ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಆಟಗಾರನಿಗೆ ನೀಡಿದ ಸಿರಾಜ್
Mumbai vs Hyderabad: ಮುಂಬೈ ವಿರುದ್ಧದ ಸೂಪರ್ ಲೀಗ್ ಪಂದ್ಯದಲ್ಲಿ ಹೈದರಾಬಾದ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು 18.5 ಓವರ್‌ಗಳಲ್ಲಿ 131 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು 11.5 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ ಹೈದರಾಬಾದ್ ತಂಡ 9 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡಕ್ಕೆ ಹೈದರಾಬಾದ್ ತಂಡ ಸೋಲುಣಿಸಿದೆ. ಹೈದರಾಬಾದ್ ತಂಡದ ಈ ಗೆಲುವಿನ ರೂವಾರಿ ಮೊಹಮ್ಮದ್ ಸಿರಾಜ್ (Mohammed Siraj). ಈ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಮಿಲಿಂದ್ ಬೌಲಿಂಗ್ ಆಯ್ದುಕೊಂಡಿದ್ದರು.
ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಕರಾರುವಾಕ್ಕಾಗಿ ದಾಳಿ ಸಂಘಟಿಸಿದ ಸಿರಾಜ್ 3.5 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಪರಿಣಾಮ ಅಜಿಂಕ್ಯ ರಹಾನೆ, ಯಶಸ್ವಿ ಜೈಸ್ವಾಲ್, ಸರ್ಫರಾಝ್ ಖಾನ್, ಅಂಗ್ ಕ್ರಿಶ್ ರಘುವಂಶಿ, ಸೂರ್ಯಾಂಶ್ ಶೆಡ್ಗೆ ಯನ್ನು ಒಳಗೊಂಡ ಮುಂಬೈ ತಂಡವು 18.5 ಓವರ್‌ಗಳಲ್ಲಿ 131 ರನ್ ಗಳಿಸಿ ಆಲೌಟ್ ಆಯಿತು.
132 ರನ್ ಗಳ ಸುಲಭ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಅಮನ್ ರಾವ್ ಹಾಗೂ ತನ್ಮಯ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್‌ಗೆ 127 ರನ್ ಪೇರಿಸಿದ ಬಳಿಕ ತನ್ಮಯ್ (75) ಔಟಾದರು. ಇನ್ನು ಅಮನ್ ರಾವ್ ಅಜೇಯ 52 ರನ್ ಬಾರಿಸಿ 11.5 ಓವರ್‌ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಹೈದರಾಬಾದ್ ತಂಡ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಹೃದಯ ಗೆದ್ದ ಸಿರಾಜ್:
ಈ ಪಂದ್ಯದಲ್ಲಿ 23 ಎಸೆತಗಳನ್ನು ಎಸೆದಿದ್ದ ಮೊಹಮ್ಮದ್ ಸಿರಾಜ್ ಕೇವಲ 17 ರನ್ ನೀಡಿ 3 ಕಬಳಿಸಿ ಮಿಂಚಿದ್ದರು. ನಿರೀಕ್ಷೆಯಂತೆ ಸಿರಾಜ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಆದರೆ ಈ ಪ್ರಶಸ್ತಿಯನ್ನು ಸಿರಾಜ್ ಹೈದರಾಬಾದ್ ತಂಡದ ಆರಂಭಿಕ ದಾಂಡಿಗ ತನ್ಮಯ್ ಅಗರ್ವಾಲ್ ಗೆ ನೀಡುವ ಮೂಲಕ ಎಲ್ಲರ ಮನಗೆದ್ದರು.
ಇದನ್ನೂ ಓದಿ: IPL 2026: ಐಪಿಎಲ್ನಿಂದ ಸ್ಟಾರ್ ಆಟಗಾರ ಬ್ಯಾನ್..!
ಏಕೆಂದರೆ ಸುಲಭ ಗುರಿ ಬೆನ್ನತ್ತಿದ ಹೈದರಾಬಾದ್ ಪರ ತನ್ಮಯ್ ಅಗರ್ವಾಲ್ 40 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ 75 ರನ್ ಬಾರಿಸಿದ್ದರು. ತನ್ಮಯ್ ಅವರ ಈ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಬೇಕೆಂದು ಸಿರಾಜ್ ತನಗೆ ಸಿಕ್ಕ 50 ಸಾವಿರ ರೂ. ಬಹುಮಾನ ಮೊತ್ತವನ್ನು ಆರಂಭಿಕ ದಾಂಡಿಗನಿಗೆ ಹಸ್ತಾಂತರಿಸಿದರು. ಇದೀಗ ಮೊಹಮ್ಮದ್ ಸಿರಾಜ್ ಅವರ ಈ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
