ವರ್ಷದಲ್ಲಿ ದೇವತೆಗಳ ಆರಾಧನೆ ಹೆಚ್ಚಿರುತ್ತದೆ. ಇದರ ನಡುವೆ ಪಿತೃಗಳ ಆರಾಧನೆಯೂ ಇರಲಿದೆ. ಇದನ್ನು ಪ್ರಾಚಿನರು ನಿಯಮವನ್ನು ಹಾಕಿಕೊಟ್ಟಿದ್ದಾರೆ.
ಮನುಷ್ಯನು ಜನಿಸಿದ ಕೂಡಲೇ ಮೂರು ಋಣಗಳು ಮನುಷ್ಯನಲ್ಲಿ ಸೇರಿಕೊಳ್ಳುತ್ತವೆ. ದೇವ ಋಣ, ಋಷಿ ಋಣ, ಪಿತೃ ಋಣಗಳನ್ನು ಮನುಷ್ಯನು ತೀರಿಸಲೇಬೇಕು.
ದೇವ ಋಣವನ್ನು ದೇವತೆಗಳ ಪೂಜೆ, ಯಜ್ಞ, ವ್ರತಗಳ ಮೂಲಕ ತೀರಿಸಲು ಸಾಧ್ಯ. ಋಷಿ ಋಣವನ್ನು ಜ್ಞಾನ ಸಂಪಾದನೆ, ವಿದ್ಯಾಭ್ಯಾಸದ ಮೂಲಕ ತೀರಿಸಲು ಸಾಧ್ಯ. ಪಿತೃ ಋಣವನ್ನು ಸಂತಾನವನ್ನು ಪಡೆಯುವುದು, ದಾನ ಮಾಡುವುದರಿಂದ ತೀರಿಸಬಹುದು. ಇದರ ಮುಂದುವರಿಕೆ ಶ್ರಾದ್ಧ ಮಾಡುವುದು. ತರ್ಪಣಗಳನ್ನು ನೀಡುವುದು.
ವರ್ಷದಲ್ಲಿ ಒಂದು ದಿನ ಪಿತೃಗಳಿಗೆ ಮಾಡುವ ಶ್ರಾದ್ಧ ಒಂದಾದರೆ, ಇಡೀ ವರ್ಷದಲ್ಲಿ ಒಮ್ಮೆ ಎಲ್ಲ ಪಿತೃಗಳ ತೃಪ್ತಿಗೋಸ್ಕರ ಮಾಡುವ ದಿನಗಳು ಇವೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಪ್ರತಿಪತ್ ನಿಂದ ಅಮಾವಾಸ್ಯೆಯವರೆಗಿನ ಕಾಲವನ್ನು ಪಿತೃಪಕ್ಷ ಎಂಬುದಾಗಿ ಕರೆದು, ಕೊನೆಯ ದಿನವನ್ನು ಸರ್ವಪಿತೃ ಅಮಾವಾಸ್ಯಾ ಎನ್ನುವರು.
ಈ ಪಕ್ಷದಲ್ಲಿ ಯಾರಿಗೆಲ್ಲ ತರ್ಪಣವನ್ನು ಕೊಡಬೇಕು, ಶ್ರಾದ್ಧ ಮಾಡಬೇಕು ಎನ್ನುವುದನ್ನು ಪುರಾಣಗಳು ತಿಳಿಸುತ್ತವೆ.
ಉಪಾಧ್ಯಾಯ, ಗುರು, ಹೆಣ್ಣಕೊಟ್ಟ ಮಾವ, ದೊಡ್ಡಪ್ಪ, ಚಿಕ್ಕಪ್ಪ, ಆಚಾರ್ಯ, ಸೋದರ ಮಾವ, ಮಾವನ ಅಣ್ಣ ತಮ್ಮ, ಅವರ ಮಕ್ಕಳು, ಶಿಷ್ಯ, ಯಜ್ಞ ಕರ್ಮಗಳನ್ನು ಮಾಡಿಸುವವನು, ಪೋಷಣೆ ಮಾಡಿದವರು, ತಂಗಿ, ಕೆಲಸ, ಸಂಪತ್ತು ನೀಡಿ ಆಸರೆ ಕೊಟ್ಟವರು, ಮಗಳು, ಅಳಿಯ, ತಾಯಿಯ ತಂಗಿಯ ಮಕ್ಕಳು, ತಂದೆ, ತಂದೆಯ ಪತ್ನಿ, ತಂದೆಯ ತಾಯಿ ಅಥವಾ ತಂದೆಯ ತಂಗಿ ಇವರೆಲ್ಲರಿಗೂ ತರ್ಪಣಾದಿಗಳನ್ನು ಕೊಡಬೇಕು.
ಇದನ್ನೂ ಓದಿ: ಶನಿ ದೇವ ಸ್ತ್ರೀ ರೂಪದಲ್ಲಿ ಇರುವ ಆಂಜನೇಯಸ್ವಾಮಿ ದೇವಾಲಯ ಎಲ್ಲಿದೆ? ಏನಿದರ ವಿಶೇಷ
ಪ್ರಾತಃಕಾಲದಲ್ಲಿ ದೇವಾರಾಧನೆ, ಪಿತೃಗಳ ಕಾರ್ಯವನ್ನು ಮಾಡಲು ಉಪಯುಕ್ತವಾದ ಕಾಲವೆಂದರೆ ಮಧ್ಯಾಹ್ನ. ಅಪರಾಹ್ಣದ ಅನಂತರ ಪಿಂಡಪ್ರದಾನ ಮಾಡುವುದು ಪಿತೃಗಳ ಪ್ರೀತಿಗೆ ಕಾರಣವಾಗಲಿದೆ.
ಶ್ರಾದ್ಧಕರ್ಮಕ್ಕೆ ಮುಖ್ಯವಾಗಿ ತಂದೆ ಅಥವಾ ತಾಯಿ ಇಲ್ಲದವರು ಮಾತ್ರ ಮಾಡಬೇಕಾಗುವುದು. ಹಾಗೆಯೇ ಬದುಕಿರುವ ಯಾವ ವ್ಯಕ್ತಿಗಳಿಗೂ ಶ್ರಾದ್ಧ ಹಾಗೂ ತರ್ಪಣ ಕೊಡುವಂತಿಲ್ಲ. ಮೃತರಾದವರಿಗೆ ಮಾತ್ರ ಈ ಮಹಾಲಯ ಶ್ರಾದ್ಧ ಕರ್ಮವನ್ನು ಮಾಡಬಹುದು.
ಇದು ಕೃತಜ್ಞತೆಯ ಮುಂದಿನ ಇದು. ಬದುಕಿರುವಾಗ ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರಗಳು ಇರುತ್ತದೆ. ಅದು ಲೌಕಿಕವಾಗಿ ತೋರಿಸುವ ಗೌರವ. ಮೃತರಾದ ಅನಂತರವೂ ಅವರ ಜೀವಕ್ಕೆ ಸದ್ಗತಿ, ಉತ್ತಮ ಸ್ಥಾನವನ್ನೂ ಬಯಸಬೇಕು. ಆದರೆ ಅದನ್ನು ಅಲೌಕಿಕ ಕ್ರಿಯೆಗಳ ಮೂಲಕ ಸಾಧ್ಯ. ಪಿಂಡವನ್ನು ಕೊಡುವುದು ಹಸಿವಿನಿಂದ ತೃಪ್ತಿ ಸಿಕ್ಕರೆ, ತರ್ಪಣವು ಪ್ರಾಣಬಿಟ್ಟವರ ದಾಹವನ್ನು ತಣಿಸುತ್ತದೆ.
ಗೋತ್ರ, ಹೆಸರು ಹಾಗೂ ಸಂಬಂಧಗಳನ್ನು ಹೇಳಿ ತರ್ಪಣವನ್ನು ಬಿಡಬೇಕು. ಹೀಗೆ ಬಿಡುವಾಗ ಮೂರು ಬಾರಿ ಹೇಳಬೇಕು. ಒಂದು ಬಾರಿ ದೇವರಿಗೆ, ಎರಡು ಬಾರಿ ಋಷಿಗಳಿಗೆ, ಮೂರು ಬಾರಿ ಪಿತೃಗಳಿಗೆ.
ಯಾರು ಶ್ರಾದ್ಧವನ್ನು ಮಾಡುವರೋ ಅವರಿಗೆ ಮುಖ್ಯ ಶ್ರದ್ಧೆ. ಕಾಯೇನ ವಾಚಾ ಮನಸಾ ಒಂದೇ ಕರ್ಮವನ್ನು ಮಾಡುವುದು ಶ್ರದ್ಧೆ. ಇದಕ್ಕಿಂತ ಮುಖ್ಯವಾಗಿ ಮೃತ ಜೀವರುಗಳು ಸದ್ಗತಿ ಪಡೆಯಲಿ ಎಂಬ ದೃಢ ವಿಶ್ವಾಸ ಇರುವುದು.
ಒಟ್ಟಿನಲ್ಲಿ ಮನುಷ್ಯರ ಬದುಕಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುವ ಅವರ ಋಣವನ್ನು ತೀರಿಸುವುದು. ಇದು ಒಂದಾದರೆ ಮಕ್ಕಳಿಲ್ಲದೇ ಮುಂದಿನ ಗತಿಯು ಕಷ್ಟವಾಗಲೂಬಹುದು. ಅಂತಹವರಿಗೆ ಒಂದಲ್ಲ ಒಂದು ರೀತಿಯಲ್ಲಿ ಅವರಿಗೆ ಸದ್ಗತಿಯನ್ನು ಕೊಡುವ, ಅವರ ಕಷ್ಟವನ್ನು ನಿವಾರಿಸುವ, ಅವರಿಗೆ ಉಪಕರಿಸುವ ಮಾರ್ಗವೇ ಆಗಿದೆ.
ಹಿರಿಯರು ಇದನ್ನೆಲ್ಲ ಮನಗಂಡು ವರ್ಷದಲ್ಲಿ ಅದಕ್ಕಾಗಿ ಒಂದು ಪಕ್ಷವನ್ನೂ ಇಟ್ಟಿದ್ದಾರೆ.
ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
-ಲೋಹಿತ ಹೆಬ್ಬಾರ್ – 8762924271