AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series | ಬೇರೆಯವರಂತೆ ಮೈದಾನದಲ್ಲಿ ಹಾವಭಾವ ಪ್ರದರ್ಶಿಸದ ರಹಾನೆ ಒಬ್ಬ ಶ್ರೇಷ್ಠ ನಾಯಕ: ಅಖ್ತರ್

ಮೆಲ್ಬರ್ನ್ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ತೋರಿದ ಮನೋಬಲ ಮತ್ತು ಹೋರಾಟ ಮನೋಭಾವವನ್ನು ಪಾಕಿಸ್ತಾನದ ಶೋಯೆಬ್ ಅಖ್ತರ್ ಅವರನ್ನು ದಂಗಾಗಿಸಿದೆ. ಅಜಿಂಕ್ಯಾ ರಹಾನೆ ಮೆಲ್ಬರ್ನ್​ನಲ್ಲಿ ಬಾರಿಸಿದ ಶತಕ ಸರಣಿಯ ಟರ್ನಿಂಗ್ ಪಾಯಿಂಟ್ ಎನ್ನುವ ಅಖ್ತರ್, ಮುಂಬೈ ಆಟಗಾರ ಶ್ರೇಷ್ಠ ನಾಯಕನೆಂದು ಬಣ್ಣಿಸುತ್ತಾರೆ.

India vs Australia Test Series | ಬೇರೆಯವರಂತೆ ಮೈದಾನದಲ್ಲಿ ಹಾವಭಾವ ಪ್ರದರ್ಶಿಸದ ರಹಾನೆ ಒಬ್ಬ ಶ್ರೇಷ್ಠ ನಾಯಕ: ಅಖ್ತರ್
ಅಜಿಂಕ್ಯಾ ರಹಾನೆ
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 01, 2021 | 8:39 PM

Share

ಮೆಲ್ಬರ್ನ್​ನಲ್ಲಿ ಅಜಿಂಕ್ಯಾ ರಹಾನೆ ನಾಯಕತ್ವದ ಟೀಮ್ ಇಂಡಿಯಾ ದಾಖಲಿಸಿದ ಅಮೋಘ ಗೆಲುವು ಭಾರತದ ಬದ್ಧ ವೈರಿಗಳ ಮೇಲೆಯೂ ಪ್ರಭಾವ ಬೀರಿದೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಭಾರತೀಯರ ಸಾಧನೆಯನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಟೀಮಿನ ಎಲ್ಲ ಸದಸ್ಯರನ್ನು ಅಭಿನಂದಿಸಿರುವ ಅಖ್ತರ್, ಮೆಲ್ಬರ್ನ್​ನಲ್ಲಿ ರಹಾನೆ ಶ್ರೇಷ್ಠಮಟ್ಟದ ನಾಯಕತ್ವ ಪ್ರದರ್ಶಿಸಿದರು ಎಂದು ಹೇಳಿದ್ದಾರೆ.

ಒಂದು ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತು ಅದರ ಮುಂದಿನ ಪಂದ್ಯದಲ್ಲೇ ಉತ್ಕೃಷ್ಟ ಆಲ್​ರೌಂಡ್ ಆಟದ ಪ್ರದರ್ಶನ ನೀಡಿ ಅತಿಥೇಯ ಟೀಮನ್ನು ಅದರ ನೆಲದಲ್ಲೇ ಅಧಿಕಾರಯುತವಾಗಿ ಸೋಲಿಸುವ ಮೂಲಕ ಟೀಮ್ ಇಂಡಿಯಾ ಅಸಾಧಾರಣವೆನಿಸುವ ಮನೋಬಲವನ್ನು ಪ್ರದರ್ಶಿಸಿತು ಅಂತ ಅಖ್ತರ್ ಕ್ರೀಡಾ ಚ್ಯಾನಲೊಂದರ ಜತೆ ಮಾತಾಡುವಾಗ ಹೇಳಿದ್ದಾರೆ.

‘ಒಂದು ಸುಂದರ ಮುಂಜಾನೆ ನಾನು ಹಾಸಿಗೆಯಿಂದ ಎದ್ದು ಟಿವಿ ಆನ್ ಮಾಡಿದಾಗ ನಾನೇನು ನೋಡುತ್ತಿದ್ದ್ದೇನೆ ಅಂತ ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಇಂಡಿಯಾದ ಸ್ಕೋರ್ 36/9 ಅಂತ ಟಿವಿ ಪರದೆ ಮೇಲೆ ಕಂಡಿದ್ದನ್ನು ನೋಡಿ ದಂಗಾದೆ. ಇಂಡಿಯಾದ ಸ್ಕೋರ್ 36/9 ಇರಲಿಕ್ಕಿಲ್ಲ, 369 ಇರಬಹುದು ಅಂದುಕೊಂಡೆ. ಆದರೆ ಅದು ನಿಜಕ್ಕೂ 36/9 ಆಗಿತ್ತು. ಅಂಥ ಸ್ಥಿತಿ ಮತ್ತು ಅವಮಾನಕರ ಸೋಲಿನಿಂದ ಚೇತರಿಸಿಕೊಂಡು ಮುಂದಿನ ಟೆಸ್ಟ್​ನಲ್ಲೇ ಇಂಡಿಯಾದ ಆಟಗಾರರು ತೋರಿದ ಮನೋಬಲ ಮತ್ತು ಹೋರಾಟ ಮನೋಭಾವ ಅಪ್ರತಿಮವಾದದ್ದು. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇಂಥ ಮನೋಭಾವ ತೋರಿದಲ್ಲಿ ಮಾತ್ರ ಸವಾಲುಗಳನ್ನು ಎದುರಿಸುವುದು ಸಾಧ್ಯವಾಗುತ್ತದೆ’ ಎಂದು ಅಖ್ತರ್ ಹೇಳಿದ್ದಾರೆ.

ಶೋಯೆಬ್ ಅಖ್ತರ್

‘ಅಜಿಂಕ್ಯಾ ರಹಾನೆ ಅವರ ಕೂಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಪ್ರದರ್ಶಿಸಿದ ಮನೋಬಲ ಸಾಟಿಯಿಲ್ಲದ್ದು ಎಂದೇ ನಾನು ಹೇಳುತ್ತೇನೆ. ರಹಾನೆಯ ಕ್ಯಾಪ್ಟನ್ಸಿ ಭಿನ್ನವಾಗಿದೆ, ಅವರು ಮೈದಾನದಲ್ಲಿ ಬೇರೆಯವರಂತೆ ಹಾವಭಾವಗಳನ್ನು ಪ್ರದರ್ಶಿಸುವುದಿಲ್ಲ. ಅತ್ಯಂತ ಶಾಂತ ಮನೋಭಾವದಿಂದಲೇ ಅವರ ತಮ್ಮ ಪ್ಲ್ಯಾನ್​ಗಳನ್ನು ಜಾರಿಗೊಳಿಸುತ್ತಾರೆ. ಅವರ ಯೋಗ್ಯ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅದ್ಭುತವಾಗಿ ಆಡಿತು’ ಎಂದು ಅಖ್ತರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಅವರಂಥ ದಿಗ್ಗಜರ ಅನುಪಸ್ಥಿತಿಯಲ್ಲೂ ಟೀಮ್ ಇಂಡಿಯಾ ಅಸ್ಟ್ರೇಲಿಯಾವನ್ನು ಅದರ ನೆಲದಲ್ಲೇ ಮಣಿಸಿದ್ದು ಮಹೋನ್ನತ ಸಾಧನೆ ಅಂತ ಅಖ್ತರ್ ಹೇಳಿದ್ದಾರೆ.

‘ಅಜಿಂಕ್ಯಾ ರಹಾನೆ ಬಗ್ಗೆ ಯಾರೇನೇ ಹೇಳಲಿ, ಟೀಮ್ ಇಂಡಿಯಾದ ನಿಜವಾದ ಬಲವೆಂದರೆ ಅದರ ಬೆಂಚ್ ಆಟಗಾರರು. ಈ ಮೀಸಲು ಆಟಗಾರರು ತಮಗೆ ದೊರೆತ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಟೀಮಿಗೆ ಗೆಲುವು ತಂದುಕೊಡುವ ಪ್ರದರ್ಶನಗಳನ್ನು ನೀಡಿದರು. ನಾನು ಆಗಲೇ ಹೇಳಿದಂತೆ ಒಂದು ಪಂದ್ಯದಲ್ಲಿ ಹೀನಾಯವಾಗಿ ಸೋತು ಮತ್ತೊಂದರಲ್ಲಿ ಅದನ್ನು ಮರೆಸುವ ಆಟವಾಡಿ ಒಂದು ಸುಲಭ ಗೆಲುವು ದಕ್ಕಿಸಿಕೊಳ್ಳವುದು ಸುಲಭದ ಮಾತಲ್ಲ. ಟೀಮ್ ಇಂಡಿಯಾಗೆ ಮತ್ತು ಅದರ ನಾಯಕ ರಹಾನೆಗೆ ಅಭಿನಂದನೆಗಳು’ ಎಂದು ಅಖ್ತರ್ ಹೇಳಿದ್ದಾರೆ.

ಮುಂದಿನ ಪಂದ್ಯಗಳಿಗೆ ಡೇವಿಡ್ ವಾರ್ನರ್ ಮತ್ತು ರೋಹಿತ್ ಶರ್ಮ ವಾಪಸ್ಸಾಗುವುದರಿಂದ ಎರಡು ಟೀಮುಗಳ ನಡುವಿನ ಸೆಣಸಾಟ ಮತ್ತಷ್ಟು ತೀವ್ರಗೊಳ್ಳಲಿದೆ ಅಂತ ಅಖ್ತರ್ ಹೇಳಿದ್ದಾರೆ.

ಮೆಲ್ಬರ್ನ್​ನಲ್ಲಿ ವಿಕೆಟ್ ಪತನವನ್ನು ಸಂಭ್ರಮಿಸುತ್ತಿರುವ ಟೀಮ್ ಇಂಡಿಯಾ

‘10-15 ವರ್ಷಗಳ ಹಿಂದೆ, ಅಸ್ಟ್ರೇಲಿಯಾವನ್ನು ಅದರ ನೆಲದಲ್ಲಿ ಭಾರತವಾಗಲೀ, ಪಾಕಿಸ್ತಾನವಾಗಲೀ ಸೋಲಿಸಬಹುದು ಅಂತ ಯಾರಾದರೂ ಯೋಚಿಸಿದ್ದರೇ? ಉಪಖಂಡದ ಯಾವುದೇ ಟೀಮ್ ಆಸ್ಟ್ರೇಲಿಯಾವನ್ನು ಸೋಲಿಸಬಹದು ಅಂತ ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈ ಸರಣಿಯಲ್ಲಿ ಮತ್ತಷ್ಟು ಉತ್ಕಟವಾದ ಹಣಾಹಣಿಯನ್ನು ನೋಡುವ ಅಪೇಕ್ಷೆ ಇಟ್ಟುಕೊಂಡಿದ್ದೇನೆ. ಇಂಡಿಯಾ ಸರಣಿ ಗೆಲ್ಲಬೇಕೆಂಬ ಆಸೆ ನನ್ನದು. ಯಾಕೆಂದರೆ ಸರಣಿಯಲ್ಲಿ ಅವರು ನಂಬಲಸದಳವಾದ ಕಮ್​ಬ್ಯಾಕ್ ಮಾಡಿದ್ದಾರೆ ಮತ್ತು ಯಾರೂ ನಿರೀಕ್ಷಿಸದಂಥ ಮನೋಬಲವನ್ನು ಪ್ರದರ್ಶಿಸಿದ್ದಾರೆ. ರಹಾನೆ ಅವರ ಸೆಂಚುರಿ ಸರಣಿ ಸ್ಥಿತ್ಯಂತರಕ್ಕೆ ಕಾರಣವಾಗಿದೆ’ ಎಂದು ಅಖ್ತರ್ ಹೇಳಿದ್ದಾರೆ.

Published On - 7:23 pm, Fri, 1 January 21