BWF World Championship: ಲಕ್ಷ್ಯ ಸೇನ್ ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಪ್ರಣಯ್! ಸೋಲುಂಡ ಸೈನಾ
BWF World Championship: ಭಾರತದ ಸ್ಟಾರ್ ಆಟಗಾರ ಎಚ್‌ಎಸ್ ಪ್ರಣಯ್, ಕಾಮನ್‌ವೆಲ್ತ್ ಚಾಂಪಿಯನ್ ಲಕ್ಷ್ಯ ಸೇನ್ ಅವರನ್ನು ಸೋಲಿಸಿ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಕ್ವಾರ್ಟರ್‌ಫೈನಲ್‌ಗೆ ಎಂಟ್ರಿಕೊಟ್ಟಿದ್ದಾರೆ.

ಭಾರತದ ಸ್ಟಾರ್ ಆಟಗಾರ ಎಚ್‌ಎಸ್ ಪ್ರಣಯ್ (HS Prannoy), ಕಾಮನ್‌ವೆಲ್ತ್ ಚಾಂಪಿಯನ್ ಲಕ್ಷ್ಯ ಸೇನ್ (Lakshya Sen) ಅವರನ್ನು ಸೋಲಿಸಿ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನ (BWF World Championship) ಕ್ವಾರ್ಟರ್‌ಫೈನಲ್‌ಗೆ ಎಂಟ್ರಿಕೊಟ್ಟಿದ್ದಾರೆ. 75 ನಿಮಿಷಗಳ ಕಾಲ ನಡೆದ ಮೂರು ಗೇಮ್‌ಗಳ ಈ ಪಂದ್ಯದಲ್ಲಿ ಪ್ರಣಯ್ 17-21, 21-16, 21-17 ರಿಂದ ಲಕ್ಷ್ಯ ಸೇನ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಒಲಂಪಿಕ್ ಸ್ಟಾರ್ ಸಿಂಧು ಇಂಜುರಿಯಿಂದಾಗಿ ಪಂದ್ಯಾವಳಿ ಆರಂಭಕ್ಕೂ ಮುನ್ನ ಈ ಟೂರ್ನಿಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಮತ್ತೊಬ್ಬ ಸ್ಟಾರ್ ಆಟಗಾರ್ತಿ ಸೈನಾ ಮೇಲೆ ಭಾರತ ಸಾಕಷ್ಟು ನಿರೀಕ್ಷೆ ಇಟ್ಟಿತ್ತು. ಆದರೆ ನಿರೀಕ್ಷೆಯನ್ನು ಸುಳ್ಳು ಮಾಡಿದ ಸೈನಾ, ಥಾಯ್ಲೆಂಡ್ ಎದುರಾಳಿ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದರು.
ರೋಚಕ ಪಂದ್ಯದಲ್ಲಿ ಗೆದ್ದ ಪ್ರಣಯ್
ಪ್ರಣಯ್ ಮತ್ತು ಲಕ್ಷ್ಯ ಸೇನ್ ನಡುವೆ ಅತ್ಯಂತ ರೋಚಕ ಪಂದ್ಯ ನಡೆಯಿತು.75 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಣಯ್ 17-21, 21-16, 21-17 ರಲ್ಲಿ ಲಕ್ಷ್ಯ ಸೇನ್ ಅವರನ್ನು ಸೋಲಿಸಿದರು. ಮೊದಲ ಗೇಮ್‌ನಲ್ಲಿ ಸೋತ ನಂತರ, ಪ್ರಣಯ್ ಉತ್ತಮ ಪುನರಾಗಮನವನ್ನು ಮಾಡಿ ಪಂದ್ಯವನ್ನು ಗೆದ್ದರು. ಈ ಗೆಲುವಿನೊಂದಿಗೆ ಕ್ವಾರ್ಟರ್-ಫೈನಲ್‌ನಲ್ಲೂ ಪ್ರಣಯ್ ಸ್ಥಾನ ಪಡೆದರು. ಸಾತ್ವಿಕ್ ಮತ್ತು ಚಿರಾಗ್ ಜೋಡಿ ಡೆನ್ಮಾರ್ಕ್‌ನ ಜೆಪ್ಪಾ ಬೇ ಮತ್ತು ಲಾಸ್ಸೆ ಮೊಲ್ಹೆಡೆ ಅವರನ್ನು 21-12 21-10 35 ನಿಮಿಷಗಳಲ್ಲಿ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿತು. ಇದೀಗ ಕ್ವಾರ್ಟರ್‌ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಜೋಡಿ ಜಪಾನ್‌ನ ಟಕುರೊ ಹಾಕಿ ಮತ್ತು ಯುಗೊ ಕೊಬಯಾಶಿ ಅವರನ್ನು ಎದುರಿಸಲಿದ್ದಾರೆ.
ಸೈನಾಗೆ ಸೋಲು
ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ, ಥಾಯ್ಲೆಂಡ್ ಎದುರಾಳಿ ವಿರುದ್ಧ 17-21, 21-16, 13-21 ಅಂತರದಲ್ಲಿ ಸೋಲನುಭವಿಸಿದರು. ಬುಸಾನನ್ ಅವರು ಎಂಟನೇ ಬಾರಿಗೆ ಸೈನಾ ಅವರನ್ನು ಎದುರಿಸುತ್ತಿದ್ದು, 5ನೇ ಬಾರಿಗೆ ಗೆಲುವು ಸಾಧಿಸಿದರು. ಮಿಕ್ಕ 3 ಪಂದ್ಯಗಳನ್ನು ಗೆಲ್ಲುವಲ್ಲಿ ಸೈನಾ ಯಶಸ್ವಿಯಾಗಿದ್ದಾರೆ. ಬುಸಾನನ್ ಮೊದಲ ಗೇಮ್‌ನಲ್ಲಿ 11-3 ಮುನ್ನಡೆ ಸಾಧಿಸಿದರು. ಇದು ಸೈನಾ ಮೇಲೆ ಒತ್ತಡ ಹೇರಿತು. ಭಾರತದ ಆಟಗಾರ್ತಿ ಈ ಅಂತರವನ್ನು 17-19ಕ್ಕೆ ತಗ್ಗಿಸಿದರೂ, ಥಾಯ್ ಆಟಗಾರ್ತಿ ಮೊದಲ ಗೇಮ್ ಅನ್ನು ಸುಲಭವಾಗಿ ಗೆದ್ದುಕೊಂಡರು. ಮೂರನೇ ಗೇಮ್‌ನಲ್ಲಿ ಇಬ್ಬರೂ ಆಟಗಾರ್ತಿಯರು ಪರಸ್ಪರ ತೀವ್ರ ಪೈಪೋಟಿ ನೀಡಿದರಾದರೂ ಬುಸಾನನ್ ವೇಗವನ್ನು ಹೆಚ್ಚಿಸಿಕೊಂಡು ಐದು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು. ಮತ್ತೊಂದೆಡೆ, ಸೈನಾ ಹಿಂದುಳಿದಿದ್ದರಿಂದ 26 ವರ್ಷದ ಬುಸಾನನ್ ಏಳು ಮ್ಯಾಚ್ ಪಾಯಿಂಟ್‌ಗಳೊಂದಿಗೆ ತಮ್ಮ ಕ್ವಾರ್ಟರ್‌ಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡರು.
Published On - 3:31 pm, Thu, 25 August 22


