ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೃಷ್ಣಪ್ಪ ಗೌತಮ್
Krishnappa Gowtham Retires: ಕನ್ನಡ ಕ್ರಿಕೆಟ್ ತಾರೆ ಕೃಷ್ಣಪ್ಪ ಗೌತಮ್ ತಮ್ಮ 37ನೇ ವಯಸ್ಸಿನಲ್ಲಿ 14 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಆಫ್ ಸ್ಪಿನ್ನರ್ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಗೌತಮ್, ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಅನೇಕ ಸ್ಮರಣೀಯ ಪ್ರದರ್ಶನ ನೀಡಿದ್ದಾರೆ. ಭಾರತ ತಂಡಕ್ಕೆ ಕೇವಲ ಒಂದು ಪಂದ್ಯ ಆಡಿದ್ದರೂ, ಕರ್ನಾಟಕ ತಂಡಕ್ಕೆ ಅವರು ನೀಡಿದ ಕೊಡುಗೆ ಅಪಾರ. ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಹಲವು ಐಪಿಎಲ್ ತಂಡಗಳ ಭಾಗವಾಗಿದ್ದರು.

2025 ರ ವರ್ಷ ಅಂತ್ಯವಾಗುತ್ತಿರುವ ಬೆನ್ನಲ್ಲೇ ಕರ್ನಾಟಕ ಕ್ರಿಕೆಟ್‌ಗೆ ಆಘಾತ ಎದುರಾಗಿದೆ. ರಾಜ್ಯದ ಖ್ಯಾತ ಕ್ರಿಕೆಟಿಗ ಕೃಷ್ಣಪ್ಪ ಗೌತಮ್ (Krishnappa Gowtham) ತಮ್ಮ 37 ನೇ ವಯಸ್ಸಿನಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ಗೌತಮ್ ತಮ್ಮ 14 ವರ್ಷಗಳ ಕ್ರಿಕೆಟ್ ಬದುಕಿಗೆ ಫುಲ್ಸ್ಟಾಪ್ ಇಟ್ಟಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ರಾಜ್ಯ ತಂಡವನ್ನು ಹಲವು ಗೆಲುವುಗಳಿಗೆ ಮುನ್ನಡೆಸಿದ್ದ ಗೌತಮ್ಗೆ ರಾಷ್ಟ್ರೀಯ ತಂಡದಲ್ಲಿ ಆಡಲು ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಟೀಂ ಇಂಡಿಯಾ ಪರ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿರುವ ಗೌತಮ್ ಐಪಿಎಲ್‌ನಲ್ಲಿ (IPL) ಮೂರು ಸ್ಟಾರ್ ತಂಡಗಳನ್ನು ಪ್ರತಿನಿಧಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.
ನಿವೃತ್ತಿ ಘೋಷಿಸಿದ ಕೃಷ್ಣಪ್ಪ ಗೌತಮ್
ಆಫ್ ಸ್ಪಿನ್ನರ್ ಹಾಗೂ ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ಕರ್ನಾಟಕದ ಸ್ಟಾರ್ ಆಲ್‌ರೌಂಡರ್ ಮತ್ತು ಮಾಜಿ ಐಪಿಎಲ್ ಆಟಗಾರ ಕೃಷ್ಣಪ್ಪ ಗೌತಮ್ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ದೇಶೀಯ ಕ್ರಿಕೆಟ್ ಜೊತೆಗೆ ಐಪಿಎಲ್‌ನಲ್ಲಿ ಅನೇಕ ಸ್ಮರಣೀಯ ಪ್ರದರ್ಶನಗಳನ್ನು ನೀಡಿದ್ದ ಗೌತಮ್ ಅವರ ಕ್ರಿಕೆಟ್ ಪ್ರಯಾಣವು 2012 ರ ರಣಜಿ ಟ್ರೋಫಿಯೊಂದಿಗೆ ಪ್ರಾರಂಭವಾಯಿತು, ಉತ್ತರ ಪ್ರದೇಶ ವಿರುದ್ಧದ ತಮ್ಮ ಚೊಚ್ಚಲ ಪಂದ್ಯವನ್ನಾಡಿದ್ದ ಗೌತಮ್, ಸುರೇಶ್ ರೈನಾ ಮತ್ತು ಭುವನೇಶ್ವರ್ ಕುಮಾರ್‌ರಂತಹ ಸ್ಟಾರ್ ಆಟಗಾರರನ್ನು ಔಟ್ ಮಾಡಿದ್ದರು.
ಗೌತಮ್ ವೃತ್ತಿಜೀವನ
2016-17ರ ರಣಜಿ ಟ್ರೋಫಿ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಗೌತಮ್ ಆ ಆವೃತ್ತಿಯಲ್ಲಿ ಆಡಿದ್ದ ಎಂಟು ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಕಬಳಿಸಿದ್ದರು. ಹಾಗೆಯೇ ಅದೇ ಆವೃತ್ತಿಯಲ್ಲಿ ಮೈಸೂರಿನಲ್ಲಿ ನಡೆದ ಅಸ್ಸಾಂ ವಿರುದ್ಧ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಪಂದ್ಯಗಳನ್ನು ಸೇರಿದಂತೆ ಒಟ್ಟು 320 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿರುವ ಗೌತಮ್ ಬ್ಯಾಟಿಂಗ್ನಲ್ಲಿ ಹಲವಾರು ಉಪಯುಕ್ತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. 2023 ರವರೆಗೆ ಕರ್ನಾಟಕ ತಂಡದ ಪ್ರಮುಖ ಸದಸ್ಯರಾಗಿದ್ದ ಗೌತಮ್, 2021 ರ ಶ್ರೀಲಂಕಾ ಪ್ರವಾಸದಲ್ಲಿ ಭಾರತದ ಪರ ಏಕೈಕ ಏಕದಿನ ಪಂದ್ಯವನ್ನಾಡಿ ವಿಕೆಟ್ ಕೂಡ ಪಡೆದಿದ್ದರು. ಆದಾಗ್ಯೂ, ಆ ನಂತರ ಅವರು ಟೀಂ ಇಂಡಿಯಾ ಪರ ಎಂದಿಗೂ ಆಡಲಿಲ್ಲ. ಕೃಷ್ಣಪ್ಪ ಗೌತಮ್ ಭಾರತ ತಂಡದಲ್ಲಿ ಆಡಿದ್ದು ಏಕೈಕ ಪಂದ್ಯವಾದರೂ, ಭಾರತ ಎ ತಂಡದ ಪರ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಈ ತಂಡದ ಪರ ಅವರು ನ್ಯೂಜಿಲೆಂಡ್ ಎ, ವೆಸ್ಟ್ ಇಂಡೀಸ್ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ವಿರುದ್ಧ ಹಲವಾರು ಬಾರಿ ಆಡಿದ್ದರು.
🚨 RETIREMENT NEWS 🚨Karnataka’s all-rounder Krishnappa Gowtham has officially announced his retirement from cricket 🏏💔 Gowtham leaves behind memories that Karnataka cricket fans won’t forget. A true domestic warrior who always stepped up when the team needed him 💪🔥🫡🏏 pic.twitter.com/2tXIaI5oi2
— sports__life (@statecraft__) December 22, 2025
ಐಪಿಎಲ್‌ನಲ್ಲಿ ಅಧಿಕ ಬೆಲೆ
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ ಎನಿಸಿಕೊಂಡಿದ್ದ ಕೃಷ್ಣಪ್ಪ ಗೌತಮ್ ಅವರನ್ನು ಐಪಿಎಲ್ 2021 ರ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ 9.25 ಕೋಟಿ ನೀಡಿ ಖರೀದಿಸಿತ್ತು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಇನ್ನು ಕರ್ನಾಟಕ ಪ್ರೀಮಿಯರ್ ಲೀಗ್‌ನ ಒಂದೇ ಪಂದ್ಯದಲ್ಲಿ 134 ರನ್ ಗಳಿಸಿ 8 ವಿಕೆಟ್‌ಗಳನ್ನು ಪಡೆದ ಅಪರೂಪದ ದಾಖಲೆಯನ್ನು ಗೌತಮ್ ಹೊಂದಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್‌ರೌಂಡ್ ಪ್ರದರ್ಶನಗಳಲ್ಲಿ ಒಂದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:04 pm, Mon, 22 December 25
