- Kannada News Photo gallery Cricket photos Abhishek Sharma to Break Kohli's 9-Year T20 Record in IND vs SA 3rd T20
IND vs SA: ಕಿಂಗ್ ಕೊಹ್ಲಿಯ 9 ವರ್ಷಗಳ ಹಳೆಯ ದಾಖಲೆ ಮೇಲೆ ಅಭಿಷೇಕ್ ಕಣ್ಣು
Abhishek Sharma record: ಭಾರತ-ದಕ್ಷಿಣ ಆಫ್ರಿಕಾ 3ನೇ ಟಿ20 ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದ್ದು, ಸರಣಿ 1-1ರಲ್ಲಿ ಸಮಬಲಗೊಂಡಿದೆ. ಈ ಪಂದ್ಯ ಸರಣಿ ಮುನ್ನಡೆಗೆ ನಿರ್ಣಾಯಕ. ಟೀಂ ಇಂಡಿಯಾ ಬ್ಯಾಟಿಂಗ್ ಸುಧಾರಣೆ ಅಗತ್ಯವಿದೆ. ಅದರಲ್ಲೂ ಅಭಿಷೇಕ್ ಶರ್ಮಾ ಮಿಂಚಬೇಕಿದೆ. 82 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಅವರ 9 ವರ್ಷಗಳ ಹಳೆಯ ಟಿ20 ದಾಖಲೆಯನ್ನು ಮುರಿಯುವ ಅವಕಾಶವಿದೆ.
Updated on: Dec 13, 2025 | 8:03 PM

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಟಿ20 ಪಂದ್ಯ ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗ ನಡೆದಿರುವ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿರುವುದರಿಂದ 3ನೇ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಪಂದ್ಯವನ್ನು ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ.

ಈ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಸಪ್ಪೆ ಪ್ರದರ್ಶನ ನೀಡಿತು. ಹಾಗಾಗಿ ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗ ತನ್ನ ತಪ್ಪುಗಳನ್ನು ತಿದ್ದಿಕೊಂಡು ಕಣಕ್ಕಿಳಿಯಬೇಕಿದೆ. ಅದರಲ್ಲೂ ಭಾರತ ಟಿ20 ತಂಡದ ರನ್ ಮಷಿನ್ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಮಿಂಚಲೇಬೇಕಿದೆ. ಒಂದು ವೇಳೆ ಈ ಪಂದ್ಯದಲ್ಲಿ ಅಭಿಷೇಕ್ ಮಿಂಚಿದರೆ, ಕಿಂಗ್ ಕೊಹ್ಲಿಯ 9 ವರ್ಷಗಳ ಹಳೆಯ ದಾಖಲೆ ಧ್ವಂಸವಾಗಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಅಭಿಷೇಕ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಮೊದಲ ಪಂದ್ಯದಲ್ಲಿ 17 ರನ್ ಬಾರಿಸಿ ಔಟಾಗಿದ್ದ ಅಭಿಷೇಕ್, ತನ್ನ ತವರಿನಲ್ಲಿ ನಡೆದ ಎರಡನೇ ಪಂದ್ಯದಲ್ಲೂ ಕೇವಲ 17 ರನ್ಗಳಿಗೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಹೀಗಾಗಿ ಮೂರನೇ ಪಂದ್ಯದಲ್ಲಿ ಅಭಿಷೇಕ್ ಅಬ್ಬರಿಸಲೇಬೇಕಿದೆ.

ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ 82 ರನ್‌ಗಳ ಇನ್ನಿಂಗ್ಸ್ ಆಡಿದರೆ, ಒಂಬತ್ತು ವರ್ಷಗಳ ಹಿಂದೆ ಅಂದರೆ 2016 ರಲ್ಲಿ ವಿರಾಟ್ ಕೊಹ್ಲಿ ನಿರ್ಮಿಸಿದ್ದ ಅದೊಂದು ದಾಖಲೆಯನ್ನು ಅಭಿಷೇಕ್ ಶರ್ಮಾ ಮುರಿಯಲಿದ್ದಾರೆ. ಅಂದರೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಳ್ಳುವ ಅವಕಾಶ ಅಭಿಷೇಕ್ಗೆ ಇದೆ.

ವಾಸ್ತವವಾಗಿ 2016 ರಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಡಿದ 31 ಟಿ20 ಪಂದ್ಯಗಳಲ್ಲಿ 1,614 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದರು. ಪ್ರಸ್ತುತ ಕ್ಯಾಲೆಂಡರ್ ವರ್ಷದಲ್ಲಿ, ಅಭಿಷೇಕ್ ಶರ್ಮಾ ಆಡಿರುವ 39 ಟಿ20 ಪಂದ್ಯಗಳಲ್ಲಿ 1,533 ರನ್ ಗಳಿಸಿದ್ದಾರೆ.

ಈಗ, ಅಭಿಷೇಕ್ ಶರ್ಮಾಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯಲು ಕೇವಲ 82 ರನ್‌ಗಳ ಅಗತ್ಯವಿದೆ. ಅಭಿಷೇಕ್ ಈಗಾಗಲೇ ಈ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ (2022 ರಲ್ಲಿ 1503 ರನ್) ಅವರನ್ನು ಹಿಂದಿಕ್ಕಿದ್ದು, ಈಗ ಕೊಹ್ಲಿ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.
