ಶ್ರಾವಣ(Shravana Masa) ಹಬ್ಬಗಳ ಮಾಸ. ಶ್ರಾವಣ ಶುರುವಾಯಿತೆಂದರೆ ಪ್ರತಿ ದಿನ ಆಧ್ಯಾತ್ಮಿಕ ಚಟುವಟಿಕೆಗಳು ಇದ್ದೇ ಇರುತ್ತವೆ. ಅದರಲ್ಲೂ ಶಿವನಿಗೆ ಅರ್ಪಿತವಾದ ಈ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚಿನ ಮಹತ್ವವಿದೆ. ಇನ್ನು ವಿವಿಧ ಸ್ಥಳಗಳಿಗೆ ಹೋದರೆ ಶ್ರಾವಣ ಆಚರಣೆ ಭಿನ್ನ ಭಿನ್ನವಾಗಿರುತ್ತೆ. ಸದ್ಯ ಇಂದು ಶ್ರಾವಣದ ಮೊದಲ ಶನಿವಾರ. ಆಗಸ್ಟ್ 13ರ ಮೊದಲ ಶ್ರಾವಣ ಶನಿವಾರದಂದು(Shravana Shanivara) ವೆಂಕಟೇಶ್ವರ, ಲಕ್ಷ್ಮಿ, ಶನಿ, ಹನುಮಾನ್ನನ್ನು ಪೂಜಿಸುವ ಪದ್ಧತಿ ಇದೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಶ್ರಾವಣ ಶನಿವಾರವನ್ನು ಆಚರಿಸಲಾಗುತ್ತೆ.
ಶ್ರಾವಣದಂದು ವೆಂಕಟೇಶ್ವರ-ಲಕ್ಷ್ಮೀ ಪೂಜೆ (lord Venkateswara and lakshmi)
ಶ್ರಾವಣ ಮಾಸದಲ್ಲಿ ಬರುವ ಶನಿವಾರವನ್ನು ಶ್ರಾವಣ ಶನಿವಾರ ಅಥವಾ ಸಂಪತ್ ಶ್ರಾವಣ ಶನಿವಾರವೆಂದು ಕರೆಯುತ್ತಾರೆ. ಕೆಲವೆಡೆ ಈ ದಿನದಂದು ವೆಂಕಟೇಶ್ವರನನ್ನು ಪೂಜಿಸುವವರು ವೆಂಕಟೇಶ್ವರನ ಸ್ವರೂಪಿಗಳಂತೆ ಧೋತಿ ತೊಟ್ಟು, ಹೆಗಲಿಗೆ ಚೀಲ ಹಾಕಿಕೊಂಡು ಹಣೆಗೆ ಗೋವಿಂದ ನಾಮ ಬಳಿದು ಮನೆ ಮನೆಗೆ ಹೋಗಿ ದಾನ ಬೇಡುತ್ತಾರೆ. ಮನೆ ಬಾಗಿಲಿಗೆ ಬಂದು ವೆಂಕಟರಮಣ ಗೋವಿಂದ ಗೋವಿಂದ ಎಂದು ಮನೆಯವರನ್ನು ಕರೆದು ದಾನ ಪಡೆಯುತ್ತಾರೆ. ಬಳಿಕ ದಾನದಿಂದ ಬಂದ ಧಾನ್ಯದಿಂದ ಕೊನೆಯ ಶ್ರಾವಣ ಶನಿವಾರದಂದು ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿ ಬಂಧು-ಬಳಗಕ್ಕೆ ಊಟ ಉಪಚಾರ ಮಾಡುತ್ತಾರೆ. ಈ ರೀತಿ ಪ್ರತಿ ಶ್ರಾವಣ ಶನಿವಾರದಂದು ಎರಡು ಅಥವಾ ಐದು ಮನೆಗಳಿಂದ ದಾನ ಪಡೆಯುತ್ತಾರೆ.
ಇನ್ನು ವೆಂಕಟೇಶ್ವರನಿಗೆ ಅಕ್ಕಿ ಹಿಟ್ಟಿನ ದೀಪವನ್ನು ಬೆಳಗಲಾಗುತ್ತದೆ. ಕುದಿಯುವ ನೀರಿಗೆ ಅಕ್ಕಿಹಿಟ್ಟನ್ನು ಬೆರೆಸಿ ಅದರಿಂದ ತ್ರಿಕೋನಾಕಾರದ 5 ದೀಪವನ್ನು ತಯಾರಿಸಿ ಅದಕ್ಕೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ದೀಪವನ್ನು ಬೆಳಗಬೇಕು. ಪಾನಕ, ಕೋಸಂಬರಿ, ತಂಬಿಟ್ಟು, ಹಾಲನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತೆ.
ಶ್ರಾವಣ ಶನಿವಾರದ ಲಕ್ಷ್ಮೀ ಪೂಜೆಗೆ ಶುಕ್ರವಾರ ಪೂಜೆ ಮಾಡಿದ್ದ ಸಂಪತ್ ಗಡಿಗೆಯ ಹೂವುಗಳನ್ನು ಹಾಗೂ ಗೆಜ್ಜೆ ವಸ್ತುಗಳನ್ನು ಶ್ರಾವಣ ಶನಿವಾರದಂದು ತೆಗೆದು ನಂತರ ಆ ಗಡಿಗೆಗೆ ತುಪ್ಪದ ಅಥವಾ ಎಣ್ಣೆಯ ಆರತಿಯನ್ನು ಮಾಡಲಾಗುತ್ತದೆ. ಅಂಬಲಿ ಮತ್ತು ಸೊಪ್ಪಿನ ಪಲ್ಯವನ್ನು ನೈವೇದ್ಯವಾಗಿ ಇಡಲಾಗುತ್ತದೆ.
ಶ್ರಾವಣ ಶನಿವಾರಕ್ಕೆ ಶನಿ ಪೂಜೆ (Lord Shani)
ಶ್ರಾವಣ ಶನಿವಾರದಂದು ಶನಿ ದೇವರನ್ನು ಪೂಜಿಸುವುದರಿಂದ ಕರ್ಮ ಫಲದಾತ ಶನಿಯ ದೋಷ ಪರಿಹಾರವಾಗುತ್ತದೆ. ಕುಂಡಲಿಯಲ್ಲಿರುವ ದೋಷ ಪರಿಹಾರಕ್ಕೆ ಶ್ರಾವಣ ಸೋಮವಾರ ಉಪವಾಸವನ್ನು ಮಾಡಬೇಕು. ಹಾಗೂ ಶನಿ ದೋಷ ನಿವಾರಣೆ, ಸಾಡೇಸಾತಿ ದೋಷಕ್ಕೆ ಶ್ರಾವಣ ಶನಿವಾರ ಶನಿ ದೇವರನ್ನು ಪೂಜಿಸಲಾಗುತ್ತದೆ. ಸಾಡೇಸಾತಿ ಶನಿ ದೋಷ, ಅಷ್ಟಮಿ ಶನಿ ದೋಷ, ಪಂಚಮಿ ಶನಿ ದೋಷ ಇರುವವರು ಶ್ರಾವಣ ಶನಿವಾರದಂದು ರುದ್ರಾಭಿಷೇಕ, ಮಹಾಮೃತ್ಯಂಜಯ ಪೋಜೆಯನ್ನು ಮಾಡಬೇಕು.
ಶ್ರಾವಣ ಶನಿವಾರದಂದು ಹನುಮಾನ್ ಪೂಜೆ (Lord Hanuman)
ಶ್ರಾವಣ ಶನಿವಾರದಂದು ಹನುಮಂತನಿಗೂ ಪೂಜೆ ಸಲ್ಲಿಸಲಾಗುತ್ತದೆ. ಹನುಮಂತನೆಂದರೆ ಶನಿ ದೇವರಿಗೆ ಭಯವಿರುವುದರಿಂದ ಶನಿ ದೋಷವನ್ನು ನಿಯಂತ್ರಿಸಿಕೊಳ್ಳಲು ಶ್ರಾವಣ ಶನಿವಾರದಂದು ಹನುಮಾನ್ ದೇವಾಲಯಕ್ಕೂ ಹೋಗಿ ಪೂಜೆ ಮಾಡಿಸಿಕೊಂಡು ಬರಬಹುದು.
ಇದನ್ನೂ ಓದಿ: ಶ್ರಾವಣ ಮಾಸದ ಹಬ್ಬಗಳು; 2021ರಲ್ಲಿ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ ಯಾವಾಗ?
Naga Panchami 2021: ಕೃಷಿಕ ಮಹಿಳೆಯರ ಹಬ್ಬ ನಾಗರಪಂಚಮಿ, ಶ್ರಾವಣ ಮಾಸದಲ್ಲಿ ಆಚರಿಸುವ ನಾಗಪೂಜೆಯ ವಿಶೇಷವೇನು?
Published On - 8:04 am, Sat, 14 August 21