- Kannada News Photo gallery Cricket photos Pakistan's Sameer Minhas Breaks Vaibhav Suryavanshi’s Record
ವೈಭವ್ ದಾಖಲೆ ಉಡೀಸ್: ಪಾಕ್ ದಾಂಡಿಗನ ವಿಶ್ವ ದಾಖಲೆ
ACC Mens U19 Asia Cup 2025: ಕಿರಿಯರ ಏಷ್ಯಾಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲೇ ಭಾರತ ಮತ್ತು ಪಾಕಿಸ್ತಾನ್ ಬ್ಯಾಟರ್ಗಳು ಅಬ್ಬರಿಸಿದ್ದಾರೆ. ಮೊದಲ ಮ್ಯಾಚ್ನಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರ ಪ್ರದರ್ಶಿಸಿದರೆ, ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನದ ಸಮೀರ್ ಮಿನ್ಹಾಸ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.
Updated on: Dec 14, 2025 | 7:54 AM

ಅಂಡರ್-19 ಏಷ್ಯಾಕಪ್ ಟೂರ್ನಿಯ ಮೊದಲ ದಿನವೇ ದಾಖಲೆಗಳು ನಿರ್ಮಾಣವಾಗಿದೆ. ಹೀಗೆ ವರ್ಲ್ಡ್ ರೆಕಾರ್ಡ್ ನಿರ್ಮಿಸಿರುವುದು ಭಾರತದ ವೈಭವ್ ಸೂರ್ಯವಂಶಿ (Vaibhav Suryavanshi) ಹಾಗೂ ಪಾಕಿಸ್ತಾನದ ಸಮೀರ್ ಮಿನ್ಹಾಸ್ (Sameer Minhas). ಮೊದಲ ಪಂದ್ಯದಲ್ಲಿ ವೈಭವ್ ಭರ್ಜರಿ ಸೆಂಚುರಿ ಸಿಡಿಸಿದರೆ, ಎರಡನೇ ಪಂದ್ಯದಲ್ಲಿ ಸಮೀರ್ ಶತಕ ಬಾರಿಸಿದರು.

ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 95 ಎಸೆತಗಳಲ್ಲಿ 14 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 171 ರನ್ ಬಾರಿಸಿದ್ದರು. ಈ ಮೂಲಕ ಅಂಡರ್-19 ಏಷ್ಯಾಕಪ್ 2025 ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

ಈ ದಾಖಲೆ ನಿರ್ಮಾಣವಾಗಿ ದಿನ ಕಳೆಯುವ ಮುನ್ನವೇ ಸಮೀರ್ ಮಿನ್ಹಾಸ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ದುಬೈನ ಸೆವೆನ್ಸ್ ಸ್ಟೇಡಿಯಂನಲ್ಲಿ ನಡೆದ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸಮೀರ್ 148 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 177 ರನ್ ಬಾರಿಸಿದ್ದಾರೆ. ಈ ಮೂಲಕ ಅಂಡರ್-19 ಏಷ್ಯಾಕಪ್ 2025 ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಯೂತ್ ಒಡಿಐ ಕ್ರಿಕೆಟ್ನ ಪಾದಾರ್ಪಣೆ ಪಂದ್ಯದಲ್ಲೇ ಗರಿಷ್ಠ ಸ್ಕೋರ್ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಕೂಡ ಸಮೀರ್ ಮಿನ್ಹಾಸ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ವೆಸ್ಟ್ ಇಂಡೀಸ್ ಆಟಗಾರನ ಹೆಸರಿನಲ್ಲಿತ್ತು.

2002 ರಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಯೂತ್ ಒಡಿಐ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪರ ಕಣಕ್ಕಿಳಿದಿದ್ದ ಡೊನೊವೆನ್ ಪಾಗೊನ್ 176 ರನ್ ಬಾರಿಸಿದ್ದರು. ಈ ಮೂಲಕ ಚೊಚ್ಚಲ ಯೂತ್ ಒಡಿಐ ಮ್ಯಾಚ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಬರೋಬ್ಬರಿ 13 ವರ್ಷಗಳ ಬಳಿಕ ಈ ವಿಶ್ವ ದಾಖಲೆಯನ್ನು ಮುರಿಯುವಲ್ಲಿ ಸಮೀರ್ ಮಿನ್ಹಾಸ್ ಯಶಸ್ವಿಯಾಗಿದ್ದಾರೆ. ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಸಮೀರ್ ಅಜೇಯ 177 ರನ್ಗಳಿಸಿ ಚೊಚ್ಚಲ ಯೂತ್ ಒಡಿಐ ಪಂದ್ಯದಲ್ಲಿ ಗರಿಷ್ಠ ಸ್ಕೋರ್ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
