ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ತುಳಸಿ ವಿವಾಹ (Tulsi Vivah) ಮಾಡುವ ಪರಿಪಾಠ ನಮ್ಮಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲಿಯೂ ಈ ತುಳಸಿ ಎಂದರೆ ನಮ್ಮ ಪಾಲಿಗೆ ಕೇವಲ ಸಸ್ಯ ಮಾತ್ರವಲ್ಲ ಅದರೊಂದಿಗೆ ಒಂದು ಬಾಂಧವ್ಯವಿದೆ. ಯಾರ ಮನೆಯಾಗಲೀ ತುಳಸಿ ಗಿಡ ಇಲ್ಲವೆಂದರೆ ಅದು ಮನೆ ಎನಿಸಿಕೊಳ್ಳುವುದಿಲ್ಲ ಎಂಬ ಭಾವನೆ ಬೆಳೆದು ಬಿಟ್ಟಿದೆ, ಇದು ಸತ್ಯವೂ ಹೌದು. ಸಮುದ್ರ ಮಂಥನದ ಸಮಯದಲ್ಲಿ ಅವತರಿಸಿದ ತುಳಸಿಯನ್ನು ಮನೆಯ ಮುಂಬದಿಯ ಅಂಗಳದಲ್ಲಿ ಒಂದು ಚೆಂದದ ಕಟ್ಟೆ ಕಟ್ಟಿ ಅದನ್ನು ಬೆಳೆಸಿ ಪ್ರತಿದಿನ ಪೂಜಿಸುತ್ತೇವೆ. ಹಾಗಾಗಿ ನಮಗೆ ತುಳಸಿ ಎಂದರೆ ಒಂದು ಪೂಜನೀಯ ಭಾವ ಬೆಳೆದು ಬಿಟ್ಟಿರುತ್ತದೆ. ಇದು ಮುಂದಿನ ಪೀಳಿಗೆಗೂ ಸಾಗಬೇಕು ಎಂದರೆ ಮನೆ ಮನೆಯಲ್ಲಿಯೂ ತುಳಸಿ ಪೂಜೆ ಪ್ರತಿನಿತ್ಯ ನಡೆಯಬೇಕು. ಅದರ ಜೊತೆಗೆ ನಮ್ಮ ಪರಿಸರಕ್ಕೆ ತುಳಸಿಯಿಂದ ಎಷ್ಟೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಸಬೇಕು.
ತುಳಸಿಗೆ ಇನ್ನೊಂದು ಹೆಸರು ವೃಂದಾ. ಈಕೆ ಜಲಂಧರನೆಂಬ ರಾಕ್ಷಸನ ಪತ್ನಿಯಾಗಿರುತ್ತಾಳೆ. ಆಕೆಯ ಪಾತಿವ್ರತ್ಯ ಪ್ರಭಾವದಿಂದ ಲೋಕಕಂಟಕನಾಗಿ ಮೆರೆಯುವ ಜಲಂಧರನನ್ನು ಕೊಲ್ಲಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆಗ ದೇವತೆಗಳೆಲ್ಲ ಸೇರಿ ವಿಷ್ಣುವಿನ್ನು ಮೊರೆ ಹೋಗುತ್ತಾರೆ. ಅತ್ತ ಜಲಂಧರ ದೇವತೆಗಳೊಡನೆ ಹೋರಾಡುತ್ತಿರುವಾಗ, ಇತ್ತ ವಿಷ್ಣು ಜಲಂಧರ ರೂಪ ಧರಿಸಿ ವೃಂದಾಳ ಮುಂದೆ ಬಂದಾಗ, ಅವಳು ಪತಿಯೆಂದೇ ಭಾವಿಸಿ ತಬ್ಬಿಕೊಂಡು ಬಿಡುತ್ತಾಳೆ. ಅಲ್ಲಿಗೆ ಅವಳ ಪಾತಿವ್ರತ್ಯ ಭಂಗವಾಗಿ ಇತ್ತ ಜಲಂಧರ ಯುದ್ಧದಲ್ಲಿ ಮಡಿಯುತ್ತಾನೆ. ವೃಂದೆ ವಿಷ್ಣುವಿಗೆ ‘‘ಮುಂದೊಮ್ಮೆ ನಿನಗೂ ಪತ್ನಿಯ ವಿಯೋಗವಾಗಲಿ,’’ ಎಂದು ಶಪಿಸಿ ಚಿತೆಯೇರುತ್ತಾಳೆ. ಆಗ ಚಿತೆಯ ಸುತ್ತ ತುಳಸಿ -ನೆಲ್ಲಿ ನಿರ್ಮಿಸಿ ವೃಂದಾವನ ರಚಿಸಿದಾಗ, ವಿಷ್ಣು ನಳ ನಳಿಸಿ ಬೆಳೆದ ತುಳಸಿಯನ್ನು ಮನಸಾ ವರಿಸುತ್ತಾನೆ. ಆ ತುಳಸಿಯೇ ಮುಂದೆ ರುಕ್ಕಮಿಣಿ ಯಾಗಿ ಹುಟ್ಟಿ ಕಾರ್ತಿಕ ಶುದ್ಧ ದ್ವಾದಶಿಯ ದಿನ ಶ್ರೀ ಕೃಷ್ಣನನ್ನು ವರಿಸುತ್ತಾಳೆ. ಆ ವಿವಾಹೋತ್ಸವ ಸ್ಮರಣೆಯೇ ‘ಉತ್ಥಾನ ದ್ವಾದಶಿ ಅಥವಾ ತುಳಸೀ ವಿವಾಹ’.
ಇದನ್ನೂ ಓದಿ: Tulsi Vivah 2023: ದಿನಾಂಕ, ಸಮಯ, ಶುಭ ಮುಹೂರ್ತ, ಪೂಜಾ ವಿಧಿಗಳು ಮತ್ತು ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ
ಇದು ಮುಂದೆ ಪ್ರತಿ ಮನೆಯ ಆಚರಣೆಯಾಯಿತು. ಹಾಗಾಗಿ ಈ ದಿನದ ಪ್ರತೀಕ ಎಂಬಂತೆ ಪ್ರತಿ ಮಹಿಳೆಯೂ ತನ್ನ ಪತಿಯ ಆಯುಷ್ಯ ವೃದ್ಧಿಗೆ, ಬದುಕಿನ ಒಳಿತಿಗೆ ತುಳಸಿಯನ್ನು ಪೂಜಿಸುವ ರೂಢಿಯಿದೆ. ಕಾರ್ತಿಕ ಮಾಸದಲ್ಲಿ ನೆಲ್ಲಿ ಗಿಡದಲ್ಲಿ ವಿಷ್ಣು ಇರುತ್ತಾನೆ ಎಂಬ ನಂಬಿಕೆ ಇರುವುದರಿಂದ ಉತ್ಥಾನ ದ್ವಾದಶಿಯಂದು ವಿಷ್ಣುವಿನೊಂದಿಗೆ ತುಳಸಿಯ ವಿವಾಹ ಮಹೋತ್ಸವ ನಡೆಯುತ್ತದೆ.
ಇದನ್ನೂ ಓದಿ: Tulsi Vivah 2023: ಉತ್ಥಾನ ದ್ವಾದಶಿ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ?
ತುಳಸಿವನವನ್ನು ಬೆಳೆಸುವವನು ಎಲ್ಲ ಪಾಪದಿಂದ ಮುಕ್ತನಾಗುತ್ತಾನೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲ, ಮನೆಯ ಸುತ್ತ ತುಳಸಿ ಗಿಡವನ್ನು ಬೆಳೆಸುವುದರಿಂದ ವ್ಯಕ್ತಿಯ ಆರೋಗ್ಯದಲ್ಲಿ ಗಣನೀಯ ಪ್ರಮಾಣದ ಸುಧಾರಣೆ ಕಾಣುತ್ತದೆ ಎಂಬುದು ವೈದ್ಯಕೀಯವಾಗಿಯೂ ಸಾಬೀತಾಗಿದೆ. ಅಲ್ಲದೆ ಯಾರು ತನ್ನ ಬಳಿ ತುಳಸಿಯನ್ನಿಟ್ಟುಕೊಳ್ಳುತ್ತಾನೋ ಅವನೊಂದಿಗೆ ಶ್ರೀಕೃಷ್ಣ ಸದಾ ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ.
ಮತ್ತಷ್ಟು ಆಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ