Vastu Tips: ವಾಸ್ತವವಾಗಿ ವಾಸ್ತು ಎಂದರೇನು? ಅಗ್ನಿಮೂಲೆ, ದೇವಮೂಲೆ ಬಗ್ಗೆ ಇಲ್ಲಿದೆ ಮಾಹಿತಿ

ವರ್ತಮಾನಕಾಲದಲ್ಲಿ ಯಾರೇ ಹೊಸ ಮನೆಯ ಕೆಲಸ ಆರಂಭಿಸಲಿ ಆಪ್ತರು, ಸಂಬಂಧಿಗಳು ಕೇಳುವ ಪ್ರಶ್ನೆ ವಾಸ್ತು ನೋಡಿದ್ದೀಯಾ ? ಅಷ್ಟೇ ಏಕೆ ಬಾಡಿಗೆಯ ಮನೆಯ ಅನ್ವೇಷಣೆ ಮಾಡುವವರೂ ಮನೆ ವಾಸ್ತು ಹೇಗಿದೆ ಎನ್ನುವರು.

Vastu Tips: ವಾಸ್ತವವಾಗಿ ವಾಸ್ತು ಎಂದರೇನು? ಅಗ್ನಿಮೂಲೆ, ದೇವಮೂಲೆ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 17, 2023 | 11:38 AM

ವರ್ತಮಾನಕಾಲದಲ್ಲಿ ಯಾರೇ ಹೊಸ ಮನೆಯ ಕೆಲಸ ಆರಂಭಿಸಲಿ ಆಪ್ತರು, ಸಂಬಂಧಿಗಳು ಕೇಳುವ ಪ್ರಶ್ನೆ ವಾಸ್ತು ನೋಡಿದ್ದೀಯಾ ? ಅಷ್ಟೇ ಏಕೆ ಬಾಡಿಗೆಯ ಮನೆಯ ಅನ್ವೇಷಣೆ ಮಾಡುವವರೂ ಮನೆ ವಾಸ್ತು ಹೇಗಿದೆ ಎನ್ನುವರು. ಹಾಗಾದರೆ ವಾಸ್ತವವಾಗಿ ವಾಸ್ತುಎಂದರೇನು? ವಸ ನಿವಾಸೆ ಎಂಬ ಕ್ರಿಯಾಪದದಿಂದ ವಾಸ್ತು ಎಂಬ ಶಬ್ದದ ಉತ್ಪತ್ತಿಯಾಗಿದೆ. ವಸ ನಿವಾಸೆ ಅಂದರೆ ವಾಸಕ್ಕಾಗಿ ನಿರ್ಮಿಸುವ ಭವನ ಮತ್ತು ಅದರ ಸ್ವರೂಪ ಎಂದು ಅರ್ಥ. ವಾಸ್ತುವೆಂದರೆ “ಗೃಹಕರಣ ಯೋಗ್ಯ ಭೂಮಿಃ ಎಂಬುದಾಗಿ ಶಾಸ್ತ್ರದಲ್ಲಿ ಉಲ್ಲೇಖವಿದೆ. ತಾತ್ಪರ್ಯವೇನೆಂದರೆ ಮನೆ, ಕಟ್ಟಡ ನಿರ್ಮಿಸಲು ಯೋಗ್ಯವಾದ ಸ್ಥಳ ಎಂದು.

ಈಗ ನಮಗೆ ಸಂದೇಹ ಮೂಡುತ್ತದೆ. ಹಾಗಾದರೆ ಅಗ್ನಿಮೂಲೆ, ದೇವಮೂಲೆ ಇತ್ಯಾದಿ ಹೇಳುತ್ತಾರಲ್ಲವೇ ಅದು ಏನು? ವಾಸ್ತುವಲ್ಲವೇ ಎಂದು. ಈಗ ಒಂದು ಕಥೆಯನ್ನು ನೋಡೋಣ ಭೂಲೋಕದಲ್ಲಿ ಒಬ್ಬ ದಾನವ ಸಾತ್ವಿಕ ಜನರಿಗೆ ಹಿಂಸಿಸುತ್ತಿದ್ದ. ಅವನಿಗೆ ಬ್ರಹ್ಮನ ವರದ ಬಲವಿತ್ತು ಅಜೇಯನಾಗು ಎಂದು. ಇವನ ಉಪಟಳ ತಡೆಯಲಾಗದ ತಪಸ್ವಿಗಳು ವಿಷ್ಣುವನ್ನು ಪ್ರಾರ್ಥಿಸುತ್ತಾರೆ. ಅವನು ಒಂದು ಉಪಾಯವನ್ನು ಹೇಳುತ್ತಾನೆ ನೀವುಗಳು ಆ ದಾನವನನ್ನು ಭೂಮಿಯಲ್ಲಿ ಮಲಗುವಂತೆ ಮಾಡಿರಿ. ಮುಂದಿನ ವಿಚಾರ ನನಗೆ ಬಿಡಿ ಎಂದು. ವಿಷ್ಣುವಿನ ಮಾತಿನಂತೆ ತಪಸ್ವಿಗಳೆಲ್ಲಾ ಹೇಗೋ ಕಷ್ಟಪಟ್ಟು ಉಪಾಯದಿಂದ ಅವನನ್ನು ಭೂಮಿಯಲ್ಲಿ ಮಲಗುವಂತೆ ಮಾಡಿದರು. ತಕ್ಷಣದಲ್ಲಿ ಬ್ರಹ್ಮನೇ ಮೊದಲಾದ ಐವತ್ತಮೂರು ದೇವತೆಗಳು ಅವನ ಹೃದಯ ಭಾಗದಿಂದ ಆರಂಭಿಸಿ ಕ್ರಮವಾಗಿ ಕುಳಿತುಕೊಳ್ಳುತ್ತಾರೆ.

ಇವರ ಭಾರ ತಡೆಯಲಾಗದ ದಾನವನಿಗೆ ಅವನ ತಪ್ಪಿನ ಅರಿವಾಗಿ ಕ್ಷಮೆಯನ್ನು ಯಾಚಿಸುತ್ತಾನೆ. ಅವನ ಪಶ್ಚಾತ್ತಾಪಕ್ಕೆ ಮನಸೋತ ಕರುಣಾಮಯಿಗಳಾದ ಬ್ರಹ್ಮಾದಿ ಐವತ್ತಮೂರು ದೇವತೆಗಳು ಅವನನ್ನು ಕ್ಷಮಿಸುತ್ತಾರೆ. ಅಲ್ಲದೇ ಅವನಿಗೆ ಒಂದು ಹೊಣೆಯನ್ನು ವಹಿಸುತ್ತಾರೆ. ಇಂದಿನಿಂದ ನಿನ್ನ ವಾಸ ಭೂಮಿಯಲ್ಲಿ ಯಾರು ಭವನ ನಿರ್ಮಾಣ ಮಾಡುತ್ತಾರೋ ಅಲ್ಲಿ. ನಿನ್ನ ಹೆಸರು ಇಂದಿನಿಂದ ವಾಸ್ತುಪುರುಷನೆಂದು. ಯಾರು ಮನೆಯ ಪ್ರವೇಶಕಾಲದಲ್ಲಿ ವಾಸ್ತು ಮಂಡಲವನ್ನು ಬರೆದು ಬಲಿಯನ್ನು ನೀಡುತ್ತಾರೋ ಅದೇ ನಿನ್ನ ಆಹಾರ. ಹಾಗೆಯೇ ಅವರುಗಳಿಗೆ ಕೆಡುಕಾಗದಂತೆ ಕಾಯುವುದು ನಿನ್ನ ಕರ್ತವ್ಯ ಎಂದು ಆಜ್ಞಾಪಿಸುತ್ತಾರೆ.

ಇದನ್ನೂ ಓದಿ: Vastu Tips for Money: ಹೆಚ್ಚು ಹಣ ಗಳಿಸಲು, ಕನಸಿನ ಉದ್ಯೋಗ ನಿಮ್ಮದಾಗಿಸಿಕೊಳ್ಳಲು ಈ ವಾಸ್ತು ಟಿಪ್ಸ್ ಅನುಸರಿಸಿ

ಅಂದಿನಿಂದ ಅವನು ಭೂಲೋಕದಲ್ಲಿವಾಸ್ತುಪುರುಷನಾಗಿ ಪ್ರಸಿದ್ಧನಾಗುತ್ತಾನೆ. ವಾಸ್ತು ಎಂಬ ಶಬ್ದದ ಅರ್ಥ ಮಂಗಲ / ಶುಭ ಎಂದು. ಅದಕ್ಕೇ ಶಾಸ್ತ್ರದಲ್ಲಿ ಹೇಳುತ್ತಾರೆ. ವಾಸ್ತು ಸಂಕ್ಷೇಪತೋ ವಕ್ಷ್ಯೇ ಗೃಹಾದೌ ವಿಘ್ನನಾಶನಮ್ ಎಂದು. ಅರ್ಥಾತ್ ಮನೆಗಳಲ್ಲಿ ವಿಘ್ನವುಂಟಾಗದಂತೆ ಮಂಗಲಪ್ರದವಾಗಿ ಕಾಯುವವನು ವಾಸ್ತು ಎಂದು.

ಈ ವಾಸ್ತು ಪುರುಷನ ತಲೆ ಈಶಾನ ಭಾಗದಲ್ಲಿರುದರಿಂದ ಮತ್ತು ಭಗವಂತನ ಸ್ಥಾನ ಎತ್ತರವಾದ್ದರಿಂದ ಈಶಾನ್ಯ ಮೂಲೆಯನ್ನು ಭಗವಂತನ ಸ್ಥಾನ ಎನ್ನುವರು. ಕೆಲವರು ಮನೆಯ ಮಧ್ಯಭಾಗವನ್ನು ದೇವರ ಮನೆ ಮಾಡುವವರೂ ಇದ್ದಾರೆ. ಇದೂ ತಪ್ಪಲ್ಲ ಏಕೆಂದರೆ ವಾಸ್ತುವಿನ ಮಧ್ಯಭಾಗದಲ್ಲಿ ಸೃಷ್ಟಿಕರ್ತನಾದ ಬ್ರಹ್ಮನ ಸ್ಥಾನವಾದ್ದರಿಂದ ಮಧ್ಯಭಾಗದಲ್ಲಿ ದೇವರ ಕೋಣೆ ಮಾಡಬಹುದು. ವಾಸ್ತು ಪುರುಷನ ಎರಡು ಕಾಲುಗಳು ನೈಋತ್ಯ ಭಾಗದಲ್ಲಿ ದೃಢವಾಗಿ ಊರಿರುವುದರಿಂದ ಆ ದಿಕ್ಕು ಯಜಮಾನನ ವಾಸಕ್ಕೆ ಉತ್ತಮ. ಮನುಷ್ಯ ಗಟ್ಟಿಯಾಗಿ ನಿಲ್ಲಲು ಕಾಲಿನ ಆಧಾರ ಬೇಕಾಗಿರುವುದನ್ನು ಇಲ್ಲಿ ಗಮನಿಸಿ ಹಾಗೆ ಹೇಳಿರುವ ಸಾಧ್ಯತೆಯಿದೆ.

ಇದರೊಂದಿಗೆ ವಾಸ್ತು ವಾಸ್ತುವಾಗಿರಬೇಕಾದರೆ ಆರ್ಥಾತ್ ವಾಸ್ತು ಅಂದರೆ ಶುಭ. ವಾಸ್ತು (ಶುಭ) ಶುಭವಾಗಿರಬೇಕಾದರೆ ಮನೆಯಲ್ಲಿ ಒಳ್ಳೆಯ ಮಾತುಗಳಾಡಬೇಕು, ಅತಿಥಿ ಸತ್ಕಾರಗಳು ನಡೆಯಬೇಕು, ದೇವತಾಕಾರ್ಯಗಳು ನಡೆಯಬೇಕು, ಮುತ್ತೈದೆಯರು ಬಾಗಿಲಿಗೆ ದೀಪವಿಡಬೇಕು, ರಂಗವಲ್ಲಿ ಹಾಕಬೇಕು ಇತ್ಯಾದಿಗಳು ಕ್ರಮಬದ್ಧವಾಗಿ ಇದ್ದರೆ ಮಾತ್ರ ಮನೆ ಮನೆಯಾಗುವುದು ಮತ್ತು ವಾಸ್ತು ವಾಸ್ತುವಾಗಿರುವುದು. ಇಲ್ಲವಾದಲ್ಲಿ ಎಷ್ಟೇ ಕ್ರಮವಾದ ರೀತಿಯಲ್ಲಿ ಭವನ ನಿರ್ಮಾಣ ಮಾಡಿದರೂ ನೆಮ್ಮದಿ ಕಾಣುವುದು ಕಷ್ಟ.

ಕಛೇರಿ ಇತ್ಯಾದಿಗಳಲ್ಲೂ ಹಾಗೇ ಅನಗತ್ಯ ಸಿಟ್ಟು, ಅತಿಯಾದ ಸ್ವಾರ್ಥ ಇತ್ಯಾದಿ ಕಾರಣಗಳೂ ಶುಭದ ಹರಣವನ್ನು ಮಾಡುತ್ತವೆ. ಅದಕ್ಕೋಸ್ಕರವೇ ಮನೆಯಲ್ಲಿ/ ಕಛೇರಿಯಲ್ಲಿ ತುಳಸಿ ಇತ್ಯಾದಿ ಗಿಡಗಳು, ಸುಂದರವಾದ ಚಿತ್ರಗಳು ಇರಬೇಕು. ಅದರಿಂದ ನಮ್ಮ ಮನಸ್ಸು ಶುಭ್ರವಿರುತ್ತದೆ. ಮನಸ್ಸಿನ ಶುಭ್ರತೆಯಿಂದ ಕಾರ್ಯಗಳೆಲ್ಲಾ ಮಂಗಲವಾಗುತ್ತದೆ. ಅರ್ಥಾತ್ ವಾಸ್ತುವಿನ ಅರ್ಥ ವಾಸ್ತವಾಗಿ ಸಾರ್ಥಕವಾಗುತ್ತದೆ.

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು

Published On - 11:33 am, Fri, 17 February 23