ರಹಾನೆ ಒಂದು ಟೆಸ್ಟ್ ಗೆದ್ದ ಮಾತ್ರಕ್ಕೆ ಕೊಹ್ಲಿಗಿಂತ ಶ್ರೇಷ್ಠ ನಾಯಕನಾಗಲಾರ: ದೀಪ್​ ದಾಸ್​ಗುಪ್ತಾ

ಮೆಲ್ಬರ್ನ್ ಟೆಸ್ಟ್​ನಲ್ಲಿ ಅಮೋಘ ಶತಕ ಬಾರಿಸಿ ವೈಯಕ್ತಿಕ ಉದಾಹರಣೆಯೊಂದಿಗೆ ಟೀಮನ್ನು ಮುನ್ನಡೆಸಿದ ರಹಾನೆ ಅತ್ಯುತ್ತಮವಾಗಿ ನಾಯಕತ್ವ ನಿಭಾಯಿಸಿದರು. ಆದರೆ, ಕೊಹ್ಲಿಯ ನಾಯಕತ್ವವನ್ನು ಟೀಕಿಸುತ್ತಿರುವ ಪಂಡಿತರು ಅರ್ಥಮಾಡಿಕೊಳ್ಳಬೇಕಿರುವ ಸಂಗತಿಯೇನೆಂದರೆ, ಕ್ರಿಕೆಟ್ ಒಂದು ಟೀಮ್ ಗೇಮ್. ಒಂದು ತಂಡ ಗೆಲ್ಲಬೇಕಾದರೆ ಸಾಮೂಹಿಕ ಪ್ರಯತ್ನದ ಅವಶ್ಯಕತೆಯಿರುತ್ತದೆ.

ರಹಾನೆ ಒಂದು ಟೆಸ್ಟ್ ಗೆದ್ದ ಮಾತ್ರಕ್ಕೆ ಕೊಹ್ಲಿಗಿಂತ ಶ್ರೇಷ್ಠ ನಾಯಕನಾಗಲಾರ: ದೀಪ್​ ದಾಸ್​ಗುಪ್ತಾ
ಅಜಿಂಕ್ಯಾ ರಹಾನೆ
Arun Belly

|

Dec 31, 2020 | 9:57 PM

ಅಜಿಂಕ್ಯಾ ರಹಾನೆ ನೇತೃತ್ವದಲ್ಲಿ ಭಾರತ ಮೆಲ್ಬರ್ನ್ ಟೆಸ್ಟ್ ಗೆದ್ದ ನಂತರ ಒಂದು ಅನಾವಶ್ಯಕ, ಅಸಂಬದ್ಧವಾದ ಚರ್ಚೆ ಶುರುವಿಟ್ಟುಕೊಂಡಿದೆ. ಕೆಲ ಮಾಜಿ ಆಟಗಾರರೂ ಸೇರಿದಂತೆ ಕ್ರಿಕೆಟ್ ಪಂಡಿತರ ಅಂಬೋಣವೇನೆಂದರೆ, ಟೆಸ್ಟ್ ಕ್ರಿಕೆಟ್​ಗೆ ರಹಾನೆ, ವಿರಾಟ್​ ಕೊಹ್ಲಿಗಿಂತ ಉತ್ತಮ ನಾಯಕ, ಹಾಗಾಗಿ ಟೆಸ್ಟ್ ಪಂದ್ಯಗಳಿಗೆ ಅವರನ್ನೇ ನಾಯಕನಾಗಿ ಮುಂದುವರಿಸುವುದು ಬೆಟರ್ ಅಂತೆ. ನೇರವಾಗಿ ವಿಷಯಕ್ಕೆ ಬರುವುದಾದರೆ ಅವರ ವಾದವೇ ಹಾಸ್ಯಾಸ್ಪದ. ಒಂದು ಟೆಸ್ಟ್ ಪಂದ್ಯದ ಫಲಿತಾಂಶದ ನಂತರ ಅವರು ರಹಾನೆ ಉತ್ತಮ, ಕೊಹ್ಲಿ ಉತ್ತಮನಲ್ಲ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ!

ಮೆಲ್ಬರ್ನ್ ಟೆಸ್ಟ್​ನಲ್ಲಿ ಅಮೋಘ ಶತಕ ಬಾರಿಸಿ ವೈಯಕ್ತಿಕ ಉದಾಹರಣೆಯೊಂದಿಗೆ ಟೀಮನ್ನು ಮುನ್ನಡೆಸಿದ ರಹಾನೆ ಅತ್ಯುತ್ತಮವಾಗಿ ನಾಯಕತ್ವ ನಿಭಾಯಿಸಿದರು, ಅದರಲ್ಲಿ ಅನುಮಾನವೇ ಬೇಡ. ಆದರೆ, ಕೊಹ್ಲಿಯ ನಾಯಕತ್ವವನ್ನು ಮನಸಾರೆ ಟೀಕಿಸುತ್ತಿರುವ ಪಂಡಿತರು ಅರ್ಥಮಾಡಿಕೊಳ್ಳಬೇಕಿರುವ ಸಂಗತಿಯೇನೆಂದರೆ, ಕ್ರಿಕೆಟ್ ಒಂದು ಟೀಮ್ ಗೇಮ್. ಒಂದು ತಂಡ ಗೆಲ್ಲಬೇಕಾದರೆ ಸಾಮೂಹಿಕ ಪ್ರಯತ್ನದ ಅವಶ್ಯಕತೆಯಿರುತ್ತದೆ. ಈ ಟೆಸ್ಟ್​ನಲ್ಲಿ ಭಾರತದ ಗೆಲುವಿಗೆ ರಹಾನೆ ಜೊತೆ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಬಹಳ ಮಹತ್ವದ ಕಾಣಿಕೆಗಳನ್ನು ನೀಡಿದರೆನ್ನುವುದನ್ನು ಯಾರೂ ಮರೆಯಬಾರದು.

ಅಡಿಲೇಡ್ ಟೆಸ್ಟ್ ಭಾರತ ಸೋತಿದಕ್ಕೆ ಕೇವಲ ಕೊಹ್ಲಿ ಕಾರಣರಲ್ಲ. ಸೋಲಿಗೆ ಕಾರಣವಾಗಿದ್ದು ಟೀಮ್ ಇಂಡಿಯಾ ಆಟಗಾರರ ಸಾಮೂಹಿಕ ವೈಫಲ್ಯ. ಮೊದಲ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಅಧಿಕಾರಯುತ ಬ್ಯಾಟಿಂಗ್ ಪ್ರದರ್ಶನ ನೀಡಿ 74ರನ್ ಬಾರಿಸಿದ್ದನ್ನು ಸೋ ಕಾಲ್ಡ್ ಪಂಡಿತರು ಉದ್ದೇಶಪೂರ್ವಕವಾಗಿ ಮರೆಯುತ್ತಾರೆ. ಕೊಹ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ರನೌಟ್​ ಆಗಿರದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎನ್ನುವ ಅಂಶವನ್ನು ಸಹ ಅವರು ಕಡೆಗಣಿಸುತ್ತಾರೆ.

ವಿರಾಟ್ ಕೊಹ್ಲಿ

ಇದುವರೆಗೆ 56 ಟೆಸ್ಟ್​ಗಳಲ್ಲಿ ಭಾರತದ ನಾಯಕತ್ವ ವಹಿಸಿರುವ ಕೊಹ್ಲಿ 33 ರಲ್ಲಿ ಟೀಮನ್ನು ಗೆಲ್ಲಿಸಿದ್ದಾರೆ. ಅವರ ಶೇಕಡಾವಾರು ಯಶಸ್ಸು 50ಕ್ಕಿಂತ ಜಾಸ್ತಿಯಿದೆ. ಅವರ ನಾಯಕತ್ವದಲ್ಲೇ ಭಾರತ ಟೆಸ್ಟ್​ಗಳಲ್ಲಿ ನಂಬರ್ 1 ಸ್ಥಾನಕ್ಕೆ ಜಿಗಿದು ಬಹಳ ದಿನಗಳವರೆಗೆ ಅದನ್ನು ಕಾಯ್ದುಕೊಂಡಿತ್ತು. 2018-19 ಆಸ್ಟ್ರೇಲಿಯ ಪ್ರವಾಸದಲ್ಲಿ ಕೊಹ್ಲಿ 2-1 ಅಂತರದಿಂದ ಟೆಸ್ಟ್ ಸರಣಿಯನ್ನು ಗೆದ್ದಿದ್ದರು. ಮೊಟ್ಟಮೊದಲ ಬಾರಿಗೆ ಆಸ್ಸೀಗಳನ್ನು ಅವರ ನೆಲದಲ್ಲೇ ಮಣಿಸಿದ ಕೀರ್ತಿ ಕೊಹ್ಲಿಗೆ ಸಲ್ಲುತ್ತದೆ. ಇದೆಲ್ಲವನ್ನು ಪಂಡಿತರು ಉದ್ದೇಶಪೂರ್ವಕವಾಗಿ ಮರೆಯುತ್ತಾರೆ.

ಭಾರತದ ಮಾಜಿ ವಿಕೆಟ್​ಕೀಪರ್-ಬ್ಯಾಟ್ಸ್​ಮನ್ ಮತ್ತು ಹಾಲಿ ಕಾಮೆಂಟೇಟರ್ ದೀಪ್​ದಾಸ್ ಗುಪ್ತಾ ಅದನ್ನೇ ಹೇಳುತ್ತಿದ್ದಾರೆ. ಕೇವಲ ಒಂದು ಟೆಸ್ಟ್ ಗೆದ್ದಿರುವ ರಹಾನೆ ಅದ್ಹೇಗೆ ಕೊಹ್ಲಿಗಿಂತ ಉತ್ತಮ ಕ್ಯಾಪ್ಟನ್ ಆಗುತ್ತಾರೆ ಎಂದು ಅವರು ಪಂಡಿತರನ್ನು ಕೇಳುತ್ತಿದ್ದಾರೆ. ಕೊಹ್ಲಿ ಮೈದಾನದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ಇಷ್ಟಪಡದ ಜನರು ಅವರ ನಾಯಕತ್ವವನ್ನು ಟೀಕಿಸುತ್ತಿದ್ದಾರೆ ಎಂದು ಗುಪ್ತಾ ಹೇಳುತ್ತಾರೆ.

‘‘ರಹಾನೆ ಅವರ ಸಾಧನೆಯನ್ನು ಯಾವ ಕಾರಣಕ್ಕೂ ನಾನು ಅಲ್ಲಗಳೆಯುತ್ತಿಲ್ಲ. ಆದರೆ, ಅವರು ಗೆದ್ದಿರುವುದು ಒಂದು ಟೆಸ್ಟ್ ಮಾತ್ರ. ಭಾರತದ ಗೆಲುವಿಗೆ ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಕಾರಣರಾದರು. ನಾಯಕತ್ವದ ವಿಷಯಕ್ಕೆ ಬಂದರೆ ಕೊಹ್ಲಿಯಿಂದ ಇದುವರೆಗೆ ಒಂದು ಪ್ರಮಾದವೂ ಜರುಗಿಲ್ಲ. ಅವರು ಬಹಿರಂಗವಾಗಿ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ನೋಡಲಿಚ್ಛಿಸದ ಜನ ಅವರ ನಾಯಕತ್ವದ ಬಗ್ಗೆ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ, ಆದರೆ ಕೊಹ್ಲಿ ಏನು ಮಾಡುವುದಕ್ಕಾಗುತ್ತೆ, ಅವರಿರೋದೆ ಹಾಗೆ!’’ ಎಂದು ಗುಪ್ತಾ ಹೇಳಿದ್ದಾರೆ.

‘‘ಕೊಹ್ಲಿ ನಾಯಕತ್ವದಲ್ಲೇ ಭಾರತ 2018-19 ರಲ್ಲಿ ಟೆಸ್ಟ್ ಸರಣಿ ಗೆದ್ದಿತು. ಅವರ ನಾಯಕತ್ವದಲ್ಲೇ ಭಾರತ ಸುದೀರ್ಘ ಆವಧಿಯವರೆಗೆ ಟೆಸ್ಟ್​ಗಳಲ್ಲಿ ನಂಬರ್ 1 ಪಟ್ಟವನ್ನು ಅಲಂಕರಿಸಿತ್ತು. ನಾಯಕತ್ವ ವಹಿಸಲು ಯೋಗ್ಯರಾದ ಕೆಲ ಆಟಗಾರರು ತಂಡದಲ್ಲಿರುವುದು ಸೌಭಾಗ್ಯವೇ ಸರಿ. ಆದರೆ, ಒಂದು ಟೆಸ್ಟ್ ಗೆಲುವಿನ ನಂತರ ಒಬ್ಬ ಶ್ರೇಷ್ಠ ಮತ್ತೊಬ್ಬ ಕಳಪೆ ಎಂದು ಹೇಳಲಾಗದು. ಅಡಿಲೇಡ್​ ಟೆಸ್ಟ್​ನಲ್ಲೂ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತು. ಆದರೆ ಒಂದು ಸೆಷನ್​ನಲ್ಲಿ ತೋರಿದ ಕಳಪೆ ಪ್ರದರ್ಶನ ಹೀನಾಯ ಸೋಲಿಗೆ ಕಾರಣವಾಯಿತು. ಎಲ್ಲರೂ ಬ್ಯಾಟಿಂಗ್​ನಲ್ಲಿ ವಿಫಲರಾದರೆ ನಾಯಕನಾದವನು ಏನು ಮಾಡಲು ಸಾಧ್ಯ?’’ ಎಂದು ಗುಪ್ತಾ ಹೇಳಿದ್ದಾರೆ.

ದೀಪ್ ದಾಸ್​​ಗುಪ್ತಾ

ರಹಾನೆ ಮತ್ತು ಕೊಹ್ಲಿ ನಡುವೆ ಹೋಲಿಕೆಯೇ ಸಲ್ಲದು ಎಂದಿರುವ ಲೆಜೆಂಡರಿ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್ ಯಾರೂ ಟೀಮು ಮತ್ತು ದೇಶಕ್ಕಿಂತ ದೊಡ್ಡವರಲ್ಲ ಅಂತ ಹೇಳುತ್ತಾರೆ.

‘‘ಅಜಿಂಕ್ಯಾ ರಹಾನೆಯನ್ನು ವಿರಾಟ್ ಕೊಹ್ಲಿಯೊಂದಿಗೆ ಹೋಲಿಸಿ ಜನ ತಪ್ಪು ಮಾಡುತ್ತಿದ್ದಾರೆ. ರಹಾನೆಯ ವ್ಯಕ್ತಿತ್ವವೇ ಬೇರೆ. ಮೆಲ್ಬರ್ನ್​ನಲ್ಲಿ ಅವರು ಆಕ್ರಮಣಕಾರಿ ಧೋರಣೆ ಪ್ರದರ್ಶಿಸಿದರು. ರಹಾನೆ ಮತ್ತು ಕೊಹ್ಲಿ ಇಬ್ಬರೂ ಭಾರತೀಯರು ಮತ್ತು ಅವರು ಭಾರತಕ್ಕೆ ಆಡುತ್ತಾರೆನ್ನುವುದನ್ನುವುದನ್ನು ಮರೆಯಬೇಡಿ ಎಂದು ಹೋಲಿಕೆಯಲ್ಲಿ ತೊಡಗಿರುವವರಿಗೆ ನಾನು ಹೇಳಬಯಸುತ್ತೇನೆ. ಯಾರೂ ಟೀಮಿಗಿಂತ ದೊಡ್ಡವರಲ್ಲ, ಟೀಮ್ ಮತ್ತು ದೇಶ ಎಲ್ಲರಿಗಿಂತ ಮೇಲೆ, ಇದು ನೆನಪಿರಲಿ,’’ ಎಂದು ತೆಂಡೂಲ್ಕರ್ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್

ರಹಾನೆ ಮತ್ತು ಕೊಹ್ಲಿ ಆವರ ನಾಯಕತ್ವವನ್ನು ಒರೆಗೆ ಹಚ್ಚಿ ನೋಡುವ ಅವಶ್ಯಕತೆ ಖಂಡಿತವಾಗಿಯೂ ಇಲ್ಲ. ಇಬ್ಬರೂ ತಮ್ಮ ತಮ್ಮ ಶೈಲಿಯಲ್ಲಿ ಸಮರ್ಥ ನಾಯಕರೇ. ಆದರೆ, ಕೊಹ್ಲಿ ಒಬ್ಬ ಆಟಗಾರನಾಗಿ, ನಾಯಕನಾಗಿ ಟೀಮ್ ಇಂಡಿಯಾಗೆ ನೀಡಿರುವ ಕಾಣಿಕೆ ಅದ್ವಿತೀಯವಾದದ್ದು, ಅಸಾಮಾನ್ಯವಾದದ್ದು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada