Chess World Cup 2023 Final: ಪ್ರಜ್ಞಾನಂದಗೆ ವಿರೋಚಿತ ಸೋಲು: ಕಾರ್ಲ್​ಸೆನ್ ವಿಶ್ವ ಚಾಂಪಿಯನ್​

| Updated By: ಝಾಹಿರ್ ಯೂಸುಫ್

Updated on: Aug 24, 2023 | 5:22 PM

Chess World Cup 2023 Final: ಚೆಸ್ ವಿಶ್ವಕಪ್​ನ ಫೈನಲ್​ ಆಡಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ  ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2000 ಮತ್ತು 2002 ರಲ್ಲಿ ಗ್ರ್ಯಾಂಡ್​ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಈ ಸಾಧನೆ ಮಾಡಿದ್ದರು.

Chess World Cup 2023 Final: ಪ್ರಜ್ಞಾನಂದಗೆ ವಿರೋಚಿತ ಸೋಲು: ಕಾರ್ಲ್​ಸೆನ್ ವಿಶ್ವ ಚಾಂಪಿಯನ್​
Praggnanandhaa vs Magnus Carlsen
Follow us on

ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್​ನಲ್ಲಿ ಗ್ರ್ಯಾಂಡ್ ಮಾಸ್ಟರ್ ಆರ್​. ಪ್ರಜ್ಞಾನಂದ (R Praggnanandhaa) ವಿರುದ್ಧ ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸೆನ್ ಜಯ ಸಾಧಿಸಿದ್ದಾರೆ. ಇದರೊಂದಿಗೆ ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದ್ದ 18 ವರ್ಷದ ಪ್ರಜ್ಞಾನಂದ ಅವರ ಕನಸು ಕೂಡ ಕಮರಿದೆ.

ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ವಿಶ್ವದ ನಂಬರ್ 1 ಚೆಸ್​ ತಾರೆಗೆ ಎಲ್ಲಾ ರೀತಿಯಲ್ಲೂ ಪೈಪೋಟಿ ನೀಡುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಆದರೆ ಟೈಬ್ರೇಕ್​ನಲ್ಲಿ ಮೇಲುಗೈ ಸಾಧಿಸುವ ಮೂಲಕ ಕಾರ್ಲ್​ಸೆನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಮಂಗಳವಾರ ನಡೆದ ಫೈನಲ್ ಪಂದ್ಯದ ಮೊದಲ ಗೇಮ್​ನಲ್ಲಿ ನಾರ್ವೆಯ ಕಾರ್ಲ್​ಸೆನ್ ಅವರನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಮೊದಲ ಗೇಮ್​ನ ಅಂತಿಮ ಸುತ್ತಿನಲ್ಲಿ ಜಾಣ್ಮೆಯ ನಡೆಗಳ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸುವಲ್ಲಿ ಕಾರ್ಲ್​ಸೆನ್ ಯಶಸ್ವಿಯಾದರು. ಇದರೊಂದಿಗೆ ಮೊದಲ ಸುತ್ತು 35 ಚಲನೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತ್ತು.

ಬುಧವಾರ ನಡೆದ 2ನೇ ಗೇಮ್​ನಲ್ಲಿ ಕಪ್ಪು ಕಾಯಿಗಳೊಂದಿಗೆ ಚದುರಂಗ ಚಲನೆ ಆರಂಭಿಸಿದ್ದ ಪ್ರಜ್ಞಾನಂದ ಆರಂಭದಲ್ಲೇ ಸಮಬಲದ ಹೋರಾಟ ನಡೆಸಿದ್ದರು. ಕಾರ್ಲ್​ಸೆನ್ ಜಾಣ ಚಲನೆಗೆ ಅತ್ಯುತ್ತಮ ಚೆಕ್​ ನಡೆಗಳ ಮೂಲಕ ಪ್ರಜ್ಞಾನಂದ ಪ್ರತ್ಯುತ್ತರ ನೀಡಿದ್ದರು. ಪರಿಣಾಮ 22 ನಡೆಗಳ ನಂತರ ಕೂಡ ಪಂದ್ಯವು ಸಮತೋಲಿತವಾಗಿತ್ತು.

ಈ ಸಮಬಲವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಕಾರ್ಲ್​ಸೆನ್ 30 ನಡೆಗಳ ನಂತರ ಪಂದ್ಯವನ್ನು ಡ್ರಾಗೊಳಿಸಿದರು. ಇದರೊಂದಿಗೆ ಫೈನಲ್ ಪಂದ್ಯವು ಟೈಬ್ರೇಕ್​ನತ್ತ ಸಾಗಿತು.

ಗುರುವಾರ ನಡೆದ ಟೈಬ್ರೇಕ್​ನ ಮೊದಲ ಸುತ್ತಿನ ಫಸ್ಟ್ ಗೇಮ್​ನ 16 ಚಲನೆಗಳ ನಂತರ, ಕಾರ್ಲ್‌ಸೆನ್‌ನ ‘ಬಿಷಪ್’ ಗಾಗಿ ಪ್ರಜ್ಞಾನಂದ ತನ್ನ ‘ನೈಟ್’ (ಹೋರ್ಸ್ ಹೆಡ್) ಅನ್ನು ತ್ಯಾಗ ಮಾಡಿದರು. ಇದರ ಬೆನ್ನಲ್ಲೇ ಇಬ್ಬರು ತಮ್ಮ ರಾಣಿಯನ್ನೂ ಕೂಡ ಕಳೆದುಕೊಂಡರು. ಆದರೆ 21ನೇ ನಡೆಯ ವೇಳೆಗೆ ಕಾರ್ಲ್​ಸೆನ್ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಇದೇ ವೇಳೆ ಪ್ರಜ್ಞಾನಂದ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು.

ಈ ಜಾಣ ನಡೆಯ ಮೂಲಕ 25 ನಡೆಗಳ ಬಳಿಕ ಪ್ರಜ್ಞಾನಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ 34 ನಡೆಗಳ ವೇಳೆಗೆ ಇಬ್ಬರು ರೂಕ್ ಕಾಯಿಕೆಯನ್ನು ಕಳೆದುಕೊಂಡಿದ್ದರು. ಇದಾಗ್ಯೂ 47 ಮೂವ್​ಗಳ ಬಳಿಕ ಟೈಬ್ರೇಕ್​ನ ಮೊದಲ ಗೇಮ್​ನಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದ ಕಾರ್ಲ್‌ಸೆನ್ 1-0 ಮುನ್ನಡೆ ಸಾಧಿಸಿದರು.

ಇತ್ತ ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಟೈಬ್ರೇಕ್​ನ 2ನೇ ಗೇಮ್​ ಅನ್ನು ಆರಂಭಿಸಿದ್ದ ಪ್ರಜ್ಞಾನಂದ ಪ್ರಾರಂಭದಲ್ಲೇ ಹಿನ್ನಡೆ ಅನುಭವಿಸಿದರು. ಅಲ್ಲದೆ ಪ್ರತಿ ಚಲನೆಗೂ ಹೆಚ್ಚಿನ ಸಮಯ ತೆಗೆದುಕೊಂಡರು. ಈ ಹಂತದಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕಾರ್ಲ್​​ಸೆನ್ ಮ್ಯಾಚ್​ ಅನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ 1-0 ಅಂತರದಿಂದ ಜಯ ಸಾಧಿಸಿ ಕಾರ್ಲ್​ಸೆನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು.

ವಿಶ್ವದ 3ನೇ ಶ್ರೇಯಾಂಕದ ತಾರೆಗೂ ಸೋಲುಣಿಸಿದ್ದ ಪ್ರಜ್ಞಾನಂದ:

ಇದಕ್ಕೂ ಮುನ್ನ ವಿಶ್ವದ ನಂಬರ್-3 ಚೆಸ್ ತಾರೆ ಫ್ಯಾಬಿಯಾನೊ ಕರುವಾನಾ ಹಾಗೂ ಪ್ರಜ್ಞಾನಂದ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಿದ್ದರು. ರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲೆರಡು ಗೇಮ್​ಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು. ಹೀಗಾಗಿ ಟೈಬ್ರೇಕರ್​ನಲ್ಲಿ ಪಂದ್ಯವನ್ನು ಮುಂದುವರೆಸಲಾಯಿತು. ಈ ಹಂತದಲ್ಲಿ ಜಾಣ್ಮೆಯ ನಡೆಗಳೊಂದಿಗೆ  3.5-2.5 ಅಂತರದಿಂದ ಫ್ಯಾಬಿಯಾನೊ ಕರುವಾನಾಗೆ ಸೋಲುಣಿಸಿ  ಪ್ರಜ್ಞಾನಂದ ಫೈನಲ್​ಗೆ ಪ್ರವೇಶಿಸಿದ್ದರು.

ಇದನ್ನೂ ಓದಿ: ಹಣೆಯಲ್ಲಿ ಸದಾ ವಿಭೂತಿ ಧರಿಸಿಕೊಳ್ಳುವ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಯಾರು ಗೊತ್ತೇ?

ದಾಖಲೆ ಬರೆದ ಪ್ರಜ್ಞಾನಂದ:

ಚೆಸ್ ವಿಶ್ವಕಪ್​ನ ಫೈನಲ್ ಸೋಲಿನ ಹೊರತಾಗಿಯೂ ಆರ್​ ಪ್ರಜ್ಞಾನಂದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಈ ಟೂರ್ನಿಯಲ್ಲಿ ಫೈನಲ್​ ಆಡಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ 18 ರ ಹರೆಯದ ಯುವ ಚೆಸ್ ಪಟು  ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ 2000 ಮತ್ತು 2002 ರಲ್ಲಿ ಗ್ರ್ಯಾಂಡ್​ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಈ ಸಾಧನೆ ಮಾಡಿದ್ದರು. ಇದೀಗ ಚೆಸ್ ವಿಶ್ವಕಪ್​ನಲ್ಲಿ ಫೈನಲ್ ಆಡುವ ಮೂಲಕ ಆರ್​ ಪ್ರಜ್ಞಾನಂದ ಕೂಡ ಈ ದಾಖಲೆ ನಿರ್ಮಿಸಿದ್ದಾರೆ.

 

 

Published On - 5:10 pm, Thu, 24 August 23