ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರ ಐದು ದಿನಗಳಲ್ಲಿ ಕ್ರೀಡಾಪಟುಗಳು ಇಲ್ಲಿಯವರೆಗೆ 128 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಆದರೆ ಭಾರತಕ್ಕೆ ಸಿಕ್ಕಿದ್ದು ಕೇವಲ 5 ಚಿನ್ನ. ಈ 5 ಚಿನ್ನದ ಪದಕಗಳ ಜೊತೆಗೆ 5 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಭಾರತದ ಕ್ರೀಡಾಪಟುಗಳು ಗೆದ್ದಿದ್ದಾರೆ. ಒಟ್ಟು 13 ಪದಕಗಳೊಂದಿಗೆ, ಭಾರತ ಪ್ರಸ್ತುತ ಕಾಮನ್‌ವೆಲ್ತ್ ಗೇಮ್ಸ್ 2022 ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈಗ ಭಾರತದ ಈ 13 ಪದಕ ವಿಜೇತರು ಯಾರು ಎಂದು ನೋಡೋಣ..
ಕಾಮನ್‌ವೆಲ್ತ್ ಗೇಮ್ಸ್: ದಿನ 2
1. ಸಂಕೇತ್ ಮಹಾದೇವ ಸರ್ಗರ್ (ಬೆಳ್ಳಿ ಪದಕ)
ವೇಟ್‌ಲಿಫ್ಟರ್ ಸಂಕೇತ್ ಮಹಾದೇವ್ ಸರ್ಗರ್ ಅವರು ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟರು. ಕಾಮನ್‌ವೆಲ್ತ್ ಗೇಮ್ಸ್‌ನ ಎರಡನೇ ದಿನ, ಅವರು ಸ್ನ್ಯಾಚ್‌ನಲ್ಲಿ 113 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 135 ಕೆಜಿ ಎತ್ತುವ ಮೂಲಕ ಒಟ್ಟು 248 ಕೆಜಿ ತೂಕ ಎತ್ತಿ ಬೆಳ್ಳಿ ಗೆದ್ದರು.
2. ಗುರುರಾಜ ಪೂಜಾರಿ (ಕಂಚಿನ ಪದಕ)
ವೇಟ್‌ಲಿಫ್ಟರ್ ಗುರುರಾಜ ಪೂಜಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ. ಪುರುಷರ 61 ಕೆಜಿ ವಿಭಾಗದಲ್ಲಿ ಅವರು 269 ಕೆಜಿ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು.
3. ಮೀರಾಬಾಯಿ ಚಾನು (ಚಿನ್ನದ ಪದಕ)
ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದರು. 49 ಕೆ.ಜಿ ವಿಭಾಗದಲ್ಲಿ ಒಟ್ಟು 201 ಕೆ.ಜಿ ಭಾರ ಎತ್ತಿ ಚಿನ್ನದ ಪದಕ ಗೆದ್ದಿದ್ದಾರೆ. ಮೀರಾಬಾಯಿ ಸ್ನ್ಯಾಚ್‌ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 113 ಕೆಜಿ ಎತ್ತಿದರು.
4. ಬಿಂದಿಯಾರಾಣಿ ದೇವಿ (ಬೆಳ್ಳಿ ಪದಕ)
ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದರು. ಸ್ನ್ಯಾಚ್‌ನಲ್ಲಿ 86 ಕೆಜಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ 116 ಕೆಜಿ, ಒಟ್ಟು 202 ಕೆಜಿ ಎತ್ತುವ ಮೂಲಕ ಬೆಳ್ಳಿ ಗೆದ್ದರು. ಕೇವಲ 1 ಕೆಜಿ ಅಂತರದಲ್ಲಿ ಚಿನ್ನ ಕಳೆದುಕೊಂಡರು.
ಕಾಮನ್‌ವೆಲ್ತ್ ಗೇಮ್ಸ್ ದಿನ 3:
5. ಜೆರೆಮಿ ಲಾಲ್ರಿನ್ನುಂಗಾ (ಚಿನ್ನದ ಪದಕ)
ಜೆರೆಮಿ ಲಾಲ್ರಿನ್ನುಂಗಾ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ನೀಡಿದರು. 67 ಕೆಜಿ ವಿಭಾಗದಲ್ಲಿ 300 ಕೆಜಿ ಭಾರ ಎತ್ತಿ ಚಿನ್ನ ಗೆದ್ದರು. ಚಾಂಪಿಯನ್ ಬೆಳ್ಳಿ ಪದಕ ವಿಜೇತ ವೈಪಾವಾ ಲೋನ್ (293 ಕೆಜಿ) ಗಿಂತ 7 ಕೆಜಿ ಹೆಚ್ಚು ತೂಕ ಎತ್ತಿದರು.
6. ಅಚಿಂತಾ ಶಿಯುಲಿ (ಚಿನ್ನದ ಪದಕ)
ಪುರುಷರ 73 ಕೆಜಿ ತೂಕದ ವಿಭಾಗದಲ್ಲಿ ಅಚಿಂತಾ ಶಿಯುಲಿ ಸ್ನ್ಯಾಚ್ ಸುತ್ತಿನಲ್ಲಿ 143 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ 170 ಕೆಜಿ ಎತ್ತುವ ಮೂಲಕ ಪದಕ ಗೆದ್ದರು. ಒಟ್ಟು 313 ಕೆಜಿ ಭಾರ ಎತ್ತಿ ಭಾರತಕ್ಕೆ ಮೂರನೇ ಚಿನ್ನ ತಂದುಕೊಟ್ಟರು.
ಕಾಮನ್‌ವೆಲ್ತ್ ಗೇಮ್ಸ್ ದಿನ 4:
7. ಸುಶೀಲಾ ದೇವಿ (ಬೆಳ್ಳಿ ಪದಕ)
ಜೂಡೋ 48 ಕೆಜಿ ವಿಭಾಗದಲ್ಲಿ ಸುಶೀಲಾ ದೇವಿ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಸುಶೀಲಾ ಅವರು ದಕ್ಷಿಣ ಆಫ್ರಿಕಾದ ಮೈಕೆಲಾ ವಿಟ್‌ಬಾಯ್ ಅವರನ್ನು ಎದುರಿಸಿದರು.
8. ವಿಜಯ್ ಕುಮಾರ್ ಯಾದವ್ (ಕಂಚಿನ ಪದಕ)
ವಿಜಯ್ ಕುಮಾರ್ ಯಾದವ್ ಜೂಡೋದಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ನೀಡಿದರು. ಪುರುಷರ 60 ಕೆಜಿ ವಿಭಾಗದಲ್ಲಿ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜೋಶುವಾ ವಿರುದ್ಧ ಸೋತರು. ಆ ಬಳಿಕ ರಿಪೆಚೇಜ್ ಪಂದ್ಯಗಳಲ್ಲಿ ಅವಕಾಶ ಪಡೆದರು. ಇಲ್ಲಿ ಅವರು ಕಂಚಿನ ಪದಕ ಗೆದ್ದರು. ವಿಜಯ್ ಅವರು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸೈಪ್ರಸ್‌ನ ಪ್ರಾಟೊ ಅವರನ್ನು 10-0 ಅಂತರದಿಂದ ಸೋಲಿಸಿದರು.
9. ಹರ್ಜಿಂದರ್ ಕೌರ್ (ಕಂಚಿನ ಪದಕ)
ವೇಟ್ ಲಿಫ್ಟರ್ ಹರ್ಜಿಂದರ್ ಕೌರ್ ಮಹಿಳೆಯರ 71 ಕೆಜಿ ವಿಭಾಗದಲ್ಲಿ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು. ಹರ್ಜಿಂದರ್ ಸ್ನ್ಯಾಚ್‌ನಲ್ಲಿ 93 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 119 ಕೆಜಿ ಎತ್ತಿದರು.
ಕಾಮನ್‌ವೆಲ್ತ್ ಗೇಮ್ಸ್ 5 ನೇ ದಿನ:
10. ಮಹಿಳಾ ಲಾನ್ ಬಾಲ್ ತಂಡ (ಚಿನ್ನದ ಪದಕ)
ಲಾನ್ ಬಾಲ್ ಮಹಿಳೆಯರ ನಾಲ್ಕರ ಕೂಟದಲ್ಲಿ ಭಾರತ ತಂಡ ಚೊಚ್ಚಲ ಬಾರಿಗೆ ಚಿನ್ನ ಗೆದ್ದಿದೆ. ಲವ್ಲಿ ಚೌಬೆ, ಪಿಂಕಿ, ನಯನ್ಮೋನಿ ಸೈಕಿಯಾ ಮತ್ತು ರೂಪಾ ರಾಣಿ ಭಾರತಕ್ಕೆ ಈ ಪದಕವನ್ನು ನೀಡಿದರು. ಅಂತಿಮ ಪಂದ್ಯದಲ್ಲಿ ಭಾರತ 17-10 ಅಂತರದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚಿನ್ನ ಗೆದ್ದುಕೊಂಡಿತು.
11. ಪುರುಷರ ಟೇಬಲ್ ಟೆನ್ನಿಸ್ ತಂಡ (ಚಿನ್ನ)
ಪುರುಷರ ಟೇಬಲ್ ಟೆನಿಸ್ ತಂಡ ಫೈನಲ್‌ನಲ್ಲಿ ಭಾರತ 3-1 ಅಂತರದಿಂದ ಸಿಂಗಾಪುರವನ್ನು ಮಣಿಸಿ ಚಿನ್ನ ಗೆದ್ದುಕೊಂಡಿತು. ಶರದ್ ಕಮಲ್, ಜಿ ಸತ್ಯನ್ ಮತ್ತು ಹರ್ಮೀತ್ ದೇಸಾಯಿ ಅವರ ಮೂವರು ಭಾರತಕ್ಕೆ ಈ ಚಿನ್ನವನ್ನು ನೀಡಿದರು. ಇಲ್ಲಿ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಶರದ್ ಕಮಲ್ ಸೋತರು. ಆದರೆ, ಸತ್ಯನ್ ಮತ್ತು ಹರ್ಮೀತ್ ತಮ್ಮ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯವನ್ನು ಗೆದ್ದು ಭಾರತಕ್ಕೆ ಚಿನ್ನದ ಪದಕವನ್ನು ನೀಡಿದರು.
12. ಪುರುಷರ 96 ಕೆಜಿ ವಿಭಾಗದಲ್ಲಿ ವಿಕಾಸ್ ಠಾಕೂರ್ (ಬೆಳ್ಳಿ).
ವೇಟ್ ಲಿಫ್ಟರ್ ವಿಕಾಸ್ ಠಾಕೂರ್ ಬೆಳ್ಳಿ ಪದಕ ಪಡೆದರು. ವಿಕಾಸ್ ಸ್ನ್ಯಾಚ್‌ನಲ್ಲಿ 155 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 191 ಕೆಜಿ ಎತ್ತಿದರು. ಅವರು ಒಟ್ಟು 346 ಕೆಜಿ ತೂಕದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
13. ಮಿಶ್ರ ಬ್ಯಾಡ್ಮಿಂಟನ್ ತಂಡ (ಬೆಳ್ಳಿ)
ಮಿಶ್ರ ಬ್ಯಾಡ್ಮಿಂಟನ್ ಟೀಮ್ ಈವೆಂಟ್‌ನ ಫೈನಲ್‌ನಲ್ಲಿ ಭಾರತ 1-3 ರಿಂದ ಮಲೇಷ್ಯಾ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಇಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೋತರು. ಇದಾದ ಬಳಿಕ ಮಹಿಳಾ ಜೋಡಿ ತ್ರೀಜಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಕೂಡ ಸೋಲು ಕಂಡರು. ಕಿಡಂಬಿ ಶ್ರೀಕಾಂತ್ ಕೂಡ ಸೋಲು ಅನುಭವಿಸಬೇಕಾಯಿತು. ಈ ಪಂದ್ಯದಲ್ಲಿ ಪಿವಿ ಸಿಂಧು ಮಾತ್ರ ಗೆಲುವು ಸಾಧಿಸಿದ್ದರು.
Published On - 4:03 pm, Wed, 3 August 22