ಬರೋಬ್ಬರಿ 23 ಸಿಕ್ಸ್… ಟಿ20 ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಎಡ್ವರ್ಡ್ಸ್
Scott Edwards World Record: ಟಿ20 ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಲು ಸಾಧ್ಯವೇ? ಅದು ಕೂಡ ಅಜೇಯ ಡಬಲ್ ಸೆಂಚುರಿ? ನೆದರ್ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ 23 ಸಿಕ್ಸರ್ಗಳೊಂದಿಗೆ ಸ್ಫೋಟಕ ದ್ವಿಶತಕ ಸಿಡಿಸಿ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Updated on: Dec 13, 2025 | 10:17 AM

ನೆದರ್ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ (Scott Edwards) ಟಿ20 ಕ್ರಿಕೆಟ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಭರ್ಜರಿ ದ್ವಿಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. ಈ ಮೂಲಕ ಟಿ20 ಪಂದ್ಯದಲ್ಲಿ ಗರಿಷ್ಠ ಸ್ಕೋರ್ಗಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಗ್ರೇಡ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಲ್ಟೋನಾ ಸ್ಪೋರ್ಟ್ಸ್ ಪರ ಕಣಕ್ಕಿಳಿದ ಸ್ಕಾಟ್ ಎಡ್ವರ್ಡ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ವಿಲಿಯಮ್ಸ್ ಲ್ಯಾಂಡಿಂಗ್ ಎಸ್ಸಿ ತಂಡದ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಲ್ಟೋನಾ ಸ್ಪೋರ್ಟ್ಸ್ ಪರ ಎಡ್ವರ್ಡ್ಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಶತಕ ಪೂರೈಸಿದ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ಸ್ಕಾಟ್ ಎಡ್ವರ್ಡ್ಸ್ 81 ಎಸೆತಗಳಲ್ಲಿ 14 ಫೋರ್ ಹಾಗೂ 23 ಸಿಕ್ಸರ್ಗಳೊಂದಿಗೆ ಅಜೇಯ 229 ರನ್ ಬಾರಿಸಿದರು. ಈ ಮೂಲಕ ಟಿ20 ಪಂದ್ಯದಲ್ಲಿ ಗರಿಷ್ಠ ಸ್ಕೋರ್ಗಳಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಈ ದಾಖಲೆ ಸಾಗರ್ ಕುಲ್ಕರ್ಣಿ ಹೆಸರಿನಲ್ಲಿತ್ತು. ಸಿಂಗಾಪುರ್ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಮರೀನಾ ಕ್ಲಬ್ ಪರ ಕಣಕ್ಕಿಳಿದಿದ್ದ ಸಾಗರ್ ಕುಲ್ಕರ್ಣಿ 56 ಎಸೆತಗಳಲ್ಲಿ 219 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಸ್ಕಾಟ್ ಎಡ್ವರ್ಡ್ಸ್ ಮುರಿದಿದ್ದಾರೆ.

ವಿಲಿಯಮ್ಸ್ ಲ್ಯಾಂಡಿಂಗ್ ಎಸ್ಸಿ ತಂಡದ ವಿರುದ್ಧ ಕೇವಲ 81 ಎಸೆತಗಳಲ್ಲಿ 23 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ ಅಜೇಯ 229 ರನ್ ಬಾರಿಸಿ ಸ್ಕಾಟ್ ಎಡ್ವರ್ಡ್ಸ್ ಟಿ20 ಪಂದ್ಯದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು ಎಡ್ವರ್ಡ್ಸ್ ಅವರ ಈ ದ್ವಿಶತಕದ ನೆರವಿನಿಂದ ಆಲ್ಟೋನಾ ಸ್ಪೋರ್ಟ್ಸ್ ತಂಡ 20 ಓವರ್ಗಳಲ್ಲಿ 302 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವಿಲಿಯಮ್ಸ್ ಲ್ಯಾಂಡಿಂಗ್ ಎಸ್ಸಿ ತಂಡವು 118 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆಲ್ಟೋನಾ ಸ್ಪೋರ್ಟ್ಸ್ ತಂಡ 186 ರನ್ಗಳ ಭರ್ಜರಿ ಜಯ ಸಾಧಿಸಿದೆ.
