Bhuvneshwar Kumar IPL 2021 SRH Team Player: ತೆಂಡೂಲ್ಕರ್ರನ್ನು ಮೊಟ್ಟ ಮೊದಲ ಬಾರಿಗೆ ಸೊನ್ನೆಗೆ ಔಟ್ ಮಾಡಿದ ಭುವನೇಶ್ವರ್ ಹೈದರಾಬಾದ್ನ ಪ್ರಮುಖ ಬೌಲಿಂಗ್ ಅಸ್ತ್ರ
ಉತ್ತರ ಪ್ರದೇಶದ ಕೆಲ ವೇಗದ ಬೌಲರ್ಗಳು ರಾಷ್ಟ್ರೀಯ ತಂಡಕ್ಕೆ ಅಡಿದ್ದಾರೆ. ಭುವಿ 2008ರಲ್ಲೇ ತೆಂಡೂಲ್ಕರ್ ವಿಕೆಟ್ ಪಡೆದರೂ ರಾಷ್ಟ್ರೀಯ ತಂಡದಿಂದ ಬುಲಾವ್ಗಾಗಿ ಮೂರು ವರ್ಷ ಕಾಯಬೇಕಾಯಿತು.

ಭಾರತದ ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಅವರ ಆಡುವ ದಿನಗಳಲ್ಲಿ ವಿಶ್ವದ ಪ್ರತಿಯೊಬ್ಬ ಬೌಲರ್ನ ಆಸೆ ಅಥವಾ ಮಹತ್ವಾಕಾಂಕ್ಷೆ ಅಂದರೂ ಆದೀತು; ಲೆಜೆಂಡರಿ ಆಟಗಾರನ ವಿಕೆಟ್ ಪಡೆಯುವುದಾಗಿರುತ್ತಿತ್ತು. ಆದರೆ ಪ್ರಥಮ ದರ್ಜೆ ಪಂದ್ಯಗಳಲ್ಲಿ ಭಾರತದ ಬೌಲರ್ನೊಬ್ಬ ಲಿಟ್ಲ್ ಮಾಸ್ಟರ್ ಅವರನ್ನು ಸೊನ್ನೆಗೆ ಔಟ್ ಮಾಡಿ ದೇಶದೆಲ್ಲೆಡೆ ಹೆಸರಾಗಿದ್ದು ನಿಮಗೆ ನೆನಪಿದೆಯೇ? ಕ್ರಿಕೆಟ್ ದೇವರನ್ನು ಸೊನ್ನೆಗೆ ಔಟ್ ಮಾಡಿದ್ದಕ್ಕೆ ಕೆಲವರು ಆ ಬೌಲರ್ನನ್ನು ಶಪಿಸಿದರೆ ಇನ್ನುಳಿದವರು ಅವರ ಪ್ರತಿಭೆಯನ್ನು ಕೊಂಡಾಡಿದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅದು ಸಚಿನ್ ಅವರ ಮೊಟ್ಟ ಮೊದಲ ಸೊನ್ನೆಯಾಗಿತ್ತು. ಅಂದಹಾಗೆ ಅ ಬೌಲರ್ ಯಾರೆನ್ನುವುದು ನಿಮಗೆ ನೆನಪಾಯಿತೇ? ಹೌದು, 2008-09 ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರನ್ನು ಖಾತೆ ತೆರೆಯುವ ಮೊದಲೇ ಔಟ್ ಮಾಡಿದ್ದು ಆಗಿನ್ನೂ ತನ್ನ ಕೇವಲ 11ನೇ ಪ್ರಥಮ ದರ್ಜೆ ಪಂದ್ಯವಾಡುತ್ತಿದ್ದ ಉತ್ತರ ಪ್ರದೇಶದ ಭುವನೇಶ್ವರ್ ಕುಮಾರ್.
ಉತ್ತರ ಪ್ರದೇಶದ ಕೆಲ ವೇಗದ ಬೌಲರ್ಗಳು ರಾಷ್ಟ್ರೀಯ ತಂಡಕ್ಕೆ ಅಡಿದ್ದಾರೆ. ರುದ್ರಪ್ರತಾಪ್ ಸಿಂಗ್ ಮತ್ತು ಪ್ರವೀಣ್ ಕುಮಾರ್ ಅಲ್ಪಾವಧಿಗಾದರೂ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದರು. ನಿಮಗೆ ಆಶ್ಚರ್ಯವಾಗಬಹುದು, ಭುವಿ 2008ರಲ್ಲೇ ತೆಂಡೂಲ್ಕರ್ ವಿಕೆಟ್ ಪಡೆದರೂ ರಾಷ್ಟ್ರೀಯ ತಂಡದಿಂದ ಬುಲಾವ್ಗಾಗಿ ಮೂರು ವರ್ಷ ಕಾಯಬೇಕಾಯಿತು. ಒಂದು ದಿನದ ಪಂದ್ಯ ಮತ್ತು ಟಿ20ಐ ಗಳಲ್ಲಿ ಅವರ ಪದಾರ್ಪಣೆ ಸ್ಮರಣೀಯವಾಗಿವೆ. ಎರಡೂ ಆವೃತ್ತಿಗಳಲ್ಲಿ ಅವರು ತಾವೆಸೆದ ಮೊದಲ ಓವರ್ನಲ್ಲೇ ವಿಕೆಟ್ ಪಡೆದರು!
ನೀಳಕಾಯದ ಭುವಿ ಟೆಸ್ಟ್ ಕ್ರಿಕೆಟ್ಗೆ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸ್ವದೇಶದ ಸರಣಿಯಲ್ಲಿ ಪದಾರ್ಪಣೆ ಮಾಡಿದರು. ಆವರ ಅರಂಗ್ರೇಟಂ ಹೇಳಿಕೊಳ್ಳವಂಥದ್ದೇನೂ ಆಗಿರಲಿಲ್ಲ. ಆದರೆ, ಮರುವರ್ಷ ಭಾರತವು ಇಂಗ್ಲೆಂಡ್ ಪ್ರವಾಸ ತೆರಳಿದಾಗ ಅವರು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದರು. ಎರಡು ಬಾರಿ 5 ವಿಕೆಟ್ಗಳನ್ನು ಸಾಧನೆ ಮಾಡಿದ್ದಲ್ಲದೆ, ಸರಣಿಯಲ್ಲಿ ಬ್ಯಾಟ್ನಿಂದಲೂ ಮಿಂಚಿ ಮೂರು ಅರ್ಧ ಶತಕಗಳನ್ನು ಬಾರಿಸಿದರು. ಹಾಗಂತ ಅವರನ್ನು ಆಲ್ರೌಂಡರ್ ಅಂತ ಕರೆಯಲಾಗದಾದರೂ ಲೇಟ್ ಆರ್ಡರ್ನಲ್ಲಿ ಉಪಯುಕ್ತ ಬಾಟ್ಸ್ಮನ್ ಎನ್ನುವುದು ಮಾತ್ರ ನಿಜ. ನಿಮಗೆ ಗೊತ್ತಿರಲಿ, ಆ ಸರಣಿಯಲ್ಲಿ ಅವರು 19 ವಿಕೆಟ್ ಪಡೆಯುವುದರ ಜೊತೆಗೆ 247 ರನ್ಗಳನ್ನೂ ಗಳಿಸಿದರು.

ಭುವನೇಶ್ವರ್ ಕುಮಾರ್
ಭುವಿಯ ಸ್ಪೆಷಾಲಿಟ ಅಂದರೆ ಉತ್ತಮ ವೇಗದಲ್ಲಿ ಎರಡೂ ಕಡೆ ಚೆಂಡನ್ನು ಸ್ವಿಂಗ್ ಮಾಡುವುದು. ಹಾಗೆಯೇ, ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ನಿಖರವಾದ ಲೈನ್ ಮತ್ತು ಕಾಯ್ದುಕೊಳ್ಳುವುದರ ಜೊತೆಗೆ ಕರಾರುವಕ್ಕಾದ ಯಾರ್ಕರ್ಗಳನ್ನು ಎಸೆಯಬಲ್ಲರು. ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಭಾರತೀಯ ತಂಡದ ಖಾಯಂ ಸದಸ್ಯರಾದರು ಅಂತ ಎಲ್ಲರೂ ಅಂದುಕೊಂಡಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್ನ ಒತ್ತಡಕ್ಕೆ ಒಗ್ಗಿಕೊಳ್ಳವುದು ಅವರಿಗೆ ಸಾಧ್ಯವಾಗಲಿಲ್ಲ. ನಿರಂತರವಾಗಿ ಉತ್ತಮ ಪ್ರದರ್ಶನಗಳನು ನೀಡಬೇಕಾದ ಪ್ರೆಶರ್ ಅವರ ಬೌಲಿಂಗ್ ಮೇಲೆ ಪ್ರಭಾವ ಬೀರಲಾರಂಭಿಸಿತು. ಮೊದಲಿನಂತೆ ವಿಕೆಟ್ಗಳು ದೊರೆಯದಾದವು. ಅವರು ಕೇವಲ ಹೊಸ ಚೆಂಡಿನಿಂದ ಮಾತ್ರ ವಿಕೆಟ್ ಪಡೆಯಬಲ್ಲರು ಎಂಬ ಮಾತುಗಳು ಕೇಳಿಬಂದವು.
ಬೌಲಿಂಗ್ನಲ್ಲಿ ವೇಗ ವೃದ್ಧಿಸಿಕೊಳ್ಳುವ ಪ್ರಯತ್ನದಲ್ಲಿ ಭುವಿ ತಮ್ಮ ಪ್ರಮುಖ ಆಯುಧವಾಗಿದ್ದ ಸ್ವಿಂಗ್ ಕಳೆದುಕೊಂಡರು. ಬೌಲರ್ನೊಬ್ಬ ಎಷ್ಟೇ ವೇಗದಲ್ಲಿ ಬೌಲ್ ಮಾಡಲಿ, ಅದರಲ್ಲಿ ಸ್ವಿಂಗ್ ಅಂಶವಿಲ್ಲದೆ ಹೋದರೆ, ಬ್ಯಾಟ್ಸ್ಮನ್ಗಳು ಎಸೆತಗಳನ್ನು ನಿರಾಯಾಸವಾಗಿ ಚಚ್ಚುತ್ತಾರೆ. ಹಾಗಾಗಿ ಅವರು ತನ್ನ ಬೌಲಿಂಗ್ನಲ್ಲಿ ಸ್ವಿಂಗ್ ವಾಪಸ್ಸು ತಂದುಕೊಳ್ಳಲು ಶ್ರಮಿಸಲೇಬೇಕಾಯಿತು.
ಅವರ ಐಪಿಎಲ್ ಪಯಣ ಶುರುವಾಗಿದ್ದು 2011ರಲ್ಲಿ ರಾಯಲ್ ಚಾಲಂಜರ್ಸ್ ಬೆಂಗಳೂರು ತಂಡದಿಂದ. ಈ ಫ್ರಾಂಚೈಸಿಗೆ ಎರಡು ಸೀಸನ್ ಅಡಿದ ನಂತರ ಅವರು ಒಂದು ಸೀಸನನ್ನು ಪುಣೆ ವಾರಿಯರ್ಸ್ ಪರ ಆಡಿದರು. ಆದರೆ, 2014 ರಲ್ಲಿ ಸನ್ರೈಸರ್ಸ್ ತಂಡಕ್ಕೆ ಆಡಲಾರಂಭಿಸಿದ ನಂತರವೇ ಅವರ ತಮ್ಮನ್ನು ತಾವು ಎಸ್ಟ್ಯಾಬ್ಲಿಷ್ ಮಾಡಿಕೊಳ್ಳಲಾರಂಭಿಸಿದರು.
ಹೈದರಾಬಾದ ತಂಡಕ್ಕೆ ಭುವಿ ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದಾರೆ. ಅವರ ಮತ್ತು ರಶೀದ್ ಖಾನ್ ಜೋಡಿಯು ತಂಡಕ್ಕೆ ಹಲವಾರು ಗೆಲುವುಗಳನ್ನು ಕೊಡಿಸಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು ದಕ್ಷಿಣದ ಭಾರತದ ಈ ಟೀಮಿಗೆ ಭುವಿ 133 ವಿಕೆಟ್ಗಳನ್ನು ಪಡೆದಿದ್ದಾರೆ. 2017ರ ಸೀಸನ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅವರು ದಾಳಿಯಲ್ಲಿ ಅಮೋಘ ಲಯ ಮತ್ತು ನಿಯಂತ್ರಣ ತೋರಿ 19ರನ್ಗಳಿಗೆ 5 ವಿಕೆಟ್ ಪಡೆದರು.
ಐಪಿಎಲ್ನಲ್ಲಿ ಎದುರಾಳಿ ತಂಡದ ಆರಂಭ ಆಟಗಾರರು ಯಾರೇ ಅಗಿರಲಿ, ಭುವಿಯ ಆರಂಭಿಕ ದಾಳಿಯನ್ನು ಎಚ್ಚರಿಕೆಯಿಂದ ಆಡುತ್ತಾರೆ. ಐಪಿಲ್ನಲ್ಲಿ ಇದುವರೆಗೆ ಒಟ್ಟು 121 ಪಂದ್ಯಗಳನ್ನಾಡಿರುವ ಭುವಿ 23.91 ಸರಾಸರಿಯಲ್ಲಿ 136 ವಿಕೆಟ್ಗಳನ್ನು ಪಡೆದಿದ್ದಾರೆ. ಅವರ ಬೆಸ್ಟ್ ಬೌಲಿಂಗ್ ಫರ್ಫಾರ್ಮನ್ಸ್ 5/19 ಆಗಿದ್ದು 19.83 ಸ್ಟ್ರೈಕ್ರೇಟ್ನಲ್ಲಿ ವಿಕೆಟ್ಗಳನ್ನು ಪಡೆದಿದ್ದಾರೆ. ಅವರು 2014 ರಲ್ಲಿ 20 ವಿಕೆಟ್, 2015ರಲ್ಲಿ 18, 2016ರಲ್ಲಿ 23 ಮತ್ತು 2017ರಲ್ಲಿ 26 ವಿಕೆಟ್ ಪಡೆದಿದ್ದಾರೆ.
ಎಂದಿನಂತೆ 2021 ರ ಸೀಸನಲ್ಲೂ ಹೈದರಾಬಾದ ನಾಯಕ ಡೇವಿಡ್ ವಾರ್ನರ್ ಬ್ರೇಕ್ಥ್ರೂಗಳಿಗಾಗಿ ಭುವಿಯವರತ್ತ ಚೆಂಡೆಸೆಯಲಿದ್ದಾರೆ.
ಇದನ್ನೂ ಓದಿ: IPL 2021: ಡೆಲ್ಲಿ ಕ್ಯಾಪಿಟಲ್ಸ್ಗೆ ಆಘಾತ! ಕೊರೊನಾಗೆ ತುತ್ತಾದ ಅಕ್ಷರ್ ಪಟೇಲ್.. ಆತಂಕದಲ್ಲಿ ಧವನ್, ಪಂತ್
Published On - 10:40 am, Sun, 11 April 21
