ಗಗನದಲ್ಲಿ ಮೂಡುವ ಚಂದಿರ ತಿಳಿಸುವ ವಿಚಾರಗಳು ಏನು? ಚಂದ್ರನಗತಿ ಹೇಗೆ? ಚಂದ್ರನ ಬಗ್ಗೆ ಸಂಶೋಧನೆ ಹೇಳಿದ್ದೇನು?
ಚಂದ್ರನು ಸೃಷ್ಟಿಯ ಕುತೂಹಲಕಾರಿ ಗ್ರಹ. ಪ್ರಾಚೀನರ ಪ್ರಕಾರ ಚಂದ್ರನೂ ಒಂದು ಗ್ರಹ; ಉಪಗ್ರಹವಲ್ಲ. ಈ ಚಂದ್ರನ ಕುರಿತು ಆಧುನಿಕ ವಿಜ್ಞಾನ ಅನೇಕ ಸಂಶೋಧನೆಗಳನ್ನು ಮಾಡಿದೆ. ಎಷ್ಟೋ ಸ್ವಲ್ಪ ಯಶಸ್ಸನ್ನೂ ಕಂಡಿದೆ.
ಚಂದ್ರನು ಸೃಷ್ಟಿಯ ಕುತೂಹಲಕಾರಿ ಗ್ರಹ. ಪ್ರಾಚೀನರ ಪ್ರಕಾರ ಚಂದ್ರನೂ ಒಂದು ಗ್ರಹ; ಉಪಗ್ರಹವಲ್ಲ. ಈ ಚಂದ್ರನ ಕುರಿತು ಆಧುನಿಕ ವಿಜ್ಞಾನ ಅನೇಕ ಸಂಶೋಧನೆಗಳನ್ನು ಮಾಡಿದೆ. ಎಷ್ಟೋ ಸ್ವಲ್ಪ ಯಶಸ್ಸನ್ನೂ ಕಂಡಿದೆ. ಆದರೆ ಪ್ರಾಚೀನ ಸಂಶೋಧನೆಯೇನು ಕಡಿಮೆ ಇಲ್ಲ. ಭಾರತೀಯರ ಸಂಶೋಧನೆಯ ವ್ಯಾಪ್ತಿ ಎಷ್ಟು? ಹೇಗೆ ಎನ್ನುವ ಅಂಶವೂ ತಿಳಿಯದು. ವ್ಯವಸ್ಥೆ, ಯಂತ್ರಾದಿಗಳು ಇಲ್ಲದ ಕಾಲದಲ್ಲಿ ಈಗಿನ ಕಂಡುಕೊಂಡ ಎಷ್ಟೋ ವಿಚಾರಗಳನ್ನು ಹಿಂದಿನವರು ಕಂಡುಕೊಂಡಿದ್ದರು. ಭಾರತೀಯ ಸಂಶೋಧನೆ, ಭಾರತೀಯರ ವಿಜ್ಞಾನವು ಈಗಿನ ಕಾಲದವರಿಗೆ ಅರ್ಥವಾಗದ ಕಬ್ಬಿಣದ ಕಡಲೆಯಾಗಿದೆ. ಅವರು ನಡೆಸಿದ ಸಂಶೋಧನೆಯನ್ನು ಬೆನ್ನು ಹತ್ತಿ ಹೊರಟರೆ ಅವಗಿನದಕ್ಕಿಂತ ಭಿನ್ನ ವಿಚಾರಗಳನ್ನು ಹೇಳಬಹುದೇ ವಿನಹ ಇಲ್ಲವಾದರೆ ಚರ್ವಿತ ಚರ್ವಣವೇ ಆದೀತು. ವಿಷಯ ಒಂದೇ, ನೋಡಿದರು ಬೇರೆ, ವಿಧಾನ ಬೇರೆ ಎಂದಾದೀತು ಅಷ್ಟೇ.
ಚಂದ್ರನ ವಿಚಾರಕ್ಕೆ ಬರುವುದಾದರೆ ಚಂದ್ರನಲ್ಲಿ ನೀರಿದೆ ಎನ್ನುವುದನ್ನು ಈಗಿನ ವಿಜ್ಞಾನ ಕೆಲವು ವರ್ಷದಗಳ ಹಿಂದಷ್ಟೇ ಹೇಳಿತು. ಆದರೆ ಜ್ಯೋತಿಷ ಗ್ರಂಥವೊಂದು ಚಂದ್ರನಲ್ಲಿ ನೀರಿರುವ ವಿಚಾರವನ್ನು ಹೇಳಿದೆ.
ಸಲಿಲಮಯೇ ಶಶಿನಿ ರವೇರ್ದೀಧಿತಯೋ ಮೂರ್ಛಿತಾಸ್ತಮೋ ನೈಶಮ್ |
ಕ್ಷಪಯಂತಿ ದರ್ಪಣೋದರನಿಹಿತಾ ಇವ ಮಂದಿರಸ್ಯಾಂತಮ್ ||
ಕನ್ನಡಿಯ ಮೇಲೆ ಬಿದ್ದ ಸೂರ್ಯನ ಬೆಳಕಿನಿಂದ ಮನೆಯ ಒಳಗೆಲ್ಲ ಬೆಳಕಾಗುವಂತೆ, ಸೂರ್ಯನ ಬೆಳಕು ನೀರಿನಿಂದ ಕೂಡಿದ ಚಂದ್ರನ ಮೇಲೆ ಬಿದ್ದು ಭೂಮಿಯನ್ನು ಬೆಳಗುತ್ತದೆ.
ಚಂದ್ರನು ಇರುವ ನಕ್ಷತ್ರ ಹಾಗೂ ಆತನು ಸಂಚರಿಸುವ ದಿಕ್ಕಿನ ಮೇಲೆ ಕೆಲವು ಪರಿಣಾಮಗಳು ಆಗುತ್ತದೆ. ಚಂದ್ರನು ಜ್ಯೇಷ್ಠಾ, ಮೂಲ, ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರವಿದ್ದಾಗ ದಕ್ಷಿಣಭಾಗದಲ್ಲಿ ಸಂಚರಿಸುತ್ತಿದ್ದರೆ, ಬಿತ್ತಿದ ಬೀಜವು ಮೊಳಕೆಯೊಡೆಯದು, ಜಲಚರ ಪ್ರಾಣಿಗಳ ನಾಶ, ವನಗಳ ನಾಶ, ಅಗ್ನಿಭಯವೂ ಆಗುವುದು. ಅದೇ ಉತ್ತರದಿಕ್ಕಿನಲ್ಲಿ ಇದ್ದರೆ ಬೀಜ, ಜಲಚರಪ್ರಾಣಿ ಹಾಗೂ ವನದ ಸಮೃದ್ಧಿಯಾಗಲಿದೆ. ಅಗ್ನಿಭಯವೂ ನಾಶವಾಗುವುದು. ವಿಶಾಖಾ, ಅನುರಾಧ ನಕ್ಷತ್ರದಲ್ಲಿ ಚಂದ್ರನು ದಕ್ಷಿಣ ಭಾಗದಲ್ಲಿ ಸಂಚರಿಸುವಾಗ ಅಶುಭ, ಮಘಾ ಹಾಗೂ ವಿಶಾಖಾ ನಕ್ಷತ್ರದ ಜೊತೆ ಮಧ್ಯಸಂಚರಿಸಿದರೆ ಶುಭಫಲ.
ಇನ್ನು ಚಂದ್ರನಗತಿಯನ್ನು ಅನುಸರಿಸಿ ಯಾವ ಅಂಶಗಳನ್ನು ತಿಳಿದುಕೊಳ್ಳಬಹುದು ಎಂಬುದನ್ನು ನೋಡೋಣ. ಚಂದ್ರನು ಪೂರ್ಣಚಂದ್ರನಲ್ಲದೇ ಇರುವಾಗ ಎರಡು ಶೃಂಗಗಳು (ಕೋಡು) ಕಾಣಿಸುತ್ತವೆ. ಅದರಲ್ಲಿ ಯಾವುದಾದರೂ ಒಂದು ಶೃಂಗವು ಸಮಾನವಾಗಿರದೇ ಸ್ವಲ್ಪ ಮೇಲಿದ್ದರೆ ದೋಣಿಯಂತೆ ವಿಶಾಲವಾಗಿ ಕಂಡರೆ ನಾವಿಕರಿಗೆ ತೊಂದರೆ, ಉಳಿದ ಎಲ್ಲ ವರ್ಗಗಳಿಗೂ ಶುಭವಾಗಲಿದೆ. ಹಾಗಯೇ ಶೃಂಗದ ಅರ್ಧಭಾಗವು ಮೇಲಿದ್ದರೆ ಅದನ್ನು ಲಾಂಗಲಸಂಸ್ಥಾ ಎನ್ನುವರು.
ಚಂದ್ರನ ಎರಡೂ ಶೃಂಗಗಳೂ ಸಮಾನವಾಗಿದ್ದರೆ,
ಸಮಶಶಿನಿ ಸುಭಿಕ್ಷಕ್ಷೇಮವೃಷ್ಟಯಃ ಪ್ರಥಮದಿವಸಸದೃಶಾಃ ಸ್ಯುಃ |
ದಂಡವದುದಿತೇ ಪೀಡಾ ಗವಾಂ ನೃಪಶ್ಚೋಗ್ರದಂಡೋತ್ರ ||
ಒಳ್ಳೆಯ ಮಳೆ, ಬೆಳೆಗಳಾಗಿ ಪ್ರತಿಪತ್ ದಿವಸದಂತೆ ಎಲ್ಲ ಕಡೆಗಳಲ್ಲಿ ಸಮೃದ್ಧಿಯು ಒಂದು ತಿಂಗಳುಗಳ ಕಾಲ ಇರಲಿದೆ. ಅದೇ ಚಂದ್ರನು ದಂಡಾಕಾರವಾಗಿ ಕಂಡರೆ ಗೋವುಗಳಗೆ ತೊಂದರೆ, ರಾಜನೂ ಬಹಳ ಕ್ರೂರವಾದ ಶಿಕ್ಷೆಯನ್ನು ವಿಧಿಸುವವನಾಗುತ್ತಾನೆ.
ಚಂದ್ರನ ಸಂಚಾರದಿಂದ ಯುದ್ಧವನ್ನೂ ಹೇಳುತ್ತಿದ್ದರೂ. ಯಾರಿಗೆ ಜಯ, ಯಾರಿಗೆ ಅಪಜಯ ಮೊದಲಾದ ಲಕ್ಷಣಗಳನ್ನು ಚಂದ್ರನ ಆಧಾರದ ಮೇಲೆ ಹೇಳುತ್ತಿದ್ದರು ಎಂದರೆ ನಂಬಲು ಅಸಾಧ್ಯವಾದೀತು. ಚಂದ್ರನು ಧನುಸ್ಸಿನ ಆಕಾರದಲ್ಲಿ ಆಕಾಶದಲ್ಲಿ ಗೋಚರವಾದರೆ ಆ ರಾಜ್ಯವು ಯುದ್ಧವನ್ನು ಎದುರಿಸಿಬೇಕು ಎಂದರ್ಥ. ಧನುಸ್ಸಿನ ಆಕಾರದ ಚಂದ್ರನಲ್ಲಿ ಶಿಂಜಿನೀ ಅಂದರೆ ಧನುಸ್ಸನ್ನು ಹೆದೆಯೆರಿಸು ದಾರ. ಅದು ಯಾವ ದಿಕ್ಕಿನಲ್ಲಿದೆ ಎಂಬುದನ್ನು ನೋಡಿ ಆ ದಿಕ್ಕಿನ ರಾಜರು ವಿಜಯಿಯಾಗುವರು ಎನ್ನುತ್ತದೆ.
ಯುಗಸಂಸ್ಥಾನ ಎನ್ನುವ ಇನ್ನೊಂದು ಲಕ್ಷಣವಿದೆ. ಇದು ಭೂಕಂಪನವನ್ನು ಹೇಳುತ್ತದೆ. ಚಂದ್ರನ ಎರಡು ಶೃಂಗಗಳು ಉತ್ತರ ಮತ್ತು ದಕ್ಷಿಣಕ್ಕೆ ಹೆಚ್ಚು ಹೋಗಿದ್ದರೆ ಭೂಕಂಪವು ಆಗುತ್ತದೆ ಎಂದು ತಿಳಿಯಬೇಕು. ಪ್ರಾಚೀನರು ಸೃಷ್ಟಿಯಲ್ಲಿ ಆಗುವ ವ್ಯತ್ಯಾಸಗಳನ್ನು ಸೃಷ್ಟಿಯ ಮೂಲಕವೇ ತಿಳಿಯುತ್ತಿದ್ದರು. ಅಂತಹ ಒಂದು ವಿಧಾನವನ್ನು ಆನ್ವೇಷಣೆ ಮಾಡಿಕೊಟ್ಟಿದ್ದಾರೆ.
ಯುಗಸಂಸ್ಥಾನದಲ್ಲಿಯೇ ಸ್ವಲ್ಪ ವ್ಯತ್ಯಾಸವಾದರೆ ಅಂದರೆ ಉತ್ತರಶೃಂಗಕ್ಕಿಂತ ದಕ್ಷಿಣಶೃಂಗವು ಸ್ವಲ್ಪ ಮೇಲಿದ್ದರೆ ಧನಿಕರಿಗೆ ಆಪತ್ತು ವೃಷ್ಟಿಯೂ ನಾಶವಾಗುವುದು. ಇದನ್ನು ಪಾರ್ಶ್ವಶಾಯೀ ಸಂಸ್ಥಾನ ಎಂದು ಕರೆದಿದ್ದಾರೆ.
ಅಧೋಮುಖಂ ಯದಾ ಶೃಂಗಂ ಶಶಿನೋ ದೃಶ್ಯತೇ ಯದಾ |
ಸಂಸ್ಥಾನಮಾವರ್ಜಿತಕಂ ಗೋಘ್ನಂ ದುರ್ಭಿಕ್ಷಕಾರಕಮ್ ||
ಚಂದ್ರನ ಶೃಂಗಗಳು ಅಧೋಮುಖವಾಗಿದ್ದರೆ ಅದನ್ನು ಅವಾರ್ಜಿತಸಂಸ್ಥಾನವೆಂದು ಕರೆಯುತ್ತಾರೆ. ಇದರಿಂದ ಗೋವುಗಳ ನಾಶವೂ ಅವುಗಳಿಗೆ ಆಹಾರಾದಿಗಳು ಇಲ್ಲದಂತೆಯೂ ಆಗುತ್ತದೆ.
ಇವೆಲ್ಲವೂ ಕೇವಲ ಚಂದ್ರನ ವಿಶೇಷಲಕ್ಷಣದಿಂದ ಉಂಟಾಗುವ ವಿಚಾರವಾದರೆ ಇನ್ಮು ಕುಜ, ಬುಧ, ಗುರು, ಶನಿ, ಶುಕ್ರ ಇವುಗಳ ಯುತಿಯಿಂದ ಸೃಷ್ಟಿಯ ಮೇಲೆ ಉಂಟಾಗುವ ಪರಿಣಾಮವನ್ನು ಹಿಂದಿನ ಕಾಲದಲ್ಲಿ ಕಂಡುಕೊಂಡಿದ್ದರು.
ಇದನ್ನೆಲ್ಲವನ್ನು ನೋಡುವಾಗ ಮನುಷ್ಯನು ಪ್ರಕೃತಿಯ ಜೊತೆ ಎಷ್ಟು ಅನ್ಯೋನ್ಯ ಭಾವದಿಂದ ಜೀವನವನ್ನು ಸಾಗಿಸುತ್ತಿದ್ದರು, ಪ್ರಕೃತಿಯ ಪ್ರತಿಯೊಂದು ಚಲನೆಯನ್ನು ಸ್ಪಷ್ಟವಾಗಿ ಅರಿತುಕೊಳ್ಳುತ್ತಿದ್ದರು ಎಂಬುದು ಅರ್ಥವಾಗುತ್ತದೆ. ಆದರೆ ಅಂತಹ ಶೋಧನೆಯನ್ನು ಮಾಡಲಾಗದು, ಮಾಡಿದ ಶೋಧನೆಯ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡದೇ ತಮ್ಮದೇ ಆದ ದಾರಿಯಲ್ಲಿ ಹೋಗಿ ಪ್ರಾಚೀನರು ಕಂಡುಕೊಂಡ ವಿಷಯವನ್ನೇ ತಾವೇನೋ ಹೊಸದನ್ನು ಕಂಡುಹಿಡಿದಿದ್ದು ಎನ್ನುವ ಮಟ್ಟದಲ್ಲಿ ಹೇಳಿಕೊಳ್ಳುವುದು ಎಷ್ಟು ಸರಿ?
-ಲೋಹಿತಶರ್ಮಾ