India vs Australia Test Series | ಪೂಜಾರಾ ಸ್ಥಾನದಲ್ಲಿ ರೋಹಿತ್ ಶರ್ಮರನ್ನು ಉಪನಾಯಕನೆಂದು ಘೋಷಿಸಿದ ಬಿಸಿಸಿಐ

ಕೇವಲ ಎರಡು ದಿಗಳ ಹಿಂದೆ ಕ್ವಾರಂಟೈನ್ ಅವಧಿ ಮುಗಿಸಿ ಟೀಮನ್ನು ಸೇರಿಕೊಂಡಿರುವ ರೋಹಿತ್ ಶರ್ಮ ಆವರನ್ನು ಉಳಿದರಡು ಟೆಸ್ಟ್​ಗಳಿಗೆ ಟೀಮಿನ ಉಪ ನಾಯಕನಾಗಿ ಬಿಸಿಸಿಐ ಘೋಷಿಸಿರುವುದು ತಪ್ಪೆಂದು ಹೇಳಲಾಗುತ್ತಿದೆ. ಅವರನ್ನು ಅಡುವ ಇಲೆವೆನ್​ನಲ್ಲಿ ಸೇರಿಸಲೆಂದೇ ಹಾಗೆ ಮಾಡಲಾಗಿದೆ ಎಂದು ಕ್ರಿಕೆಟ್ ಪ್ರೇಮಿಗಳು ಆರೋಪಿಸುತ್ತಿದ್ದಾರೆ.

India vs Australia Test Series | ಪೂಜಾರಾ ಸ್ಥಾನದಲ್ಲಿ ರೋಹಿತ್ ಶರ್ಮರನ್ನು ಉಪನಾಯಕನೆಂದು ಘೋಷಿಸಿದ ಬಿಸಿಸಿಐ
CEAT ಟಾಯರ್ಸ್​​, ನಾಯ್ಸ್​, ಹಬ್ಲಾಟ್, ಟ್ರುಸಾಕ್ಸ್ ಮತ್ತು ಡ್ರೀಮ್​ 11 ಸೇರಿ ಸಾಕಷ್ಟು ಬ್ರ್ಯಾಂಡ್​ಗಳ ರಾಯಭಾರಿ ಆಗಿದ್ದಾರೆ ರೋಹಿತ್​. ಇದರಿಂದ ರೋಹಿತ್​ 60-70 ಕೋಟಿ ರೂಪಾಯಿ ಗಳಿಸುತ್ತಾರೆ. ಇನ್ನು, ಬ್ರ್ಯಾಂಡ್​ಗಳ ಶೂಟ್​ಗೆ ಒಂದು ದಿನಕ್ಕೆ ರೋಹಿತ್​ ಚಾರ್ಜ್​ ಮಾಡೋದು ಬರೋಬ್ಬರಿ ಒಂದು ಕೋಟಿ ರೂಪಾಯಿ.

Updated on: Jan 01, 2021 | 8:47 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು, ಬುಧವಾರವಷ್ಟೇ ಮೆಲ್ಬರ್ನ್​ನಲ್ಲಿ ಟೀಮನ್ನು ಸೇರಿಕೊಂಡಿರುವ ರೋಹಿತ್ ಶರ್ಮ ಅವರನ್ನು ಅಸ್ಟ್ರೇಲಿಯಾ ವಿರುದ್ಧ ಈಗ ಜಾರಿಯಲ್ಲಿರುವ ಟೆಸ್ಟ್​ ಸರಣಿಯ ಉಳಿದೆರಡು ಪಂದ್ಯಗಳಿಗೆ ಟೀಮಿನ ಉಪ ನಾಯಕನನ್ನಾಗಿ ನೇಮಕ ಮಾಡಿದೆ. ಅಲ್ಲಿಗೆ ಶರ್ಮ ಸಿಡ್ನಿಯಲ್ಲಿ 7ರಂದು ಆರಂಭವಾಗಲಿರುವ ಮೂರನೆ ಟೆಸ್ಟ್​ ಆಡುವುದು ಖಚಿತ ಅಂತಾಯಿತು.

ವಿರಾಟ್ ಕೊಹ್ಲಿ ಪಿತೃತ್ವದ ರಜೆ ಪಡೆದು ಸ್ವದೇಶಕ್ಕೆ ವಾಪಸ್ಸಾದ ನಂತರ ಉಪನಾಯಕರಾಗಿದ್ದ ಅಜಿಂಕ್ಯಾ ರಹಾನೆ ಅವರು ಸ್ವಾಭಾವಿಕವಾಗೇ ನಾಯಕನ ಸ್ಥಾನಕ್ಕೆ ಬಡ್ತಿ ಹೊಂದಿದರು ಮತ್ತು ಚೇತೇಶ್ವರ್ ಪೂಜಾರಾ ಅವರನ್ನು ಉಪನಾಯಕನಾಗಿ ಘೋಷಿಸಲಾಯಿತು. ಇದುವರೆಗೆ 79 ಟೆಸ್ಟ್​ಗಳನ್ನಾಡಿರುವ ಪೂಜಾರಾರನ್ನು ವೈಸ್ ಕ್ಯಾಪ್ಟನ್ ಮಾಡಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ.

ಕೇವಲ ಒಂದು ಟೆಸ್ಟ್​ನಲ್ಲಿ ಉಪನಾಯಕನ ಜವಾಬ್ದಾರಿ ನಿಭಾಯಿಸಿದ ನಂತರ ಪೂಜಾರಾ ಅದನ್ನು ರೋಹಿತ್​ಗೆ ಬಿಟ್ಟು ಕೊಡಬೇಕಾಗಿ ಬಂದಿದೆ. ಹೆಸರು ಹೇಳಿಕೊಳ್ಳಲಿಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ದರು ಪೂಜಾರಾಗೆ ಉಪ ನಾಯಕನ ಜವಾಬ್ದಾರಿ ವಹಿಸಿದ್ದು ತಾತ್ಕಾಲಿಕ ವ್ಯವಸ್ಥೆಯ ಭಾಗವಾಗಿತ್ತು ಅಂತ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

‘ಪೂಜಾರಾ ಅವರನ್ನು ಟೀಮಿನ ವೈಸ್ ಕ್ಯಾಪ್ಟನ್ ಆಗಿ ನೇಮಕ ಮಾಡಿದ್ದು ಒಂದು ಸ್ಟಾಪ್-ಗ್ಯಾಪ್ ವ್ಯವಸ್ಥೆಯಾಗಿತ್ತು, ರೋಹಿತ್ ಶರ್ಮ ಟೀಮಿಗೆ ವಾಪಸ್ಸಾದ ನಂತರ ಅವರು ಸ್ಥಾನ ತೆರವು ಮಾಡಬೇಕಿರುವುದು ಪೂರ್ವ ನಿಯೋಜಿತವಾಗಿತ್ತು. ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ರೋಹಿತ್ ಲೀಡರ್​ಶಿಪ್​ ಗುಂಪಿನ ಭಾಗವಾಗಲಿದ್ದಾರೆ ಎಂದು ಮೊದಲೇ ನಿರ್ಧರಿಸಲಾಗಿತ್ತು. ಅವರು ಸುದೀರ್ಘ ಸಮಯದಿಂದ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ, ಅವರಿಗೆ ನಾಯಕತ್ವದ ಅನುಭವ ಇದೆ’ ಎಂದು ಆ ಅಧಿಕಾರಿ ಹೇಳಿದ್ದಾರೆ.

ಚೇತೇಶ್ವರ್ ಪೂಜಾರಾ

ಆದರೆ, ನೆಟ್ಟಿಗರು ಬಿಸಿಸಿಐನ ಈ ಕ್ರಮವನ್ನು ಖಂಡಿಸುತ್ತಿದ್ದಾರೆ. ಗುರುಕೀರತ್ ಸಿಂಗ್ ಗಿಲ್ ಎನ್ನುವವರು ತಮ್ಮ ಟ್ವಿಟರ್ ಹ್ಯಾಂಡಲ್​ನಲ್ಲಿ, ‘ಪೂಜಾರಾ ಅಥವಾ ಅಶ್ವಿನ್ ಅವರನ್ನು ವೈಸ್ ಕ್ಯಾಪ್ಟನ್ ಆಗಿ ನೇಮಕ ಮಾಡದಿರುವುದು ಹಗಲು ದರೋಡೆಯಾಗಿದೆ. ಬೇರೆಯವರು ಬಿಸಿಸಿಐ ಬಗ್ಗೆ ಏನು ಯೋಚಿಸುತ್ತಿದ್ದಾರೋ ಗೊತ್ತಿಲ್ಲ, ಆದರೆ, ಕಳೆದ ಸುಮಾರು 15 ತಿಂಗಳುಗಳಲ್ಲಿ ಅಲ್ಲಿನ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಮತ್ತು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ವಿವೇಕಹೀನವಾಗಿವೆ. ಉತ್ತಮ ಕ್ರಿಕೆಟ್ ಆಟಗಾರರು ಉತ್ತಮ ಆಡಳಿತಗಾರರಾಗುವುದು ಸಾಧ್ಯವಿಲ್ಲ ಅಂತ ಅನಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಗುರುಕೀರತ್ ಅಪರೋಕ್ಷವಾಗಿ ಸೌರವ್ ಗಂಗೂಲಿಯನ್ನು ದೂಷಿಸುತ್ತಿರುವುದು ಸ್ಪಷ್ಟವಾಗಿದೆ. ಕೃಷ್ಣ ಶುಕ್ಲಾ ಎನ್ನುವವರು, ‘ಯಾವ ಆಧಾರದಲ್ಲಿ ರೋಹಿತ್​ರನ್ನು ನೇಮಕ ಮಾಡಲಾಗಿದೆ? ವಾಸ್ತವದಲ್ಲಿ ಹೆಚ್ಚು ಅನುಭವಿಯಾಗಿರುವ ರವಿಚಂದ್ರನ್ ಆಶ್ವಿನ್ ಆ ಜವಾಬ್ದಾರಿಗೆ ಅರ್ಹರು. ಅವರಲ್ಲಿ ನಾಯಕತ್ವದ ಗುಣಗಳು ಹೇರಳವಾಗಿವೆ’ ಎಂದಿದ್ದಾರೆ.

ವಿವೇಕ್ ಕೌಲ್ ಹೆಸರಿನ ಒಬ್ಬ ವ್ಯಕ್ತಿ, ‘ರೋಹಿತ್ ಟೀಮಿನಲ್ಲಿ ಸ್ಥಾನ ಗಳಿಸಲಾದರೂ ಯೋಗ್ಯರೆ? ಯಾವ ಆಧಾರದಲ್ಲಿ ಅವರು ವೈಸ್ ಕ್ಯಾಪ್ಟನ್? ಭಾರತದ ನಿರ್ಜೀವ ಪಿಚ್​ಗಳಲ್ಲಿ ಗಳಿಸಿದ ರನ್​ಗಳ ಆಧಾರದಲ್ಲಿಯೇ? ದಕ್ಷಿಣ ಆಫ್ರಿಕ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಅವರ ಬ್ಯಾಟಿಂಗ್ ಸರಾಸರಿ ಕೇವಲ 28! ಹೇವರಿಕೆ ಹುಟ್ಟಿಸುವ ಸಂಗತಿಯಿದು, ಬಾಂಬೆ ಲಾಬಿ ಮತ್ತೆ ತನ್ನ ಬಾಲ ಬಿಚ್ಚಿರುವಂತಿದೆ’ ಎಂದಿದ್ದಾರೆ.

ರವಿಚಂದ್ರನ್ ಅಶ್ವಿನ್

ಸಾಹಿಲ್ ಹೆಸರಿನ ಇನ್ನೊಬ್ಬರು, ‘ರೋಹಿತ್​ರನ್ನು ಆಡುವ ಇಲೆವೆನ್​ನಲ್ಲಿ ತರಬೇಕಿದೆ, ಅದಕ್ಕೆಂದೇ ಅವರನ್ನು ವೈಸ್ ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿದೆ. ಕೇವಲ ಒಂದು ವರ್ಷದ ಹಿಂದೆ ಅವರಿಗೆ ಟೀಮಿನಲ್ಲಿ ಖಾಯಂ ಸ್ಥಾನವಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ. ರೋಹಿತ್ ಪರವಾಗಿಯೂ ಕೆಲವರು ಟ್ವೀಟ್ ಮಾಡಿ, ಅವರನ್ನು ಉಪ ನಾಯಕನಾಗಿ ನೇಮಿಸಿರುವುದು ಅತ್ಯಂತ ಸೂಕ್ತ ಎಂದಿದ್ದಾರೆ.

ಈ ಬೆಳವಣಿಗೆಗಳಿಂದ ರೋಹಿತ್ ಮೂರನೆ ಟೆಸ್ಟ್ ಆಡುವುದು ಖಾತ್ರಿಯಾದಂತಾಗುತ್ತದೆ. ಪ್ರಾಯಶಃ ಅವರು ಶುಭ್​ಮನ್ ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅಡಿಲೇಡ್ ಮತ್ತು ಮೆಲ್ಬರ್ನ್​ನಲ್ಲಿ ರನ್ ಗಳಿಸಲು ವಿಫಲರಾದ ಮಾಯಾಂಕ್ ಆಗರ್​ವಾಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ, ಹನುಮ ವಿಹಾರಿ ಸ್ಥಾನದಲ್ಲಿ ಆಡಿಸಬಹುದು. ಹಾಗಾದಲ್ಲಿ ವಿಹಾರಿ ತಂಡದಿಂದ ಅಡುವ ಇಲೆವೆನ್​ನಿಂದ ಹೊರ ಬೀಳುತ್ತಾರೆ.

ರೋಹಿತ್, ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿ ಮೆಲ್ಬರ್ನ್​ನಲ್ಲಿರುವ ಟೀಮನ್ನು ಸೇರಿಕೊಂಡು ಅಭ್ಯಾಸದಲ್ಲಿ ತೊಡಗಿದ್ದಾರೆ.

Published On - 8:13 pm, Fri, 1 January 21