಾಡಲಾಗುತ್ತದೆ. ಮನೆಯವರೆಲ್ಲಾ ಸೇರಿ ತುಳಸಿಯನ್ನು ಮನೆಯ ಎದುರು ಇಟ್ಟು ಅಲಂಕರಿಸಲಾಗುತ್ತದೆ. ತುಳಸಿ ಗಿಡಕ್ಕೆ ಕಬ್ಬಿನ ಮಂಟಪವನ್ನು ಕಟ್ಟಲಾಗುತ್ತದೆ. ಸಂಜೆಯಾಗುತ್ತಿದ್ದಂತೆಯೇ ಹೂವಿನ ಅಲಂಕಾರದ ಜೊತೆಗೆ ದೀಪ ಬೆಳಗುವ ಮೂಲಕ ಮಂಟಪವನ್ನು ಅಲಂಕರಿಸಲಾಗುತ್ತದೆ. ಶಾಲಿಗ್ರಾಮವನ್ನು ಒಂದು ಪಾತ್ರೆಯಲ್ಲಿಟ್ಟು ತುಳಸಿ ಮತ್ತು ಶಾಲಿಗ್ರಾಮದ ಮೇಲೆ ಹಾಲಿನಲ್ಲಿ ನೆನೆಸಿದ ಅರಿಶಿನವನ್ನು ಹಚ್ಚಿ ಮಂಟಪದ ಸುತ್ತ ಅರಿಶಿನವನ್ನು ಲೇಪನ ಮಾಡಲಾಗುತ್ತದೆ.

ಕನ್ಯಾದಾನ ಮಾಡಿದಷ್ಟೇ ಪುಣ್ಯ ಸಿಗುತ್ತದೆ
ಹಿಂದೂ ಸಂಪ್ರದಾಯದ ಪ್ರಕಾರ ತುಳಸಿ ವಿವಾಹ ಆಚರಣೆ ಮಾಡುವುದರಿಂದ ಕನ್ಯಾದಾನದಿಂದ ಸಿಗುವ ಪುಣ್ಯ ಸಿಗುತ್ತದೆ. ನಂಬಿಕೆ ಪ್ರಕಾರ ತುಳಸಿ ವಿವಾಹವನ್ನು ಮಾಡುವವರ ಮನೆಯಲ್ಲಿ ಎಂದಿಗೂ ಸಂತೋಷ ನೆಮ್ಮದಿ ಲಭಿಸುತ್ತದೆ. ಮನೆಯವರು ಎಂದಿಗೂ ಅದೃಷ್ಟವಂತರಾಗಿರುತ್ತಾರೆ. ವೈವಾಹಿಕ ಜೀವನದಲ್ಲಿ ತೊಡಕುಗಳು, ಸಮಸ್ಯೆಗಳಿದ್ದವರು ಭಕ್ತಿಯಿಂದ ತುಳಸಿ ವಿವಾಹ ಆಚರಣೆಯನ್ನು ಮಾಡಿ. ಇದರಿಂದ ನಿಮ್ಮ ಕುಟುಂಬ ಮತ್ತು ದಾಂಪತ್ಯ ಜೀವನ ಸುಖವಾಗಿರುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ.

ಪೂಜೆ ವಿಧಾನ
ಮದುವೆಯ ಸಮಯದಲ್ಲಿ ಮಂಗಳಾಷ್ಟಕವನ್ನೂ ಸಹ ಹೇಳಬಹುದು. ಕರ್ಪೂರದ ಆರತಿ ಬೆಳಗುವ ಮೂಲಕ ಪೂಜೆಯನ್ನು ನೆರವೇರಿಸಲಾಗುತ್ತದೆ. ತುಳಸಿಯ ಸುತ್ತ 12 ಪ್ರದಕ್ಷಿಣೆ ಮಾಡಿ ಬಳಿಕ ನೈವೇದ್ಯಕ್ಕೆ ಇರಿಸಿದ ಪ್ರಸಾದವನ್ನು ಸೇವಿಸಬಹುದು. ಪೂಜೆಯ ಎಲ್ಲಾ ವಿಧಿವಿಧಾನಗಳು ಮುಗಿದ ಬಳಿಕ ನಿಮ್ಮ ಇಷ್ಟಾರ್ಥಗಳನ್ನು ತುಳಸಿಯ ಮುಂದೆ ಹೇಳಿಕೊಳ್ಳಿ. ಇದರಿಂದ ನೀವು ಬೇಡಿಕೊಂಡ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ನಂಬಿಕೆ ಇದೆ. ಇದರ ಜೊತೆಗೆ ಭಕ್ತಿಯಿಂದ ತುಳಸಿ ವಿವಾಹ ಆಚರಣೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಈ ಬಾರಿಯ ತುಳಸಿ ವಿವಾಹವನ್ನು ಮನೆಯವರೆಲ್ಲಾ ಸೇರಿ ಭಕ್ತಿಯಿಂದ, ಸಂತೋಷದಿಂದ ಆಚರಿಸಿ.

ಇದನ್ನೂ ಓದಿ:

Tulsi Tradition: ಮನೆಯ ಅಂಗಳದಲ್ಲಿ ತುಳಸಿ ಬೃಂದಾವನ ಇರಬೇಕು: ಯಾಕೆ, ಹೇಗೆ, ಅದರ ಮಹತ್ವ ಏನು?

Vastu tips: ತುಳಸಿ ಗಿಡ ಮನೆಯ ಯಾವ ದಿಕ್ಕಿನಲ್ಲಿ ಇದ್ದರೆ ಶ್ರೇಯಸ್ಸು?

Published On - 11:05 am, Mon, 15 November 21