ಏಷ್ಯನ್ ಗೇಮ್ಸ್: ಚಿನ್ನದ ಪದಕ ಗೆದ್ದ ಭಾರತ ಮಹಿಳಾ ಕಬಡ್ಡಿ ತಂಡ

ಜಪಾನ್ ಮಣ್ಣಿನಲ್ಲಿ ಇರಾನ್ ತಂಡದ ಸವಾಲನ್ನು ಧೂಳೀಪಟ ಮಾಡಿದ ಭಾರತದ ಹೆಮ್ಮೆಯ ಮಹಿಳಾ ಕಬಡ್ಡಿ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರದ ಬೇಟೆಯಾಡಿದೆ. ಕೊನೆಯ ಸೆಕೆಂಡ್‌ವರೆಗೂ ರೋಮಾಂಚನ ಮೂಡಿಸಿದ ಪಂದ್ಯದಲ್ಲಿ 37-34 ಅಂಕಗಳಿಂದ ಇರಾನ್ ತಂಡವನ್ನು ಮಣಿಸಿದ ಭಾರತದ ವೀರಾಂಗನೆಯರು, ಏಷ್ಯನ್ ಚಾಂಪಿಯನ್ ಪಟ್ಟವನ್ನು ಮರಳಿ ಪಡೆದುಕೊಂಡಿದೆ.

ಏಷ್ಯನ್ ಗೇಮ್ಸ್: ಚಿನ್ನದ ಪದಕ ಗೆದ್ದ ಭಾರತ ಮಹಿಳಾ ಕಬಡ್ಡಿ ತಂಡ
Team India
Image Credit source: Asian Games

Updated on: Sep 26, 2026 | 11:35 AM

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಕಬಡ್ಡಿ ತಂಡವು ಭರ್ಜರಿ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ರೋಮಾಂಚನಕಾರಿಯಾಗಿ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇರಾನ್ ತಂಡವನ್ನು 37-34 ಅಂಕಗಳ ಅಂತರದಿಂದ ಮಣಿಸಿದ ಭಾರತ, ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಭಾರತೀಯ ಮಹಿಳೆಯರು, 2018ರ ಜಕಾರ್ತಾ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಇರಾನ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.

ರಣರೋಚಕ ಫೈನಲ್:

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತೀಯ ಆಟಗಾರ್ತಿಯರು ಪಂದ್ಯದ ಮೊದಲಾರ್ಧದಲ್ಲಿ  22-16 ಅಂಕಗಳ ಭಾರಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ದ್ವಿತೀಯಾರ್ಧದಲ್ಲಿ ಅದ್ಭುತ ಕಂಬ್ಯಾಕ್ ಮಾಡಿದ ಇರಾನ್ ತಂಡ, ಪಂದ್ಯ ಮುಗಿಯಲು ಕೇವಲ 8 ನಿಮಿಷಗಳಿರುವಾಗ ಅಂಕಗಳ ಅಂತರವನ್ನು 27-26ಕ್ಕೆ ತಗ್ಗಿಸಿ ಭಾರತಕ್ಕೆ ತೀವ್ರ ಒತ್ತಡ ಹೇರಿತು.

ಆದರೆ, ಅಂತಿಮ ನಿಮಿಷದಲ್ಲಿ ಅದ್ಭುತ ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಭಾರತೀಯ ವನಿತೆಯರು ಇರಾನ್ ತಂಡದ ರೈಡರ್ ಐನಾಜ್ ಅವರನ್ನು ಔಟ್ ಮಾಡುವ ಮೂಲಕ 37-34 ಅಂಕಗಳೊಂದಿಗೆ ಐತಿಹಾಸಿಕ ಜಯಭೇರಿ ಬಾರಿಸಿದರು.

ಗೆಲುವಿನ ರೂವಾರಿಗಳು:

ಕ್ಯಾಪ್ಟನ್ ಪುಷ್ಪಾ ರಾಣಾ ಅವರ ಚಾಣಾಕ್ಷ ನಾಯಕತ್ವ, ರೈಡರ್‌ಗಳಾದ ಪೂಜಾ ಮತ್ತು ಸಂಜು ದೇವಿ ಅವರ ಮಿಂಚಿನ ರೈಡಿಂಗ್ ಹಾಗೂ ಇಡೀ ತಂಡದ ಒಗ್ಗಟ್ಟಿನ ಪ್ರದರ್ಶನ ಭಾರತದ ಈ ಅಜೇಯ ಗೆಲುವಿಗೆ ಕಾರಣವಾಯಿತು.

4ನೇ ಚಿನ್ನದ ಪದಕ:

ಮಹಿಳಾ ಕಬಡ್ಡಿಯನ್ನು ಏಷ್ಯನ್ ಗೇಮ್ಸ್‌ಗೆ ಸೇರಿಸಿದಾಗಿನಿಂದ (2010) ಭಾರತ ಗೆಲ್ಲುತ್ತಿರುವ ನಾಲ್ಕನೇ ಚಿನ್ನದ ಪದಕ ಇದಾಗಿದೆ.

  • 2010 (ಗುವಾಂಗ್‌ಝೌ): ಚಿನ್ನದ ಪದಕ
  • 2014 (ಇಂಚಿಯಾನ್): ಚಿನ್ನದ ಪದಕ
  • 2018 (ಜಕಾರ್ತಾ): ಬೆಳ್ಳಿ ಪದಕ
  • 2022/23 (ಹ್ಯಾಂಗ್‌ಝೌ): ಚಿನ್ನದ ಪದಕ
  • 2026 (ಐಚಿ-ನಗೋಯಾ): ಚಿನ್ನದ ಪದಕ

ಚಿನ್ನದ ಪದಕಗಳ ಸಂಖ್ಯೆ ಮೂರಕ್ಕೇರಿಕೆ:

ಈ ಗೆಲುವಿನೊಂದಿಗೆ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮೂರು ಚಿನ್ನ, 11 ಬೆಳ್ಳಿ ಹಾಗೂ 13 ಕಂಚಿನ ಪದಕಗಳು ಸೇರಿವೆ.

  • ಮಹಿಳಾ ಕ್ರಿಕೆಟ್: ಟೀಮ್ ಇಂಡಿಯಾ (ಚಿನ್ನ)
  • 10 ಮೀ. ಏರ್ ಪಿಸ್ತೂಲ್ ಮಿಶ್ರಿತ ತಂಡ: ಕಮಲ್‌ಜೀತ್ ಮತ್ತು ಸುರುಚಿ ಸಿಂಗ್ (ಚಿನ್ನ)
  • ಮಹಿಳಾ ಕಬಡ್ಡಿ: ಟೀಮ್ ಇಂಡಿಯಾ (ಚಿನ್ನ)

ಇದನ್ನೂ ಓದಿ: ಏಕದಿನ ವಿಶ್ವಕಪ್‌ಗೆ ಮೊರ್ಕೆಲ್ ಮಾಸ್ಟರ್ ಪ್ಲ್ಯಾನ್!

ಇದೀಗ ಇಡೀ ದೇಶದ ಕಣ್ಣು ಇಂದು ಸಂಜೆ ನಡೆಯಲಿರುವ ಪುರುಷರ ಕಬಡ್ಡಿ ಫೈನಲ್ ಪಂದ್ಯದ ಮೇಲಿದ್ದು, ಅಲ್ಲೂ ಸಹ ಭಾರತ ಮತ್ತು ಇರಾನ್ ತಂಡಗಳೇ ಮುಖಾಮುಖಿಯಾಗುತ್ತಿವೆ. ಪುರುಷರ ತಂಡವೂ ಚಿನ್ನ ಗೆದ್ದು ಜಪಾನ್ ಮಣ್ಣಿನಲ್ಲಿ ಕಬಡ್ಡಿಯ ‘ಡಬಲ್ ಧಮಾಕಾ’ ಸೃಷ್ಟಿಸಲಿದೆಯಾ ಕಾದು ನೋಡಬೇಕಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us