Premanand Maharaj: ಆಪ್ತ ಸ್ನೇಹಿತನೇ ಶತ್ರುವಾದರೆ ಏನು ಮಾಡಬೇಕು? ಪ್ರೇಮಾನಂದ ಮಹಾರಾಜರ ಆಧ್ಯಾತ್ಮಿಕ ಸಲಹೆ!

ಆಪ್ತ ಸ್ನೇಹಿತನೇ ಇದ್ದಕ್ಕಿದ್ದಂತೆ ಶತ್ರುವಾಗಿ ಬದಲಾದರೆ ಏನು ಮಾಡಬೇಕು? ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುತ್ತಾ ಸನ್ನಿವೇಶವನ್ನು ನಿಭಾಯಿಸುವ ಮಾರ್ಗವನ್ನು ವೃಂದಾವನದ ಪ್ರಸಿದ್ಧ ಸಂತ ಶ್ರೀ ಪ್ರೇಮಾನಂದ ಮಹಾರಾಜರು ತಿಳಿಸಿದ್ದಾರೆ. ಪ್ರತಿಕಾರಕ್ಕೆ ಇಳಿಯದೆ ಅಂತಹ ವ್ಯಕ್ತಿಯಿಂದ ದೂರವಿರುವುದು, ಮೌನ ಕಾಯ್ದುಕೊಳ್ಳುವುದು ಹಾಗೂ ಪ್ರಕೃತಿಯ ಕರ್ಮದ ನಿಯಮಕ್ಕೆ ನ್ಯಾಯವನ್ನು ಬಿಟ್ಟುಕೊಡುವುದೇ ಅತಿ ದೊಡ್ಡ ಶಕ್ತಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Premanand Maharaj: ಆಪ್ತ ಸ್ನೇಹಿತನೇ ಶತ್ರುವಾದರೆ ಏನು ಮಾಡಬೇಕು? ಪ್ರೇಮಾನಂದ ಮಹಾರಾಜರ ಆಧ್ಯಾತ್ಮಿಕ ಸಲಹೆ!
ಪ್ರೇಮಾನಂದ ಮಹಾರಾಜ

Updated on: Aug 05, 2026 | 7:58 AM

ಜೀವನದ ಏರಿಳಿತಗಳಲ್ಲಿ ನಾವು ಅನೇಕ ಜನರ ಸಂಪರ್ಕಕ್ಕೆ ಬರುತ್ತೇವೆ. ಕೆಲವರು ನಮಗೆ ಆಪ್ತರಾಗುತ್ತಾರೆ, ಇನ್ನು ಕೆಲವರು ಆತ್ಮೀಯ ಸ್ನೇಹಿತರಾಗುತ್ತಾರೆ. ಆದರೆ, ಕರುಡರಂತೆ ನಂಬಿದ ಅದೇ ಆಪ್ತ ಸ್ನೇಹಿತ ಇದ್ದಕ್ಕಿದ್ದಂತೆ ಶತ್ರುವಾಗಿ ಬದಲಾಗಿ ಬೆನ್ನಿಗೆ ಚೂರಿ ಹಾಕಿದರೆ ಏನು ಮಾಡಬೇಕು? ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುತ್ತಾ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ವೃಂದಾವನದ ಜನಪ್ರಿಯ ಸಂತ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಪ್ರೇಮಾನಂದ ಮಹಾರಾಜ್ ಅವರು ಸರಳ ಮತ್ತು ಮಾರ್ಮಿಕ ಮಾರ್ಗವನ್ನು ತೋರಿಸಿದ್ದಾರೆ.

ಪ್ರತಿಕಾರಕ್ಕಿಂತ ದೂರವಿರುವುದೇ ಬುದ್ಧಿವಂತಿಕೆ:

ಪ್ರೇಮಾನಂದ ಮಹಾರಾಜರು ತಮ್ಮ ಧರ್ಮೋಪದೇಶಗಳಲ್ಲಿ ಜನರ ನಿಜ ಜೀವನದ ಸಂಕೀರ್ಣ ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ನೀಡುತ್ತಾರೆ. ಇತ್ತೀಚೆಗೆ ಭಕ್ತನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಯಾರಾದರೂ ನಿಮಗೆ ಪ್ರತಿಕೂಲವಾಗಿದ್ದರೆ, ನೀವು ಪ್ರತಿಯಾಗಿ ಅವರಿಗೆ ಪ್ರತಿಕೂಲವಾಗಬೇಡಿ. ಹಿಂಸೆಗೆ ಪ್ರತಿಯಾಗಿ ಹಿಂಸೆ ಮಾಡುವುದರಿಂದ ಎಂದಿಗೂ ಶಾಂತಿ ಸಿಗುವುದಿಲ್ಲ. ಬದಲಿಗೆ, ಅಂತಹ ವ್ಯಕ್ತಿಯಿಂದ ಸಂಪೂರ್ಣವಾಗಿ ದೂರವಿರುವುದೇ ಬುದ್ಧಿವಂತ ಕೆಲಸ,” ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ಮದ ಮೇಲಿರಲಿ ನಂಬಿಕೆ:

ಆಧ್ಯಾತ್ಮಿಕ ಮತ್ತು ಪ್ರಾಯೋಗಿಕ ಅಂಶಗಳನ್ನು ವಿವರಿಸಿದ ಮಹಾರಾಜರು, ಪ್ರತಿಯೊಬ್ಬ ವ್ಯಕ್ತಿಯ ಕರ್ಮವೇ ಅವನ ಹಣೆಬರಹವನ್ನು ನಿರ್ಧರಿಸುತ್ತದೆ ಎಂದಿದ್ದಾರೆ. ಒಬ್ಬ ಸ್ನೇಹಿತ ನಿಮಗೆ ಹಾನಿ ಮಾಡಲು ಯತ್ನಿಸಿದರೆ, ಅವನು ವಾಸ್ತವವಾಗಿ ತನ್ನ ಸ್ವಂತ ಕರ್ಮಕ್ಕೆ ಹಾನಿ ಮಾಡಿಕೊಳ್ಳುತ್ತಿದ್ದಾನೆ. ಆದ್ದರಿಂದ ನೀವು ಶಾಂತರಾಗಿರಿ, ದೇವರು ಹಾಗೂ ನಿಮ್ಮ ಒಳ್ಳೆಯ ಕಾರ್ಯಗಳಲ್ಲಿ ನಂಬಿಕೆ ಇಡಿ. ಯಾರಾದರೂ ತಪ್ಪು ಮಾಡಿದರೆ ಪ್ರಕೃತಿಯ ನಿಯಮದಂತೆ ಅವರಿಗೆ ಸೂಕ್ತ ಶಿಕ್ಷೆಯಾಗುತ್ತದೆ, ಅದಕ್ಕಾಗಿ ನೀವು ನಿಮ್ಮ ಕೈಗಳನ್ನು ಕೊಳಕು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ನೆನಪಿಸಿದ್ದಾರೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಮೌನ ಮತ್ತು ನಾಲಿಗೆಯ ನಿಯಂತ್ರಣವೇ ದೊಡ್ಡ ಶಕ್ತಿ:

ಸಾಮಾನ್ಯವಾಗಿ ಸ್ನೇಹಿತನ ನಂಬಿಕೆದ್ರೋಹದಿಂದ ಕೋಪಗೊಂಡು ಜನರು ದುಃಖಿತರಾಗುತ್ತಾರೆ ಮತ್ತು ಸೇಡು ತೀರಿಸಿಕೊಳ್ಳಲು ಯೋಚಿಸುತ್ತಾರೆ. ಆದರೆ ಮಹಾರಾಜರ ಪ್ರಕಾರ, ಅಂತಹ ಪರಿಸ್ಥಿತಿಯಲ್ಲಿ ಮೌನವಾಗಿರುವುದು ಮತ್ತು ನಿಮ್ಮ ನಾಲಿಗೆಯನ್ನು ನಿಯಂತ್ರಿಸುವುದೇ ಅತ್ಯಂತ ದೊಡ್ಡ ಶಕ್ತಿ. “ಕೆಟ್ಟ ಪದಗಳನ್ನು ಮಾತನಾಡಬೇಡಿ ಅಥವಾ ಕೋಪದಲ್ಲಿ ಸೇಡು ತೀರಿಸಿಕೊಳ್ಳಬೇಡಿ. ನಿಮ್ಮ ಮೌನವೇ ಅವನಿಗೆ ತಲುಪುವ ಅತಿ ದೊಡ್ಡ ಉತ್ತರವಾಗಿರುತ್ತದೆ,” ಎಂದು ಅವರು ತಿಳಿಸಿದ್ದಾರೆ.

ದ್ವೇಷವನ್ನು ಬಿಟ್ಟು ಜೀವನದಲ್ಲಿ ಮುನ್ನಡೆಯಿರಿ:

ಸೇಡಿನ ಬೆಂಕಿಯಲ್ಲಿ ಸುಡುವುದರಿಂದ ನಮಗೆ ನಾವೇ ಮಾನಸಿಕವಾಗಿ ಹಾನಿ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಮಹಾರಾಜರ ಸಲಹೆ ಏನೆಂದರೆ – ದ್ವೇಷ ಉಂಟುಮಾಡುವ ಸ್ನೇಹಿತನನ್ನು ಹಾಗೆಯೇ ಬಿಟ್ಟುಬಿಡಿ. ಅಸಮಾಧಾನಗೊಳ್ಳಬೇಡಿ, ನಿಮ್ಮ ತಪ್ಪುಗಳಿಂದ ಕಲಿಯಿರಿ, ಜೀವನದಲ್ಲಿ ಮುನ್ನಡೆಯಿರಿ ಮತ್ತು ನಿಮ್ಮ ಮನಸ್ಸನ್ನು ದೇವರ ಪಾದಗಳಿಗೆ ಒಪ್ಪಿಸಿ. ಏಕೆಂದರೆ, ಸರ್ವಶಕ್ತನು ಎಲ್ಲವನ್ನೂ ನೋಡುತ್ತಾನೆ ಮತ್ತು ಅವನೇ ಅಂತಿಮ ತೀರ್ಪು ನೀಡುವವನಾಗಿದ್ದಾನೆ ಎಂದು ಅವರು ಸಲಹೆ ನೀಡಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:57 am, Wed, 5 August 26

Loading...
Unable to load recommendations.
Follow Us