ಕ್ರೀಡೆಗಳ ಮೇಲೂ ಕರಾಳ ಛಾಯೆ ಬೀರಿದ ಕೊವಿಡ್-19 ಮಹಾಮಾರಿ
ಕೊವಿಡ್-19 ಮಹಾಮಾರಿಯು ಎಲ್ಲ ಕ್ಷೇತ್ರಗಳ ಮೇಲೆ ತನ್ನ ಕರಾಳ ಛಾಯೆ ಬೀರಿದಂತೆ ಕ್ರಿಡಾರಂಗವನ್ನೂ ಅಸ್ತವ್ಯಸ್ತಗೊಳಿಸಿತು. ಟೊಕಿಯೊ ಒಲಂಪಿಕ್ಸ್ ಸೇರಿದಂತೆ ಹಲವಾರು ಕ್ರೀಡಾಕೂಟಗಳು ರದ್ದಾದವು ಇಲ್ಲವೇ ಮುಂದೂಡಲ್ಪಟ್ಟವು. ಕೆಲವು ಟೂರ್ನಮೆಂಟ್ಗಳನ್ನು ಪ್ರೇಕ್ಷಕರಿಲ್ಲದ ಮೈದಾನಗಳಲ್ಲಿ ಆಡುವಂತಾಗಿದ್ದು ದೊಡ್ಟ ದುರಂತ.

ಮನುಕುಲವನ್ನು ಇನ್ನಿಲ್ಲದಂತೆ ಕಾಡಿದ ಇನ್ನೂ ಕಾಡುತ್ತಿರುವ ಕೊವಿಡ್-19 ಮಹಾಮಾರಿ ಕ್ರೀಡಾಕ್ಷೇತ್ರದ ಮೇಲೂ ದೊಡ್ಡ ಮತ್ತು ಅಷ್ಟೇ ಕೆಟ್ಟ ಪರಿಣಾಮ ಬೀರಿದೆ. ಈ ವ್ಯಾಧಿಯಿಂದಾಗಿ ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್ ಸೇರಿದಂತೆ 2020 ರಲ್ಲಿ ನಡೆಯಬೇಕಿದ್ದ ಎಲ್ಲ ಕ್ರೀಡೆಗಳ ಟೂರ್ನಮೆಂಟ್ ರದ್ದಾದವು ಇಲ್ಲವೇ ಮುಂದೂಡಲ್ಪಟ್ಟವು. ಎಲ್ಲಕ್ಕಿಂತ ಮುಖ್ಯವಾಗಿ ಈ ವರ್ಷ ಜುಲೈನಲ್ಲಿ ನಡಯಬೇಕಿದ್ದ ವಿಶ್ವದ ಅತ್ಯುನ್ನತ ಕ್ರೀಡಾಮೇಳ ಒಲಂಪಿಕ್ಸ್ ಕೂಡ 2021 ಕ್ಕೆ ಮುಂದೂಡಲಾಯಿತು.
ಕ್ರಿಕೆಟ್ ಅನ್ನು ಧರ್ಮವೆಂದು ಪರಿಗಣಿಸಲ್ಪಡುವ ಭಾರತದಲ್ಲಿ 2020 ರ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ಮಾತ್ರ ಆಟವನ್ನು ನೋಡುವ ಅವಕಾಶ ಸಿಕ್ಕಿತು. ವರ್ಷಾರಂಭದಲ್ಲಿ ಭಾರತ ನ್ಯೂಜಿಲೆಂಡ್ನಲ್ಲಿ ವಿರುದ್ಧ ಟೆಸ್ಟ್ ಮತ್ತು ಸೀಮಿತ ಓವರ್ಗಳ ಸರಣಿ ಆಡಿದ ನಂತರ ಸ್ವದೇಶದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಮೂರು ಒಂದು ದಿನದ ಪಂದ್ಯಗಳ ಸರಣಿಯನ್ನು ಭಾರತದಲ್ಲಿ ಆಡಿತು. ಅದಾದ ಮೇಲೆ ಏಪ್ರಿಲ್-ಮೇನಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರಿಮೀಯರ್ ಲೀಗ್ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಸ್ಥಳಾಂತರಗೊಂಡು ಸೆಪ್ಟೆಂಬರ್-ನವೆಂಬರ್ ನಡುವೆ ಆಯೋಜನೆಗೊಂಡಿತು. ಟೂರ್ನಿಯ ಎಲ್ಲ ಪಂದ್ಯಗಳು ಖಾಲಿ ಸ್ಟೇಡಿಯಂಗಳಲ್ಲಿ ನಡೆದವು.
ಆಮೇಲೆ ಶುರುವಾಗಿದ್ದು ಬಹು-ನಿರೀಕ್ಷಿತ ಭಾರತದ ಡೌನ್ ಅಂಡರ್ ಪ್ರವಾಸ. ಮೂರು ಒಡಿಐ ಮತ್ತು ಅಷ್ಟೇ ಸಂಖ್ಯೆಯ ಟಿ20ಐ ಪಂದ್ಯಗಳ ನಂತರ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಈಗ ಜಾರಿಯಲ್ಲಿದೆ.
ಏತನ್ಮಧ್ಯೆ, 2020 ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಪುರುಷರ ಟಿ20 ವಿಶ್ವಕಪ್ ಟೂರ್ನಮೆಂಟನ್ನು ಒಂದು ವರ್ಷದ ಅವಧಿಗೆ ಮುಂದೂಡಲಾಯಿತು. ಸದರಿ ವಿಶ್ವಕಪ್ ಪಂದ್ಯಾವಳಿಯು ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಆಯೋಜಿಸಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಘೋಷಿಸಿದೆ. 2022 ರ ಟಿ20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

ಐಪಿಎಲ್ 2020 ಗೆದ್ದ ಮುಂಬೈ ಇಂಡಿಯನ್ಸ್ ತಂಡ
ಟೊಕಿಯೊ 2020 ಒಲಂಪಿಕ್ಸ್ ಮುಂದೂಡಲ್ಪಟ್ಟಿದ್ದು ಪ್ರಪಂಚದಾದ್ಯಂತ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಸಕ್ತರಿಗೆ ಅತೀವ ನಿರಾಶೆಗೊಳಿಸಿತು. 4 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಕ್ರೀಡಾಕೂಟವಿದು. ಒಲಂಪಿಕ್ಸ್ನಲ್ಲಿ ಪದಕವೊಂದನ್ನು ಗೆಲ್ಲುವುದು ಪ್ರತಿ ಆಥ್ಲೀಟ್ನ ಕನಸಾಗಿರುತ್ತದೆ. ಅವರ ಕನಸುಗಳು ಒಂದು ವರ್ಷದ ಮಟ್ಟಿಗೆ ಮುಂದೆ ಹೋಗಿವೆ. ಭಾರತದ ಹಲವಾರು ಕ್ರೀಡಾಪಟುಗಳು ಸಹ ಟೊಕಿಯೊ ಒಲಂಪಿಕ್ಸ್ನಲ್ಲಿ ಪದಕ ಗೆಲ್ಲುವ ಮಹದಾಸೆ ಇಟ್ಟುಕೊಂಡಿದ್ದಾರೆ. ಅಸಲಿಗೆ, ಜುಲೈ 24ರಿಂದ ಆಗಸ್ಟ್ 9, 2020ರವರಗೆ ನಡೆಯಬೇಕಿದ್ದ ಈ ಕ್ರೀಡಾಕೂಟ ಈಗ 23 ಜುಲೈ ರಿಂದ 8 ಆಗಸ್ಟ್ರವರೆಗೆ ಅದೇ ಟೊಕಿಯೋದಲ್ಲಿ ನಡೆಯಲಿದೆ.
ಪುರುಷ ಮತ್ತು ಮಹಿಳೆಯರ ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್ ಟೂರ್ನಮೆಂಟ್ಗಳ ವಿಷಯಕ್ಕೆ ಬಂದರೆ ವಿಂಬಲ್ಡನ್ ಪಂದ್ಯಾವಳಿಗೆ ಇರುವ ಮಹತ್ವ, ಪ್ರತಿಷ್ಠೆ ಬೇರೆ ಯಾವುದೆ ಟೆನಿಸ್ ಟೂರ್ನಿಗೆ ಇಲ್ಲ. ಅಥ್ಲೀಟೊಬ್ಬನಿಗೆ ಒಲಂಪಿಕ್ಸ್ನಲ್ಲಿ ಪದಕ ಗೆಲ್ಲುವ ಮಹತ್ವಾಕಾಂಕ್ಷೆ ಇರುವಂತೆ ಟೆನಿಸ್ ಆಟಗಾರ/ಆಟಗಾರ್ತಿಗೆ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಕನಸಿರುತ್ತದೆ. ಆದರೆ, ದುರಂತವೆಂದರೆ 134 ವರ್ಷಗಳಿಂದ ಆಯೋಜಿಸಲ್ಪಡುತ್ತಿರುವ ಈ ಟೂರ್ನಿಯು ಕೊವಿಡ್-19 ಪ್ಯಾಂಡೆಮಿಕ್ನಿಂದಾಗಿ 2020 ರ ಆವೃತ್ತಿ ನಡೆಯಲೇ ಇಲ್ಲ.
ಈ ಬಾರಿಯ ಫ್ರೆಂಚ ಓಪನ್ ಕೂಡ ಮುಂದೂಡಲ್ಪಟ್ಟು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ಆಯೋಜಿಸಲಾಯಿತು. ಅದಾದ ಮೇಲೆ ವರ್ಷದ ಕೊನೆಯ ಗ್ರ್ಯಾಂಡ್ ಸ್ಲ್ಯಾಮ್ ಯುಎಸ್ ಓಪನ್ ನಿಗದಿತ ಸಮಯಕ್ಕೆ ನಡೆಯಿತಾದರೂ ಕೆಲವೇ ಪ್ರೇಕ್ಷಕರು ಪಂದ್ಯಗಳನ್ನು ವೀಕ್ಷಿಸಿದರು. ವರ್ಷದ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಆಗಿರುವ ಆಸ್ಟ್ರೇಲಿಯನ್ ಓಪನ್ 2021ರಲ್ಲಿ ನಿಗದಿತ ಸಮಯಕ್ಕೆ ನಡೆಯದೆ ಎರಡು ವಾರಗಳಷ್ಟು ಕಾಲ ಮುಂದೂಡಲಾಗಿದೆ.
ಒಲಂಪಿಕ್ಸ್, ಟೆನಿಸ್ ಮತ್ತು ಕ್ರಿಕೆಟ್ನಂತೆ ಭಾರಿ ಸಮಸ್ಯೆಗೊಳಗಾದ ಮತ್ತೊಂದು ಕ್ರೀಡೆಯೆಂದರೆ ಸಾಕರ್. ಅಂತರರಾಷ್ಟ್ರೀಯ ಫುಟ್ಬಾಲ್ ಫೆಡರೇಶನ್ (ಫಿಫಾ) ಇತ್ತೀಚಿಗೆ ಬಿಡುಗಡೆ ಮಾಡಿರುವ ಮಾಹಿತಿಯೊಂದರ ಪ್ರಕಾರ ಈ ವರ್ಷ ಅದು 14.4 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ! ಫಿಫಾದ 211 ಸದಸ್ಯ ರಾಷ್ಟ್ರಗಳ ಪೈಕಿ 150 ಆರ್ಥಿಕ ನೆರವಿಗಾಗಿ ಮನವಿ ಸಲ್ಲಿಸಿವೆ. ಒಂದು ಅಂದಾಜಿನ ಪ್ರಕಾರ ಯುರೋಪಿಯನ್ ಕ್ಲಬ್ ಅಸೋಸಿಯೇಷನ್ 4.7 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆಯಂತೆ. ಕೊವಿಡ್ನಿಂದಾಗಿ ವಿಶ್ವದ ಯಾವ ಮೂಲೆಯಲ್ಲೂ ಸಾಕರ್ ಟೂರ್ನಮೆಂಟ್ಗಳು ನಡೆಯಲಿಲ್ಲ.

ಟೊಕಿಯೊ ಒಲಂಪಿಕ್ಸ್ ಲೊಗೊ
ಮೇಲೆ ಉಲ್ಲೇಖಿಸಿರುವ ಕ್ರೀಡೆಗಳಷ್ಟೇ ಕೊವಿಡ್-19 ಪ್ಯಾಂಡೆಮಿಕ್ನಿಂದ ತೊಂದರೆಗೊಳಗಾಗಿಲ್ಲ., ಪ್ರತಿಯೊಂದು ಕ್ರೀಡೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಯನ್ನು ಅದು ಸ್ಥಗಿತಗೊಳಿಸಿತು. ಕೋಟ್ಯಾಂತರ ರೂಪಾಯಿಗಳ ನಷ್ಟದ ಜೊತೆಗೆ ಕ್ರೀಡಾ ಮನರಂಜನೆಯನ್ನೂ ಆದು ಹಿಂಡಿ ಹಿಪ್ಪೆ ಮಾಡಿತು.
Published On - 10:01 pm, Thu, 31 December 20
