AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tulsi Vivah 2023: ಉತ್ಥಾನ ದ್ವಾದಶಿ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ?

ಲಕ್ಷ್ಮೀ ಏಳುವ ದಿನ ದೀಪಾವಳಿಯಾದರೆ, ನಾರಾಯಣನು ಏಳುವ ದಿನ ಉತ್ಥಾನ ದ್ವಾದಶಿ. ನಮ್ಮ ಪುರಾಣಗಳ ಪ್ರಕಾರ ಮಹಾವಿಷ್ಣು ಆಷಾಢ ಶುದ್ಧ ಶಯನ ಏಕಾದಶಿಯಂದು ಮಲಗಿದರೆ ಕಾರ್ತಿಕ ಶುದ್ಧ ದ್ವಾದಶಿಯಂದು ಏಳುತ್ತಾನೆ. ಆದ್ದರಿಂದ ಕಾರ್ತಿಕ ಶುದ್ಧ ದ್ವಾದಶಿಯಂದು ‘ಪ್ರಬೋಧೋತ್ಸವ’ದ ಮೂಲಕ ನಾರಾಯಣನನ್ನು ಎಬ್ಬಿಸಿ ತುಳಸಿಯೊಂದಿಗೆ ವಿವಾಹವನ್ನು ಮಾಡುವ ಪದ್ಧತಿ ಬೆಳೆದು ಬಂದಿದೆ.

Tulsi Vivah 2023: ಉತ್ಥಾನ ದ್ವಾದಶಿ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 23, 2023 | 3:45 PM

ಕಾರ್ತಿಕ ಶುಕ್ಲ ದ್ವಾದಶಿಯಂದು ತುಳಸಿ ಪೂಜೆ (Tulsi Vivah) ಮಾಡುವುದು ವಾಡಿಕೆ. ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದೇ ಪ್ರಸಿದ್ಧವಾಗಿದೆ. ಕಾರ್ತಿಕ ಮಾಸದಲ್ಲಿ ಬರುವ ಹಬ್ಬಗಳಲ್ಲಿ ಇದೊಂದು ದೊಡ್ಡ ಹಬ್ಬ. ಸಾಮಾನ್ಯವಾಗಿ ಪ್ರತಿ ಹಿಂದು ಧರ್ಮೀಯರ ಮನೆಯ ಅಂಗಳದಲ್ಲಿಯೂ ಕಾಣಸಿಗುವ ಈ ಪವಿತ್ರ ತುಳಸಿ ಗಿಡವನ್ನು ಸಾವಿರಾರು ವರ್ಷಗಳಿಂದ ಪೂಜಿಸುತ್ತಾ ಬಂದಿದ್ದೇವೆ. ಇದರ ಪೂಜೆ ಮಾಡದ ವಿನಃ ನಿಮಗೆ ಯಾವ ಪೂಜಾ ಫಲವೂ ಪ್ರಾಪ್ತಿಯಾಗುವುದಿಲ್ಲ ಎಂದು ಪುರಾಣಗಳು ಹೇಳುತ್ತವೆ.

ಉತ್ಥಾನ ಎಂದರೆ ಏಳುವುದು ಎಂದರ್ಥ. ತುಳಸಿ ಎಂದರೆ ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕ. ಲಕ್ಷ್ಮೀ ಏಳುವ ದಿನ ದೀಪಾವಳಿಯಾದರೆ, ನಾರಾಯಣನು ಏಳುವ ದಿನ ಉತ್ಥಾನ ದ್ವಾದಶಿ. ನಮ್ಮ ಪುರಾಣಗಳ ಪ್ರಕಾರ ಮಹಾವಿಷ್ಣು ಆಷಾಢ ಶುದ್ಧ ಶಯನ ಏಕಾದಶಿಯಂದು ಮಲಗಿದರೆ ಕಾರ್ತಿಕ ಶುದ್ಧ ದ್ವಾದಶಿಯಂದು ಏಳುತ್ತಾನೆ. ಲಕ್ಷ್ಮೀನಾರಾಯಣರು ಜಾಗೃತಾವಸ್ಥೆಯಲ್ಲಿದ್ದರೆ ಜಗಹೃದಯವೇ ಆನಂದಮಯವಾಗಿ, ಮಂಗಳ ವಾತಾವರಣ ನೆಲೆಸಿರುತ್ತದೆ. ಆದ್ದರಿಂದ ಕಾರ್ತಿಕ ಶುದ್ಧ ದ್ವಾದಶಿಯಂದು ‘ಪ್ರಬೋಧೋತ್ಸವ’ದ ಮೂಲಕ ನಾರಾಯಣನನ್ನು ಎಬ್ಬಿಸಿ ತುಳಸಿಯೊಂದಿಗೆ ವಿವಾಹವನ್ನು ಮಾಡುವ ಪದ್ಧತಿ ಬೆಳೆದು ಬಂದಿದೆ. ಅಧ್ಯಾತ್ಮಿಕ ಸಾಧನೆಯೊಂದಿಗೆ ಆರೋಗ್ಯ ಹಾಗೂ ಪರಿಸರದ ಬಗ್ಗೆ ಜಾಗೃತಿಯನ್ನು ಉಂಟುಮಾಡುತ್ತಾ ನಮ್ಮನ್ನು ‘ಪ್ರಬೋಧ’ ಎಂದರೆ ‘ಎಚ್ಚರಿಸುವ’ ಉತ್ಸವವೇ ‘ಪ್ರಬೋಧೋತ್ಸವ’.

ಹಿರಿಯರು ಮತ್ತು ಪುರಾಣಗಳು ಹೇಳುವ ಪ್ರಕಾರ ಯಾವ ಮನೆಯಲ್ಲಿ ತುಳಸೀವನವಿರುವದೋ ಆ ಮನೆ ತೀರ್ಥಕ್ಷೇತ್ರದಂತೆ. ಆ ಮನೆಯಲ್ಲಿ ಅಕಾಲ ಮೃತ್ಯು ಅಶುಭವಾರ್ತೆ ಸುಳಿಯುವುದಿಲ್ಲ. ‘ಲಕ್ಶ್ಮೀರ್ಭವತಿ ನಿಶ್ಚಲಾ’ ಎಂಬ ಶಾಸ್ತ್ರೋಕ್ತಿಯಂತೆ ಆ ಮನೆಯಲ್ಲಿ ಸಂಪತ್ತು ಸದಾ ನೆಲೆಸುತ್ತದೆ. ತುಳಸಿಯಲ್ಲಿ ನಮ್ಮ ಪಾಪ ತಾಪಗಳನ್ನು ದೂರೀಕರಿಸಬಲ್ಲ ಸಮಸ್ತ ದೇವತೆಗಳ ಪೂಜೆ ಮಾಡಿದಂತೆ. ಔಷಧ ಗುಣಗಳಿಂದ ಕೂಡಿದ ತುಳಸಿ ವಾಯು, ಪರಿಸರವನ್ನು ಪರಿಶುದ್ಧಗೊಳಿಸುತ್ತದೆ. ಸಿದ್ಧೌಷಧವಾದ ತುಳಸಿ ಆಯುರ್ವೇದದ ಆಪ್ತಮಿತ್ರವೂ ಹೌದು.

ಆಚರಣೆ ಹೇಗೆ?

ಮೊದಲು ತುಳಸಿ ಕಟ್ಟೆಯನ್ನು ಶುಚಿಗೊಳಿಸಿ, ಒಂದು ಸಣ್ಣ ಮಂಟಪ ತಯಾರಿಸಿ, ರಂಗವಲ್ಲಿ, ಸಿಂಧೂರ, ನೆಲ್ಲಿಯ ಟೊಂಗೆ, ಮಾವಿನ ತಳಿರು ಮುಂತಾದ ವಿವಿಧ ಫಲ- ಪುಷ್ಪಗಳಿಂದ ಅಲಂಕರಿಸಬೇಕು. ತುಳಸಿಯ ಸನ್ನಿಧಿಯಲ್ಲಿ ಶ್ರೀ ಕೃಷ್ಣನ ಪ್ರತಿಮೆಯನ್ನು ಇಟ್ಟು, ಅರಿಶಿಣ ಕುಂಕುಮದಿಂದ ಅಲಂಕಾರ ಮಾಡಬೇಕು. ವಿಷ್ಣುವನ್ನು ಎಬ್ಬಿಸಲು ಮಂತ್ರ ಪಠಿಸುತ್ತಾ ಘಂಟಾ, ಶಂಖನಾದವನ್ನು ಮಾಡಿ, ಎಲ್ಲೆಡೆ ದೀಪ ಹಚ್ಚಿ ದೀಪೋತ್ಸವ ಆಚರಿಸಿ, ಭಗವಂತನನ್ನು ಪ್ರಾರ್ಥಿಸಬೇಕು. ಬಳಿಕ ನೈವೇದ್ಯ ಮಾಡಿ ಎಲ್ಲರಿಗೂ ಆ ಪ್ರಸಾದವನ್ನು ವಿತರಿಸಬೇಕು. ಬಳಿಕ ಸ್ತ್ರಿಯರಿಗೆ ಕುಂಕುಮ, ಅರಿಶಿನ, ಹೂವು, ಹಸಿರು ಬಳೆಗಳನ್ನು ನೀಡಬೇಕು. ಸಾಕ್ಷಾತ್ ಲಕ್ಷ್ಮೀ ಮತ್ತು ವಿಷ್ಣುವಿನ ವಿವಾಹವಾದ್ದರಿಂದ ಅವರಿಬ್ಬರ ಆಶೀರ್ವಾದ ಎಲ್ಲರ ಮೇಲೂ ಸದಾ ಇರಲಿ ಎಂದು ಪ್ರಾರ್ಥಿಸಬೇಕು.

ಇದನ್ನೂ ಓದಿ: ದಿನಾಂಕ, ಸಮಯ, ಶುಭ ಮುಹೂರ್ತ, ಪೂಜಾ ವಿಧಿಗಳು ಮತ್ತು ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ

ಯಾವ ಮಂತ್ರ ಪರಿಸಬೇಕು?

– ದೇವೀಂ ಕನಕಸಂಪನ್ನಾಂ ಕನಕಾಭರಣೈರ್ಯತಾಂ ದಾಸ್ಯಾಮಿ ವಿಷ್ಣವೇ ತುಭ್ಯಂ ಬ್ರಹ್ಮಲೋಕ ಜಿಗೀಷಯಾ

– ತುಲಸೀ ಕಾನನಂ ಚೈವ ಗೃಹೇ ಯಸ್ಯಾವತಿಷ್ಠತಿ

ತದ್ಗೃಹಂ ತೀರ್ಥಭೂತಂ ಹಿ ನಾಯಾಂತಿ ಯಮಕಿಂಕರಃ ॥

– ಉತ್ತಿಷ್ಟೋತ್ತಿಷ್ಠ ಗೋವಿಂದ ತ್ಯಜನಿದ್ರಾಂ ಜಗತ್ಪತೇ ತ್ವಯಿ ಸುಪ್ತೇ ಜಗತ್- ಸುಪ್ತಂ ಉತ್ಥಿತೇ ಜೋತ್ಥಿತಂ ಜಗತ್ ॥

– ಗತಾಮೇಘಾ ವಿಯಚ್ಚೈವ ನಿರ್ಮಲಂ ನಿರ್ಮಲಾ ದಿಶಃ ಶಾರದಾನಿಚ ಪುಷ್ಪಾಣಿ ಗ್ರಹಣಾ ಮಮ ಕೇಶವ ॥

ಮತ್ತಷ್ಟು ಆಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ