Asian Games: ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ

| Updated By: ಝಾಹಿರ್ ಯೂಸುಫ್

Updated on: Sep 26, 2023 | 4:46 PM

Asian Games: ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಹಾಕಿ ತಂಡದಿಂದ ಪದಕವನ್ನು ನಿರೀಕ್ಷಿಸಬಹುದು. ಏಕೆಂದರೆ ಆಡಿದ ಮೊದಲೆರಡು ಪಂದ್ಯಗಳಲ್ಲಿ ಭಾರತ ಅಮೋಘ ಗೆಲುವು ದಾಖಲಿಸಿದೆ. ಉಜ್ಬೇಕಿಸ್ತಾನ್ ವಿರುದ್ಧ 16-0 ಅಂತರದಿಂದ ಗೆದ್ದಿದ್ದ ಟೀಮ್ ಇಂಡಿಯಾ, ಇದೀಗ ಸಿಂಗಾಪುರವನ್ನು 16-1 ಅಂತರದಿಂದ ಸೋಲಿಸಿದೆ.

Asian Games: ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ
Team India
Follow us on

ಚೀನಾದ ಹಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನ ಕುದುರೆ ಸವಾರಿ (ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್) ಸ್ಪರ್ಧೆಯಲ್ಲಿ ಭಾರತ ಹೊಸ ಇತಿಹಾಸ ನಿರ್ಮಿಸಿದೆ. ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ಇದರೊಂದಿಗೆ 1982ರ ನಂತರ ಕುದುರೆ ಸವಾರಿಯಲ್ಲಿ ಚಿನ್ನದ ಪದಕ ಗೆದ್ದುಕೊಟ್ಟ ಹಿರಿಮೆಗೆ ಸುದೀಪ್ತಿ ಹಜೇಲಾ, ದಿವ್ಯಾಕೃತಿ ಸಿಂಗ್, ಹೃದಯ್ ಛೇಡಾ, ಅನುಷ್ ಅಗರ್‌ವಾಲಾ ಪಾತ್ರರಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಭಾರತೀಯ ಕುದುರೆ ಸವಾರರಾದ ಸುದೀಪ್ತಿ, ದಿವ್ಯಾಕೃತಿ , ಹೃದಯ್ ಮತ್ತು ಅನುಷ್ ಜೊತೆಗೂಡಿ ಒಟ್ಟು 209.205 ಅಂಕಗಳನ್ನು ಕಲೆಹಾಕುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಇನ್ನು ಚೀನಾದ ಸ್ಪರ್ಧಿಗಳು 204.882 ಪಾಯಿಂಟ್ ಗಳಿಸಿ ಬೆಳ್ಳಿ ಪದಕ ಪಡೆದರೆ, ಹಾಂಗ್​ಕಾಂಗ್ ಸ್ಪರ್ಧಿಗಳು 204.852 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಭಾರತಕ್ಕೆ ಮೂರನೇ ಚಿನ್ನ:

19ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಇದು ಮೂರನೇ ಚಿನ್ನವಾಗಿದೆ. ಇದಕ್ಕೂ ಮುನ್ನ ಭಾರತ ಶೂಟಿಂಗ್ ನಲ್ಲಿ ಒಂದು ಚಿನ್ನ ಹಾಗೂ ಮಹಿಳಾ ಕ್ರಿಕೆಟ್ ನಲ್ಲಿ ಮತ್ತೊಂದು ಚಿನ್ನ ಪದಕ ಗೆದ್ದಿತ್ತು. ಇದೀಗ ಕುದುರೆ ಸವಾರಿಯ ಟೀಮ್  ಸ್ವರ್ಣ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಹಾಗೆಯೇ ಈ ತಂಡದಲ್ಲಿರುವ ಅನುಶ್ ಅಗರ್‌ವಾಲಾ ಸಿಂಗಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಗೆದ್ದುಕೊಟ್ಟರೆ, ಹೃದಯ್ ಛೇಡಾ ಕಂಚಿನ ಪದಕವನ್ನು ಗೆದ್ದಿದ್ದಾರೆ. ಇದಕ್ಕೂ ಮುನ್ನ ಭಾರತ ಇಂದು ನೌಕಾಯಾನದಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡಿದೆ.

ಪದಕ ಪಟ್ಟಿಯಲ್ಲಿ 6ನೇ ಸ್ಥಾನ:

ಪ್ರಸ್ತುತ ಪದಕ ಪಟ್ಟಿಯಲ್ಲಿ ಭಾರತ ತಂಡವು 6ನೇ ಸ್ಥಾನದಲ್ಲಿದೆ. ಭಾರತೀಯ ಕ್ರೀಡಾಪಟುಗಳು ಒಟ್ಟು 3 ಚಿನ್ನದ ಪದಕ, 4 ಬೆಳ್ಳಿ ಪದಕ ಮತ್ತು 7 ಕಂಚಿನ ಪದಕಗಳನ್ನು ತೆಗೆದುಕೊಂಡಿದ್ದಾರೆ. ಇನ್ನು 40 ಚಿನ್ನದ ಪದಕ, 21 ಬೆಳ್ಳಿ ಪದಕ ಮತ್ತು 9 ಕಂಚಿನ ಪದಕಗಳನ್ನು ಗೆದ್ದಿರುವ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಹಾಕಿ ತಂಡದ ಮೇಲೆ ಹೆಚ್ಚಿದ ನಿರೀಕ್ಷೆ:

ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಹಾಕಿ ತಂಡದಿಂದ ಪದಕವನ್ನು ನಿರೀಕ್ಷಿಸಬಹುದು. ಏಕೆಂದರೆ ಆಡಿದ ಮೊದಲೆರಡು ಪಂದ್ಯಗಳಲ್ಲಿ ಭಾರತ ಅಮೋಘ ಗೆಲುವು ದಾಖಲಿಸಿದೆ. ಉಜ್ಬೇಕಿಸ್ತಾನ್ ವಿರುದ್ಧ 16-0 ಅಂತರದಿಂದ ಗೆದ್ದಿದ್ದ ಟೀಮ್ ಇಂಡಿಯಾ, ಇದೀಗ ಸಿಂಗಾಪುರವನ್ನು 16-1 ಅಂತರದಿಂದ ಸೋಲಿಸಿದೆ. ಇದೀಗ ಅದ್ಭುತ ಫಾರ್ಮ್​ನಲ್ಲಿರುವ ಭಾರತ ಹಾಕಿ ತಂಡದಿಂದ ಪದಕವನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ 12 ನೇ ಪದಕ: ಬೆಳ್ಳಿ ಗೆದ್ದ 17ರ ಬಾಲಕಿ ನೇಹಾ ಠಾಕೂರ್

ಮತ್ತೊಂದೆಡೆ ಸ್ಕ್ವಾಷ್‌ನಲ್ಲಿ ಮಹಿಳಾ ಆಟಗಾರ್ತಿಯರು ಪಾಕಿಸ್ತಾನವನ್ನು 3-0 ಅಂತರದಿಂದ ಸೋಲಿಸಿದೆ. ಹಾಗೆಯೇ ಪುರುಷರ ವಿಭಾಗದ ಸ್ಕ್ವಾಷ್‌ನಲ್ಲೂ ಭಾರತ 3-0 ಅಂತರದಲ್ಲಿ ಜಯ ಸಾಧಿಸಿದೆ. ಹೀಗಾಗಿ ಈ ಸ್ಪರ್ಧೆಗಳಲ್ಲೂ ಭಾರತ ಪದಕದ ಬೇಟೆಯನ್ನು ಮುಂದುವರೆಸಿದ್ದಾರೆ.

ಹಲವು ದಶಕಗಳ ನಂತರ ನಮ್ಮ ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಹೃದಯ್ ಛೇಡಾ, ಅನುಷ್ ಅಗರ್‌ವಾಲಾ, ಸುದೀಪ್ತಿ ಹಜೇಲಾ ಮತ್ತು ದಿವ್ಯಾಕೃತಿ ಸಿಂಗ್ ಅವರು ಅಪ್ರತಿಮ ಕೌಶಲ್ಯ, ಟೀಮ್‌ವರ್ಕ್ ಅನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ರಾಷ್ಟ್ರಕ್ಕೆ ಗೌರವವನ್ನು ತಂದಿದ್ದಾರೆ. ಈ ಐತಿಹಾಸಿಕ ಸಾಧನೆಗಾಗಿ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರೆ ಮೋದಿ ಭಾರತೀಯ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

 

 

 

Published On - 4:27 pm, Tue, 26 September 23