ಅನಿಲ್ ಕುಂಬ್ಳೆ ಭಾರತೀಯ ಬೌಲಿಂಗ್ ವಿಭಾಗದ ರಾಹುಲ್ ದ್ರಾವಿಡ್ ಆಗಿದ್ದರು: ಸ್ಟೀವ್ ವಾ
ಬೌಲಿಂಗ್ ಮಾಡುವಾಗ ವೇಗದಲ್ಲಿ ಅನಿಲ್ ಕುಂಬ್ಳೆ ತರುತ್ತಿದ್ದ ಬದಲಾವಣೆ ಅದ್ಭುತವಾಗಿರುತಿದ್ದವು, ಕ್ರೀಸನ್ನು ಬಳಸಿ ಬೌಲಿಂಗ್ನಲ್ಲಿ ಅವರಂತೆ ವೈವಿಧ್ಯತೆಯನ್ನು ತರುವುದು ಬೇರೆ ಬೌಲರ್ಗಳಿಗೆ ಸಾಧ್ಯವಾಗುತ್ತಿರಲಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ಹೇಳಿದ್ದಾರೆ.

1997 ರಿಂದ 2004ರವರೆಗೆ ಅಸ್ಟ್ರೇಲಿಯಾ ಟೀಮನ್ನು ಅದ್ವಿತೀಯವಾಗಿ ಮುನ್ನಡೆಸಿ, ನಾಯಕನಾಗಿ ಕರ್ತವ್ಯ ನಿರ್ವಹಿಸಿದ 57 ಟೆಸ್ಟ್ಗಳಲ್ಲಿ 41 ರಲ್ಲಿ ಜಯ ಸಾಧಿಸಿ ವಿಶ್ವದ ಶ್ರೇಷ್ಠ ಕ್ಯಾಪ್ಟನ್ಗಳಲ್ಲೊಬ್ಬರೆಂಬ ಕೀರ್ತಿಯೊಂದಿಗೆ ಕ್ರಿಕೆಟ್ಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾದ ಸ್ಟೀವ್ ವಾ ಅವರಿಗೆ ಭಾರತೀಯ ಆಟಗಾರರು ಮತ್ತು ಭಾರತದ ಮೇಲೆ ಅತೀವ ಪ್ರೀತಿ.
ಮೊನ್ನೆಯಷ್ಟೇ ವಾ, ಭಾರತದ ಮಾಜಿ ನಾಯಕರಾದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆಯನ್ನು ಅಪಾರವಾಗಿ ಕೊಂಡಾಡಿದ್ದರು. ಈಗ ಮತ್ತೊಬ್ಬ ಲೆಜಂಟರಿ ಬೌಲರ್ ಬಗ್ಗೆ ಮಾತಾಡಿ ಟೀಮ್ ಇಂಡಿಯಾಗೆ ಅವರು ಬೌಲಿಂಗ್ ವಿಭಾಗದ ರಾಹುಲ್ ದ್ರಾವಿಡ್ ಅಗಿದ್ದಾರೆಂದು ಹೇಳಿದ್ದಾರೆ. ಅವರು ಮಾತಾಡಿರುವುದು ಭಾರತದ ಪರ ಅತಿಹೆಚ್ಚು ವಿಕೆಟ್ ಪಡೆದಿರುವ ಲೆಜಂಡರಿ ಲೆಗ್ಸ್ಪಿನ್ನರ್ ಅನಿಲ್ ಕುಂಬ್ಳೆ ಕುರಿತು.
‘ತಮ್ಮ ದೇಶದ ಪರವಾಗಿ ಅನಿಲ್ ಕುಂಬ್ಳೆಯಷ್ಟು ಬದ್ಧತೆ ಮತ್ತು ವ್ಯಾಮೋಹದಿಂದ ಕ್ರಿಕೆಟ್ ಆಡಿರುವ ಆಟಗಾರ ಮತ್ತೊಬ್ಬನಿರಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ಅವರಿಗೆ ಕ್ರಿಕೆಟ್ ಎಲ್ಲವೂ ಆಗಿತ್ತು. ಅವರನ್ನು ನಾವು ಒಬ್ಬ ಲೆಗ್ ಸ್ಪಿನ್ನರನಂತೆ ಆಡದೆ, ನಿಧಾನಗತಿಯ ಇನ್-ಸ್ವಿಂಗ್ ಬೌಲರ್ನಂತೆ ಆಡುತ್ತಿದ್ದೆವು’ ಎಂದು, cricket.com.au. ನಲ್ಲಿ ತಾವು ಪೋಸ್ಟ್ ಮಾಡಿರುವ ವಿಡಿಯೊನಲ್ಲಿ ವಾ ಹೇಳಿದ್ದಾರೆ.

ಸ್ಟೀವ್ ವಾ
‘ಬೌಲಿಂಗ್ ವೇಗದಲ್ಲಿ ಅನಿಲ್ ಕುಂಬ್ಳೆ ತರುತ್ತಿದ್ದ ಬದಲಾವಣೆ ಅದ್ಭುತವಾಗಿದ್ದವು. ಕ್ರೀಸನ್ನು ಬಳಸುವುದರಲ್ಲಿ ಮತ್ತು ಬೌಲಿಂಗ್ನಲ್ಲಿ ಅವರು ತೋರುತ್ತಿದ್ದ ವೈವಿಧ್ಯತೆ ಬೇರೆ ಬೌಲರ್ಗಳಿಗೆ ಸಾಧ್ಯವಾಗುತ್ತಿಲಿಲ್ಲ. ಪಿಚ್ನಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದರೆ ಅಥವಾ ಅದರಲ್ಲಿ ಅಸಮವಾದ ಪುಟಿತವಿದ್ದರೆ ಅವರು ಬ್ಯಾಟ್ಸ್ಮನ್ಗಳನ್ನು ತಲ್ಲಣಿಸುವಂತೆ ಮಾಡುತ್ತಿದ್ದರು’ ಅಂತ ವಿಡಿಯೊದಲ್ಲಿ ವಾ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 619 ವಿಕೆಟ್ಗಳನ್ನು ಪಡೆದ ಕುಂಬ್ಳೆ, ಈ ಫಾರ್ಮಾಟ್ನಲ್ಲಿ ಅತಿಹೆಚ್ಚು ವಿಕೆಟ್ ವಿಶ್ವದ ಬೌಲರ್ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರಳಿಧರನ್ ಮತ್ತು ಶೇನ್ ವಾರ್ನ್ ನಂತರ ಮೂರನೇ ಸ್ಥಾನದಲ್ಲಿದ್ದಾರೆ. ಅಸ್ಟ್ರೇಲಿಯಾದ ವಿರುದ್ಧ ಆಡಿದ 20 ಟೆಸ್ಟ್ಗಳಲ್ಲಿ ಕುಂಬ್ಳೆ 21.33 ಸರಾಸರಿಯಲ್ಲಿ 111 ವಿಕೆಟ್ ಪಡೆದಿದ್ದಾರೆ ಮತ್ತು 5 ವಿಕೆಟ್ ಪಡೆಯುವ ಸಾಧನೆಯನ್ನು 10 ಬಾರಿ ಮಾಡಿದ್ದಾರೆ. 2003-04 ನಡೆದ 3-ಟೆಸ್ಟ್ಗಳ ಬಾರ್ಡರ್-ಗಾವಸ್ಕರ್ ಸರಣಿಯಲ್ಲಿ (ಇದು ವಾ ಟೆಸ್ಟ್ ಕ್ರಿಕೆಟ್ ಕರೀಯರ್ನ ಅಂತಿಮ ಸರಣಿ) ಕುಂಬ್ಳೆ 24 ವಿಕೆಟ್ ಪಡೆದರು. ಆ ಸರಣಿಯಲ್ಲಿ ದ್ರಾವಿಡ್ ಅವರ ಬ್ಯಾಟಿಂಗ್ಗೆ ಸರಿಸಮವಾಗಿ ಕುಂಬ್ಳೆ ಬೌಲ್ ಮಾಡಿದರು ಎಂದು ವಾ ಹೇಳಿದ್ದಾರೆ.
‘ಮೈದಾನದಲ್ಲಿ ಅನಿಲ್ ಕುಂಬ್ಳೆ ಭೀತಿ ಹುಟ್ಟಿಸುವ ಪ್ರತಿಸ್ಪರ್ಧಿಯಾಗಿದ್ದರು. ಎದುರಾಳಿಗಳಿಗೆ ತಮ್ಮ ವಿರುದ್ಧ ಮೇಲುಗೈ ಸಾಧಿಸುವ ಅವಕಾಶವನ್ನು ಅವರು ನೀಡುತ್ತಿರಲಿಲ್ಲ. ಅವರು ನಮ್ಮ ವಿರುದ್ಧ ಕಳಪೆಯಾಗಿ ಬೌಲ್ ಮಾಡಿರುವ ನಿದರ್ಶನಗಳೇ ಇಲ್ಲ. ಭಾರತೀಯರ ಬೌಲಿಂಗ್ ಲೈನ್-ಅಪ್ನಲ್ಲಿ ಅವರು ರಾಹುಲ್ ದ್ರಾವಿಡ್ ಅವರಂತಿದ್ದರು. ಕುಂಬ್ಳೆ ಟೀಮಿಗೆ ಏನು ನೀಡಬಲ್ಲರು ಎನ್ನುವುದು ಕ್ಯಾಪ್ಟನ್ಗಳಿಗೆ ಗೊತ್ತಿರುತ್ತಿತ್ತು. ಆಟದ ಮೇಲಿನ ಅವರ ಫೋಕಸ್ ಒಂದಿಷ್ಟೂ ವಿಚಲಿತಗೊಳ್ಳುತ್ತಿರಲಿಲ್ಲ’ ಎಂದು ವಾ ಹೇಳಿದ್ದಾರೆ.
Published On - 7:57 pm, Wed, 13 January 21
