ಪಾಕಿಸ್ತಾನ್ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಕೋಚ್ ಮೈಕ್ ಹೆಸ್ಸನ್
T20 World Cup 2026: ಟಿ20 ವಿಶ್ವಕಪ್ನಲ್ಲಿ ಈವರೆಗೆ ಮೂರು ಪಂದ್ಯಗಳನ್ನಾಡಿರುವ ಪಾಕಿಸ್ತಾನ್ ತಂಡ ಎರಡು ಮ್ಯಾಚ್ಗಳಲ್ಲಿ ಗೆದ್ದು ಒಂದು ಪಂದ್ಯವನ್ನು ಸೋತಿದೆ. ಹೀಗಾಗಿ ನಾಲ್ಕನೇ ಪಂದ್ಯವು ಪಾಕ್ ಪಾಲಿಗೆ ನಿರ್ಣಾಯಕ. ಈ ಮ್ಯಾಚ್ನಲ್ಲಿ ಗೆದ್ದರೆ ಮಾತ್ರ ಪಾಕಿಸ್ತಾನ್ ತಂಡ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ.

T20 World Cup 2026: ಟಿ20 ವಿಶ್ವಕಪ್ನ 27ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ್ ಹೀನಾಯ ಸೋಲನುಭವಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ 18 ಓವರ್ಗಳಲ್ಲಿ 114 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ 61 ರನ್ಗಳ ಅಂತರದಿಂದ ಪಾಕ್ ಪಡೆ ಸೋಲೊಪ್ಪಿಕೊಂಡಿದೆ.
ಈ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ತಂಡದ ಪ್ರದರ್ಶನದ ಬಗ್ಗೆ ಭಾರೀ ಟೀಕೆಗಳು ಕೇಳಿ ಬಂದಿದ್ದವು. ಈ ಟೀಕೆಗಳ ನಡುವೆಯೂ ಪಾಕ್ ತಂಡದ ಕೋಚ್ ಮೈಕ್ ಹೆಸ್ಸೆನ್ ಸೋಲಿನ ಕಾರಣಗಳನ್ನು ಪರಾಮರ್ಶಿಸಿದ್ದಾರೆ. ಭಾರತದ ವಿರುದ್ಧದ ಸೋಲಿಗೆ ಮೈಕ್ ಹೆಸ್ಸೆನ್ ನೀಡಿರುವ ಕಾರಣಗಳಾವುವು ಎಂದು ನೋಡುವುದಾದರೆ…
ಇಶಾನ್ ಕಿಶನ್ ಬ್ಯಾಟಿಂಗ್: ಭಾರತ ತಂಡದ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರ ಅಪ್ರತಿಮ ಆಟವೇ (77 ರನ್) ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿತು ಎಂದು ಮೈಕ್ ಹೆಸ್ಸನ್ ಒಪ್ಪಿಕೊಂಡಿದ್ದಾರೆ. ಕಿಶನ್ ನಿರ್ಭೀತಿಯಿಂದ ಬ್ಯಾಟ್ ಬೀಸಿದ್ದೇ ಪಂದ್ಯದ ಟರ್ನಿಂಗ್ ಪಾಯಿಂಟ್. ಅವರು ಮೈದಾನದ ಎರಡೂ ಬದಿಗಳಲ್ಲಿ ರನ್ ಗಳಿಸುವ ಮೂಲಕ ನಮ್ಮ ಸ್ಪಿನ್ನರ್‌ಗಳನ್ನು ಒತ್ತಡಕ್ಕೆ ಸಿಲುಕಿಸಿದರು ಎಂದು ಅವರು ವಿಶ್ಲೇಷಿಸಿದ್ದಾರೆ.
ಹೆಚ್ಚುವರಿ ರನ್‌ಗಳು: ಭಾರತ ಈ ಪಿಚ್‌ನಲ್ಲಿ ನಿರೀಕ್ಷಿತ ಸ್ಕೋರ್‌ಗಿಂತ ಸುಮಾರು 25 ರನ್ ಹೆಚ್ಚುವರಿಯಾಗಿ ಗಳಿಸಿತು. ಇದು ಪಾಕಿಸ್ತಾನಕ್ಕೆ ದೊಡ್ಡ ಹೊರೆಯಾಯಿತು ಎಂದು ಮೈಕ್ ಹೆಸ್ಸನ್ ಅಭಿಪ್ರಾಯಪಟ್ಟಿದ್ದಾರೆ.
ತಪ್ಪು ನಿರ್ಧಾರಗಳು: ಪಾಕಿಸ್ತಾನ್ ತಂಡವು ಬ್ಯಾಟಿಂಗ್ ಮಾಡುವಾಗ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲಿಲ್ಲ. ಅಲ್ಲದೆ ಕೆಲವು ಕಳಪೆ ಶಾಟ್‌ಗಳನ್ನು ಆಯ್ಕೆ ಮಾಡಿಕೊಂಡು ವಿಕೆಟ್ ಒಪ್ಪಿಸಿದ್ದರು. ಇದು ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಹೆಸ್ಸನ್ ತಿಳಿಸಿದ್ದಾರೆ.
ನಿರಾಸೆಯಲ್ಲಿ ತಂಡ: ಸೋಲಿನ ನಂತರ ಪಾಕಿಸ್ತಾನದ ಡ್ರೆಸ್ಸಿಂಗ್ ರೂಮ್‌ನಲ್ಲಿ “ತೀವ್ರ ನಿರಾಸೆ” ಮನೆಮಾಡಿತ್ತು. ಭಾರತದ ವಿರುದ್ಧದ ಪಂದ್ಯ ಪಾಕಿಸ್ತಾನದ ಜನತೆಗೆ ಎಷ್ಟು ಮುಖ್ಯ ಎಂಬುದು ಆಟಗಾರರಿಗೆ ತಿಳಿದಿದೆ. ಹಾಗಾಗಿ ಈ ಸೋಲು ಎಲ್ಲರಿಗೂ ನೋವು ತಂದಿದೆ ಎಂದು ಪಾಕ್ ಕೋಚ್ ತಿಳಿಸಿದ್ದಾರೆ.
ಮುಂದಿನ ಸವಾಲು: ಈ ಸೋಲನ್ನು ಮರೆತು ಮುಂದಿನ ಎರಡು-ಮೂರು ದಿನಗಳಲ್ಲಿ ತಂಡವು ಪುಟಿದೇಳಬೇಕಿದೆ. ನಮೀಬಿಯ ವಿರುದ್ಧದ ಪಂದ್ಯವು ಪಾಕಿಸ್ತಾನ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಹೀಗಾಗಿ ಈ ಮ್ಯಾಚ್ನಲ್ಲಿ ಗೆದ್ದು ನಾವು ಸೂಪರ್-8 ಹಂತಕ್ಕೇರುವ ವಿಶ್ವಾಸವಿದೆ ಎಂದು ಮೈಕ್ ಹೆಸ್ಸನ್ ಹೇಳಿದ್ದಾರೆ.
ಇದನ್ನೂ ಓದಿ: ಅವರು ಗೆದ್ದು, ಇವರು ಸೋತರೂ ಆಸ್ಟ್ರೇಲಿಯಾ ಟಿ20 ವಿಶ್ವಕಪ್ನಿಂದ ಔಟ್!
ಒಟ್ಟಾರೆಯಾಗಿ ಹೇಳಬೇಕೆಂದರೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಅತೀ ಹೆಚ್ಚು ವ್ಯತ್ಯಾಸವನ್ನುಂಟು ಮಾಡಿದ್ದು ಇಶಾನ್ ಕಿಶನ್. ಕೇವಲ 40 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 77 ರನ್ ಬಾರಿಸುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. ಹೀಗಾಗಿ ಪಾಕ್ ಸೋಲಿಗೆ ಮುಖ್ಯ ಕಾರಣ ಇಶಾನ್ ಕಿಶನ್ ಅವರ ಸ್ಫೋಟಕ ಇನಿಂಗ್ಸ್ ಎಂದು ಮೈಕ್ ಹೆಸ್ಸೆನ್ ಅಭಿಪ್ರಾಯಪಟ್ಟಿದ್ದಾರೆ.
