India vs Australia Test Series | ಅನಿಲ್-ಭಜ್ಜಿ ಜೋಡಿಯಂತೆ ಅಶ್ವಿನ್-ಜಡೇಜಾ ಜೋಡಿಯೂ ಎದುರಾಳಿಗಳಿಗೆ ಮಾರಕ: ಪ್ರಗ್ಯಾನ್ ಓಝಾ

ಸಿಡ್ನಿಯಲ್ಲಿ ನಡೆಯುವ ಮೂರನೆ ಟೆಸ್ಟ್​ಗೆ ಟೀಮ್ ಇಂಡಿಯಾ ರವಿ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಜೋಡಿಯನ್ನು ಬೇರ್ಪಡಿಸಬಾರದು ಎಂದು ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಝಾ ಹೇಳುತ್ತಾರೆ. ಅವರಿಬ್ಬರ ಬ್ಯಾಟಿಂಗ್ ಸಾಮರ್ಥ್ಯ ಕೂಡ ಟೀಮಿಗೆ ಉಪಯುಕ್ತವಾಗಲಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

India vs Australia Test Series | ಅನಿಲ್-ಭಜ್ಜಿ ಜೋಡಿಯಂತೆ ಅಶ್ವಿನ್-ಜಡೇಜಾ ಜೋಡಿಯೂ ಎದುರಾಳಿಗಳಿಗೆ ಮಾರಕ: ಪ್ರಗ್ಯಾನ್ ಓಝಾ
ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್

Updated on: Jan 02, 2021 | 7:11 PM

ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಆತಿಥೇಯರನ್ನು ಸುಲಭವಾಗಿ ಮಣಿಸಿ ಸರಣಿಯನ್ನು 1-1ರಿಂದ ಸಮ ಮಾಡಿಕೊಂಡಿರುವ ಟೀಮ್ ಇಂಡಿಯಾ ಸಿಡ್ನಿಯಲ್ಲಿ ಜನೆವರಿ 7 ರಿಂದ ನಡೆಯಲಿರುವ ಮಹತ್ವದ ಮೂರನೇ ಟೆಸ್ಟ್ ಪಂದ್ಯಕ್ಕೆ ಭರದ ಸಿದ್ಧತೆ ನಡೆಸಿದೆ. ಶನಿವಾರದಂದು ಫೀಲ್ಡಿಂಗ್ ಕೋಚ್ ಆರ್ ಶ್ರೀಧರನ್ ಮೇಲ್ವಚಾರಣೆಯಲ್ಲಿ ಟೀಮಿನ ಎಲ್ಲ ಸದಸ್ಯರು ಫೀಲ್ಡಿಂಗ್ ಮತ್ತು ಥ್ರೋಯಿಂಗ್ ಅಭ್ಯಾಸ ನಡೆಸಿದರು.

ಪಾರಂಪರಿಕವಾಗಿ ಸಿಡ್ನಿ ಕ್ರಿಕೆಟ್ ಮೈದಾನ ಸ್ಪಿನ್ನರ್​ಗಳಿಗೆ ನೆರವಾಗುತ್ತಾ ಬಂದಿದೆ. ಭಾರತದ ಸ್ಪಿನ್ನರ್​ಗಳು ಪ್ರತಿಬಾರಿ ಇಲ್ಲಿ ತಮ್ಮ ಕೈಚಳಕ ಮೆರೆದಿದ್ದಾರೆ. 2018-19 ಸರಣಿಯ ಸಿಡ್ನಿ ಟೆಸ್ಟ್​ನಲ್ಲಿ ಕುಲ್ದೀಪ್ ಯಾದವ್ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಪಡೆದಿದ್ದರು. 40 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ, ಬಿ ಚಂದ್ರಶೇಖರ್, ಬಿಷನ್ ಸಿಂಗ್ ಬೇಡಿ ಮತ್ತು ಇಎಎಸ್ ಪ್ರಸನ್ನ ಅವರ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಸೀಗಳು ಇನ್ನಿಂಗ್ಸ್ ಮತ್ತು 2 ರನ್​ಗಳಿಂದ ಟೆಸ್ಟ್ ಸೋತಿದ್ದರು. ನಂತರದ ವರ್ಷಗಳಲ್ಲಿ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಸಹ ಎಸ್​ಸಿಜಿಯಲ್ಲಿ ಉನ್ನತಮಟ್ಟದ ಬೌಲಿಂಗ್ ಪ್ರದರ್ಶನಗಳನ್ನು ನೀಡಿದ್ದರು.

ಪ್ರಗ್ಯಾನ್ ಓಝಾ

ಭಾರತದ ಪರ 24 ಟೆಸ್ಟ್​ಗಳನ್ನಾಡಿ 113 ವಿಕೆಟ್ ಪಡೆದ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಝಾ, ಮೆಲ್ಬರ್ನ್​ನಲ್ಲಿ ಆಡಿದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ಕಾಂಬಿನೇಷನ್ ಅನ್ನು ಟೀಮ್ ಇಂಡಿಯಾ ಬದಲಾಯಿಸಬಾರದೆಂದು ಹೇಳಿದ್ದಾರೆ.

‘ಸಿಡ್ನಿ ಕ್ರಿಕೆಟ್ ಮೈದಾನ ಸ್ಪಿನ್ನರ್​ಗಳಿಗೆ ನೆರವಾಗುವ ಅಂಶ ಎಲ್ಲರಿಗೂ ಗೊತ್ತಿದೆ. ರವಿ ಅಶ್ವಿನ್ ಮತ್ತು ಜಡೇಜಾ ಮೆಲ್ಬರ್ನ್​ನಲ್ಲಿ ಅತ್ಯುತ್ತಮವಾಗಿ ಬೌಲ್ ಮಾಡಿದರು. ಈ ಜೋಡಿ ಎದುರಾಳಿಗಳಿಗೆ ಮಾರಕವೆನಿಸುತ್ತಿದೆ. ವೇಗದ ಬೌಲರ್​ಗಳು ಜೋಡಿಯಾಗಿ ಬೇಟೆಯಾಡುವಂತೆ ಸ್ಪಿನ್ನರ್​ಗಳು ಸಹ ಜೋಡಿಯಾಗಿಯೇ ಹೆಚ್ಚು ಪರಿಣಾಮಕಾರಿಯೆನಿಸುತ್ತಾರೆ. ಒಬ್ಬ ಸ್ಪಿನ್ನರ್ ಒಂದು ತುದಿಯಲ್ಲಿ ನಿಖರವಾದ ಆಕ್ರಮಣದೊಂದಿಗೆ ಬ್ಯಾಟ್ಸ್​ಮನ್​ ರನ್ ಗಳಿಸದಂತೆ ಕಡಿವಾಣ ಹಾಕಿದರೆ ಮತ್ತೊಬ್ಬ ಇನ್ನೊಂದು ತುದಿಯಲ್ಲಿ ವಿಕೆಟ್ ಕೀಳುತ್ತಾನೆ. ಜಡೇಜಾ ಮತ್ತು ಆಶ್ವಿನ್ ಅದನ್ನೇ ಮಾಡುತ್ತಿರುವುದರಿಂದ ಸಿಡ್ನಿ ಪಂದ್ಯಕ್ಕೆ ಈ ಜೋಡಿಯನ್ನು ಬೇರ್ಪಡಿಸಬಾರದು,’ ಎಂದು ಓಝಾ ಕ್ರೀಡಾ ಚ್ಯಾನೆಲೊಂದರೊಂದಿಗೆ ನಡೆಸಿದ ಮಾತುಕತೆಯಲ್ಲಿ ಹೇಳಿದ್ದಾರೆ.

ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ

ಅಶ್ವಿನ್ ಮತ್ತು ಜಡೇಜಾ ಉಪಯುಕ್ತ ಬ್ಯಾಟ್ಸ್​ಮನ್​ಗಳು ಕೂಡ ಆಗಿರುವುದರಿಂದ ಟೀಮಿಗೆ ಅದು ಸಹಾಯವಾಗುತ್ತದೆ ಎಂದು ಓಝಾ ಹೇಳಿದ್ದಾರೆ.

‘ಅಶ್ವಿನ್ ಮತ್ತು ಜಡೇಜಾ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಅವರಿಬ್ಬರೂ ಶತಕಗಳನ್ನು ಬಾರಿಸಿರುವುದು ಇದಕ್ಕೆ ಸಾಕ್ಷಿ. ಭಾರತದ ಪಿಚ್​ಗಳಲ್ಲಿ ಅವರು ಜೋಡಿಯಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿದ್ದಾರೆ. ವಿದೇಶದ ಪಿಚ್​ಗಳಲ್ಲೂ ಅದನ್ನವರು ತೋರುತ್ತಾರೆಂಬ ನಂಬಿಕೆ ನನಗಿದೆ. ಅವರ ನಡುವಿನ ಸಮನ್ವಯತೆ ಮತ್ತು ಹೊಂದಾಣಿಕೆ ಅದ್ಭುತವಾಗಿದೆ. ಮೈದಾನದಲ್ಲಿ ಅವರು ಒಂದು ಅಪೂರ್ವ ಜೋಡಿ ಎಂದು ನಾನು ಭಾವಿಸುತ್ತೇನೆ’ ಎಂದು ಓಝಾ ಹೇಳಿದ್ದಾರೆ.

ಹಿಂದೆ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರ ಜೋಡಿ ಭಾರತಕ್ಕೆ ಹಲವಾರು ಗೆಲುವು ತಂದುಕೊಟ್ಟಿರುವುದನ್ನು ನೆನಪಿಸಿಕೊಂಡಿರುವ ಓಝಾ, ಅಶ್ವಿನ್ ಮತ್ತು ಜಡೇಜಾ ಸಹ ಅವರಂತೆಯೇ ಪರಿಣಾಮಕಾರಿಯಾಗಿದ್ದಾರೆ ಎಂದಿದ್ದಾರೆ.

‘ಅನಿಲ್ ಭಾಯ್ ಮತ್ತು ಭಜ್ಜು ಪಾ ಹೇಗೆ ಎದುರಾಳಿ ಬ್ಯಾಟ್ಸ್​ಮನ್​ಗಳನ್ನು ಹೇಗೆ ಮಟ್ಟ ಹಾಕುತ್ತಿದ್ದರು ಅಂತ ನಾವು ನೋಡಿದ್ದೇವೆ. ಹಿಂದೆ ಅವರು ಮಾಡಿದ್ದನ್ನೇ ಈಗ ಅಶ್ವಿನ್ ಮತ್ತು ಜಡೇಜಾ ಮಾಡುತ್ತಿದ್ದಾರೆ. ಸಿಡ್ನಿ ಟೆಸ್ಟ್​ನಲ್ಲಿ ಅವರಿಬ್ಬರನ್ನು ಆಡಿಸುವುದು ಭಾರತಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ,’ ಎಂದು ಓಝಾ ಹೇಳಿದ್ದಾರೆ.

India vs Australia 2020 ಟೀಂ ಇಂಡಿಯಾ ಗೆಲುವಿನ ರಹಸ್ಯ ಬಿಚ್ಚಿಟ್ಟ ಆಸ್ಟ್ರೇಲಿಯಾ ನಾಯಕ!

 

Published On - 6:46 pm, Sat, 2 January 21