
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 4-0 ಅಂತರದಿಂದ ಹೀನಾಯವಾಗಿ ಸೋತ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಗಾಗಿ ಸಜ್ಜಾಗುತ್ತಿದೆ. ಇದರ ನಡುವೆ ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರು ತಂಡದ ಭವಿಷ್ಯ ಹಾಗೂ ಆಟಗಾರರ ಮನೋಭಾವದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಪಡೆಯನ್ನು ಮುನ್ನಡೆಸಿದ್ದ ಅಯ್ಯರ್, ಈ ಪ್ರವಾಸವನ್ನು ಒಂದು ದೊಡ್ಡ ಕಲಿಕೆಯ ಹಂತ ಎಂದು ಕರೆದಿದ್ದಾರೆ. ಐರ್ಲೆಂಡ್ ವಿರುದ್ಧ 2-0 ಮತ್ತು ಇಂಗ್ಲೆಂಡ್ ವಿರುದ್ಧ 4-0 ಅಂತರದಿಂದ ಸೋತರೂ, ತಂಡದ ಮೇಲೆ ಭರವಸೆ ಕಳೆದುಕೊಳ್ಳದ ಅವರು, ಮುಂದಿನ ದಿನಗಳಲ್ಲಿ ನನ್ನ ಸುತ್ತ ಆಡುವ ಪ್ರತಿಯೊಬ್ಬ ಆಟಗಾರನನ್ನು ಬೆಳೆಸಲು ನಾನು ಅತ್ಯಂತ ಸಕಾರಾತ್ಮಕವಾಗಿ ಇರಬೇಕಾಗಿದೆ. ವಿಶೇಷವಾಗಿ ವಿದೇಶಿ ಪರಿಸ್ಥಿತಿಗಳಲ್ಲಿ ಇದು ತುಂಬಾ ಮುಖ್ಯ ಎಂದು ಹೇಳಿದ್ದಾರೆ.
ಮುಂದಿನ ಪ್ರಮುಖ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಶ್ರೇಯಸ್ ಅಯ್ಯರ್, ನಾವು ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ (2028) ಆಡಲಿದ್ದೇವೆ. ಅದಕ್ಕೂ ಮುನ್ನ ಹಲವು ಸರಣಿಗಳನ್ನು ಆಡಬೇಕಾಗಿದೆ. ಆದ್ದರಿಂದ ಇಂತಹ ಕಠಿಣ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ತಂಡದಲ್ಲಿ ಅತ್ಯುತ್ತಮ ಒಗ್ಗಟ್ಟು ಮತ್ತು ಸೌಹಾರ್ದತೆಯ ಅಗತ್ಯವಿದೆ” ಎಂದು ಪ್ರತಿಪಾದಿಸಿದರು.
ಸಾರ್ವಜನಿಕ ಮತ್ತು ಸಾಮಾಜಿಕ ಜಾಲತಾಣಗಳ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಶ್ರೇಯಸ್, ಇದು ತಂಡದ ಪರಿವರ್ತನೆಯ ಅವಧಿಯಾಗಿದ್ದು ತಪ್ಪುಗಳು ಸಹಜ ಎಂದಿದ್ದಾರೆ. ಆಸ್ಟ್ರೇಲಿಯಾದಂತಹ ಬೌನ್ಸಿ ಪಿಚ್‌ಗಳನ್ನು ಎದುರಿಸಲು ಯುವ ಆಟಗಾರರಿಗೆ ಮಾನಸಿಕ ಧೈರ್ಯ ತುಂಬುವುದೇ ತಮ್ಮ ಮೊದಲ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸರಣಿ ಸೋತಿದ್ದಕ್ಕೆ ತಂಡದ ಒಳಗಿನ ಯಾವುದೇ ಒಬ್ಬ ನಿರ್ದಿಷ್ಟ ಆಟಗಾರನನ್ನು ಹೊಣೆ ಮಾಡುವುದಿಲ್ಲ ಎಂದು ಅಯ್ಯರ್ ಸ್ಪಷ್ಟಪಡಿಸಿದ್ದಾರೆ. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಾನು ಯಾರೊಬ್ಬರ ಕಡೆಗೂ ಬೆರಳು ತೋರಿಸುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಸೋತಿದ್ದೇವೆ ಮತ್ತು ಒಟ್ಟಾಗಿಯೇ ಇದರಿಂದ ಕಲಿಯುತ್ತೇವೆ ಎಂದು ತಂಡಕ್ಕೆ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ: ಯಾನಿಕ್ ಸಿನ್ನರ್ ವಿಂಬಲ್ಡನ್ ಚಾಂಪಿಯನ್
ಒಟ್ಟಾರೆಯಾಗಿ, ಐಸಿಸಿ ಟಿ20 ತಂಡಗಳ ಅಂಕ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕವನ್ನು ಕಳೆದುಕೊಂಡಿರುವುದು ದೊಡ್ಡ ಹಿನ್ನಡೆಯಾದರೂ, ಟೀಮ್ ಇಂಡಿಯಾ ಕಠಿಣ ಪರಿಶ್ರಮದೊಂದಿಗೆ ಬಲಿಷ್ಠವಾಗಿ ಪುನರಾಗಮನ ಮಾಡಲಿದೆ ಎಂಬ ಭರವಸೆಯನ್ನು ಶ್ರೇಯಸ್ ಅಯ್ಯರ್ ವ್ಯಕ್ತಪಡಿಸಿದ್ದಾರೆ.