Valentineʼs day 2024: ರಾಧೆ ಮತ್ತು ಕೃಷ್ಣನ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ? ಅವರ ಪ್ರೇಮವೇ ಮನುಕುಲಕ್ಕೆ ಸ್ಪೂರ್ತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 14, 2024 | 10:36 AM

Radha Krishna: ಕೃಷ್ಣನಿಗೆ ಅನೇಕ ಗೋಪಿಯರು ಮತ್ತು ಹೆಂಡತಿಯರಿದ್ದರು, ಆದರೆ ಅವರೆಲ್ಲರ ಪೈಕಿ ರಾಧೆ ಕೃಷ್ಣನ ಮನದರಸಿ, ಆತನ ಹೃದಯದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡವಳು. ಪ್ರೀತಿ ದೈಹಿಕವಾಗಿರುವುದಕ್ಕಿಂತ ಶುದ್ಧ ಮತ್ತು ನಿಸ್ವಾರ್ಥ ಮನಸ್ಸಿನಲ್ಲಿರಬೇಕೆಂದು ಅವರು ನಂಬಿದ್ದರು. ಪ್ರೇಮದ ಮೇಲಿನ ಬದ್ಧತೆಯನ್ನು ಜಗತ್ತಿಗೆ ಸಂವಹನ ಮಾಡಿದರು. ಇಂತಹ ಪ್ರೀತಿಯೇ ಯುವ ಜನರಿಗೆ ಪ್ರೇರಣೆಯಾಗಬೇಕು.

Valentineʼs day 2024: ರಾಧೆ ಮತ್ತು ಕೃಷ್ಣನ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ? ಅವರ ಪ್ರೇಮವೇ ಮನುಕುಲಕ್ಕೆ ಸ್ಪೂರ್ತಿ
ಸಾಂದರ್ಭಿಕ ಚಿತ್ರ
Follow us on

ರಾಧಾ ಕೃಷ್ಣರ ಪ್ರೇಮ ಕಥೆ ಎಂತವರನ್ನಾದರೂ ಕೂಡ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ಇವರ ಬಗ್ಗೆ ಅನೇಕಾನೇಕ ರೀತಿಯ ಕಥೆಗಳಿದ್ದರೂ ಕೂಡ ಅವರ ಪ್ರೀತಿ ಮಾತ್ರ ಎಲ್ಲವನ್ನೂ ಮೀರಿ ಮನುಕುಲಕ್ಕೆ ಸ್ಪೂರ್ತಿಯಾಗಿ ನಿಂತಿದೆ. ರಾಧಾ ಕೃಷ್ಣರು ವಿವಾಹವಾಗದಿದ್ದರೂ ಕೂಡ ನಾವು ಅವರನ್ನು ಜೊತೆಯಾಗಿಯೇ ಪೂಜಿಸುತ್ತೇವೆ. ರುಕ್ಮಿಣಿಗಿಂತಲೂ ಕೂಡ ರಾಧೆಯ ಪ್ರೇಮವನ್ನೇ ನಾವು ಉದಾಹರಣೆಯಾಗಿ ತೆಗೆದುಕೊಳ್ಳುತ್ತೇವೆ. ಹಾಗಾಗಿ ಅವರಿಬ್ಬರ ನಡುವಿನ ಅತ್ಯಂತ ಶುದ್ಧವಾದ ಪ್ರೀತಿಯನ್ನು ಇಷ್ಟಪಡದವರಿಲ್ಲ. ಇನ್ನು ಅನೇಕ ದಂಪತಿಗಳು ರಾಧಾ – ಕೃಷ್ಣರ ಪ್ರೀತಿಯಂತೆ ನಮ್ಮ ಪ್ರೀತಿಯೂ ಇರಬೇಕೆಂದು ಬಯಸುತ್ತಾರೆ.

ಕಥೆಗಳಲ್ಲಿ ನಾವು ಕೇಳಿರುವ ಪ್ರಕಾರ ಕೃಷ್ಣನಿಗೆ ಅನೇಕ ಗೋಪಿಯರು ಮತ್ತು ಹೆಂಡತಿಯರಿದ್ದರು, ಆದರೆ ಅವರೆಲ್ಲರ ಪೈಕಿ ರಾಧೆ ಕೃಷ್ಣನ ಮನದರಸಿ, ಆತನ ಹೃದಯದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡವಳು. ಪ್ರೀತಿ ದೈಹಿಕವಾಗಿರುವುದಕ್ಕಿಂತ ಶುದ್ಧ ಮತ್ತು ನಿಸ್ವಾರ್ಥ ಮನಸ್ಸಿನಲ್ಲಿರಬೇಕೆಂದು ಅವರು ನಂಬಿದ್ದರು. ಹಾಗಾಗಿಯೇ ಪ್ರೇಮದ ಮೇಲಿನ ಬದ್ಧತೆಯನ್ನು ಜಗತ್ತಿಗೆ ಸಂವಹನ ಮಾಡಿದರು. ಇಂತಹ ಪ್ರೀತಿಯೇ ನಮ್ಮ ಯುವ ಜನರಿಗೆ ಪ್ರೇರಣೆಯಾಗಬೇಕು.

ರಾಧೆ ಕೃಷ್ಣನಿಗಿಂತಲೂ ದೊಡ್ಡವಳು!

ನಿಮಗೆ ಗೊತ್ತಾ? ಕೆಲವೊಂದು ಕಥೆಗಳ ಪ್ರಕಾರ ರಾಧೆಯು 11ನೇ ತಿಂಗಳಿನಲ್ಲಿದ್ದಾಗ ಮೊದಲ ಬಾರಿ ಶ್ರೀಕೃಷ್ಣನನ್ನು ಭೇಟಿಯಾಗಿದ್ದಳಂತೆ. ಆಗ ಕೃಷ್ಣ ಕೇವಲ 1 ದಿನದ ಪುಟ್ಟ ಮಗು. ಹಾಗಾಗಿ ರಾಧೆ ಹಾಗೂ ಕೃಷ್ಣನಿಗೆ ಸುಮಾರು 11 ತಿಂಗಳಷ್ಟು ವಯಸ್ಸಿನ ವ್ಯತ್ಯಾಸವಿದೆ ಈ ಆಧಾರದ ಮೇಲೆ ರಾಧೆ ಕೃಷ್ಣನಿಗಿಂತಲೂ ದೊಡ್ಡವಳೆಂದು ಹೇಳಲಾಗುತ್ತದೆ.

ರಾಧೆ – ಕೃಷ್ಣರ ವಿವಾಹ:

ರಾಧಾ ಮತ್ತು ಕೃಷ್ಣರು ಸಂಕೇತ ಎನ್ನುವ ಸ್ಥಳದಲ್ಲಿ ಮೊದಲು ಸೇರಿದರು ಎಂದು ಹೇಳಲಾಗುತ್ತದೆ. ಈ ಗ್ರಾಮದಲ್ಲೇ ಕೃಷ್ಣ ಮತ್ತು ರಾಧೆಯ ಪ್ರೇಮ ಕಥೆ ಆರಂಭವಾಗಿದ್ದು ಎಂಬ ನಂಬಿಕೆಯೂ ಇದೆ. ಪ್ರತೀ ವರ್ಷ ಭದ್ರ ಶುಕ್ಲ ಅಷ್ಟಮಿಯಿಂದ ಚತುದರ್ಶಿ ತಿಥಿಯವರೆಗೆ ರಾಧಾ ಮತ್ತು ಕೃಷ್ಣ ಪ್ರೇಮ ಪ್ರಸಂಗವನ್ನು ಇಲ್ಲಿ ನೆನೆಸಿಕೊಳ್ಳಲಾಗುತ್ತದೆ ಅವರ ನೆನಪನ್ನು ಹಸಿರಾಗಿಡುವುದಕ್ಕೆ ಅನೇಕ ಉತ್ಸವಗಳೂ ಕೂಡ ನಡೆಯುತ್ತದೆ.

ರಾಧೆ – ಕೃಷ್ಣ ಚಿಕ್ಕವರಿದ್ದಾಗ ಆಟವಾಡುತ್ತಾ ಒಬ್ಬರನ್ನೊಬ್ಬರು ವಿವಾಹವಾಗಿದ್ದರು ಎಂದು ಪ್ರಾಚೀನ ಕಥೆಗಳು ಹೇಳುತ್ತವೆ. ಆದರೆ ಜೀವನದಲ್ಲಿ ಅವರಿಗೆ ಮದುವೆ ಆಗಲಿಲ್ಲ ಅದಕ್ಕೆ ಹಲವಾರು ಕಾರಣಗಳಿವೆ. ಇಬ್ಬರು ದೇವ ಪುರುಷರು ಅದರಲ್ಲಿಯೂ ರಾಧೆಯನ್ನು ಕೃಷ್ಣನ ಅವತಾರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅವರಿಬ್ಬರೂ ಮದುವೆಯಾಗಬಹುದಿತ್ತು ಆದರೆ ಒಂದುಗೂಡಲು ಸಾಧ್ಯವಿರಲಿಲ್ಲ ಎಂದು ಪುರಾಣ ಕಥೆಗಳು ಹೇಳುತ್ತವೆ.

ಇದನ್ನೂ ಓದಿ: ದೇವಾಲಯದಿಂದ ಹಿಂದಿರುಗುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ರಾಧಾ, ಕೃಷ್ಣರು ಮದುವೆಯಾಗದಿರಲು ಸಾವಿರ ಕಾರಣಗಳು ಇರಬಹುದು. ಆದರೆ ಅವರ ಪ್ರೀತಿ, ಅದರಲ್ಲಿನ ಪರಿಶುದ್ಧತೆ ಇಂದಿನ ಯುವ ಪ್ರೇಮಿಗಳಿಗೂ ಮುಖ್ಯ. ಏಕೆಂದರೆ ಪ್ರೀತಿ ಎಂಬುದರ ನಿಜವಾದ ಅರ್ಥವೇ ರಾಧಾ, ಕೃಷ್ಣ. ಒಬ್ಬ ವ್ಯಕ್ತಿ ಬದುಕಲ್ಲಿ ಬಂದ ಮೇಲೆ ಆ ಜೀವನ ಎಷ್ಟು ಸುಂದರ ವಾಗಿರಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪ್ರೀತಿ ಎಂಬುದು ಜೀವನ ಪರ್ಯಂತ ಇರುವಂತಹ ಶಕ್ತಿ ಹಾಗಾಗಿ ಅದನ್ನು ವ್ಯರ್ಥವಾಗಿಸದೆಯೇ ಸುಂದರವಾಗಿಸೋಣ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ