BWF World Championship: ಪದಕ ಖಚಿತಪಡಿಸಿ ಇತಿಹಾಸ ನಿರ್ಮಿಸಿದ ಸಾತ್ವಿಕ್-ಚಿರಾಗ್; ಪ್ರಣಯ್ ಕನಸು ಭಗ್ನ..!
BWF World Championship: ಇದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಡಬಲ್ಸ್‌ನಲ್ಲಿ ಎರಡನೇ ಪದಕವಾಗಿದೆ. ಇದಕ್ಕೂ ಮೊದಲು 2011ರಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಪದಕ ಜಯಿಸಿತ್ತು.

ಶುಕ್ರವಾರ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ (Badminton World Championships) ಕಾಮನ್‌ವೆಲ್ತ್ ಚಾಂಪಿಯನ್ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwik-Chirag) ತಮ್ಮ ಮೊದಲ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಅದೇ ಹೊತ್ತಿಗೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್.ಎಸ್.ಪ್ರಣಯ್ (HS Prannoy) ಸೋತು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇದರೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಪ್ರಣಯ್ ಕನಸು ನನಸಾಗಲಿಲ್ಲ. ಜೊತೆಗೆ ಡಬಲ್ಸ್‌ನಲ್ಲಿ ಅರ್ಜುನ್-ಧ್ರುವ ಜೋಡಿಗೂ ಸೋಲಿನ ಆಘಾತ ಎದುರಾಗಿದೆ.
ಪದಕ ಖಚಿತಪಡಿಸಿದ ಸಾತ್ವಿಕ್-ಚಿರಾಗ್ ಜೋಡಿ
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಜಪಾನಿನ ಜೋಡಿಯಾದ ಟಕುರೊ ಹಾಕಿ ಮತ್ತು ಯುಗೊ ಕೊಬಯಾಶಿ ಅವರನ್ನು ಸೋಲಿಸುವ ಮೂಲಕ ಶುಕ್ರವಾರ ತಮ್ಮ ಚೊಚ್ಚಲ ಪದಕವನ್ನು ಖಚಿತಪಡಿಸಿಕೊಂಡರು. ಈ ತಿಂಗಳ ಆರಂಭದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ವಿಶ್ವದ ನಂ. 7 ಭಾರತೀಯ ಜೋಡಿ 24-22, 15-21 ರಿಂದ ನಡೆದ ಪಂದ್ಯದಲ್ಲಿ ಪ್ರಶಸ್ತಿ ಸ್ಪರ್ಧಿಗಳು ಮತ್ತು ಹಾಲಿ ಚಾಂಪಿಯನ್ ಜಪಾನ್ ಜೋಡಿಯನ್ನು ಸೋಲಿಸಲು ಅದ್ಭುತ ಪ್ರದರ್ಶನ ನೀಡಿ ಸೆಮಿ ಪೈನಲ್ಗೆ ಎಂಟ್ರಿಕೊಟ್ಟರು.
ಇತಿಹಾಸ ಸೃಷ್ಟಿಸುವ ಅವಕಾಶ ಕಳೆದುಕೊಂಡ ಪ್ರಣಯ್
ಭಾರತಕ್ಕೆ ಮತ್ತೊಂದು ಪದಕ ಗೆಲ್ಲುವ ಅವಕಾಶವಿತ್ತು. ಆದರೆ ಚೀನಾದ ಜಾವೊ ಜುನ್ ಪೆಂಗ್ ಮೂರು ಗೇಮ್‌ಗಳ ಕಾಲ ನಡೆದ ಪಂದ್ಯದಲ್ಲಿ ಪ್ರಣಯ್ ಅವರನ್ನು 19-21, 21-6, 21-18 ರಿಂದ ಸೋಲಿಸುವ ಮೂಲಕ ಪದಕದ ಕನಸಿಗೆ ಬ್ರೇಕ್ ಹಾಕಿದರು. ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್ ಅವರಿಂದ ಹೆಚ್ಚಿನ ಭರವಸೆ ಇತ್ತು ಏಕೆಂದರೆ ಅವರು ಈ ಹಿಂದೆ ಎರಡು ಬಾರಿಯ ಚಾಂಪಿಯನ್ ಕೆಂಟೊ ಮೊಮೊಟಾ ಮತ್ತು ದೇಶವಾಸಿ ಲಕ್ಷ್ಯ ಸೇನ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರು. ವಿಶೆಷವೆಂದರೆ ಮೊದಲ ಗೇಮ್‌ನಲ್ಲಿ ಗೆದ್ದ ಪ್ರಣಯ್ ಅಂತಿಮವಾಗಿ ಸೋಲನುಭವಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು.
ಎರಡನೇ ಗೇಮ್‌ನಲ್ಲಿ ಪ್ರಣಯ್ ಯಾವುದೇ ಪ್ರತಿರೋಧ ತೋರುವಲ್ಲಿ ವಿಫಲರಾದರು. ಹೀಗಾಗಿ ಎದುರಾಳಿ ಝಾವೊ 11-1 ರಿಂದ ಮುನ್ನಡೆ ಸಾಧಿಸಿ,ಸುಲಭವಾಗಿ ಎರಡನೇ ಗೇಮ್ ಗೆದ್ದರು. ನಿರ್ಣಾಯಕ ಗೇಮ್‌ನಲ್ಲಿ ಹಲವು ತಪ್ಪುಗಳನ್ನು ಮಾಡಿದ ಪ್ರಣಯ್, ವಿರಾಮದವರೆಗೂ ಒಂದು ಪಾಯಿಂಟ್‌ನಿಂದ ಮುನ್ನಡೆ ಸಾಧಿಸಿದ್ದರು. ಆದಾಗ್ಯೂ, ಚೀನಿ ಆಟಗಾರ 18-13 ರಿಂದ ಮುನ್ನಡೆ ಸಾಧಿಸಿ, ಶೀಘ್ರದಲ್ಲೇ ಮೂರು ಮ್ಯಾಚ್ ಪಾಯಿಂಟ್‌ಗಳನ್ನು ಪಡೆದು ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು.
ಅರ್ಜುನ್-ಧ್ರುವ ಜೋಡಿಗೂ ಸೋಲು
ಇದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಡಬಲ್ಸ್‌ನಲ್ಲಿ ಎರಡನೇ ಪದಕವಾಗಿದೆ. ಇದಕ್ಕೂ ಮೊದಲು 2011ರಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಪದಕ ಜಯಿಸಿತ್ತು. ಇದಕ್ಕೂ ಮುನ್ನ ಎಂಆರ್ ಅರ್ಜುನ್ ಮತ್ತು ಧ್ರುವ್ ಕಪಿಲಾ ಜೋಡಿ ಮೂರು ಬಾರಿ ಚಿನ್ನ ಗೆದ್ದಿದ್ದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೇಟಿವಾನ್ ಜೋಡಿಯೆದುರು ಸೋಲನುಭವಿಸುವುದರೊಂದಿಗೆ ಗೆಲುವಿನ ಅಭಿಯಾನ ಕೊನೆಗೊಂಡಿತು. ಶ್ರೇಯಾಂಕ ರಹಿತ ಭಾರತದ ಜೋಡಿ 8-21, 14-21 ರಿಂದ ಮೂರನೇ ಶ್ರೇಯಾಂಕದ ಇಂಡೋನೇಷ್ಯಾ ಜೋಡಿ ವಿರುದ್ಧ 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸೋಲನುಭವಿಸಿತು.
Published On - 3:16 pm, Fri, 26 August 22
