AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Acharya Chanakya: ಚರ್ಚೆ ಹೇಗಿರಬೇಕು? ಯಾರೊಂದಿಗೆ ಚರ್ಚಿಸಬೇಕು? ಸಾತ್ವಿಕ ಚರ್ಚೆ ಹೇಗಿರುತ್ತದೆ? ಈ ಕುರಿತಾಗಿ ಆಚಾರ್ಯ ಚಾಣಕ್ಯರ ಅಭಿಪ್ರಾಯ ಹೇಗಿದೆ?

ಯೋಚಿಸಿ ಚರ್ಚೆ ಹೇಗಿರಬೇಕು? ಯಾರೊಂದಿಗೆ ಚರ್ಚಿಸಬೇಕು? ಯಾವುದಕ್ಕಾಗಿ ಚರ್ಚಿಸಬೇಕು? ತತ್ವಜ್ಞಾನ ಅಥವಾ ಶುದ್ಧ ಅಭಿಪ್ರಾಯ ಯಾವ ಚರ್ಚೆಯಿಂದ ಯಾರ ಚರ್ಚೆಯಿಂದ ಸಿಗಬಲ್ಲದು ಎಂದು.

Acharya Chanakya: ಚರ್ಚೆ ಹೇಗಿರಬೇಕು? ಯಾರೊಂದಿಗೆ ಚರ್ಚಿಸಬೇಕು? ಸಾತ್ವಿಕ ಚರ್ಚೆ ಹೇಗಿರುತ್ತದೆ? ಈ ಕುರಿತಾಗಿ ಆಚಾರ್ಯ ಚಾಣಕ್ಯರ ಅಭಿಪ್ರಾಯ ಹೇಗಿದೆ?
ಸಾಂದರ್ಭಿಕ ಚಿತ್ರ
ಡಾ. ಗೌರಿ ಕೇಶವಕಿರಣ
| Edited By: |

Updated on: Jun 20, 2023 | 9:48 AM

Share

ಪ್ರಾಚೀನ ತತ್ವ ಶಾಸ್ತ್ರದಲ್ಲಿ ಒಂದು ಮಾತಿದೆ – “ವಾದೇ ವಾದೇ ಜಾಯತೇ ತತ್ವ ಬೋಧಃ” ಎಂದು. ತಾತ್ಪರ್ಯ ಹೀಗಿದೆ “ಚರ್ಚೆಗಳನ್ನು ಮಾಡುತ್ತಾ ಇದ್ದರೆ ಉತ್ತಮ ಜ್ಞಾನ ಪ್ರಾಪ್ತಿಯಾಗುತ್ತದೆ” ಎಂಬುದಾಗಿ. ಜೀವನದಲ್ಲಿ ಸನಾತನ ಧರ್ಮದ ಆಚರಣೆಗಳೆಲ್ಲಾ ಸುಲಭವಾಗಿ ನಮ್ಮ ಬುದ್ಧಿಗೆ ನಿಲುಕುವಂತಹದ್ದಲ್ಲ. ಆದ ಕಾರಣ ಹಲವಾರು ಆಚರಣೆಗಳ ತಾತ್ವಿಕ ಹಿನ್ನೆಲೆಯ ಅರಿವು ನಮಗಿಲ್ಲ. ಕಾರಣವಿಷ್ಟೇ ಅದನ್ನು ವಿಮರ್ಶಿಸುವ ಮನಸ್ಸು ಸಮಯ ನಮ್ಮಲ್ಲಿಲ್ಲ ಎಂಬುದು ನಾವು ಒಪ್ಪಿಕೊಳ್ಳಲೇ ಬೇಕಾದ ವಾಸ್ತವ ಸತ್ಯ. ಉಪನಿಷತ್ ಕಾಲದಿಂದಲೂ ಯಾರೂ ಹೇಳಿದಾಕ್ಷಣ ಪ್ರಶ್ನಿಸದೇ ಒಪ್ಪಬೇಕು ಎಂಬ ಹೇರಿಕೆ ಸನಾತನ ಪದ್ಧತಿಯಲ್ಲಿ ಕಂಡು ಬಂದಿಲ್ಲ. ಆದ ಕಾರಣವೇ ನಮ್ಮ ಮುಂದೆ “ಪ್ರಶ್ನ” ಎಂಬ ಉಪನಿಷತ್ ಆವಿರ್ಭವಿಸಿದೆ. ಹಾಗಾದರೆ ತಾತ್ವಿಕ ಜ್ಞಾನವೆನ್ನುವುದು ಉತ್ತಮ ಚರ್ಚೆಯಿಂದ ಪ್ರಶ್ನೆಯಿಂದ ಲಭ್ಯವಾಗುತ್ತದೆ ಎಂಬುದಂತು ಸತ್ಯ ಎಂದಾಯಿತು. ಹಾಗಾದರೆ ಆ ಚರ್ಚೆ ಹೇಗಿರಬೇಕು ಅಥವಾ ಹೇಗಿರಬಾರದು ಎಂದು ನಾವು ತಿಳಿಯಬೇಕು ಅಲ್ಲವೇ?

ಆಚಾರ್ಯ ಚಾಣಕ್ಯರು ಒಂದು ಕಥೆಯ ಮೂಲಕ ಚರ್ಚೆ ಹೀಗಿರಬಾರದು ಎಂದು ಹೇಳುತ್ತಾರೆ. ಅದು ಹೀಗಿದೆ ಒಂದು ಕಾಡಿನಲ್ಲಿ ಒಂದು ಕತ್ತೆ ಮತ್ತು ಹುಲಿಗೆ ವಾದ (ಚರ್ಚೆ) ಆರಂಭವಾಯಿತು. ವಿಷಯ ಇಷ್ಟೇ ಹುಲ್ಲು ನೀಲಿ ಬಣ್ಣದಿಂದ ಕೂಡಿದೆ ಎಂದು ಕತ್ತೆ ಹೇಳುತ್ತದೆ. ಅಲ್ಲ ಅದು ಹಸುರಾಗಿದೆ ಎಂಬುದು ಹುಲಿಯ ವಾದ. ಈ ಹುಲಿ ಮತ್ತು ಕತ್ತೆ ಇರುವ ಜಾಗಕ್ಕಿಂತ ಸುಮಾರು ದೂರವಿರುವ ಬೆಟ್ಟದ ಹುಲ್ಲಿನ ಕುರಿತಾಗಿ ಇವರ ಚರ್ಚೆ ಆಗಿತ್ತು. ಈ ಚರ್ಚೆ ಬೆಳೆಯುತ್ತಾ ಹೋಯಿತು. ಹಲವಾರು ಸಮಯವೇ ನಡೆಯಿತು. ಕಾಡಿನ ಮಂತ್ರಿ ನರಿಗೂ ಈ ಸಮಸ್ಯೆಯ ಪರಿಹಾರ ಕಠಿಣವಾಯಿತು. ಕೊನೆಗೂ ನರಿ ಒಂದು ತೀರ್ಮಾನಕ್ಕೆ ಬಂದು ಇವರಿಬ್ಬರನ್ನೂ ಕಾಡಿನ ರಾಜನಾದ ಸಿಂಹದ ಬಳಿ ಕರೆದುಕೊಂಡು ಬಂದಿತು.

ಸಿಂಹ ನಡೆದ ಎಲ್ಲಾ ಘಟನೆಯನ್ನು ಪರಾಮರ್ಶಿಸಿ ಕತ್ತೆ ಮತ್ತು ಹುಲಿಯ ಅಭಿಪ್ರಾಯವನ್ನು ಆಲಿಸಿ ಕೊನೆಗೆ ಉತ್ತರ ನೀಡುವ ಮೊದಲೇ ಸಭೆಯನ್ನುದ್ದೇಶಿಸಿ ಹೀಗಂದಿತಂತೆ – ಹುಲಿಯ ತಪ್ಪು ಇಲ್ಲಿ ಎದ್ದು ಕಾಣುತ್ತಿರುವುದರಿಂದ ಈ ಹುಲಿಗೆ ಒಂದು ವರುಷಗಳ ಕಾಲ ಈ ರಾಜ್ಯದಿಂದ ಬಹಿಷ್ಕಾರ ಹಾಕಲಾಗಿದೆ ಮತ್ತು ಮೂರು ದಿನಗಳ ಉಪವಾಸವನ್ನು ವಿಧಿಸಲಾಗಿದೆ ಎಂದಿತಂತೆ. ಕತ್ತೆ ಅತ್ಯಂತ ಖುಷಿಯಿಂದ ಕುಣಿದು ಕುಪ್ಪಳಿಸಿ ತಾನೇ ಗೆದ್ದೆ ಎಂಬ ಭಾವವುಳ್ಳದ್ದಾಗಿ ಅಲ್ಲಿಂದ ಹೊರಟಿತು. ಉಳಿದ ಪ್ರಾಣಿಗಳು ಆಶ್ಚರ್ಯದಿಂದ ತಮ್ಮ ಮನೆಗಳಿಗೆ ತೆರಳಿದವು.

ಇದನ್ನೂ ಓದಿ: Chanakya Niti: ಯಶಸ್ಸಿಗೆ ಚಾಣಕ್ಯ ಹೇಳಿದ 4 ಸೂತ್ರಗಳು; ಇವುಗಳನ್ನು ಪಾಲಿಸಿದರೆ ಯಾವುದೂ ಅಸಾಧ್ಯವಲ್ಲ

ಹುಲಿ ಬಂದು ಹೇಳಿತಂತೆ ಸಿಂಹವನ್ನು ಕುರಿತು ತಾವು ನೀಡಿದ ತೀರ್ಪನ್ನು ನಾನು ಪಾಲಿಸುವೆ. ಆದರೆ ಒಂದು ಸಂಶಯ ಹುಲ್ಲು ನೀಲಿ ಇರಲು ಹೇಗೆ ಸಾಧ್ಯ ಎಂದು. ಅದಕ್ಕೆ ಸಿಂಹ ಹೀಗೆ ಹೇಳುತ್ತದೆ – “ಅಯ್ಯಾ ಹುಲಿರಾಯ ಹುಲ್ಲು ಹಸಿರಾಗೇ ಇರುವುದು ನೀಲವಾಗಿರಲು ಸಾಧ್ಯವೇ ಇಲ್ಲ. ಆದರೂ ಶಿಕ್ಷೆ ನಿನಗೆ ಯಾಕಾಯಿತು ಎಂದರೆ….. ಅದೊಂದು ಕತ್ತೆ ಅದರ ಬಳಿ ನೀನು ವಾದ ಮಾಡುತ್ತೀಯಲ್ಲಾ? ನಿನಗೆ ಏನೆನ್ನ ಬೇಕು? ಅದನ್ನು ಮತ್ತು ಅದರ ಬುದ್ಧಿಯನ್ನು ಎಂದಿಗೂ ತಾತ್ತ್ವಿಕವಾಗಿ ಒಪ್ಪಿಸಲು ಸಾಧ್ಯವೇ ಇಲ್ಲ ಎಂದು ನೀನು ಅರಿತಿಲ್ಲ ಎಂದು ನಿನಗೆ ಶಿಕ್ಷೆ ನೀಡಲಾಯಿತು ಎಂದಿತಂತೆ.

ಈಗ ಯೋಚಿಸಿ ಚರ್ಚೆ ಹೇಗಿರಬೇಕು? ಯಾರೊಂದಿಗೆ ಚರ್ಚಿಸಬೇಕು? ಯಾವುದಕ್ಕಾಗಿ ಚರ್ಚಿಸಬೇಕು? ತತ್ವಜ್ಞಾನ ಅಥವಾ ಶುದ್ಧ ಅಭಿಪ್ರಾಯ ಯಾವ ಚರ್ಚೆಯಿಂದ ಯಾರ ಚರ್ಚೆಯಿಂದ ಸಿಗಬಲ್ಲದು ಎಂದು.

ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ