ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ರಾಮ ಹಾಗೂ ಸೀತೆ ಮದುವೆಯಾದ ದಿನವನ್ನು ವಿವಾಹ ಪಂಚಮಿಯಾಗಿ ಆಚರಿಸುತ್ತಾರೆ. ಈ ದಿನವನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ವಿವಾಹ ಪಂಚಮಿ ಹಬ್ಬ ಡಿಸೆಂಬರ್ 8ರಂದು ಬುಧವಾರ ಅಂದರೆ ನಾಳೆ ಬಂದಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ ಸೀತಾ ಸ್ವಯಂವರ ಮತ್ತು ಶ್ರೀರಾಮನ ವಿವಾಹವು ಈ ದಿನದಂದೆ ನಡೆದಿತ್ತು. ಈ ದಿನದವು ವಿಶೇಷ ಮಹತ್ವವನ್ನು ಪಡೆದಿದ್ದು ಈ ದಿನ ಭಗವಾನ್ ಶ್ರೀ ರಾಮ ಮತ್ತು ತಾಯಿ ಸೀತೆಯ ಆರಾಧನೆಗೆ ಮಹತ್ವ ಪಡೆದಿದೆ.
ವಿವಾಹ ಪಂಚಮಿ 2021 ಶುಭ ಮುಹೂರ್ತ
ಈ ವರ್ಷದ ವಿವಾಹ ಪಂಚಮಿಯು 2021 ರ ಡಿಸೆಂಬರ್ 07 ರಂದು ರಾತ್ರಿ 11:40 ರಿಂದ ಪ್ರಾರಂಭವಾಗುತ್ತದೆ ಮತ್ತು 2021 ಡಿಸೆಂಬರ್ 08 ರಂದು ರಾತ್ರಿ 09.25 ಕ್ಕೆ ಕೊನೆಗೊಳ್ಳುತ್ತದೆ. ಜನರು ಡಿಸೆಂಬರ್ 8 ರಂದು ದಿನವಿಡೀ ಭಗವಾನ್ ಶ್ರೀ ರಾಮ ಮತ್ತು ಮಾತಾ ಸೀತೆಯನ್ನು ಪೂಜಿಸಬಹುದು.
ವಿವಾಹ ಪಂಚಮಿ 2021 ಪೂಜಾ ವಿಧಾನ
ಈ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಗಂಗಾಜಲವಿರುವ ನೀರಿನಿಂದ ಸ್ನಾನ ಮಾಡಿ. ಈಗ ಆಚಮಾನ ಮಾಡಿದ ನಂತರ, ನಿಮ್ಮನ್ನು ಶುದ್ಧೀಕರಿಸಿಕೊಳ್ಳಿ. ಇದರ ನಂತರ, ಶುಭ್ರವಾದ ಬಟ್ಟೆಗಳನ್ನು ಧರಿಸಿ ಮೊದಲು ಭಾಸ್ಕರ ದೇವರಿಗೆ ನೀರನ್ನು ಅರ್ಪಿಸಿ. ಪೀಠದ ಮೇಲೆ ರಾಮನ ವಿಗ್ರಹ ಅಥವಾ ಚಿತ್ರವನ್ನು ಸ್ಥಾಪಿಸಿ. ನಂತರ ಹಣ್ಣು, ಹೂವು, ಧೂಪ, ದೀಪ, ದುರ್ವಾ ಇತ್ಯಾದಿಗಳಿಂದ ಪೂಜಿಸಬೇಕು. ಈ ದಿನ ರಾಮಚರಿತಮಾನಸ ಅಥವಾ ರಾಮಾಯಣವನ್ನು ಪಠಿಸಬಹುದು. ಅಂತಿಮವಾಗಿ, ಆರತಿ ಮಾಡಿದ ನಂತರ, ಪೂಜೆಯನ್ನು ಪೂರ್ಣಗೊಳಿಸಬೇಕು.
ವಿವಾಹ ಪಂಚಮಿಯ ಮಹತ್ವ
ವಿವಾಹ ಪಂಚಮಿ ದಿನದಂದು ಅಯೋಧ್ಯೆ ಮತ್ತು ಜನಕಪುರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸೀತಾ ಸ್ವಯಂವರ ಮತ್ತು ರಾಮ ವಿವಾಹದ ನಾಟಕಗಳನ್ನು ಈ ದಿನ ಅನೇಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ. ಈ ದಿನದಂದು ಸೀತಾಮಾತೆ ಮತ್ತು ಶ್ರೀರಾಮನನ್ನು ನಿಜವಾದ ಭಕ್ತಿಯಿಂದ ಪೂಜಿಸಿದರೆ ಆಕೆಯ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯೂ ಇದೆ. ಇದರೊಂದಿಗೆ ವಿವಾಹಿತರ ಅದೃಷ್ಟವೂ ಹೆಚ್ಚುತ್ತದೆ.
ಈ ದಿನ ಉಪವಾಸ ಮತ್ತು ಪೂಜೆಯನ್ನು ಮಾಡುವುದರಿಂದ ಭಕ್ತರ ಎಲ್ಲಾ ದುಃಖಗಳು ದೂರವಾಗುತ್ತವೆ ಮತ್ತು ಕುಟುಂಬ ಸಂತೋಷವು ಪ್ರಾಪ್ತಿಯಾಗುತ್ತದೆ. ಈ ದಿನ, ಅವಿವಾಹಿತರು ಭಗವಾನ್ ಶ್ರೀ ರಾಮ ಮತ್ತು ಸೀತಾ ದೇವಿಯನ್ನು ಪದ್ಧತಿಯಂತೆ ಪೂಜಿಸಿ, ಆರಾಧಿಸಿದರೆ ಅವರು ಬಯಸಿದ ಜೀವನ ಸಂಗಾತಿಯನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ.
ವಿವಾಹ ಪಂಚಮಿ ದಿನದಂದು ಮದುವೆಯಾಗುವುದು ಅಶುಭವೇಕೆ?
ಪುರಾಣಗಳಲ್ಲಿ ಈ ದಿನವನ್ನು ಮದುವೆಗೆ ಅಶುಭವೆಂದು ಪರಿಗಣಿಸಲಾಗಿದೆ. ಗ್ರಹಗತಿಗಳು ಶುಭ ಸೂಚನೆಯನ್ನು ನೀಡಿದರೂ ಕೂಡ ಈ ದಿನ ಮದುವೆಯಾಗಬಾರದು ಎನ್ನುವ ನಂಬಿಕೆಯಿದೆ. ಈ ದಿನದಂದು ಮದುವೆಯಾದ ನಂತರ, ಸೀತಾ ಮಾತೆಯ ವೈವಾಹಿಕ ಜೀವನವು ಅತೃಪ್ತವಾಗಿತ್ತು, ಹಾಗಾಗಿ ಈ ದಿನ ವಿವಾಹವಾಗುವುದು ಅಶುಭವೆಂದು ಹೇಳಲಾಗುತ್ತದೆ. ಆದ್ದರಿಂದ ಪೂರ್ವ ಉತ್ತರ ಪ್ರದೇಶ, ಬಿಹಾರ, ಮಿಥಿಲಾಂಚಲ್ ಮತ್ತು ನೇಪಾಳದಲ್ಲಿ ಈ ದಿನ ಮದುವೆ ಸೇರಿದಂತೆ ಮದುವೆಗೆ ಸಂಬಂಧಿಸಿದ ಇನ್ನಿತರ ಕಾರ್ಯಕ್ರಮಗಳನ್ನು ಮಾಡಲಾಗುವುದಿಲ್ಲ.
ಇದನ್ನೂ ಓದಿ: Viral Video: ಹನುಮಂತನ ಪಾದಕ್ಕೆ ನಮಸ್ಕರಿಸಿ ದೇವಸ್ಥಾನದ ಹುಂಡಿಯ ಹಣವನ್ನೇ ಕದ್ದೊಯ್ದ ಕಳ್ಳ! ವಿಡಿಯೊ ವೈರಲ್
ವಿವಾಹ ಪಂಚಮಿ ದಿನ ವಿವಾಹ ಮುಹೂರ್ತಕ್ಕೆ ಸುಯೋಗ! ಆದರೂ ಅಂದು ಮದುವೆ ಮಾಡಲು ಜನ ಹಿಂಜರಿಯುತ್ತಾರೆ, ಏಕೆ?